

ದುಬೈ: ಆಕಾಶದಲ್ಲಿ ಹಾರುತ್ತಿದ್ದ ವಿಮಾನವನ್ನೇ ಪತನಗೊಳಿಸಲು ಯತ್ನಿಸಿದ ಕರಾಳ ಘಟನೆಯ ಹಿಂದೆ ಅಡಗಿರುವ ಭಯಾನಕ ಸತ್ಯವೊಂದು ಇದೀಗ ಹೊರಬಂದಿದೆ. ಸಾವು ಅಂದ್ರೆ ನನಗೆ ಭಯವಿಲ್ಲ, ನಾನು ವಿಮಾನವನ್ನು ಪತನಗೊಳಿಸಲು ಬಯಸಿದ್ದೆ ಎಂದು ದುಬೈನಿಂದ ಇಸ್ರೇಲ್ನ ಟೆಲ್ ಅವೀವ್ಗೆ ಹೊರಟಿದ್ದ ಫ್ಲೈದುಬೈ ವಿಮಾನದ ಸಹ-ಪೈಲಟ್ ಆಗಿದ್ದ ಹಮಾಮ್ ಅಲ್-ಹಮ್ಮಾಮಿ ( Hamam Al-Hammami ) ತನಿಖಾಧಿಕಾರಿಗಳ ಮುಂದೆ ನೀಡಿರುವ ಆಘಾತಕಾರಿ ಹೇಳಿಕೆಗಳು ಜಾಗತಿಕ ವಲಯದಲ್ಲಿ ತೀವ್ರ ಸಂಚಲನ ಮೂಡಿಸಿದೆ.
ವೈಮಾನಿಕ ಇತಿಹಾಸದಲ್ಲೇ ಅತ್ಯಂತ ಆಘಾತಕಾರಿ ಎನ್ನಲಾದ ಈ ಘಟನೆಯು ವಿಶ್ವದಾದ್ಯಂತ ಭಾರೀ ಚರ್ಚೆಗೆ ಗ್ರಾಸವಾಗಿದೆ. ವಿಮಾನದ ಕಾಕ್ಪಿಟ್ ಒಳಗೆ ಭಾರತೀಯ ಮೂಲದ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಅವರ ಮೇಲೆ ನಡೆದ ಈ ಮಾರಣಾಂತಿಕ ಹಲ್ಲೆ ಮತ್ತು ಉಗ್ರಗಾಮಿ ನಂಟಿನ ಕುರಿತು ಹೊರಬಿದ್ದಿರುವ ಮಾಹಿತಿಗಳು ವಿಮಾನಯಾನ ಭದ್ರತೆಯ ಮೇಲಿನ ಪ್ರಶ್ನೆಗಳನ್ನು ಮತ್ತಷ್ಟು ಹೆಚ್ಚಿಸಿವೆ.
ಘಟನೆಯ ವಿವರಗಳ ಪ್ರಕಾರ, ಫ್ಲೈದುಬೈ ವಿಮಾನವು ಮಾರ್ಗಮಧ್ಯೆ ಹಾರಾಟದಲ್ಲಿದ್ದಾಗ ಸಹ-ಪೈಲಟ್ ಹಮಾಮ್ ಅಲ್-ಹಮ್ಮಾಮಿ ಇದ್ದಕ್ಕಿದ್ದಂತೆ ಕಾಕ್‌ಪಿಟ್‌ನಲ್ಲಿದ್ದ ಕ್ರ್ಯಾಶ್ ಆಕ್ಸ್ (ಕೊಡಲಿ) ಬಳಸಿ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಅವರ ಮೇಲೆ ಮನಬಂದಂತೆ ಹಲ್ಲೆ ನಡೆಸಿದ್ದಾನೆ. ವಿಮಾನವನ್ನು ಕೆಳಮುಖವಾಗಿ ಧುಮುಕಿಸಿ ಪತನ ಮಾಡುವ ಮೂಲಕ ಭಾರೀ ದುರಂತವೊಂದನ್ನು ಸೃಷ್ಟಿಸಲು ಆತ ಯತ್ನಿಸಿದ. ಗಾಯಗೊಂಡಿದ್ದರೂ ಪ್ರಾಣದ ಹಂಗು ತೊರೆದು ಹೋರಾಡಿದ ಭಾರತೀಯ ಕ್ಯಾಪ್ಟನ್ನ ಸಮಯೋಚಿತ ಸಾಹಸದಿಂದಾಗಿ ದೊಡ್ಡ ಅಪಘಾತ ತಪ್ಪಿದಂತಾಗಿದೆ.
ಸೌದಿ ಅರೇಬಿಯಾದ ತಬುಕ್ ವಿಮಾನ ನಿಲ್ದಾಣದಲ್ಲಿ ವಿಮಾನ ತುರ್ತು ಭೂಸ್ಪರ್ಶ ಮಾಡಿದ ಬಳಿಕ ಆರೋಪಿಯನ್ನು ಭದ್ರತಾ ಸಿಬ್ಬಂದಿ ವಶಕ್ಕೆ ಪಡೆದಿದ್ದಾರೆ. ಈ ಕುರಿತು ಯುಎಇ ಮತ್ತು ಸೌದಿ ಅಧಿಕಾರಿಗಳು ಜಂಟಿಯಾಗಿ ತೀವ್ರ ತನಿಖೆ ಮುಂದುವರಿಸಿದ್ದು, ಬಂಧಿತ ಸಹ-ಪೈಲಟ್‌ನ ಭಯಾನಕ ಮನಸ್ಥಿತಿ ಮತ್ತು ಕೃತ್ಯದ ಹಿಂದಿನ ಉದ್ದೇಶ ಒಂದೊಂದಾಗಿ ಹೊರಬರುತ್ತಿದೆ. ಉದ್ದೇಶಪೂರ್ವಕವಾಗಿಯೇ ಈ ಕೆಲಸ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ. ವಿಮಾನವನ್ನು ಪತನಗೊಳಿಸಲು ಯತ್ನಿಸಿದೆ ಮತ್ತು ಸಾವು ಅಂದರೆ ನನಗೆ ಭಯವಿಲ್ಲ ಎಂದು ಹೇಳಿದ್ದಾನೆ.
ಒಮಾನ್ ಮೂಲದ ತಂದೆ ಮತ್ತು ಸಿರಿಯನ್ ಪ್ರಜೆಯಾದ ತಾಯಿಗೆ ಜನಿಸಿ ದುಬೈನಲ್ಲಿ ವಾಸಿಸುತ್ತಿದ್ದ ಸಹ-ಪೈಲಟ್ ಹಮಾಮ್ ಅಲ್-ಹಮ್ಮಾಮಿ, ಸಿರಿಯಾ ಅಂತರ್ಯುದ್ಧದ ಸಮಯದಲ್ಲಿ ಅಲ್ಲಿ ಕಳೆದಿದ್ದ ಕಾಲದ ಬಗ್ಗೆ ಹಾಗೂ ಆತನ ಸಿರಿಯನ್ ನಂಟಿನ ಕುರಿತು ತನಿಖಾಧಿಕಾರಿಗಳು ತೀವ್ರ ತನಿಖೆ ನಡೆಸುತ್ತಿದ್ದಾರೆ. ಆತ ಸಿರಿಯಾದಲ್ಲಿದ್ದಾಗ ಉಗ್ರಗಾಮಿ ವಿಚಾರಧಾರೆಗಳಿಗೆ ಪ್ರಭಾವಿತನಾಗಿರಬಹುದು ಎಂದು ತನಿಖಾ ತಂಡ ಶಂಕಿಸಿದೆ.
ಪ್ರಾಥಮಿಕ ತನಿಖೆಯಿಂದ ಲಭ್ಯವಾಗಿರುವ ಮಾಹಿತಿಯಂತೆ, ಒಮಾನ್ ಮೂಲದ ಹಮಾಮ್ ಅಲ್-ಹಮ್ಮಾಮಿ ಹಿಂದೆ ಉಗ್ರಗಾಮಿ ಒಲವು ಹೊಂದಿದ್ದ ಕಾರಣಕ್ಕಾಗಿ ಒಮಾನ್ ಏರ್‌ಲೈನ್ಸ್‌ನಲ್ಲಿ ಹಾರಾಟದಿಂದ ನಿಷೇಧಿಸಲ್ಪಟ್ಟಿದ್ದನು ಎಂದು ತಿಳಿದುಬಂದಿದೆ. ಸಿರಿಯನ್ ಮೂಲದ ಹಿನ್ನೆಲೆ ಹಾಗೂ ಸಿರಿಯಾ ಅಂತರ್ಯುದ್ಧದ ಸಮಯದಲ್ಲಿ ಆತ ಕಳೆದಿದ್ದ ಕಾಲದ ಬಗ್ಗೆಯೂ ಭದ್ರತಾ ಏಜೆನ್ಸಿಗಳು ಈಗ ಆಳವಾದ ತನಿಖೆ ಕೈಗೊಂಡಿವೆ, (ಏಜೆನ್ಸೀಸ್).