ಸೈಕಲ್ ಸವಾರಿ ಆರೋಗ್ಯಕ್ಕೆ ರಹದಾರಿ

zxczxczxc
Published on

ಮೆಟ್ರೋ ಮತ್ತು ಬಿಎಂಟಿಸಿ ಬಸ್ ಸಂಚಾರದ ಜತೆಗೆ ಸೈಕಲ್ ಬಳಕೆಗೂ ಉತ್ತೇಜನ ನೀಡಬೇಕು. ಬಸ್ ಮತ್ತು ಮೆಟ್ರೋದಲ್ಲಿ ಸೈಕಲ್ ಸಾಗಿಸಲು ಸ್ಥಳಾವಕಾಶ ಕಲ್ಪಿಸಬೇಕು. ಮನೆಯಿಂದ ಸೈಕಲ್​ನಲ್ಲಿ ನಿಲ್ದಾಣಕ್ಕೆ ಬಂದು ಅಲ್ಲಿಂದ ರೈಲು, ಬಸ್​ನಲ್ಲಿ ಸೈಕಲ್ ಇಟ್ಟುಕೊಂಡು ಪ್ರಯಾಣ ಮಾಡಿ ಇಳಿದ ಮೇಲೆ ಮತ್ತೆ ಸೈಕಲ್​ನಲ್ಲಿ ನಿಗದಿತ ಸ್ಥಳಕ್ಕೆ ಹೋಗುವ ವ್ಯವಸ್ಥೆ ಜಾರಿಗೆ ಬರಬೇಕೆಂದು ಸೈಕ್ಲಿಂಗ್ ಆಂಡ್ ಮೋರ್ ಸಂಸ್ಥೆಯ ಡಿ.ಸಿ. ಮೋಹನ್ ಅಭಿಪ್ರಾಯಪಡುತ್ತಾರೆ.

|ಗೋವಿಂದರಾಜು ಚಿನ್ನಕುರ್ಚಿ ಬೆಂಗಳೂರು

ಒಮ್ಮೆ ಕಲಿತರೆ ಜೀವನಪರ್ಯಂತ ನೆನಪಿರಬಹುದಾದ ವಿದ್ಯೆ ಎಂದರೆ ಈಜುವುದು ಮತ್ತು ಸೈಕಲ್ ಸವಾರಿ ಎಂಬ ಮಾತಿದೆ. ಬಡವ-ಶ್ರೀಮಂತ ಭೇದವಿಲ್ಲದೆ ಎಲ್ಲರೂ ಬಳಸುವ ಸಾರಿಗೆ ಸಾಧನಗಳಲ್ಲಿ ಸೈಕಲ್ ಕೂಡ ಒಂದು. ಕೆಲವರಿಗೆ ಇದು ಆರೋಗ್ಯದ ಸಾಧನ ಸಹ. ಏನೇ ಆದರೂ ಸೈಕಲ್​ನೊಂದಿಗಿನ ಬಾಂಧವ್ಯ ಮಾತ್ರ ಅನನ್ಯ.

ಇಂದು ಸೈಕಲ್ ಕೇವಲ ಸಾರಿಗೆ ಸಾಧನವಾಗಿ ಉಳಿದಿಲ್ಲ. ಸೈಕ್ಲಿಂಗ್​ನಲ್ಲಿ ಆರೋಗ್ಯದ ಗುಟ್ಟು ಸಹ ಅಡಗಿದೆ. ಪರಿಸರ ಮಾಲಿನ್ಯ ತಡೆಗಟ್ಟಲು, ಖರ್ಚು ಕಡಿಮೆ ಮಾಡಿಕೊಳ್ಳಲು ಸೈಕಲ್ ಉತ್ತಮ ಉಪಾಯ. ಎಲ್ಲ ವಯಸ್ಸಿನವರು ಸೈಕ್ಲಿಂಗ್ ಮಾಡಬಹುದಾಗಿದ್ದು, ವಾಹನಗಳ ಭರಾಟೆ ನಡುವೆಯೂ ಜನಪ್ರಿಯತೆಯನ್ನು ಕಳೆದುಕೊಂಡಿಲ್ಲ. ಸೈಕಲ್​ಗೆ ಎರಡು ಶತಮಾನದ ಇತಿಹಾಸ ಇದೆ. ಅಮೆರಿಕಾದ ಸಮಾಜಶಾಸ್ತ್ರದ ಪ್ರೊಫೆಸರ್ ಲೆಸ್​ಜೆಕ್ ಸಿಬಿಲ್​ಸ್ಕೈ ‘ಸೈಕಲ್ ಎಲ್ಲರಿಗೂ ಸುಸ್ಥಿರ ಸಾರಿಗೆ’ ಎಂಬ ಧ್ಯೇಯವಾಕ್ಯದೊಂದಿಗೆ ಅಭಿಯಾನ ಶುರುಮಾಡಿದರು. ತನ್ನದೇ ವಿದ್ಯಾರ್ಥಿಗಳ ತಂಡ ಕಟ್ಟಿಕೊಂಡು ಸೈಕಲ್ ಜಾಥಾ ಆರಂಭಿಸಿದರು. 2015ರಲ್ಲಿ ವಿಶ್ವಸಂಸ್ಥೆಗೆ ಪತ್ರ ಬರೆದು ‘ವಿಶ್ವ ಸೈಕಲ್ ದಿನಾಚರಣೆ’ಗೆ ಒತ್ತಾಯಿಸಿದರು. 2018ರ ಏ.12ರಂದು ವಿಶ್ವಸಂಸ್ಥೆ ಜೂನ್ 3ನ್ನು ‘ವಿಶ್ವ ಸೈಕಲ್ ದಿನ’ ಎಂದು ಘೋಷಣೆ ಮಾಡಿತು.

ದೇಶದಲ್ಲಿ ಮನೆಮಾತಾದ ಸೈಕಲ್​ಗಳೆಂದರೆ ಅಟ್ಲಾಸ್ ಮತ್ತು ಹೀರೋ. ಹರಿಯಾಣಾದ ಸೋನಿಪತ್​ನಲ್ಲಿ ತಗಡಿನ ಸಣ್ಣ ಶೆಡ್​ನಲ್ಲಿ 1951ರಲ್ಲಿ ಅಟ್ಲಾಸ್ ಕಂಪನಿ ತಲೆಎತ್ತಿತು. ಮೊದಲ ವರ್ಷ 120 ಸೈಕಲ್ ತಯಾರಿಸಿದ ಅಟ್ಲಾಸ್ ಮಾರನೇ ವರ್ಷವೇ ಜನಪ್ರಿಯತೆ ಹೊಂದಿ 50 ದೇಶಗಳಲ್ಲಿ ಸುತ್ತಾಡಿತು. ಇದೇ ವೇಳೆ ಹೀರೊ ಸೈಕಲ್ ಕೂಡ ಭಾರತದಲ್ಲಿ ತಳ ಊರಲು ಆರಂಭಿಸಿತು. 70ರ ದಶಕದ ಅಂತ್ಯದಲ್ಲಿ ಸೈಕಲ್ ಕಂಪನಿಗಳು ಕ್ರೀಡೆಗೆ ಯೋಗ್ಯವಾದ (ಸ್ಪೋರ್ಟ್ಸ್ ಬೈಸಿಕಲ್) ಸೈಕಲ್ ತಯಾರಿಸಿ ಮತ್ತಷ್ಟು ಜನಪ್ರಿಯತೆ ಗಳಿಸಿದವು. ಮೌಂಟೇನ್ (ಎಂಟಿಬಿ) ಸೈಕಲ್ ಜತೆಗೆ ಸ್ಪೋರ್ಟ್ಸ್ ಬೈಸಿಕಲ್ (ಹೈಬ್ರಿಡ್ ಸೈಕಲ್) ಹೆಚ್ಚು ಜನಪ್ರಿಯವಾಗುತ್ತಿವೆ. ಕೆಸ್ಟೋ, ಹರ್ಕ್ಯೂಲಸ್, ರೋಡಿಯೋ, ಡಾಟೂ, ಮೋನ್ಟ್ರಾ, ಎಕ್ಸ್ಟಲ್, ಗಿಂಟ್ರಾ, ಬಿಎಂಡಬ್ಲೂ್ಯ, ಸ್ಕಾಟ್, ಆಟ್ಲಾಸ್ ಕೋಡ್, ಬಿ-ಟ್ವೀನ್, ಪೈರ್​ಫಾಕ್ಸ್, ರ್ಯಾಲೀಸ್ ಕಂಪನಿಗಳ ಟಾಪ್ ಎಂಡ್ ಮಾಡೆಲ್ ಸೈಕಲ್​ಗಳು ಕೂಡ ಇವೆ. ಬೆಲೆ 5 ಸಾವಿರದಿಂದ 6 ಲಕ್ಷ ರೂ. ವರೆಗೂ ಇದೆ. ಇತ್ತೀಚೆಗೆ ವಿದ್ಯುತ್ ಚಾಲಿತ ಸೈಕಲ್​ಗಳು ಗಮನಸೆಳೆಯುತ್ತಿವೆ. ಬ್ಯಾಟರಿ ಆಧಾರಿತ ಸೈಕಲ್ ಬಳಕೆಯಿಂದ ಪೆಟ್ರೋಲ್ ವೆಚ್ಚ ಕಡಿತ, ಟ್ರಾಫಿಕ್ ಜಾಮ್ಂದ ದೂರ ಉಳಿಯಬಹುದು.

ಪ್ರತ್ಯೇಕ ಪಥ ಬೇಕು

ಬೈಸಿಕಲ್ ಸವಾರಿಗೆ ಪ್ರತ್ಯೇಕ ಪಥ ಇಲ್ಲ. ಪರಿಣಾಮ ಸವಾರರಿಗೆ ಅಭದ್ರತೆ ಮತ್ತು ತೊಡಕು ಕಾಡುತ್ತಿದೆ. ಈ ಹಿಂದೆ ಸ್ಮಾರ್ಟ್​ಸಿಟಿ ಯೋಜನೆ ಅಡಿಯಲ್ಲಿ ನಗರ ಭೂಸಾರಿಗೆ ನಿರ್ದೇಶನಾಲಯ ಬೆಂಗಳೂರು, ಬೆಳಗಾವಿ, ತುಮಕೂರು, ಶಿವಮೊಗ್ಗ, ಹುಬ್ಬಳ್ಳಿ-ಧಾರವಾಡ, ದಾವಣಗೆರೆ, ಮಂಗಳೂರು, ಮೈಸೂರು ಮತ್ತು ಕಲಬುರಗಿಯಲ್ಲಿ ಸೈಕಲ್ ಸಾರಿಗೆ ವ್ಯವಸ್ಥೆ ಜಾರಿಗೆ ಇಚ್ಛಿಸಿತ್ತು. ಬೆಂಗಳೂರಿನಲ್ಲಿ 25 ವಾರ್ಡ್​ಗಳಲ್ಲಿ 133 ರಸ್ತೆಗಳಲ್ಲಿ ಸೈಕಲ್ ಪಥ ನಿರ್ವಣಕ್ಕೆ ಸಲಹೆ ನೀಡಿತ್ತು. ಆದರೆ, ಈವರೆಗೂ ಅನುಷ್ಠಾನಗೊಂಡಿಲ್ಲ.

ಸರಳ ವ್ಯಾಯಾಮ

ಸರಳ ವ್ಯಾಯಾಮ ಎಂದರೆ ನಡಿಗೆ ಮತ್ತು ಸೈಕ್ಲಿಂಗ್. ಮಾನಸಿಕ-ದೈಹಿಕ ಆರೋಗ್ಯಕ್ಕೆ ಸೈಕ್ಲಿಂಗ್ ಉಪಯುಕ್ತ. ದೇಹದಲ್ಲಿನ ಕ್ಯಾಲರಿ ಹೆಚ್ಚು ಖರ್ಚಾಗಿ ಕೊಬ್ಬಿನಾಂಶ ಕರಗುತ್ತದೆ. ತೂಕ ಇಳಿಸಬೇಕೆನ್ನುವವರಿಗೆ ಸೈಕ್ಲಿಂಗ್ ಉತ್ತಮ ವ್ಯಾಯಾಮ. ಕಾಲುಗಳಿಗೆ ಹೆಚ್ಚಿನ ಬಲ ನೀಡುವ ಜತೆಗೆ ದೇಹದ ಸ್ನಾಯುಗಳು ವೃದ್ಧಿಯಾಗಿ ತೊಡೆ, ಮೀನಖಂಡ, ಪಾದ, ಮೊಣಕಾಲಿಗೆ ಉತ್ತಮ ವ್ಯಾಯಾಮ ಸಿಗುತ್ತದೆ. ಮಾನಸಿಕ ಒತ್ತಡ, ಖಿನ್ನತೆ, ಉದ್ವೇಗ ಸಂಬಂಧಿ ತೊಂದರೆ ನಿಯಂತ್ರಣಕ್ಕೂ ಸಹಕಾರಿ. ಸೈಕಲ್ ಸವಾರಿ ವೇಳೆ ರಸ್ತೆ ಕಡೆಗೆ ಮನಸ್ಸು ಕೇಂದ್ರೀಕರಿಸಿದಾಗ ಮಿದುಳು ಸಕ್ರಿಯವಾಗಿದ್ದು ಮಾನಸಿಕ ಒತ್ತಡದಿಂದ ವಿಮುಖವಾಗಿ ಧನಾತ್ಮಕ ಚಿಂತನೆ ಪಡೆಯುತ್ತದೆ ಎಂಬುದು ವೈದ್ಯರ ಅಭಿಪ್ರಾಯ.

ಕರೊನಾದಲ್ಲಿ ಹೆಚ್ಚಿದ ವೇಗ

ಕರೊನಾ ಸೋಂಕು ಮತ್ತು ಲಾಕ್​ಡೌನ್​ನಲ್ಲಿ ಸೈಕಲ್ ಬಳಕೆದಾರರು ಹೆಚ್ಚಾಗಿದ್ದಾರೆ ಮತ್ತು ಬೆಲೆಯೂ ಏರಿದೆ. ಜಿಮ್ ಪಾರ್ಕ್ ಮತ್ತು ಸಾರ್ವಜನಿಕ ಸಾರಿಗೆ ಬಳಕೆ ಕಡಿಮೆಯಾದಾಗ ಬೈಸಿಕಲ್ ಸವಾರಿ ಟ್ರೆಂಡ್ ಕಾಣಿಸಿತು. ಟೆಕ್ಕಿಗಳು ಶನಿವಾರ, ಭಾನುವಾರ ಟ್ರಾ್ಯಕಿಂಗ್ ಹೋಗುವುದು. ಊಟಿ, ಪಶ್ಚಿಮ ಘಟ್ಟಗಳಲ್ಲಿ ಸೈಕ್ಲಿಂಗ್ ಮಾಡುವ ಹವ್ಯಾಸ ಮೈಗೂಡಿಸಿಕೊಂಡಿದ್ದಾರೆ. ಮಾರ್ಚ್, ಏಪ್ರಿಲ್ ಹೊರತು ಪಡಿಸಿದರೆ ಉಳಿದ ದಿನಗಳಲ್ಲಿ ಬೆಂಗಳೂರು ಹೊರವಲಯದಲ್ಲಿ ಸೈಕ್ಲಿಂಗ್​ಗೆ ಉತ್ತಮ ಪರಿಸರವಿದೆ. ಸರ್ಕಾರ ಸೈಕಲ್ ಜಾಥಾದಂತಹ ಜಾಗೃತಿ ಅಭಿಯಾನ ಮಾಡಿದರೆ ಹೆಚ್ಚಿನ ಪ್ರೋತ್ಸಾಹ ಸಿಗಲಿದೆ.

ರಾಜ್ಯದ ಏಳು ಕಡೆ ಬೈಸಿಕಲ್ ರ‍್ಯಾಲಿ

ವಿಶ್ವ ಸೈಕಲ್ ದಿನದ ಅಂಗವಾಗಿ ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ನೆಹರು ಯುವ ಕೇಂದ್ರ, ಎನ್​ಎಸ್​ಎಸ್ ಸಹಯೋಗದೊಂದಿಗೆ ಜೂನ್ 3ರಂದು ಏಳು ಐತಿಹಾಸಿಕ ಸ್ಥಳಗಳಲ್ಲಿ ಸೈಕಲ್ ರ‍್ಯಾಲಿ ಆಯೋಜಿಸಲಾಗಿದೆ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಡಾ. ಕೆ.ಸಿ. ನಾರಾಯಣಗೌಡ ತಿಳಿಸಿದ್ದಾರೆ. ಹಂಪಿ, ಬೇಲೂರು, ರಾಣಿ ಅಬ್ಬಕ್ಕ ಕೋಟೆ, ಗೋಲ್ ಗುಂಬಜ್, ಮೈಸೂರು ಅರಮನೆ, ಮಲ್ಪೆ ಮತ್ತು ಮಡಿಕೇರಿ ಕೋಟೆಗಳಲ್ಲಿ ಬೈಸಿಕಲ್ ರ‍್ಯಾಲಿ ನಡೆಯಲಿದೆ. ನಮ್ಮ-ನಿಮ್ಮ ಸೈಕಲ್ ಫೌಂಡೇಷನ್, ಸ್ಟಾರ್ಟ್​ಅಪ್ ಸೆಲ್, ಬೆಂಗಳೂರು ಸಹಯೋಗದಲ್ಲಿ ‘ಲೀಡ್ ಬೆಂಗಳೂರು ರೈಡ್-2022’ ಆಯೋಜಿಸುತ್ತಿದ್ದು ಇದರಲ್ಲಿ ಜರ್ಮನಿಯ ವಿವಿಧ ಕಂಪನಿಗಳ ಸಿಇಒಗಳು ಭಾಗವಹಿಸುತ್ತಿದ್ದಾರೆ. ಬೆಂಗಳೂರನ್ನು ಬೈಸಿಕಲ್ ನಗರವನ್ನಾಗಿ ರೂಪಿಸಬೇಕಾಗಿದೆ. ಆಗ ನಗರದ ಸಂಚಾರದಟ್ಟಣೆ ಸಮಸ್ಯೆಗೂ ಪರಿಹಾರ ಕಂಡುಕೊಳ್ಳಬಹುದಾಗಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net