ಭಾರತದ ಬಂದರುಗಳನ್ನು ಬಳಸಿ ಇರಾನ್​ ಮೇಲೆ ಅಮೆರಿಕ ದಾಳಿ: ಇದು ಶುದ್ಧ ಸುಳ್ಳೆಂದ ವಿದೇಶಾಂಗ ಸಚಿವಾಲಯ! Middle East War

ಭಾರತದ ಬಂದರುಗಳನ್ನು ಬಳಸಿ ಇರಾನ್​ ಮೇಲೆ ಅಮೆರಿಕ ದಾಳಿ: ಇದು ಶುದ್ಧ ಸುಳ್ಳೆಂದ ವಿದೇಶಾಂಗ ಸಚಿವಾಲಯ! Middle East War
ಭಾರತದ ಬಂದರುಗಳನ್ನು ಬಳಸಿ ಇರಾನ್​ ಮೇಲೆ ಅಮೆರಿಕ ದಾಳಿ: ಇದು ಶುದ್ಧ ಸುಳ್ಳೆಂದ ವಿದೇಶಾಂಗ ಸಚಿವಾಲಯ! Middle East War
Published on

ಪ್ರಮುಖ ಮುಖ್ಯಾಂಶಗಳು

  • ಭಾರತದ ಬಂದರನ್ನು ಬಳಸಿಕೊಂಡು ಅಮೆರಿಕ, ಇರಾನ್​ ಮೇಲೆ ದಾಳಿ ಮಾಡುತ್ತಿದೆ ಎಂಬ ಹೇಳಿಕೆ
  • ಇತ್ತೀಚಿನ ಸಂದರ್ಶನದಲ್ಲಿ ಅಮೆರಿಕದ ಮಾಜಿ ಸೇನಾ ಕರ್ನಲ್ ಡೌಗ್ಲಾಸ್ ಮ್ಯಾಕ್‌ಗ್ರೆಗರ್​ರಿಂದ ಹೇಳಿಕೆ
  • ಮ್ಯಾಕ್‌ಗ್ರೆಗರ್​ ಹೇಳಿಕೆ ತಳ್ಳಿಹಾಕಿದ ಭಾರತದ ವಿದೇಶಾಂಗ ಸಚಿವಾಲಯ
Middle East War : ಭಾರತದ ಬಂದರನ್ನು ಬಳಸಿಕೊಂಡು ಅಮೆರಿಕ, ಇರಾನ್​ ಮೇಲೆ ದಾಳಿ ಮಾಡುತ್ತಿದೆ ಎಂಬ ವರದಿಯನ್ನು ಭಾರತ ಸರ್ಕಾರ ತಳ್ಳಿ ಹಾಕಿದೆ. ಇತ್ತೀಚೆಗೆ ಅಮೆರಿಕ ಮೂಲದ ಒನ್ ಅಮೆರಿಕ ನ್ಯೂಸ್ ನೆಟ್‌ವರ್ಕ್‌ಗೆ ನೀಡಿದ ಸಂದರ್ಶನದಲ್ಲಿ ಅಮೆರಿಕದ ಮಾಜಿ ಸೇನಾ ಕರ್ನಲ್ ಡೌಗ್ಲಾಸ್ ಮ್ಯಾಕ್‌ಗ್ರೆಗರ್, ಇರಾನ್ ವಿರುದ್ಧದ ಯುದ್ಧದಲ್ಲಿ ಅಮೆರಿಕ ಭಾರತೀಯ ನೌಕಾ ನೆಲೆಗಳನ್ನು ಬಳಸುತ್ತಿದೆ ಎಂದು ಹೇಳಿಕೆ ನೀಡಿದ ಬೆನ್ನಲ್ಲೇ ಭಾರತದ ವಿದೇಶಾಂಗ ಸಚಿವಾಲಯದಿಂದ ಈ ಪ್ರತಿಕ್ರಿಯೆ ಬಂದಿದೆ.
ಪ್ರಸ್ತುತ ನಮ್ಮ ಎಲ್ಲಾ ನೆಲೆಗಳು ನಾಶವಾಗಿವೆ. ನಮ್ಮ ಬಂದರು ಸ್ಥಾಪನೆಗಳು ಕೂಡ ಸಂಪೂರ್ಣ ನಾಶವಾಗಿವೆ. ಹೀಗಾಗಿ, ನಾವು ಭಾರತವನ್ನು ಅವಲಂಬಿಸಿದ್ದು, ಭಾರತೀಯ ಬಂದರುಗಳ ಮೂಲಕ ದಾಳಿ ಮಾಡಬೇಕಾಗಿದೆ. ಆದರೆ, ಭಾರತದ ಬಂದರುಗಳನ್ನು ಬಳಸುವುದು ಅಮೆರಿಕ ನೌಕಾಪಡೆಗೆ ಸೂಕ್ತವಲ್ಲ, ನೌಕಾ ಪಡೆಯು ಕೂಡ ಅದನ್ನೇ ಹೇಳಿದೆ ಎಂದು ಡೌಗ್ಲಾಸ್ ಮ್ಯಾಕ್‌ಗ್ರೆಗರ್ ಸಂದರ್ಶನದಲ್ಲಿ ಹೇಳಿದ್ದರು.  
ಇದಕ್ಕೆ ಭಾರತದ ವಿದೇಶಾಂಗ ಸಚಿವಾಲಯ, ತನ್ನ ಫ್ಯಾಕ್ಟ್​ಚೆಕ್​ ಖಾತೆಯಲ್ಲಿ ಸ್ಪಷ್ಟನೆ ನೀಡಿದ್ದು, ಒನ್ ಅಮೆರಿಕ ನ್ಯೂಸ್ ನೆಟ್‌ವರ್ಕ್​ಗೆ ಸಂಬಂಧಿಸಿದ್ದು ಎನ್ನಲಾದ ವಿಡಿಯೋದಲ್ಲಿ ಹರಿದಾಡುತ್ತಿರುವ ಮಾಹಿತಿ ನಕಲಿ ಮತ್ತು ತಪ್ಪು ಉದ್ದೇಶವನ್ನು ಹೊಂದಿದೆ ಎಂದು ಹೇಳಿದೆ. ಅಲ್ಲದೆ, ಇಂತಹ ಆಧಾರರಹಿತ ಮತ್ತು ಕಟ್ಟುಕಥೆಗಳ ವಿರುದ್ಧ ನಾವು ನಿಮ್ಮನ್ನು ಎಚ್ಚರಿಸುತ್ತಿದ್ದೇವೆ ಅಂತಾನೂ ಸಚಿವಾಲಯ ತಿಳಿಸಿದೆ.
ಅಂದಹಾಗೆ, ಇಸ್ರೇಲ್, ಅಮೆರಿಕ ಹಾಗೂ ಇರಾನ್​ ನಡುವಿನ ಉದ್ವಿಗ್ನತೆ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿದೆ. ಅದರಲ್ಲೂ ತಮ್ಮ ಸುಪ್ರೀಂ ಲೀಡರ್​ ಅಯತೊಲ್ಲಾ ಖಮೇನಿಯನ್ನು ಕೊಂದ ಬಳಿಕ ಗಾಯಗೊಂಡ ಸಿಂಹದಂತೆ ಕೆರಳಿರುವ ಇರಾನ್, ಅಮೆರಿಕ ಮತ್ತು ಇಸ್ರೇಲ್​ ವಿರುದ್ಧ ಬಾಂಬ್​ಗಳ ಸುರಿಮಳೆಗೈಯುತ್ತಿದೆ.​ ಗಲ್ಫ್​ ರಾಷ್ಟ್ರಗಳಲ್ಲಿರುವ ಅಮೆರಿಕ ಸೇನಾ ನೆಲೆಗಳನ್ನು ಗುರಿಯಾಗಿಸಿಕೊಂಡು ಡ್ರೋನ್​ ದಾಳಿಯ ಮೂಲಕ ಭೀಕರ ಸನ್ನಿವೇಶವನ್ನು ಇರಾನ್​ ಸೃಷ್ಟಿಸುತ್ತಿದೆ. ಅತ್ತ ಅಮೆರಿಕ ಮತ್ತು ಇಸ್ರೇಲ್​​ ಕೂಡ ಇರಾನ್​ನಲ್ಲಿರುವ ಪ್ರಮುಖ ಸ್ವತ್ತುಗಳನ್ನು ನಾಶ ಮಾಡುತ್ತಿವೆ. ದಿನದಿಂದ ದಿನಕ್ಕೆ ಯುದ್ಧದ ಕಾವು ಹೆಚ್ಚಾಗುತ್ತಿದ್ದು, ಸಾವಿರಾರು ಮಂದಿ ತಮ್ಮ ಅಮೂಲ್ಯ ಪ್ರಾಣವನ್ನು ಕಳೆದುಕೊಂಡಿದ್ದಾರೆ.
ಫೆ.28ರಂದು ಶುರುವಾದ ಈ ಮಧ್ಯಪ್ರಾಚ್ಯ ಯುದ್ಧ ಇಂದು 6ನೇ ದಿನಕ್ಕೆ ಎಂಟ್ರಿ ಕೊಟ್ಟಿದೆ. ಆದರೆ, ಯುದ್ಧದ ಕಾವು ತಣ್ಣಗಾಗುವ ಯಾವುದೇ ಲಕ್ಷಣಗಳು ಗೋಚರಿಸುತ್ತಿಲ್ಲ. ಮಂಗಳವಾರ (ಮಾರ್ಚ್​ 03) ರಾತ್ರಿ ಹಿಂದೂ ಮಹಾಸಾಗರದಲ್ಲಿ ಅಮೆರಿಕದ ಜಲಾಂತರ್ಗಾಮಿ ನೌಕೆಯ ಟಾರ್ಪಿಡೊ, ಇರಾನ್‌ನ ಯುದ್ಧನೌಕೆಯ ಮೇಲೆ ದಾಳಿ ಮಾಡಿ, ಅದನ್ನು ಮುಳುಗಿಸಿತು. ಇದರ ಪರಿಣಾಮ 87 ಜನರು ಮೃತಪಟ್ಟರು. ಎರಡನೇ ಮಹಾಯುದ್ಧದ ನಂತರ ಅಮೆರಿಕದ ಜಲಾಂತರ್ಗಾಮಿ ನೌಕೆಯು ಮೇಲ್ಮೈ ಹಡಗಿನ ಮೇಲೆ ದಾಳಿ ಮಾಡಿದ್ದು ಇದೇ ಮೊದಲು.
ಅಂದಹಾಗೆ ವರದಿಗಳ ಪ್ರಕಾರ, ಇರಾನ್‌ನಲ್ಲಿ ಇದುವರೆಗೆ 1,000 ಕ್ಕೂ ಹೆಚ್ಚು ಜನರು ಮತ್ತು ಇಸ್ರೇಲ್‌ನಲ್ಲಿ ಸುಮಾರು ಒಂದು ಡಜನ್​ಗೂ ಹೆಚ್ಚು ಜನರು ಪ್ರಸ್ತುತ ನಡೆಯುತ್ತಿರುವ ಯುದ್ಧದಲ್ಲಿ ಸಾವಿಗೀಡಾಗಿದ್ದಾರೆ. ಇನ್ನು ಈ ಯುದ್ಧದಲ್ಲಿ ಕನಿಷ್ಠ ಆರು ಅಮೆರಿಕದ ಸೈನಿಕರು ಕೂಡ ಮೃತಪಟ್ಟಿದ್ದಾರೆ. ಇರಾನ್ ನಮಗೆ ಬೆದರಿಕೆಯನ್ನು ಒಡ್ಡಿರುವುದರಿಂದ ನಾವು ಅದರ ಮೇಲೆ ದಾಳಿ ನಡೆಸಿದ್ದೇವೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ತಮ್ಮ ಯುದ್ಧ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net