

ಬೆಂಗಳೂರು: ಉದ್ಯಮಿ ಗೋವಿಂದಬಾಬು ಪೂಜಾರಿಗೆ ಟಿಕೆಟ್ ಕೊಡಿಸುವುದಾಗಿ ವಂಚಿಸಿದ ಆರೋಪದ ಮೇಲೆ ಸಿಕ್ಕಿಬಿದ್ದಿರುವ ಚೈತ್ರಾ ಕುಂದಾಪುರ ಪ್ರಕರಣಕ್ಕೂ ನಮಗೂ ಯಾವುದೇ ಸಂಬಂಧವಿಲ್ಲ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದರು. ಆದರೆ ಅದಕ್ಕೆ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ಆ ಪ್ರಕರಣಕ್ಕೂ ಬಿಜೆಪಿಗೂ ಹೇಗೆ ಸಂಬಂಧ ಎಂಬುದನ್ನು ಇಂದು ವಿವರಿಸಿದೆ.
ಟಿಕೆಟ್ ವಂಚನೆ ಪ್ರಕರಣಕ್ಕೂ ಬಿಜೆಪಿಗೂ ಸಂಬಂಧವಿಲ್ಲ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದರು ಎಂದ ಕಾಂಗ್ರೆಸ್, ಯಾವುದಾದ್ರೂ ಹೆಣ ಕಂಡರೆ ಹಿಂದೂ ಕಾರ್ಯಕರ್ತರು ಎಂದು ಬೊಬ್ಬೆ ಹೊಡೆಯುವ ಬಿಜೆಪಿ ತನ್ನ ಕಾರ್ಯಕರ್ತರು ಅಕ್ರಮ-ಅನಾಚಾರ ನಡೆಸಿದಾಗ ಜಾರಿಕೊಳ್ಳುವುದೇಕೆ? ಎಂಬುದಾಗಿ ಪ್ರಶ್ನಿಸಿದೆ.
ಆರೋಪಿ ಚೈನ್ ಚೈತ್ರ ಎಬಿವಿಪಿ ಕಾರ್ಯಕರ್ತೆಯಾಗಿದ್ದಾಳೆ. ಮತ್ತೊಬ್ಬ ಆರೋಪಿ ಗಗನ್ ಕಡೂರು ಬಿಜೆಪಿ ಯುವಮೋರ್ಚಾದ ಪ್ರಧಾನ ಕಾರ್ಯದರ್ಶಿಯಾಗಿದ್ದ. ವಂಚನೆ ನಡೆಸಿದ್ದು ಬಿಜೆಪಿ ಟಿಕೆಟ್ ಹೆಸರಲ್ಲಿ, ಶಿವಮೊಗ್ಗ ಬಿಜೆಪಿ ಕಚೇರಿಯನ್ನು ಡೀಲ್ ನಡೆಸಲು ಬಳಸಿಕೊಳ್ಳಲಾಗಿತ್ತು. ಹೀಗಿದ್ದೂ ಸಂಬಂಧವಿಲ್ಲ ಎಂದು ಕೈತೊಳೆದುಕೊಳ್ಳುವುದು ಆತ್ಮವಂಚನೆ ಅಲ್ಲವೇ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.