ಇರಾನ್‌ನಲ್ಲಿ ತೀವ್ರ ಆರ್ಥಿಕ ಬಿಕ್ಕಟ್ಟು: ಜೀವನ ನಿರ್ವಹಣೆಗಾಗಿ ದೇಹದ ಅಂಗಾಂಗಗಳನ್ನೇ ಮಾರಾಟಕ್ಕಿಟ್ಟ ಜನರು! Iran Economic Crisis

Iran Economic Crisis
ಇರಾನ್‌ನಲ್ಲಿ ತೀವ್ರ ಆರ್ಥಿಕ ಬಿಕ್ಕಟ್ಟು: ಜೀವನ ನಿರ್ವಹಣೆಗಾಗಿ ದೇಹದ ಅಂಗಾಂಗಗಳನ್ನೇ ಮಾರಾಟಕ್ಕಿಟ್ಟ ಜನರು! Iran
Published on: 

ಟೆಹ್ರಾನ್: ತೀವ್ರ ಆರ್ಥಿಕ ಬಿಕ್ಕಟ್ಟು, ಹಣದುಬ್ಬರ ಮತ್ತು ಗಗನಕ್ಕೇರಿರುವ ಜೀವನ ವೆಚ್ಚದಿಂದಾಗಿ ಇರಾನ್ ( Iran Economic Crisis ) ದೇಶದ ಸಾಮಾನ್ಯ ಜನರು ತಮ್ಮ ದೈನಂದಿನ ಬದುಕು ಸಾಗಿಸಲು ತಮ್ಮದೇ ದೇಹದ ಅಂಗಾಂಗಗಳನ್ನು ಮಾರಾಟಕ್ಕಿಡುವಂತಹ ಹೀನಾಯ ಮತ್ತು ಹೃದಯವಿದ್ರಾವಕ ಪರಿಸ್ಥಿತಿಗೆ ತಲುಪಿದ್ದಾರೆ.

ಹಣ ಸಂಪಾದಿಸಲು ಬೇರೆ ದಾರಿಯಿಲ್ಲದೆ ಜನರು ತಮ್ಮ ಕಿಡ್ನಿ, ಲಿವರ್ (ಯಕೃತ್ತು) ಮತ್ತು ಅಸ್ಥಿಮಜ್ಜೆಯನ್ನು (Bone marrow) ಮಾರಾಟಕ್ಕಿಟ್ಟಿರುವ ಆಘಾತಕಾರಿ ಸಂಗತಿಯನ್ನು ಇರಾನ್‌ನ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಇರಾನ್‌ನ ಬೀದಿಗಳಲ್ಲಿ ಅಂಗಾಂಗ ಮಾರಾಟದ ಜಾಹೀರಾತುಗಳು ವ್ಯಾಪಕವಾಗಿ ಕಾಣಿಸಿಕೊಳ್ಳುತ್ತಿದ್ದು, ಮಧ್ಯ ಟೆಹ್ರಾನ್‌ನ ಅನೇಕ ರಸ್ತೆಗಳ ಗೋಡೆಗಳು ಮತ್ತು ಕಟ್ಟಡಗಳ ಮೇಲೆ ಇಂತಹ ಭಿತ್ತಿಪತ್ರಗಳನ್ನು ಅಂಟಿಸಲಾಗಿದೆ.

ವಿಶೇಷವಾಗಿ ಮುನ್ಸಿಪಲ್ ಮೆಡಿಕಲ್ ಸೆಂಟರ್ ಮತ್ತು ಕಿಡ್ನಿ ರೋಗಿಗಳಿಗೆ ನೆರವಾಗುವ ಚಾರಿಟಿ ಸಂಸ್ಥೆಯ ಸಮೀಪವಿರುವ 'ಫರ್ಹಾಂಗ್ ಹುಸೇನಿ ಸ್ಟ್ರೀಟ್' ಈಗ ಅಕ್ಷರಶಃ 'ಕಿಡ್ನಿ ಸ್ಟ್ರೀಟ್' ಎಂದೇ ಕುಖ್ಯಾತಿ ಪಡೆದಿದೆ. ಅಂಗಾಂಗ ಖರೀದಿಸುವವರನ್ನು ಹುಡುಕಿಕೊಂಡು ಅನೇಕರು ಇಲ್ಲಿಗೆ ಬರುತ್ತಿದ್ದು, ಕಿಡ್ನಿ ಜತೆಗೆ ಲಿವರ್, ಬೋನ್ ಮ್ಯಾರೋ ಮತ್ತು ದೇಹದ ಇತರ ಭಾಗಗಳನ್ನೂ ಮಾರಾಟಕ್ಕೆ ಇಡಲಾಗಿದೆ.

Also Read
ಡೇಟಿಂಗ್ ಆ್ಯಪ್ ಪ್ರಿಯಕರನನ್ನು ಮದ್ವೆಯಾಗಲು ಕೆನಡಾದಿಂದ ಭಾರತಕ್ಕೆ ಬಂದ ಮಹಿಳೆಗೆ ಕಾದಿತ್ತು ಬಿಗ್​ ಶಾಕ್​...! Canadian Woman
Iran Economic Crisis

ಸದ್ರಾ ಆಸ್ಪತ್ರೆಯ ಉದ್ಯೋಗಿಯೊಬ್ಬರು ನೀಡಿರುವ ಮಾಹಿತಿಯ ಪ್ರಕಾರ, ಅಂಗಾಂಗ ಮಾರಾಟ ಮಾಡಲು ಬರುವವರಲ್ಲಿ ಬಹುಪಾಲು ಜನರು ಆರ್ಥಿಕವಾಗಿ ಸಂಪೂರ್ಣ ದಿವಾಳಿಯಾಗಿರುವ ಕಾರ್ಮಿಕರಾಗಿದ್ದಾರೆ. ಮಾರುಕಟ್ಟೆಯಲ್ಲಿ ಒಂದು ಕಿಡ್ನಿಗೆ ಸಾಮಾನ್ಯವಾಗಿ 3,000 ದಿಂದ 4,000 ಮಿಲಿಯನ್ ರಿಯಾಲ್‌ಗಳವರೆಗೆ (ಸುಮಾರು 11,500 ರಿಂದ 15,300 ಡಾಲರ್) ಬೆಲೆ ನಿಗದಿಯಾಗಿದೆ. 'ಒ-ಪಾಸಿಟಿವ್' (O-positive) ರಕ್ತದ ಗುಂಪಿನವರು 800 ಮಿಲಿಯನ್ ರಿಯಾಲ್‌ಗಳವರೆಗೆ (ಸುಮಾರು 3,100 ಡಾಲರ್) ಕಿಡ್ನಿ ದಾನ ಮಾಡಲು ಮುಂದಾಗುತ್ತಿದ್ದರೆ, ಅಪರೂಪದ ರಕ್ತದ ಗುಂಪುಗಳಿಗೆ ಬರೋಬ್ಬರಿ 5,000 ಮಿಲಿಯನ್ ರಿಯಾಲ್‌ಗಳವರೆಗೆ (ಸುಮಾರು 19,200 ಡಾಲರ್) ಬೆಲೆ ನಿಗದಿಪಡಿಸಲಾಗಿದೆ.

ಇನ್ನೊಂದು ಪ್ರಕರಣದಲ್ಲಿ, 33 ವರ್ಷದ ಕಟ್ಟಡ ಕಾರ್ಮಿಕನೊಬ್ಬ ತನ್ನ ಅಸ್ಥಿಮಜ್ಜೆಗೆ ಬರೋಬ್ಬರಿ 4,000 ಕೋಟಿ ರಿಯಾಲ್‌ಗಳಿಗೆ ಬೇಡಿಕೆ ಇಟ್ಟಿದ್ದು, ತನ್ನ ಬಳಿ ಕಿಡ್ನಿ ಮತ್ತು ಲಿವರ್ ಜೀವಕೋಶಗಳೂ ಮಾರಾಟಕ್ಕಿವೆ ಹಾಗೂ ತಾನು ಸಂಪೂರ್ಣ ಆರೋಗ್ಯವಾಗಿದ್ದೇನೆ ಎಂಬುದಕ್ಕೆ ವೈದ್ಯಕೀಯ ದಾಖಲೆಗಳಿವೆ ಎಂದು ಜಾಹೀರಾತು ನೀಡಿದ್ದಾನೆ.

ಇರಾನ್‌ನ ಈ ದಯನೀಯ ಆರ್ಥಿಕ ಸ್ಥಿತಿಯ ಕುರಿತು ಸಂಸತ್ತಿನ ಸಾಮಾಜಿಕ ವ್ಯವಹಾರಗಳ ಸಮಿತಿಯ ಅಧ್ಯಕ್ಷ ಅಲಿ ಬಾಬಾಯಿ ಕರ್ನಾಮಿ ಅವರು ಸ್ಫೋಟಕ ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ. ಸರ್ಕಾರದ ಕರೆನ್ಸಿ ಸಬ್ಸಿಡಿ ನೀತಿಗಳಲ್ಲಿನ ಲೋಪದೋಷಗಳಿಂದಾಗಿ ದೇಶದ ಸುಮಾರು 8 ಮಿಲಿಯನ್ (80 ಲಕ್ಷ) ಜನರು ತೀವ್ರ ಬಡತನ ಮತ್ತು ಅಪೌಷ್ಟಿಕತೆಗೆ ತುತ್ತಾಗಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಅಷ್ಟೇ ಅಲ್ಲದೆ, ದೇಶದ ಸುಮಾರು 50 ಮಿಲಿಯನ್ (5 ಕೋಟಿ) ಜನರು ಒಂದು ಹೊತ್ತಿನ ಆಹಾರಕ್ಕಾಗಿಯೂ ಪರದಾಡುವಂತಾಗಿದೆ. ಇರಾನ್‌ನಲ್ಲಿ ಕಡಿಮೆ ವೇತನ ಪಡೆಯುವ ಕಾರ್ಮಿಕರಿಗೆ ಎಲ್ಲಾ ಭತ್ಯೆಗಳು ಸೇರಿ ತಿಂಗಳಿಗೆ ಕೇವಲ 200 ರಿಂದ 300 ಮಿಲಿಯನ್ ರಿಯಾಲ್‌ಗಳು (ಸುಮಾರು 77 ರಿಂದ 115 ಡಾಲರ್) ಮಾತ್ರ ಸಿಗುತ್ತಿದೆ. ಆದರೆ, ಒಂದು ಕುಟುಂಬದ ಕನಿಷ್ಠ ಮೂಲಭೂತ ಅಗತ್ಯಗಳನ್ನು ಪೂರೈಸಲು ತಿಂಗಳಿಗೆ ಕನಿಷ್ಠ 1 ಬಿಲಿಯನ್ ರಿಯಾಲ್‌ಗಳ (ಸುಮಾರು 383 ಡಾಲರ್) ಅವಶ್ಯಕತೆಯಿದೆ ಎಂದು ಅಂದಾಜಿಸಲಾಗಿದೆ.

Also Read
ಎನ್ವಿಡಿಯಾ ಸಿಇಒ ಅಕ್ರಮ ಸಂಬಂಧ ಕೇಸ್​ಗೆ ಬಿಗ್ ಟ್ವಿಸ್ಟ್: ಜೆನ್ಸೆನ್​-ಆಲಿಸ್​ರನ್ನು ಒಂದುಗೂಡಿಸಿದ್ದೇ ಆಕೆಯ ಪತಿ..! Jensen Huang
Iran Economic Crisis

ಆದಾಯ ಮತ್ತು ಖರ್ಚಿನ ನಡುವಿನ ಈ ಅಗಾಧ ಅಂತರವೇ ಬಡ ಮತ್ತು ಮಧ್ಯಮ ವರ್ಗದ ಜನರನ್ನು ಇಂತಹ ಕಠಿಣ ನಿರ್ಧಾರ ತೆಗೆದುಕೊಳ್ಳುವಂತೆ ಪ್ರೇರೇಪಿಸುತ್ತಿದೆ. ಕುಟುಂಬದ ಹಸಿವು ನೀಗಿಸಲು ಮತ್ತು ಸಾಲ ತೀರಿಸಲು ಬೇರೆ ಯಾವುದೇ ಮಾರ್ಗ ಕಾಣದೆ, ಕಟ್ಟಡ ಕಾರ್ಮಿಕರು, ಕೊರಿಯರ್ ಬಾಯ್‌ಗಳು ಮತ್ತು ದಿನಗೂಲಿ ನೌಕರರು ತಮ್ಮ ಜೀವವನ್ನೇ ಪಣಕ್ಕಿಟ್ಟು ಅಂಗಾಂಗ ಮಾರಾಟದ ದಂಧೆಗೆ ಇಳಿದಿದ್ದಾರೆ. ಗೋಡೆಗಳ ಮೇಲೆ ತಮ್ಮ ಮೊಬೈಲ್ ಸಂಖ್ಯೆ ಮತ್ತು ರಕ್ತದ ಗುಂಪಿನ ವಿವರಗಳನ್ನು ಬರೆದು ಅಂಟಿಸುವ ಮೂಲಕ ಖರೀದಿದಾರರಿಗಾಗಿ ಕಾಯುವ ದೃಶ್ಯ ಟೆಹ್ರಾನ್‌ನ ಬೀದಿಗಳಲ್ಲಿ ಸಾಮಾನ್ಯವಾಗಿದೆ.

ಆದರೆ, ಈ ಕುರಿತು ತೀವ್ರ ಆತಂಕ ವ್ಯಕ್ತಪಡಿಸಿರುವ ವರದಿಯು, ದೈಹಿಕ ಶ್ರಮವನ್ನೇ ನಂಬಿ ಬದುಕುವ ಕಟ್ಟಡ ಕಾರ್ಮಿಕರು ಮತ್ತು ಕೊರಿಯರ್ ಕೆಲಸಗಾರರಿಗೆ ಅಂಗಾಂಗ ಮಾರಾಟದಿಂದ ತಾತ್ಕಾಲಿಕವಾಗಿ ಆರ್ಥಿಕ ನೆರವು ಸಿಗಬಹುದಾದರೂ, ಭವಿಷ್ಯದಲ್ಲಿ ಇದು ಅವರ ಆರೋಗ್ಯ ಮತ್ತು ದುಡಿಯುವ ಸಾಮರ್ಥ್ಯದ ಮೇಲೆ ಅತ್ಯಂತ ಗಂಭೀರ ಪರಿಣಾಮ ಬೀರಲಿದೆ ಎಂದು ಎಚ್ಚರಿಸಿದೆ. ಬಡತನದ ಬೇಗೆಯಲ್ಲಿ ಬೇಯುತ್ತಿರುವ ಇರಾನ್ ಜನರ ಈ ಅಸಹಾಯಕ ಪರಿಸ್ಥಿತಿ ಇದೀಗ ಇಡೀ ವಿಶ್ವದ ಗಮನ ಸೆಳೆದಿದ್ದು, ಆರ್ಥಿಕ ಸಂಕಷ್ಟದ ಭೀಕರತೆಯನ್ನು ಜಗತ್ತಿನ ಮುಂದೆ ತೆರೆದಿಟ್ಟಿದೆ, (ಏಜೆನ್ಸೀಸ್​).