ಹೈದರಾಬಾದ್: ಇಲ್ಲಿ ನಡೆದ ಭಾರತ್ ಶೃಂಗಸಭೆ 2026 (Bharat Summit 2026) ಕಾರ್ಯಕ್ರಮದಲ್ಲಿ ಇಟಲಿಯ ರಾಜಕಾರಣಿ ಜಿಯಾಕೊಮೊ ಫಿಲಿಬೆಕ್ ಅವರು ಕಾಂಗ್ರೆಸ್ನ ವೋಟ್ ಚೋರ್, ಗದ್ದಿ ಚೋಡ್ (ಮತ ಕಳ್ಳ, ಗದ್ದುಗೆ ಬಿಡು) ಘೋಷಣೆಯನ್ನು ಕೂಗಿದ್ದು, ಅದಕ್ಕೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ನಗುತ್ತಾ ಚಪ್ಪಾಳೆ ತಟ್ಟಿರುವ ವಿಚಾರ ರಾಷ್ಟ್ರ ರಾಜಕಾರಣದಲ್ಲಿ ಭಾರಿ ವಿವಾದಕ್ಕೆ ಕಾರಣವಾಗಿದೆ.
ದೇಶದ ಆಂತರಿಕ ವಿಚಾರಗಳಲ್ಲಿ ವಿದೇಶಿಗರ ಹಸ್ತಕ್ಷೇಪಕ್ಕೆ ಅವಕಾಶ ನೀಡಲಾಗಿದೆ ಎಂದು ಆರೋಪಿಸಿ ಕೇಂದ್ರ ಸಚಿವ ಕಿರಣ್ ರಿಜಿಜು, ಬಿಜೆಪಿ ಹಾಗೂ ಬಿಆರ್ಎಸ್ ನಾಯಕರು ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಈ ಘಟನೆಗೆ ಸಂಬಂಧಿಸಿದಂತೆ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು, ರಾಹುಲ್ ಗಾಂಧಿ ಹೆಸರನ್ನು ನೇರವಾಗಿ ಉಲ್ಲೇಖಿಸದೆ ವ್ಯಂಗ್ಯವಾಡಿದ್ದಾರೆ. ವಿದೇಶಿಯರೊಬ್ಬರು ಭಾರತಕ್ಕೆ ಅವಮಾನ ಮಾಡುತ್ತಿರುವಾಗ ಯಾರಾದರೂ ನಗುವುದನ್ನು ನೀವು ಎಂದಾದರೂ ನೋಡಿದ್ದೀರಾ? ವಿದೇಶಕ್ಕೆ ಹೋಗಿ ದೇಶವನ್ನು ಅವಮಾನಿಸುವ ಭಾರತೀಯ ಯಾರು ಎಂದು ನಾನು ಕೇಳುತ್ತಿಲ್ಲ ಎಂದು ರಿಜಿಜು ಟೀಕಿಸಿದ್ದಾರೆ.
ಪಾರ್ಟಿ ಆಫ್ ಯುರೋಪಿಯನ್ ಸೋಷಿಯಲಿಸ್ಟ್ಸ್ ಪ್ರಧಾನ ಕಾರ್ಯದರ್ಶಿ ಜಿಯಾಕೊಮೊ ಫಿಲಿಬೆಕ್ ಅವರು ಸಮಾವೇಶವನ್ನುದ್ದೇಶಿಸಿ ಮಾತನಾಡುತ್ತಾ, ಮತದಾರರ ಪಟ್ಟಿಯಲ್ಲಿನ ಅಕ್ರಮಗಳ ವಿರುದ್ಧ ರಾಹುಲ್ ಗಾಂಧಿ ನಡೆಸುತ್ತಿರುವ ಅಭಿಯಾನವನ್ನು ಬೆಂಬಲಿಸಿದರು. ಪ್ರತಿಯೊಂದು ಪ್ರಜಾಪ್ರಭುತ್ವವು ನಿಂತಿರುವ ಒಬ್ಬ ವ್ಯಕ್ತಿ, ಒಂದು ಮತ ಎಂಬ ಸರಳ ತತ್ವವನ್ನು ರಾಹುಲ್ ಗಾಂಧಿ ರಕ್ಷಿಸಿದ್ದಾರೆ. ಎರಡು ವಾರಗಳ ಹಿಂದೆ ದೆಹಲಿಯ ರಾಮಲೀಲಾ ಮೈದಾನಕ್ಕೆ ಸಾವಿರಾರು ಜನರೊಂದಿಗೆ ಅವರು ನಡೆಸಿದ ಮೆರವಣಿಗೆ, ಪ್ರಜಾಪ್ರಭುತ್ವವನ್ನು ರಕ್ಷಿಸಿಕೊಳ್ಳಬೇಕು ಎಂಬುದನ್ನು ನೆನಪಿಸುತ್ತದೆ. ವೋಟ್ ಚೋರ್, ಗದ್ದಿ ಚೋಡ್ ಎಂದು ಫಿಲಿಬೆಕ್ ಘೋಷಣೆ ಕೂಗಿದರು.
ಭಾರತದಲ್ಲಿ ಪ್ರಜಾಪ್ರಭುತ್ವದ ಮೇಲೆ ದಾಳಿ ನಡೆಯುತ್ತಿದ್ದು, ಅದನ್ನು ರಕ್ಷಿಸಲು ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಪಕ್ಷದ ಬೆಂಬಲಕ್ಕೆ ನಿಲ್ಲುವುದು ಅತ್ಯುತ್ತಮ ಮಾರ್ಗವಾಗಿದೆ ಎಂದ ಫಿಲಿಬೆಕ್, ಸಾಮಾಜಿಕ ನ್ಯಾಯ, ಹವಾಮಾನ ನ್ಯಾಯ, ಮಾನವ ಹಕ್ಕುಗಳು ಮತ್ತು ಪ್ರಜಾಪ್ರಭುತ್ವದಲ್ಲಿ ನಂಬಿಕೆಯಿಟ್ಟಿರುವ ಪ್ರಗತಿಪರ ಒಕ್ಕೂಟದ ಭಾಗವಾಗಿ ತಾವು ಈ ಶೃಂಗಸಭೆಯಲ್ಲಿ ಭಾಗವಹಿಸಿರುವುದಾಗಿ ತಮ್ಮ ಭೇಟಿಯನ್ನು ಸಮರ್ಥಿಸಿಕೊಂಡರು.
ದೇಶದ ಆಂತರಿಕ ರಾಜಕೀಯ ವಿಷಯಗಳ ಬಗ್ಗೆ ವಿದೇಶಿ ರಾಜಕಾರಣಿಯೊಬ್ಬರು ಮಾತನಾಡಲು ಕಾಂಗ್ರೆಸ್ ಅವಕಾಶ ಮಾಡಿಕೊಟ್ಟಿರುವುದನ್ನು ಬಿಜೆಪಿ ಮತ್ತು ಬಿಆರ್ಎಸ್ ಪಕ್ಷಗಳು ಕಟುವಾಗಿ ಖಂಡಿಸಿವೆ.
ಕಾಂಗ್ರೆಸ್ ಸಭೆಯಲ್ಲಿ ಇಟಲಿ ನಾಯಕ ಕೂಗಿರುವ ಘೋಷಣೆಯನ್ನು ಒಪ್ಪಿಕೊಳ್ಳಲು ಸಾಧ್ಯವೇ ಇಲ್ಲ ಎಂದು ಬಿಜೆಪಿ ಶಹನವಾಜ್ ಹುಸೇನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ದೇಶದ ಆಂತರಿಕ ವಿಚಾರಗಳಲ್ಲಿ ಹಸ್ತಕ್ಷೇಪ ಮಾಡುವ ಹಕ್ಕು ಯಾವುದೇ ವಿದೇಶಿಗರಿಗಿಲ್ಲ. ನಮ್ಮಲ್ಲಿ ಇಂತಹ ಘೋಷಣೆಗಳನ್ನು ಕೂಗಲು ಜನರು ಸಿಗದ ಕಾರಣ, ಕಾಂಗ್ರೆಸ್ ಈಗ ವಿದೇಶಿಗರನ್ನು ಕರೆತಂದು ಘೋಷಣೆ ಕೂಗಿಸುತ್ತಿದೆ ಎಂದು ಅವರು ಆರೋಪಿಸಿದರು.
ತೆಲಂಗಾಣ ಬಿಜೆಪಿ ಅಧ್ಯಕ್ಷ ಎನ್. ರಾಮಚಂದರ್ ರಾವ್ ಮಾತನಾಡಿ, ವಿದೇಶಿ ನಾಯಕರು ನಮ್ಮ ದೇಶದ ಪ್ರಜಾಪ್ರಭುತ್ವವನ್ನು ಅಪಹಾಸ್ಯ ಮಾಡಲು ಬಿಡುವುದು ಮತ್ತು ಅವರ ಮಾತುಗಳಿಗೆ ಹೆಮ್ಮೆಯಿಂದ ಚಪ್ಪಾಳೆ ತಟ್ಟುವುದು ದೇಶದ್ರೋಹವಲ್ಲವೇ? ರಾಹುಲ್ ಗಾಂಧಿ ಭಾರತೀಯ ನಾಯಕನಂತೆ ವರ್ತಿಸುತ್ತಿಲ್ಲ, ತಮ್ಮ ವಿದೇಶಿ ಯಜಮಾನರ ಆದೇಶಕ್ಕೆ ತಕ್ಕಂತೆ ಕುಣಿಯುವ ಕೈಗೊಂಬೆಯಂತೆ ವರ್ತಿಸುತ್ತಿದ್ದಾರೆ ಎಂದು ಕಿಡಿಕಾರಿದರು.
ಬಿಆರ್ಎಸ್ನ ಕಾರ್ತಿಕ್ ಇಂದ್ರ ರೆಡ್ಡಿ ಪಟ್ಲೋಲ್ಲ ಕೂಡ ಪ್ರತಿಕ್ರಿಯೆ ನೀಡಿದ್ದು, ಭಾರತದ ಆಂತರಿಕ ರಾಜಕೀಯ ವಿಚಾರಗಳ ಬಗ್ಗೆ ಪ್ರತಿಕ್ರಿಯಿಸಲು ವಿದೇಶಿ ರಾಜಕಾರಣಿಗೆ ಏಕೆ ಅವಕಾಶ ನೀಡಲಾಯಿತು ಎಂದು ಪ್ರಶ್ನಿಸುತ್ತಾ, ಫಿಲಿಬೆಕ್ ಅವರ ಹೇಳಿಕೆಗಳನ್ನು ರಾಹುಲ್ ಗಾಂಧಿ ಪ್ರೋತ್ಸಾಹಿಸಿದ್ದಾರೆ ಎಂದು ದೂರಿದರು.
ಇನ್ನೊಂದೆಡೆ, ಶಿವಸೇನೆ (ಯುಬಿಟಿ) ನಾಯಕ ಸಂಜಯ್ ರಾವತ್ ಅವರು ಫಿಲಿಬೆಕ್ ಅವರ ಹೇಳಿಕೆಯನ್ನು ಬೆಂಬಲಿಸಿದ್ದು, ಬಿಜೆಪಿಯ ಟೀಕೆಗಳಿಗೆ ತಿರುಗೇಟು ನೀಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರ ಭೇಟಿಯನ್ನು ಉಲ್ಲೇಖಿಸಿದ ರಾವತ್, ಮೋದಿ ಅವರು ಇಟಲಿ ಪ್ರಧಾನಿಗೆ ಮೆಲೋಡಿ ಚಾಕೊಲೇಟ್ ನೀಡಬಹುದಾದರೆ, ಇಟಲಿಯ ರಾಜಕಾರಣಿಯೊಬ್ಬರು ಇಲ್ಲಿಗೆ ಬಂದು ಈ ದೇಶದ ಬಗ್ಗೆ ಏಕೆ ಮಾತನಾಡಬಾರದು? ದೇಶದಲ್ಲಿ ಪ್ರಜಾಪ್ರಭುತ್ವದ ಕಗ್ಗೊಲೆಯಾಗುತ್ತಿದೆ, ಇದು ವಿಶ್ವಸಂಸ್ಥೆ ಮತ್ತು ಮಾನವ ಹಕ್ಕುಗಳಿಗೆ ಸಂಬಂಧಿಸಿದ ವಿಷಯವೇ ಹೊರತು ಯಾವುದೇ ವಿದೇಶಿ ಶಕ್ತಿಯ ಹಸ್ತಕ್ಷೇಪವಲ್ಲ ಎಂದು ಸಮರ್ಥನೆಗಿಳಿದಿದ್ದಾರೆ(ಏಜೆನ್ಸೀಸ್).