

ನವದೆಹಲಿ: ಸಂಸತ್ತಿನ ಚಳಿಗಾಲದ ಅಧಿವೇಶನವು (Parliament Winter Session) ಡಿಸೆಂಬರ್ ಮೊದಲ ವಾರದಲ್ಲಿ ಆರಂಭವಾಗುವ ಸಾಧ್ಯತೆಯಿದ್ದು, ಈ ಬಾರಿಯ ಅಧಿವೇಶನದಲ್ಲಿ ಮಹಿಳಾ ಮೀಸಲಾತಿಗೆ ಸಂಬಂಧಿಸಿದ ಕ್ಷೇತ್ರ ಪುನರ್ವಿಂಗಡಣೆ ಮಸೂದೆಯನ್ನು ಅಂಗೀಕರಿಸಲು ಕೇಂದ್ರ ಸರ್ಕಾರ ಹೆಚ್ಚಿನ ಆದ್ಯತೆ ನೀಡಲಿದೆ ಎಂದು ಪಿಟಿಐ ಸುದ್ದಿಸಂಸ್ಥೆ ವರದಿ ಮಾಡಿದೆ.
ಮೂಲಗಳ ಪ್ರಕಾರ, ಕ್ಷೇತ್ರ ಪುನರ್ವಿಂಗಡಣೆಯ ನಂತರ ಲೋಕಸಭೆಯ ಒಟ್ಟು ಸದಸ್ಯ ಬಲವನ್ನು ಪ್ರಸ್ತುತ ಇರುವ 543 ರಿಂದ 850ಕ್ಕೆ ಹೆಚ್ಚಿಸುವ ಸಂವಿಧಾನ ತಿದ್ದುಪಡಿ ಮಸೂದೆಯನ್ನು ಅಂಗೀಕರಿಸುವುದು ಸರ್ಕಾರದ ಪ್ರಮುಖ ಗುರಿಯಾಗಿದೆ. 2029ರ ಲೋಕಸಭಾ ಚುನಾವಣೆಗೆ ಮುನ್ನ ಸಂಸತ್ತು ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ. 33ರಷ್ಟು ಮೀಸಲಾತಿಯನ್ನು ಜಾರಿಗೊಳಿಸುವ ಹಾದಿಯನ್ನು ಈ ಮಸೂದೆ ಸುಗಮಗೊಳಿಸಲಿದೆ.
ಇದೊಂದು ಸಂವಿಧಾನ ತಿದ್ದುಪಡಿ ಮಸೂದೆಯಾಗಿರುವುದರಿಂದ, ಲೋಕಸಭೆಯಲ್ಲಿ ಅಂಗೀಕಾರವಾಗಲು ಮೂರನೇ ಎರಡರಷ್ಟು ಬಹುಮತದ ಅಗತ್ಯವಿದೆ. ಇದರ ಅರ್ಥ, ಮಸೂದೆಯ ಪರವಾಗಿ ಕನಿಷ್ಠ 361 ಮತಗಳು ಬೀಳಬೇಕಾಗುತ್ತದೆ. ಪ್ರಸ್ತುತ 543 ಸದಸ್ಯ ಬಲದ ಲೋಕಸಭೆಯಲ್ಲಿ ಮೂರು ಸ್ಥಾನಗಳು ಖಾಲಿಯಿದ್ದು, ಒಟ್ಟು 540 ಸದಸ್ಯರಿದ್ದಾರೆ. ಆಡಳಿತಾರೂಢ ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್‌ಡಿಎ) ಪ್ರಸ್ತುತ 320 ಸದಸ್ಯರ ಬಲವನ್ನು ಹೊಂದಿದೆ. ಹೀಗಾಗಿ, ಮಸೂದೆಯನ್ನು ಸುಗಮವಾಗಿ ಅಂಗೀಕರಿಸಲು ಸರ್ಕಾರಕ್ಕೆ ಕೆಲ ವಿರೋಧ ಪಕ್ಷಗಳ ಬೆಂಬಲ ಅಥವಾ ಅಡ್ಡಮತದಾನದ ಅವಶ್ಯಕತೆ ಇದೆ.
ಈ ರೀತಿಯ ಬೆಳವಣಿಗೆಗಳ ನಡುವೆ, ಮಸೂದೆಯನ್ನು ಅಂಗೀಕರಿಸಲು ತನಗೆ ಅಗತ್ಯವಿರುವಷ್ಟು ಸಂಖ್ಯಾಬಲವಿದೆ ಎಂದು ಎನ್‌ಡಿಎ ಸರ್ಕಾರ ವಿಶ್ವಾಸ ವ್ಯಕ್ತಪಡಿಸುತ್ತಿದೆ. ಅಲ್ಲದೆ, ಈ ಮಹತ್ವದ ಮಸೂದೆಯು 15 ರಿಂದ 18 ಮತಗಳ ಅಂತರದಿಂದ ಸುಲಭವಾಗಿ ಅಂಗೀಕಾರಗೊಳ್ಳಲಿದೆ ಎಂದು ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದ್ದಾರೆ.
ಆಗಸ್ಟ್ 13ರಂದು ಸಂಸತ್ತಿನ ಮುಂಗಾರು ಅಧಿವೇಶನವನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಗಿತ್ತು. ಆದರೆ, ಅದನ್ನು ಔಪಚಾರಿಕವಾಗಿ ಮುಕ್ತಾಯಗೊಳಿಸದೆ ಇದೀಗ ಬರೋಬ್ಬರಿ 94 ದಿನಗಳು ಕಳೆದಿದ್ದು, 2008ರಲ್ಲಿ ನಿರ್ಮಾಣವಾಗಿದ್ದ 87 ದಿನಗಳ ಹಿಂದಿನ ದಾಖಲೆಯನ್ನು ಇದು ಮುರಿದಿದೆ. ಸಂವಿಧಾನದಲ್ಲಿ ಅನಿರ್ದಿಷ್ಟಾವಧಿ ಮುಂದೂಡಿಕೆಯ ನಂತರ ಸದನವನ್ನು ಇಂತಿಷ್ಟೇ ಅವಧಿಯಲ್ಲಿ ಮುಕ್ತಾಯಗೊಳಿಸಬೇಕು ಎಂಬ ಯಾವುದೇ ನಿರ್ದಿಷ್ಟ ಕಾಲಮಿತಿ ಇಲ್ಲದಿರುವುದನ್ನು ಸರ್ಕಾರ ಸಮರ್ಪಕವಾಗಿ ಬಳಸಿಕೊಂಡಿದೆ.
ಮುಂಗಾರು ಅಧಿವೇಶನವನ್ನು ಮುಕ್ತಾಯಗೊಳಿಸದೆ ಉಳಿಸಿಕೊಂಡಿರುವುದರಿಂದ, ಉದ್ದೇಶಿತ ಸಂವಿಧಾನ ತಿದ್ದುಪಡಿ ಮಸೂದೆಯನ್ನು ಮಂಡಿಸಲು ಕಡಿಮೆ ಅವಧಿಯ ನೋಟಿಸ್‌ನಲ್ಲಿ ವಿಸ್ತೃತ ಅಥವಾ ವಿಶೇಷ ಅಧಿವೇಶನವನ್ನು ಕರೆಯುವ ಆಯ್ಕೆಯನ್ನು ಸರ್ಕಾರ ಮುಕ್ತವಾಗಿರಿಸಿಕೊಂಡಿದೆ. ನಿಯಮಗಳ ಪ್ರಕಾರ, ಹೊಸ ಅಧಿವೇಶನವನ್ನು ಕರೆಯಲು ಕನಿಷ್ಠ 14 ದಿನಗಳ ಮುಂಚಿತವಾಗಿ ನೋಟಿಸ್ ನೀಡಬೇಕಾಗುತ್ತದೆ; ಆದರೆ ಈಗಾಗಲೇ ಅಸ್ತಿತ್ವದಲ್ಲಿರುವ ಅಧಿವೇಶನದ ವಿಸ್ತೃತ ಕಲಾಪ ನಡೆಸಲು ಕೇವಲ ಎರಡು ದಿನಗಳ ನೋಟಿಸ್ ಸಾಕಾಗುತ್ತದೆ.
ಕ್ಷೇತ್ರ ಪುನರ್ವಿಂಗಡಣೆಯ ಪರಿಣಾಮಗಳ ಬಗ್ಗೆ ವಿಶೇಷವಾಗಿ ದಕ್ಷಿಣ ಭಾರತದ ರಾಜ್ಯಗಳಲ್ಲಿ ವ್ಯಕ್ತವಾಗಿರುವ ಆತಂಕವನ್ನು ದೂರ ಮಾಡಲು ಕೇಂದ್ರ ಸರ್ಕಾರ ಹೊಸ ಸೂತ್ರವೊಂದನ್ನು ಪರಿಶೀಲಿಸುತ್ತಿದೆ ಎಂದು ತಿಳಿದುಬಂದಿದೆ. ಈ ಪ್ರಸ್ತಾವಿತ ಚೌಕಟ್ಟಿನ ಅಡಿಯಲ್ಲಿ, 1971ರ ಜನಗಣತಿಯ ಆಧಾರದ ಮೇಲೆ ಪ್ರಸ್ತುತ ಇರುವ ರಾಜ್ಯಗಳ ನಡುವಿನ ಸ್ಥಾನಗಳ ಹಂಚಿಕೆಯ ಅನುಪಾತವನ್ನು ಹಾಗೆಯೇ ಉಳಿಸಿಕೊಂಡು, ಎಲ್ಲಾ ರಾಜ್ಯಗಳ ಲೋಕಸಭಾ ಸ್ಥಾನಗಳನ್ನು ಶೇ. 50ರಷ್ಟು ಹೆಚ್ಚಿಸುವ ಬಗ್ಗೆ ಚಿಂತನೆ ನಡೆದಿದೆ. ಆದಾಗ್ಯೂ, ಈ ಬಗ್ಗೆ ಇನ್ನೂ ಯಾವುದೇ ಅಂತಿಮ ನಿರ್ಧಾರ ಕೈಗೊಂಡಿಲ್ಲ.
ಕಳೆದ ಏಪ್ರಿಲ್ 17ರಂದು ನಡೆದ ಸಂಸತ್ತಿನ ವಿಶೇಷ ಕಲಾಪದಲ್ಲಿ ಈ ಉದ್ದೇಶಿತ ಮಸೂದೆಯು ಅಗತ್ಯವಿರುವಷ್ಟು ಸಂಖ್ಯಾಬಲ ಪಡೆಯುವಲ್ಲಿ ವಿಫಲವಾಗಿತ್ತು. ಹೀಗಾಗಿ, ಮುಂಬರುವ ಚಳಿಗಾಲದ ಅಧಿವೇಶನದಲ್ಲಿ ಈ ಮಸೂದೆಯನ್ನು ಅಂಗೀಕರಿಸುವುದು ಕೇಂದ್ರ ಸರ್ಕಾರದ ಪಾಲಿಗೆ ದೊಡ್ಡ ಪರೀಕ್ಷೆಯಾಗಿದೆ(ಏಜೆನ್ಸೀಸ್).