ಹಾರ್ಮುಜ್ ಜಲಸಂಧಿ ಬಂದ್ ಮಾಡಿದ ಇರಾನ್; ಅಮೆರಿಕ ಎಂಟ್ರಿಯಾದರೆ ಮಹಾಯುದ್ಧ ಫಿಕ್ಸ್? | Strait Of Hormuz

ಹಾರ್ಮುಜ್​ ಜಲಸಂಧಿ(Strait Of Hormuz)
ಹಾರ್ಮುಜ್​ ಜಲಸಂಧಿ(Strait Of Hormuz)
Published on

ಪ್ರಮುಖ ಮುಖ್ಯಾಂಶಗಳು

  • ಹಾರ್ಮುಜ್​ ಜಲಸಂಧಿ ಬಂದ್​ ಮಾಡಿದ ಇರಾನ್​
  • ರಕ್ಷಣೆಗೆ ನಾವು ಬರಲಿದ್ದೇವೆ ಎಂದ ಅಮೆರಿಕ
  • ಅಮೆರಿಕ ಹಸ್ತಕ್ಷೇಪ ಮಾಡಿದರೆ ಮಹಾಯುದ್ಧ ಗ್ಯಾರಂಟಿ ಎಂದ ರಾಜಕೀಯ ತಜ್ಞರು
ಇರಾನ್​: ಮಧ್ಯಪ್ರಾಚ್ಯದಲ್ಲಿ ಸಂಘರ್ಷ ಆರಂಭವಾಗಿ ಇಂದಿಗೆ ಐದು ದಿನಗಳು ಕಳೆದಿದ್ದು, ಹಾರ್ಮುಜ್ ಜಲಸಂಧಿ (Strait Of Hormuz) ಯಲ್ಲಿ ಹಡಗುಗಳ ಸಂಚಾರವನ್ನು ಇರಾನ್​ ನಿಷೇಧಿಸಿದೆ.ಈ ಭಾಗದಲ್ಲಿ ಏನಾದರೂ ಪರಿಸ್ಥಿತಿ ಹದಗೆಟ್ಟರೆ ಈ ಸಂಘರ್ಷ ಇನ್ನೂ ಹೆಚ್ಚಿನ ಕಾಲ ನಡೆಯಲಿದೆ ಎಂದು ಹೇಳಲಾಗುತ್ತಿದೆ.
ಫೆಬ್ರವರಿ 28 ರಂದು ಇರಾನಿನ ಸರ್ವೋಚ್ಚ ನಾಯಕ ಆಯತೊಲ್ಲಾ ಖಮೇನಿಯನ್ನು ಅಮೆರಿಕ ಮತ್ತು ಇಸ್ರೇಲ್​ನ ಜಂಟಿ ಕಾರ್ಯಾಚರಣೆಯಲ್ಲಿ ಕೊಲ್ಲುವ ಮೂಲಕ ಈ ಸಂಘರ್ಷ ಆರಂಭವಾಯಿತು.
ಅಮೆರಿಕ ಮತ್ತು ಇಸ್ರೇಲ್​ನ ದಾಳಿಗೆ ಉತ್ತರಿಸಲು ಮುಂದಾದ ಇರಾನ್​ ಕೊಲ್ಲಿ ರಾಷ್ಟ್ರಗಳಾದ ದುಬೈ, ಸೌದಿ ಅರೇಬಿಯಾ,ಕುವೈತ್​ ಮೊದಲಾದ ದೇಶಗಳ ಮೇಲೆ ಮಿಸೈಲ್​ ದಾಳಿ ನಡೆಸಿತು. ಹಾಗೆಯೇ ವಿಶ್ವ ತೈಲ ಸರಕುಗಳ ಸಾಗಣೆ ಮಾರ್ಗವಾದ ಹಾರ್ಮುಜ್ ಜಲಸಂಧಿಯನ್ನು ಇರಾನ್​ ಸ್ಥಗಿತಗೊಳಿಸಿದ ಪರಿಣಾಮ ಜಾಗತಿಕ ಆರ್ಥಿಕ ಪರಿಣಾಮ ಉಂಟಾಗಲು ಪ್ರಾರಂಭವಾಗಿದೆ.

ಈ ಯುದ್ಧ ಇಲ್ಲಿಗೆ ನಿಲ್ಲುವುದಿಲ್ಲ

ಇರಾನ್​ ಹಾರ್ಮುಜ್ ಜಲಸಂಧಿಯನ್ನು ತನ್ನ ವಶಕ್ಕೆ ತೆಗೆದುಕೊಳ್ಳತ್ತಿದ್ದಂತೆ, ಅಮೆರಿಕ ಹಾರ್ಮುಜ್ ಜಲಸಂಧಿಯಲ್ಲಿ ಮೊದಲಿನಂತೆ ಹಡಗುಗಳು ಚಲಿಸಲಿವೆ ಮತ್ತು ಅಮೆರಿಕ ಅವಕ್ಕೆ ರಕ್ಷಣೆ ನೀಡಲಿದೆ ಎಂದು ತಿಳಿಸಿದೆ. ಆದರೆ ಅಮೆರಿಕ ಹೀಗೆ ರಕ್ಷಣೆ ನೀಡಲು ಮುಂದಾದಾಗ ಇರಾನ್​ ದಾಳಿ ಮುಂದುವರೆಸಿದರೆ ಈ ಸಂಘರ್ಷ ಮತ್ತಷ್ಟು ಭೀಕರವಾಗಲಿದೆ ಎನ್ನುವುದು ಅಂತರಾಷ್ಟ್ರೀಯ ರಾಜಕೀಯ ತಜ್ಞರ ಮಾತಾಗಿದೆ.
ವರದಿಗಳ ಪ್ರಕಾರ, ಸದ್ಯಕ್ಕೆ ಈ ಜಲಸಂಧಿಯಲ್ಲಿ ಇರಾನಿನ ಮಿತ್ರ ದೇಶ ಚೀನಾದ ಹಡಗುಗಳು ಮಾತ್ರ ಸಂಚಾರ ನಡೆಸುತ್ತಿದ್ದು, ಒಂದು ವೇಳೆ ಅಮೆರಿಕ ಇಲ್ಲಿ ಸಂಚರಿಸುವ ಎಲ್ಲಾ ಹಡಗುಗಳಿಗೆ ರಕ್ಷಣೆ ನೀಡಲು ಮುಂದಾದರೇ ಇರಾನ್​ ಖಂಡಿತವಾಗಿ ಯುಎಸ್​ ಮೇಲೆ ದಾಳಿ ಮಾಡುತ್ತದೆ ಮತ್ತು ಇರಾನ್​ಗೆ ಆ ಶಕ್ತಿಯಿದೆ ಎನ್ನುವುದು ರಾಜಕೀಯ ತಜ್ಞೆ ವೆಲಿನಾ ಟ್ಚಕರೋವಾ ಅವರ ಅಭಿಪ್ರಾಯವಾಗಿದೆ.

ಇರಾನ್​ ಕೊನೆಯವರೆಗೆ ಹೋರಾಡಲಿದೆ

ಪ್ರಸ್ತುತ ಪರಿಸ್ಥಿತಿಯಲ್ಲಿ ಇರಾನ್​ಗೆ  ಹಾರ್ಮುಜ್ ಜಲಸಂಧಿ ರಾಜತಾಂತ್ರಿಕವಾಗಿ ಬಹುಮುಖ್ಯವಾಗಿದ್ದು, ಇದನ್ನು ಕಳೆದುಕೊಳ್ಳಲು ಇರಾನ್ ಎಂದಿಗೂ ಬಯಸುವುದಿಲ್ಲ. ಈ ಜಲಸಂಧಿಯನ್ನು ಉಳಿಸಿಕೊಳ್ಳಲು ಇರಾನ್​ ಯಾವ ಮಟ್ಟಕ್ಕಾದರೂ ಇಳಿಯಬಹುದು ಎಂದು ಟ್ಚಕರೋವಾ ಹೇಳಿದರು. ಯುದ್ಧದಲ್ಲಿ ಏನು ಬೇಕಾದರೂ ನಡೆಯುವ ಸಂಭವನೀಯತೆ ಇರುತ್ತದೆ. ಆದರೆ ಒಂದತ್ತು ಸತ್ಯ ಇರಾನ್​ ಈ ಯುದ್ಧದಲ್ಲಿ ಕೊನೆವರೆಗೆ ಹೋರಾಡಲಿದೆ ಮತ್ತು ಅದಕ್ಕೆ ಹೋರಾಡುವ ಶಕ್ತಿ ಕೂಡ ಇದೆ ಎಂದು ಅವರು ಹೇಳಿದರು. 

ಅಮೆರಿಕದ ಯುದ್ಧ ಇರಾನ್​ ಜೊತೆಯಲ್ಲ

ಅಮೆರಿಕದ ಯುದ್ಧ ನೀತಿ ಬಗ್ಗೆ ಮಾತನಾಡಿದ ವೆಲಿನಾ ಟ್ಚಕರೋವಾ, ಅಸಲಿಗೆ ಅಮೆರಿಕ ಇರಾನ್​ ಜೊತೆ ಯುದ್ಧ ಮಾಡುತ್ತಿಲ್ಲ, ಅದು ಹಾರ್ಮುಜ್ ಜಲಸಂಧಿ ಮೂಲಕ ಚೀನಾಗೆ ಹೋಗುವ ತೈಲ ಮತ್ತು ಇತರೆ ಸಾಮಾಗ್ರಿಗಳನ್ನು ತಡೆಯಲು ಈ ರೀತಿ ಮಾಡುತ್ತಿದೆ. ಇತ್ತೀಚಿನ ವರ್ಷಗಳಲ್ಲಿ ಅಮೆರಿಕ ಯಾರು ಚೀನಾ ಜೊತೆಗೆ ಸ್ನೇಹ ಬೆಳೆಸಲು ಹೋಗುತ್ತಾರೋ ಅವರ ಮೇಲೆ ಆಕ್ರಮಣ ಮಾಡುತ್ತಿದೆ ಎಂದು ವೆಲಿನಾ ತಮ್ಮ ವಿಚಾರವನ್ನು ತಿಳಿಸಿದರು,(ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net