

ಬೆಂಗಳೂರು: ಆಡಳಿತ ಪಕ್ಷದಲ್ಲಿನ ಕೆಲವು ಬೆಳವಣಿಗೆಗಳು ಸರ್ಕಾರವನ್ನು ಮೇಲಿಂದ ಮೇಲೆ ಇಕ್ಕಟ್ಟಿಗೆ ಸಿಲುಕಿಸುತ್ತಲೇ ಇವೆ. ಇದೀಗ ಮತ್ತಷ್ಟು ಉಪಮುಖ್ಯಮಂತ್ರಿ ಸ್ಥಾನ ಸೃಷ್ಟಿಸಬೇಕೆಂದು ಪಕ್ಷದ ಹೈಕಮಾಂಡ್ ಮೇಲೆ ಒತ್ತಡ ತರುವ ಪ್ರಯತ್ನ ಆರಂಭವಾಗಿದೆ.
ಸಿಎಂ ವಿರುದ್ಧ ಪಕ್ಷದ ಹಿರಿಯ ನಾಯಕ ಬಿ.ಕೆ. ಹರಿಪ್ರಸಾದ್ ದನಿ ಎತ್ತಿದ ಪ್ರಕರಣ, ಸಚಿವ ಸುಧಾಕರ್ ವಿರುದ್ಧದ ಎಫ್ಐಆರ್ ದಾಖಲು ವಿಚಾರ ಚರ್ಚೆಯಾಗುತ್ತಿರುವ ಬೆನ್ನಲ್ಲೇ ಸಚಿವ ರಾಜಣ್ಣ ಅವರು ಮತ್ತಷ್ಟು ಡಿಸಿಎಂ ಹುದ್ದೆ ಸೃಷ್ಟಿಯಾಗಬೇಕೆಂದು ಪ್ರತಿಪಾದಿಸಿದ್ದಾರೆ. ಪ್ರಸ್ತುತ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಪುಟದಲ್ಲಿ ಒಂದೇ ಒಂದು ಡಿಸಿಎಂ ಹುದ್ದೆ ಸೃಷ್ಟಿಸಿದ್ದು, ಡಿ.ಕೆ. ಶಿವಕುಮಾರ್ ನಿಭಾಯಿಸುತ್ತಿದ್ದಾರೆ. ಇದೇ ಕಾರಣಕ್ಕೆ ರಾಜಣ್ಣ ಅವರ ಒತ್ತಾಯ ಪಕ್ಷದಲ್ಲಿ ಮಹತ್ವ ಪಡೆದುಕೊಂಡಿದೆ.
ರಾಜಣ್ಣ ವಾದವೇನು?: ಲಿಂಗಾಯತ, ಎಸ್ಸಿ, ಎಸ್ಟಿ ಹಾಗೂ ಅಲ್ಪಸಂಖ್ಯಾತ ಸಮುದಾಯಕ್ಕೆ ಡಿಸಿಎಂ ಸ್ಥಾನ ನೀಡುವಂತೆ ಹೈಕಮಾಂಡ್ಗೆ ಪತ್ರ ಬರೆಯಲು ರಾಜಣ್ಣ ನಿರ್ಧರಿಸಿದ್ದಾರೆ. ಲೋಕಸಭಾ ಚುನಾವಣೆ ದೃಷ್ಟಿಯಿಂದ ಮೂವರಿಗೆ ಡಿಸಿಎಂ ಸ್ಥಾನ ನೀಡಬೇಕು.
ಈ ಹಿಂದೆ ವಿಧಾನಸಭೆಯಲ್ಲಿ ಭರ್ಜರಿ ಜಯಭೇರಿ ಭಾರಿಸಿದ್ದೆವು. ಈಗ ಲೋಕಸಭಾ ಚುನಾವಣೆಗೂ ಹೆಚ್ಚಿನ ಸ್ಥಾನ ಗೆಲ್ಲಬೇಕಾದರೆ ಮತ್ತೆ ಮೂವರಿಗೆ ಡಿಸಿಎಂ ಸ್ಥಾನ ನೀಡಿದರೆ ಪಕ್ಷಕ್ಕೆ ಲಾಭವಾಗಲಿದೆ ಎಂಬುದು ಅವರ ವಾದವಾಗಿದೆ. ಪತ್ರ ಬರೆಯುವ ಜತೆಗೆ ದೆಹಲಿಗೆ ತೆರಳಿ ಪಕ್ಷದ ಪ್ರಮುಖರೊಂದಿಗೆ ಚರ್ಚೆ ನಡೆಸಲೂ ಸಹ ಬಯಸಿರುವುದಾಗಿ ಅವರು ಹೇಳಿಕೊಂಡಿದ್ದಾರೆ.
ಸಂಚಲನ ಮೂಡಿಸಿದ ನಡೆ: ರಾಜಣ್ಣ ಅವರ ಹೇಳಿಕೆ ಪಕ್ಷದಲ್ಲಿ ಸಂಚಲನ ಮೂಡಿಸಿದೆ. ಸಿಎಂ ರೇಸ್ನಲ್ಲಿದ್ದ ಡಿ.ಕೆ. ಶಿವಕುಮಾರ್ಗೆ ಅವಕಾಶ ಕೈ ತಪ್ಪಿದ್ದರಿಂದಲೇ ಡಿಸಿಎಂ ಸ್ಥಾನ ನೀಡಲಾಗಿದೆ. ಈ ಅಂಶ ಗೊತ್ತಿದ್ದೂ ಅವರ ಸಂಪುಟ ಸಹೋದ್ಯೋಗಿ ಮತ್ತೆ ಮೂರು ಡಿಸಿಎಂ ಸ್ಥಾನ ಸೃಜಿಸಬೇಕೆಂದು ಬಯಸಿರುವುದು ಕುತೂಹಲಕ್ಕೆ ಕಾರಣವಾಗಿದೆ. ಈ ರೀತಿ ಮತ್ತೆ ಮೂರು ಡಿಸಿಎಂ ಸ್ಥಾನ ಸೃಜಿಸಿದರೆ ಡಿ.ಕೆ. ಶಿವಕುಮಾರ್ಗೆ ನೀಡಿರುವ ಪ್ರಾಮುಖ್ಯತೆ ತಗ್ಗಲಿದೆ. ನಾಲ್ಕು ಮಂದಿಯಲ್ಲಿ ಅವರೂ ಒಬ್ಬರೆನಿಸಿಕೊಳ್ಳಲಿದ್ದಾರೆ. ಇಂತಹ ಬೇಡಿಕೆ ಅಥವಾ ರಾಜಕೀಯ ತಂತ್ರಗಾರಿಕೆಯ ಭಾಗವಾಗದಂತಿರುವ ಒತ್ತಾಯವನ್ನು ಡಿಕೆಶಿ ಯಾವ ರೀತಿ ಎದುರಿಸುತ್ತಾರೆಂಬ ಕುತೂಹಲವೂ ಇದೆ.
ಇದು ರಾಜಣ್ಣ ಬೇಡಿಕೆ ಮಾತ್ರವಾಗಿಲ್ಲ. ಎರಡು ತಿಂಗಳ ಹಿಂದಷ್ಟೇ ಮೂರ್ನಾಲ್ಕು ಮಂದಿಗೆ ಸಮುದಾಯವಾರು ಡಿಸಿಎಂ ಸ್ಥಾನ ನೀಡುವಂತೆ ಗೃಹ ಸಚಿವ ಪರಮೇಶ್ವರ್ ಕೂಡ ಒತ್ತಾಯಿಸಿದ್ದರು. ಪರಮೇಶ್ವರ್ ಸಲಹೆಗೆ ಎಂ.ಬಿ. ಪಾಟೀಲ್ ಕೂಡ ದನಿ ಗೂಡಿಸಿದ್ದರು. ಇನ್ನು ಸತೀಶ್ ಜಾರಕಿಹೊಳಿ ಜತೆಗೆ ಅಲ್ಪಸಂಖ್ಯಾತ ಸಮುದಾಯಕ್ಕೆ ಡಿಸಿಎಂ ಸ್ಥಾನ ಕೊಡಬೇಕಾಗಿತ್ತು ಎಂದು ಬಿ.ಕೆ. ಹರಿಪ್ರಸಾದ್ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಇದೀಗ ಕೆ.ಎನ್ ರಾಜಣ್ಣರಿಂದಲೂ ಮೂವರಿಗೆ ಉಪಮುಖ್ಯಮಂತ್ರಿಗಳನ್ನಾಗಿ ಮಾಡುವಂತೆ ಒತ್ತಾಯ ಕೇಳಿಬಂದಿದೆ. ಸರ್ಕಾರ ರಚನೆ ಆರಂಭದ ದಿನಗಳಲ್ಲಿ ಅಲ್ಪಸಂಖ್ಯಾತ ಸಮುದಾಯಕ್ಕೆ ಡಿಸಿಎಂ ಸ್ಥಾನ ಕೊಡಬೇಕು ಎಂದು ಜಮೀರ್ ಅಹ್ಮದ್ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಚುನಾವಣೆಯಲ್ಲಿ ಯಾವುದೋ ಒಂದು ಸಮುದಾಯ ಪಕ್ಷವನ್ನು ಬೆಂಬಲಿಸಿಲ್ಲ. ಅಲ್ಪಸಂಖ್ಯಾತ ಸಮುದಾಯ ಪೂರ್ಣಪ್ರಮಾಣದಲ್ಲಿ ಜತೆಗೆ ನಿಂತಿರುವಾಗ ಕಡೆಗಣಿಸಬಾರದೆಂಬ ಸಲಹೆಯೂ ಕೇಳಿಬಂದಿತ್ತು.
ಡಿಸಿಎಂ ಹುದ್ದೆ ಕೊಡುವುದನ್ನು ಸಿಎಂ ಮತ್ತು ಹೈಕಮಾಂಡ್ ತೀರ್ಮಾನ ಮಾಡಬೇಕು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸ್ಥಾನಮಾನ ಇರುವುದರಿಂದ ದೇಶ ಅಭಿವೃದ್ಧಿ ಆಗುತ್ತದೆ. ಜತೆಗೆ ಪಕ್ಷಕ್ಕೂ ಶಕ್ತಿ ಬರುತ್ತದೆ. ನನಗೆ ಸಚಿವ ಸ್ಥಾನ ತೃಪ್ತಿಯಿದೆ. | ಕೆ.ಎಚ್. ಮುನಿಯಪ್ಪ, ಆಹಾರ ಸಚಿವ ಸದ್ಯಕ್ಕೆ ಅಂತಹ ಪ್ರಸ್ತಾವನೆ ಹೈಕಮಾಂಡ್ ಮುಂದೆ ಇಲ್ಲ. ಪತ್ರ ಎಲ್ಲರೂ ಬರೆಯಬಹುದು. ಅದಕ್ಕೆ ಯಾವುದೇ ಅಡ್ಡಿ ಇಲ್ಲ. ಬಹಳಷ್ಟು ಜನಕ್ಕೆ ಡಿಸಿಎಂ ಅಷ್ಟೇ ಅಲ್ಲ ಸಿಎಂ ಆಗುವ ಅರ್ಹತೆ ಇದೆ. | ಪ್ರಿಯಾಂಕ್ ಖರ್ಗೆ, ಐಟಿಬಿಟಿ ಸಚಿವ
ದಲಿತ ಸಿಎಂ ಪ್ರಸ್ತಾಪ ಅಪ್ರಸ್ತುತ: ದಲಿತರನ್ನು ಸಿಎಂ ಮಾಡಬೇಕು ಎಂಬ ಸ್ವಾಮೀಜಿಗಳ ಒತ್ತಾಯ ಸ್ವಾಗತಿಸುವೆ. ಸಿಎಂ ಆಯ್ಕೆ ಪಕ್ಷದ ಶಾಸಕರು ಮತ್ತು ಹೈಕಮಾಂಡ್ಗೆ ಬಿಟ್ಟ ವಿಚಾರ. ಸದ್ಯಕ್ಕಂತೂ ದಲಿತ ಸಿಎಂ ಪ್ರಸ್ತಾಪ ಅಪ್ರಸ್ತುತ ಎಂದು ಸಚಿವ ಕೆ.ಎಚ್. ಮುನಿಯಪ್ಪ ಹೇಳಿದ್ದಾರೆ.