ಪುಣೆ: ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ದೇಶದ ಹೆಸರಿಗೆ ಮಸಿ ಬಳಿಯುತ್ತಿರುವ ಕಾಂಗ್ರೆಸ್ ಪಕ್ಷ ದೇಶದಲ್ಲಿ ಎಂದಿಗೂ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಷಾ (Amit Shah) ಅವರು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಭಾನುವಾರ ಮಹಾರಾಷ್ಟ್ರದ ಪುಣೆಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಷಾ, ರಾಹುಲ್ ವಿದೇಶ ಪ್ರವಾಸಗಳು ಮತ್ತು ಇತ್ತೀಚೆಗೆ ಹೈದರಾಬಾದ್ನಲ್ಲಿ ನಡೆದ ಭಾರತ್ ಶೃಂಗಸಭೆ 2026 ಕುರಿತು ಆಕ್ರೋಶ ವ್ಯಕ್ತಪಡಿಸಿದರು.
ಇಡೀ ವಿಶ್ವವೇ ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವವನ್ನು ಕೊಂಡಾಡುತ್ತಿದ್ದರೆ, ರಾಹುಲ್ ಗಾಂಧಿ ನಿರಂತರವಾಗಿ ಮೋದಿ ಅವರನ್ನು ಮತ್ತು ದೇಶವನ್ನು ಅವಮಾನಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದ ಷಾ, ನಿಮಗೆ ಅಧಿಕಾರ ಬೇಕಿದ್ದರೆ ಮೊದಲು ನಿಮ್ಮ ವಿದೇಶ ಪ್ರವಾಸಗಳನ್ನು ನಿಲ್ಲಿಸಿ ಮತ್ತು ನಮ್ಮ ಹಳ್ಳಿಗಳಿಗೆ ಭೇಟಿ ನೀಡಲು ಆರಂಭಿಸಿ. ಆಗ ಮಾತ್ರ ಮುಂದೊಂದು ದಿನ ನಿಮ್ಮ ಸರದಿ ಬಂದರು ಬರಬಹುದು ಎಂದು ಸಲಹೆ ನೀಡಿದರು.
ಅಲ್ಲದೆ, ರಾಹುಲ್ ಗಾಂಧಿ ತಮ್ಮ ಸಲಹೆಯನ್ನು ಕೇಳುವುದಿಲ್ಲ ಎಂಬುದು ತಮಗೆ ಗೊತ್ತಿದೆ ಎಂದ ಷಾ, ನೀವು (ಕಾಂಗ್ರೆಸ್ ಕಾರ್ಯಕರ್ತರು) ಇದೇ ದಿಕ್ಕಿನಲ್ಲಿ ರಾಹುಲ್ರನ್ನು ಹಿಂಬಾಲಿಸುವುದನ್ನು ಮುಂದುವರಿಸಿದರೆ, ಮುಂದಿನ 30 ವರ್ಷಗಳವರೆಗೆ ನಿಮಗೆ ಅಧಿಕಾರದ ಸರದಿ ಬರುವುದಿಲ್ಲ ಎಂದು ಕಾಂಗ್ರೆಸ್ ಕಾರ್ಯಕರ್ತರಿಗೂ ಎಚ್ಚರಿಕೆ ನೀಡಿದರು.
ನವೆಂಬರ್ 13 ಮತ್ತು 14ರಂದು ಹೈದರಾಬಾದ್ನಲ್ಲಿ ಕಾಂಗ್ರೆಸ್ ನೇತೃತ್ವದ ತೆಲಂಗಾಣ ಸರ್ಕಾರ ಆಯೋಜಿಸಿದ್ದ ಭಾರತ್ ಶೃಂಗಸಭೆ 2026 ಕುರಿತು ಪ್ರಸ್ತಾಪಿಸಿದ ಅಮಿತ್ ಷಾ, ಸತತ ಮೂರು ಲೋಕಸಭಾ ಚುನಾವಣೆಗಳಲ್ಲಿ ಸೋತಿರುವ ಹತಾಶೆಯನ್ನು ಕಾಂಗ್ರೆಸ್ ಈ ಮೂಲಕ ಹೊರಹಾಕುತ್ತಿದೆ ಎಂದು ಟೀಕಿಸಿದರು. ಈ ಸಮಾವೇಶದಲ್ಲಿ ಇಟಲಿಯ ರಾಜಕಾರಣಿಯೊಬ್ಬರು ಮತ ಕಳ್ಳತನ ಆರೋಪ ಮಾಡಿ ಪ್ರಧಾನಿ ಮೋದಿ ಅವರನ್ನು ಗುರಿಯಾಗಿಸಿಕೊಂಡಿದ್ದನ್ನು ಷಾ ಖಂಡಿಸಿದರು.
ಸಮಾವೇಶಕ್ಕೆ ಭಾರತ್ ಶೃಂಗಸಭೆ ಎಂದು ಹೆಸರಿಡಲಾಗಿದೆ, ಆದರೆ ರಾಹುಲ್ ಗಾಂಧಿ ಅಂತಾರಾಷ್ಟ್ರೀಯ ಸಮ್ಮೇಳನಗಳಲ್ಲಿ ದೇಶ ವಿರೋಧಿ ಅಭಿಪ್ರಾಯಗಳನ್ನು ವ್ಯಕ್ತಪಡಿಸುವ ಮೂಲಕ ವಿಶ್ವದಾದ್ಯಂತ ದೇಶಕ್ಕೆ ಅವಮಾನ ಮಾಡುತ್ತಿದ್ದಾರೆ. ಎಡಪಂಥೀಯ ಸಿದ್ಧಾಂತವನ್ನು ಪ್ರಚಾರ ಮಾಡುವವರನ್ನು ದೇಶ-ವಿದೇಶಗಳಿಂದ ಆಹ್ವಾನಿಸಿ ಈ ಕಾರ್ಯಕ್ರಮ ನಡೆಸಲಾಗಿದೆ ಎಂದು ಷಾ ಆರೋಪಿಸಿದರು. ಚುನಾವಣೆಯಲ್ಲಿ ಗೆಲ್ಲುವುದು ಅಥವಾ ಸೋಲುವುದು ಆಯಾ ಪಕ್ಷದ ನಾಯಕರ ಕಾರ್ಯಕ್ಷಮತೆಯ ಮೇಲೆ ಅವಲಂಬಿತವಾಗಿರುತ್ತದೆ ಎಂಬುದನ್ನು ಜನರು ಕಾಂಗ್ರೆಸ್ಗೆ ಮನವರಿಕೆ ಮಾಡಿಕೊಡಬೇಕು ಎಂದು ಕೇಂದ್ರ ಗೃಹ ಸಚಿವರು ಅಭಿಪ್ರಾಯಪಟ್ಟರು.
ಯುಪಿಎ ಆಡಳಿತಾವಧಿಯನ್ನು ಉಲ್ಲೇಖಿಸಿ ವಾಗ್ದಾಳಿ ಮುಂದುವರಿಸಿದ ಅಮಿತ್ ಷಾ, ನಿಮಗೆ 10 ವರ್ಷಗಳ ಕಾಲ ಅವಕಾಶ ನೀಡಲಾಗಿತ್ತು, ಆದರೆ ನೀವು 12 ಲಕ್ಷ ಕೋಟಿ ರೂಪಾಯಿಗಳ ಹಗರಣ ಮತ್ತು ಭ್ರಷ್ಟಾಚಾರ ನಡೆಸಿದಿರಿ. ದೇಶದ ಜನರು ನಿಮ್ಮನ್ನು ಕೈಹಿಡಿದು ದೆಹಲಿಯ ಸರ್ಕಾರದಿಂದ ಹೊರಹಾಕಿ ನರೇಂದ್ರ ಮೋದಿ ಅವರನ್ನು ಪ್ರಧಾನಿಯನ್ನಾಗಿ ಮಾಡಿದರು. ಕಳೆದ 12 ವರ್ಷಗಳಲ್ಲಿ ನರೇಂದ್ರ ಮೋದಿ ಅವರ ವಿರುದ್ಧ ನಾಲ್ಕಾಣೆಯಷ್ಟೂ ಭ್ರಷ್ಟಾಚಾರದ ಆರೋಪ ಕೇಳಿಬಂದಿಲ್ಲ, ಈ ಅವಧಿಯಲ್ಲಿ ಕೃಷಿ, ಕೈಗಾರಿಕಾ ಅಭಿವೃದ್ಧಿ, ಚಂದ್ರನ ದಕ್ಷಿಣ ಧ್ರುವ ತಲುಪಿದ ಸಾಧನೆ, ಸ್ಟಾರ್ಟ್ಅಪ್ ಪರಿಸರ ವ್ಯವಸ್ಥೆ ಹಾಗೂ ವಿಮಾನ ನಿಲ್ದಾಣಗಳ ಸಂಖ್ಯೆಯನ್ನು 76 ರಿಂದ 150ಕ್ಕೆ ಹೆಚ್ಚಿಸಿದಂತಹ ಮಹತ್ವದ ಅಭಿವೃದ್ಧಿ ಕಾರ್ಯಗಳು ನಡೆದಿವೆ ಎಂದು ಕೇಂದ್ರ ಸರ್ಕಾರದ ಯೋಜನೆಗಳನ್ನು ಪಟ್ಟಿ ಮಾಡಿದರು.
ತಮ್ಮ ಭಾಷಣದಲ್ಲಿ ಅಮಿತ್ ಷಾ ಅವರು ಜನತೆಗೆ ಛತ್ ಪೂಜೆಯ ಶುಭಾಶಯಗಳನ್ನು ಕೋರಿದರು. ಇದೇ ವೇಳೆ, ಭಗವಾನ್ ಬಿರ್ಸಾ ಮುಂಡಾ ಅವರ 151ನೇ ಜಯಂತಿಯ ಅಂಗವಾಗಿ ಅವರಿಗೆ ಗೌರವ ನಮನ ಸಲ್ಲಿಸಿದರು. ಬಿರ್ಸಾ ಮುಂಡಾ ಅವರ ಪರಂಪರೆ ಮತ್ತು ತ್ಯಾಗವನ್ನು ಸ್ಮರಿಸಲು ಅವರ ಜನ್ಮದಿನವನ್ನು ಜನಜಾತೀಯ ಗೌರವ ದಿವಸ್ ಆಗಿ ಆಚರಿಸಲಾಗುತ್ತಿದೆ ಎಂದು ತಿಳಿಸಿದ ಷಾ, ಸ್ವಾತಂತ್ರ್ಯ ಚಳವಳಿಗೂ ಮುನ್ನವೇ ಜಾರ್ಖಂಡ್ನ ನೆಲದಲ್ಲಿ ಬ್ರಿಟಿಷರ ವಿರುದ್ಧ ಸ್ವಾತಂತ್ರ್ಯದ ಕಿಡಿ ಹೊತ್ತಿಸಿದ ಮಹಾನ್ ನಾಯಕ ಬಿರ್ಸಾ ಮುಂಡಾ ಎಂದು ಬಣ್ಣಿಸಿದರು(ಏಜೆನ್ಸೀಸ್).