ಸಿರಿಧಾನ್ಯಕ್ಕೆ ಅಂತಾರಾಷ್ಟ್ರೀಯ ಮಾನ್ಯತೆ: 2023 ಸಿರಿಧಾನ್ಯ ವರ್ಷ ಎಂದ ವಿಶ್ವಸಂಸ್ಥೆ, ರೈತರ ಆದಾಯ ವೃದ್ಧಿಗೆ ಅವಕಾಶ ನಿರೀಕ್ಷೆ..

Siri dhanya
Published on

| ರುದ್ರಣ್ಣ ಹರ್ತಿಕೋಟೆ ಬೆಂಗಳೂರು
ಕರೊನಾದಿಂದಾಗಿ ಅನೇಕ ಯುವಕರು ಕೃಷಿಯ ಕಡೆ ಮುಖಮಾಡಿರುವ ಸಂದರ್ಭದಲ್ಲೇ ಸಂತಸದ ಸುದ್ದಿಯೊಂದು ಹೊರಬಿದ್ದಿದೆ. ಇಡೀ ದೇಶದಲ್ಲೇ ಹೆಚ್ಚಿನ ಉತ್ಪಾದನೆ ಇರುವ ಕರ್ನಾಟಕದಲ್ಲಿ ಸಾವಯವ ಹಾಗೂ ಸಿರಿಧಾನ್ಯ ಕೃಷಿ ಉತ್ಪನ್ನಗಳಿಗೆ ಅಂತಾರಾಷ್ಟ್ರೀಯ ಮನ್ನಣೆ ಸಿಗುವ ಕಾಲ ಕೂಡಿಬಂದಿದೆ. ರಾಜ್ಯ ಸರ್ಕಾರ 2017 ರಿಂದ ನಡೆಸಿದ ಪ್ರಯತ್ನದ ಲವಾಗಿ ವಿಶ್ವಸಂಸ್ಥೆ 2023ನ್ನು "ಸಿರಿಧಾನ್ಯಗಳ ವರ್ಷ'ವೆಂದು ಘೋಷಿಸುವ ಮಹತ್ವದ ನಿರ್ಧಾರ ಕೈಗೊಂಡಿದೆ. ಇದರಿಂದಾಗಿ ಸಾವಯವ, ಸಿರಿಧಾನ್ಯ ಉತ್ಪನ್ನ ಹಾಗೂ ಹೆಚ್ಚು ಪೌಷ್ಟಿಕಾಂಶ ಇರುವ ಉತ್ಪನ್ನಗಳಿಗೆ ಅಂತಾರಾಷ್ಟ್ರೀಯ ಮಾರುಕಟ್ಟೆ ಸಿಗುವಂತಾಗುತ್ತದೆ. ಆ ಮೂಲಕ ರೈತರ ಆದಾಯವೂ ವೃದ್ಧಿಯಾಗುತ್ತದೆ ಎಂಬ ವಿಶ್ವಾಸ ಮೂಡಿದೆ.

ಏನಿದು ಮನ್ನಣೆ?: ಹಿಂದಿನ ಕಾಂಗ್ರೆಸ್​ ಸರ್ಕಾರದ ಅವಧಿಯಲ್ಲಿ ಕೃಷಿ ಸಚಿವರಾಗಿದ್ದ ಕೃಷ್ಣ ಬೈರೇಗೌಡ ಸಿರಿಧಾನ್ಯ ಉತ್ಪನ್ನಗಳಿಗೆ ಹೆಚ್ಚಿನ ಅವಕಾಶ ದೊರಕಿಸುವ ಪ್ರಯತ್ನ ಆರಂಭಿಸಿದ್ದರು. 2017ರಲ್ಲಿ ಬೆಂಗಳೂರಿನಲ್ಲಿ ಸಿರಿಧಾನ್ಯ ಉತ್ಪನ್ನಗಳ ಅಂತಾರಾಷ್ಟ್ರೀಯ ಮೇಳ ನಡೆಸಿದರು. ಕೇಂದ್ರ ಸರ್ಕಾರದ ಮೂಲಕ ವಿಶ್ವಸಂಸ್ಥೆಯ ಗಮನ ಸೆಳೆದರು. ಅಲ್ಲದೆ, ವಿಶ್ವಸಂಸ್ಥೆಯ ಅಂಗವಾದ ಆಹಾರ ಮತ್ತು ಕೃಷಿ ಸಂಸ್ಥೆಯ ಪ್ರತಿನಿಧಿಗಳನ್ನು ಭೇಟಿ ಮಾಡಿ ಸಿರಿಧಾನ್ಯಗಳ ಬಗ್ಗೆ ಚರ್ಚೆ ನಡೆಸಿದ್ದರು. ವಿಶ್ವಸಂಸ್ಥೆ ಇತ್ತೀಚಿಗೆ ನಡೆಸಿದ ಸಭೆಯಲ್ಲಿ ರಾಜ್ಯದ ಬೇಡಿಕೆಗೆ ಮನ್ನಣೆ ನೀಡಿದೆ. ಸುಮಾರು 70 ದೇಶಗಳು 2023ನ್ನು ಸಾವಯವ ಹಾಗೂ ಸಿರಿಧಾನ್ಯ ವರ್ಷವೆಂದು ಘೋಷಿಸುವುದಕ್ಕೆ ಸಮ್ಮತಿ ನೀಡಿವೆ. ಸಾಂಬಾರ ಪದಾರ್ಥಗಳು ಹಾಗೂ ಬಾಸುಮತಿ ಅಕ್ಕಿ ಮಾತ್ರ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚಾಗಿ ರ್ತು ಆಗುತ್ತಿವೆ. ಇನ್ಮುಂದೆ ಸಿರಿಧಾನ್ಯಗಳು ಆ ಸ್ಥಾನ ಆಕ್ರಮಿಸಲಿವೆ. ರಾಜ್ಯದಲ್ಲಿ ಸರಿಯಾದ ಮಾರುಕಟ್ಟೆ ಸೌಲಭ್ಯ ಇಲ್ಲದಿರುವುದರಿಂದ ಮುಂದಿನ ದಿನಗಳಲ್ಲಿ ಉತ್ತಮ ಮಾರುಕಟ್ಟೆ ಸೌಲಭ್ಯ ಸಿಗುವ ವಿಶ್ವಾಸ ಸರ್ಕಾರದ್ದಾಗಿದೆ.

ರಾಜ್ಯದಲ್ಲೆಷ್ಟಿದೆ?: ರಾಜ್ಯದಲ್ಲಿ 29 ಸಾವಿರ ಹೆಕ್ಟೇರ್​ನಲ್ಲಿ ಸಿರಿಧಾನ್ಯ ಬೆಳೆಯಲಾಗುತ್ತ್ತಿದೆ. ರಾಜ್ಯ ಸರ್ಕಾರ ಹೆಕ್ಟೇರ್​ಗೆ 10 ಸಾವಿರ ರೂ.ಗಳಂತೆ 12,750 ಹೆಕ್ಟೇರ್​ಗೆ 12.50 ಕೋಟಿ ರೂ.ನೆರವು ನೀಡುತ್ತದೆ. ಇನ್ನುಳಿದ ಪ್ರದೇಶಕ್ಕೆ ರಾಷ್ಟ್ರೀಯ ಕೃಷಿ ವಿಜ್ಞಾನ ಯೋಜನೆಯಡಿ ನೆರವು ನೀಡುವಂತೆ ಕೇಂದ್ರಕ್ಕೆ ಮನವಿ ಮಾಡಿಕೊಂಡಿದೆ.

ಸರ್ಕಾರದ ಸಿದ್ಧತೆ: ಸಿರಿಧಾನ್ಯ ವರ್ಷ ಘೋಷಣೆಯ ಲಾಭ ಪಡೆಯಲು ಸರ್ಕಾರ ಸಿದ್ಧತೆಗೆ ಮುಂದಾಗಿದೆ. ಬಜೆಟ್​ನಲ್ಲಿ ವಿಶೇಷವಾಗಿ ನೆರವು ಘೋಷಣೆ ಮಾಡಿಲ್ಲವಾದರೂ ಬಜೆಟ್​ ಹೊರತಾಗಿಯೂ ವಿಶೇಷ ಕಾರ್ಯಕ್ರಮಗಳ ಮೂಲಕ ಸಿರಿಧಾನ್ಯ ಉತ್ಪಾದನೆ ಹೆಚ್ಚಿಸುವ ಉದ್ದೇಶ ಹೊಂದಿರುವುದಾಗಿ ಮೂಲಗಳು ತಿಳಿಸಿವೆ.

ಬೇಕಿದೆ ಆನ್​ಲೈನ್​ ಮಾರುಕಟ್ಟೆ: ರಾಜ್ಯದ ಕೃಷಿ ಉತ್ಪನ್ನ ಮಾರಾಟ ಮಾಡಲು ಆನ್​ಲೈನ್​ ವ್ಯವಸ್ಥೆಯೊಂದರ ಅಗತ್ಯವಿದೆ ಎಂದು ತಜ್ಞರು ಹೇಳುತ್ತಾರೆ. ರೈತರ ಗುಂಪುಗಳನ್ನು ಸೇರಿಸಿ ಆನ್​ಲೈನ್​ ವ್ಯವಸ್ಥೆ ಮಾಡಬಹುದು ಎಂಬುದು ಅವರ ಅಭಿಪ್ರಾಯ. ರಾಜ್ಯದಲ್ಲಿ ಶೇ.30 ರೈತರು ಮಾತ್ರ ಮುಖ್ಯ ಮಾರುಕಟ್ಟೆಯಲ್ಲಿ ವಹಿವಾಟು ಮಾಡುತ್ತಾರೆ. ಶೇ.43 ರೈತರು ಸಣ್ಣ ಮಾರುಕಟ್ಟೆ ಅವಲಂಬಿಸಿದ್ದಾರೆ. ಶೇ.17 ರೈತರಿಗೆ ಮಾರುಕಟ್ಟೆ ಸೌಲಭ್ಯವೇ ಸಿಗುತ್ತಿಲ್ಲ ಎಂಬ ಮಾಹಿತಿ ಇದೆ. ಆದ್ದರಿಂದ ಆನ್​ಲೈನ್​ ಮಾಡಿದರೆ ಸಹಕಾರ ವ್ಯವಸ್ಥೆಯಲ್ಲಿ ಉತ್ಪನ್ನ ಮಾರಾಟ ಮಾಡುತ್ತಾರೆ.

ಸಿರಿಧಾನ್ಯಗಳು ಯಾವುವು?: ನವಣೆ, ಸಾವೆ, ಬರಗು, ಊದಲು, ಕೊರಲೆ, ಹಾರಕ, ರಾಗಿ, ಜೋಳ, ಸಜ್ಜೆ

ರಾಜ್ಯಕ್ಕೇನು ಅನುಕೂಲ?

  • ಹವಾಮಾನ ಬದಲಾವಣೆಯಿಂದ ಸಿರಿಧಾನ್ಯಗಳ ಬೆಳೆಯ ಪ್ರಮಾಣ ಹೆಚ್ಚಾಗುತ್ತದೆ
  • ಅತ್ಯಂತ ಕಡಿಮೆ ನೀರಿನಲ್ಲಿ ಹೆಚ್ಚಿನ ಉತ್ಪಾದನೆ ಮಾಡಬಹುದು
  • ಅಂತಾರಾಷ್ಟ್ರೀಯ ಮಾರುಕಟ್ಟೆ ಸಿಗುತ್ತದೆ
  • ಆಹಾರ ಭದ್ರತೆಯಲ್ಲಿಯೂ ಸಿರಿಧಾನ್ಯಗಳಿಗೆ ಅವಕಾಶ ಸಿಗುತ್ತದೆ
  • ಉತ್ತಮ ಬೆಲೆ ದೊರೆತು ರೈತರ ಆದಾಯ ಸಹ ದ್ವಿಗುಣವಾಗುತ್ತದೆ

ವಿಶ್ವಸಂಸ್ಥೆ ಸಿರಿಧಾನ್ಯಗಳಿಗೆ ಮನ್ನಣೆ ನೀಡಿರುವುದು ಸ್ವಾಗತಾರ್ಹ ಕ್ರಮ. ಅದರಿಂದ ರೈತರಿಗೆ ಅನುಕೂಲವಾಗುವ ಎಲ್ಲ ಪ್ರಯತ್ನವನ್ನು ರಾಜ್ಯ ಸರ್ಕಾರ ಮಾಡಲಿದೆ.
| ಬಿ.ಸಿ. ಪಾಟೀಲ್​ ಕೃಷಿ ಸಚಿವ

ಕರ್ನಾಟಕ ಸಿರಿಧಾನ್ಯ ಬೆಳೆಯುವ ಪ್ರಮುಖ ರಾಜ್ಯ. ಆದ್ದರಿಂದಲೇ ನಮ್ಮ ಸರ್ಕಾರ ಈ ಬೆಳೆಗಳಿಗೆ ಮನ್ನಣೆ ತರುವ ಪ್ರಯತ್ನ ಮಾಡಿತ್ತು. ನಮ್ಮ ಕಾಲದ ಅನೇಕ ಯೋಜನೆಗಳನ್ನು ಈ ಸರ್ಕಾರ ಕೈಬಿಟ್ಟಿದೆ. ವಿಶ್ವಸಂಸ್ಥೆ ಕ್ರಮದಿಂದ ಲಾಭ ಪಡೆಯಲು ಎಲ್ಲ ಸಿದ್ಧತೆಗಳನ್ನು ಈಗಿನಿಂದಲೇ ಆರಂಭಿಸಬೇಕು.
| ಕೃಷ್ಣ ಬೈರೇಗೌಡ ಮಾಜಿ ಕೃಷಿ ಸಚಿವ

ಸಿರಿಧಾನ್ಯಗಳಿಗೆ ಬೆಂಬಲ ಬೆಲೆ ನೀಡುವಂತೆ ನಾವು ಮಾಡಿರುವ ಶಿಾರಸು ಜಾರಿಗೆ ತರಬೇಕು. ಕೆಎಂಎ್​, ಹಾಪ್​ಕಾಮ್ಸ್​ಗಳ ಮೂಲಕ ಮಾರಾಟಕ್ಕೆ ವ್ಯವಸ್ಥೆಯಾಗಬೇಕು, ಅಂಗನವಾಡಿ ಹಾಗೂ ಬಿಸಿಯೂಟದಲ್ಲಿ ಸಿರಿಧಾನ್ಯ ಬಳಸಬೇಕು. ಆನ್​ಲೈನ್​ ಮಾರುಕಟ್ಟೆ ವ್ಯವಸ್ಥೆಯಾಗಬೇಕು.
| ಡಾ. ಪ್ರಕಾಶ್​ ಕಮ್ಮರಡಿ ಮಾಜಿ ಅಧ್ಯಕ್ಷರು, ಕೃಷಿ ಬೆಲೆ ಆಯೋಗ

ಸಿರಿಧಾನ್ಯಗಳ ಅನುಕೂಲ

  • ಸಕ್ಕರೆ ಕಾಯಿಲೆ ಇರುವವರಿಗೆ ರಾಮಬಾಣ
  • ಹೆಚ್ಚಿನ ಪೌಷ್ಟಿಕಾಂಶಗಳಿವೆ
  • ಹೃದ್ರೋಗ ತಡೆಯುತ್ತವೆ
  • ತೂಕ ಕಡಿಮೆ ಮಾಡುತ್ತವೆ
  • ಪ್ರೋಟಿನ್​, ಕೊಬ್ಬು, ಸುಣ್ಣ, ನಾರು, ಖನಿಜ, ರಂಜಕ ಇತ್ಯಾದಿ ಅಂಶ ಇರುತ್ತವೆ 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net