ಅಮೆರಿಕ-ಇಸ್ರೇಲ್ ಮಹಾ ಪ್ರಹಾರಕ್ಕೆ ಇರಾನ್ ತತ್ತರ: ಇಸ್ರೇಲ್ ದಾಳಿಗೆ ರಕ್ಷಣಾ ಸಚಿವನೇ ಬಲಿ? Iran Israel War

ಇರಾನ್‌ನ ರಕ್ಷಣಾ ಸಚಿವ ಅಮೀರ್ ನಾಸಿರ್ಜಾದೆ
ಇರಾನ್‌ನ ರಕ್ಷಣಾ ಸಚಿವ ಅಮೀರ್ ನಾಸಿರ್ಜಾದೆ
Published on
ಟೆಹ್ರಾನ್/ವಾಷಿಂಗ್ಟನ್: ಮಧ್ಯಪ್ರಾಚ್ಯದಲ್ಲಿ ಈಗ ಯುದ್ಧದ ಜ್ವಾಲೆ ಮುಗಿಲು ಮುಟ್ಟಿದೆ(Iran Israel War). ಶನಿವಾರ (ಫೆ.28) ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ಇರಾನ್ ಮೇಲೆ ನಡೆಸಿದ ಭೀಕರ ದಾಳಿಯು ಇಡೀ ಜಗತ್ತನ್ನು ಬೆಚ್ಚಿಬೀಳಿಸಿದೆ. ಈ ದಾಳಿಯಲ್ಲಿ ಇರಾನ್‌ನ ರಕ್ಷಣಾ ಸಚಿವ ಅಮೀರ್ ನಾಸಿರ್ಜಾದೆ ಮತ್ತು ರೆವಲ್ಯೂಷನರಿ ಗಾರ್ಡ್ಸ್ ಕಮಾಂಡರ್ ಮೊಹಮ್ಮದ್ ಪಕ್ಪೌರ್ ಹತರಾಗಿದ್ದಾರೆ ಎಂದು ವರದಿಯಾಗಿದ್ದು, ಇರಾನ್‌ನ ಮಿಲಿಟರಿ ಶಕ್ತಿ ಅಕ್ಷಶಃ ಧೂಳೀಪಟವಾಗಿದೆ.

ಸುಪ್ರೀಂ ನಾಯಕನ ಕಚೇರಿಯೇ ಟಾರ್ಗೆಟ್!

ದಾಳಿಯ ಭೀಕರತೆ ಎಷ್ಟಿತ್ತೆಂದರೆ, ಇರಾನ್‌ನ ಸರ್ವೋಚ್ಚ ನಾಯಕ 86 ವರ್ಷದ ಅಯತೊಲ್ಲಾ ಅಲಿ ಖಮೇನಿ ಅವರ ಕಚೇರಿಗಳ ಸುತ್ತಮುತ್ತಲ ಪ್ರದೇಶಗಳನ್ನೇ ಗುರಿಯಾಗಿಸಿಕೊಂಡು ಬಾಂಬ್ ದಾಳಿ ನಡೆಸಲಾಗಿದೆ. ಟೆಹ್ರಾನ್ ನಗರದಾದ್ಯಂತ ದಟ್ಟವಾದ ಹೊಗೆ ಆವರಿಸಿದ್ದು, ಸ್ಫೋಟದ ಶಬ್ದಕ್ಕೆ ಇಡೀ ನಗರವೇ ನಡುಗಿದೆ. ದಾಳಿಯ ಸಮಯದಲ್ಲಿ ಖಮೇನಿ ಕಚೇರಿಯಲ್ಲಿದ್ದರೇ ಎಂಬುದು ಇನ್ನು ನಿಗೂಢವಾಗಿದೆ.

ಇದು ನಿಮ್ಮ ಕೊನೆಯ ಅವಕಾಶ: ಡೊನಾಲ್ಡ್ ಟ್ರಂಪ್

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ದಾಳಿಯ ಬಗ್ಗೆ ವಿಡಿಯೋ ಸಂದೇಶ ನೀಡಿದ್ದು, ಇರಾನ್ ಜನತೆಗೆ ನೇರ ಕರೆ ನೀಡಿದ್ದಾರೆ. ವರ್ಷಗಳಿಂದ ನೀವು ಅಮೆರಿಕದ ಸಹಾಯ ಕೇಳುತ್ತಿದ್ದೀರಿ, ಆದರೆ ಅದು ನಿಮಗೆ ಸಿಕ್ಕಿರಲಿಲ್ಲ. ಈಗ ನಿಮ್ಮ ಭವಿಷ್ಯವನ್ನು ಬದಲಿಸಿಕೊಳ್ಳಲು ಇದು ತಲೆಮಾರುಗಳಲ್ಲೇ ಸಿಗುತ್ತಿರುವ ಏಕೈಕ ಅವಕಾಶ. ನಮ್ಮ ಕಾರ್ಯಾಚರಣೆ ಮುಗಿದ ಮೇಲೆ ನಿಮ್ಮ ಸರ್ಕಾರವನ್ನು ನೀವೇ ವಹಿಸಿಕೊಳ್ಳಿ ಎಂದು ಇರಾನ್ ಜನರನ್ನು ಬಂಡಾಯ ಏಳುವಂತೆ ಪ್ರಚೋದಿಸಿದ್ದಾರೆ.
ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಕೂಡ ಇದೇ ಮಾತನ್ನು ಪುನರುಚ್ಚರಿಸಿದ್ದು, ಧೈರ್ಯವಂತ ಇರಾನ್ ಜನತೆ ತಮ್ಮ ಹಣೆಬರಹವನ್ನು ತಾವೇ ಬರೆಯುವ ಪರಿಸ್ಥಿತಿಯನ್ನು ನಮ್ಮ ಈ ಜಂಟಿ ಕಾರ್ಯಾಚರಣೆ ನಿರ್ಮಿಸಲಿದೆ ಎಂದಿದ್ದಾರೆ.

ಪ್ರತೀಕಾರಕ್ಕೆ ಇರಾನ್ ಸಿದ್ಧ: ಕ್ಷಿಪಣಿ ಮಳೆ

ಈ ಆಕ್ರಮಣಕ್ಕೆ ಸುಮ್ಮನಿರದ ಇರಾನ್, ಇಸ್ರೇಲ್ ಮೇಲೆ ನೂರಾರು ಕ್ಷಿಪಣಿ ಮತ್ತು ಡ್ರೋನ್ ದಾಳಿಗಳನ್ನು ನಡೆಸಿದೆ. ಅಷ್ಟೇ ಅಲ್ಲದೆ ಬಹ್ರೇನ್, ಕುವೈತ್ ಮತ್ತು ಕತಾರ್‌ನಲ್ಲಿರುವ ಅಮೆರಿಕದ ಮಿಲಿಟರಿ ನೆಲೆಗಳನ್ನು ಗುರಿಯಾಗಿಸಿಕೊಂಡು ಪ್ರಹಾರ ನಡೆಸಿದೆ. ಪರಿಸ್ಥಿತಿ ವಿಕೋಪಕ್ಕೆ ಹೋದ ಬೆನ್ನಲ್ಲೇ ಯುಎಇ ಮತ್ತು ಇರಾಕ್ ತಮ್ಮ ವಾಯುಪ್ರದೇಶವನ್ನು ಸಂಪೂರ್ಣವಾಗಿ ಮುಚ್ಚಿವೆ.

ದುರಂತ: ಶಾಲಾ ಮಕ್ಕಳ ಸಾವು!

ಈ ಭೀಕರ ಯುದ್ಧದ ನಡುವೆ ಮನಕಲಕುವ ಘಟನೆಯೊಂದು ವರದಿಯಾಗಿದೆ. ಇರಾನ್‌ನ ದಕ್ಷಿಣ ಭಾಗದ ಮಿನಾಬ್‌ನಲ್ಲಿರುವ ಹೆಣ್ಣು ಮಕ್ಕಳ ಶಾಲೆಯೊಂದರ ಮೇಲೆ ನಡೆದ ದಾಳಿಯಲ್ಲಿ 40 ವಿದ್ಯಾರ್ಥಿನಿಯರು ಸಾವನ್ನಪ್ಪಿದ್ದಾರೆ ಮತ್ತು 45ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ಇರಾನ್‌ನ ಸುದ್ದಿ ಸಂಸ್ಥೆ ತಿಳಿಸಿದೆ.
ಅಮೆರಿಕವು ಇರಾನ್‌ನ ಪರಮಾಣು ಯೋಜನೆಯನ್ನು ಹತ್ತಿಕ್ಕಲು ಈ ದಾಳಿ ನಡೆಸುತ್ತಿದೆ ಎಂದು ಹೇಳಲಾಗುತ್ತಿದೆ. ಆದರೆ, ಈ ಮಹಾಯುದ್ಧವು ಕೇವಲ ಇರಾನ್ ಮತ್ತು ಇಸ್ರೇಲ್ ನಡುವೆ ಉಳಿಯದೆ ಜಾಗತಿಕ ಸಂಘರ್ಷವಾಗಿ ಬದಲಾಗುವ ಆತಂಕ ಮೂಡಿಸಿದೆ,(ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net