

| ಶ್ರೀಕಾಂತ್ ಶೇಷಾದ್ರಿ ಬೆಂಗಳೂರು
ಕೋವಿಡ್ ಮೂರನೇ ಅಲೆ ತಗ್ಗುತ್ತಿದ್ದಂತೆ ಕೈಗಾರಿಕಾ ಕ್ಷೇತ್ರದ ಹೂಡಿಕೆಗೆ ಬೂಸ್ಟ್ ನೀಡಲು ಸಿದ್ಧತೆ ಮಾಡಿಕೊಂಡಿರುವ ಸರ್ಕಾರ ಅಗತ್ಯ ಭೂಮಿ ನೀಡಲು ವಿಶೇಷ ಆಸಕ್ತಿ ತೋರಿಸಿದೆ. ಪ್ರಸ್ತುತ ಕೈಗಾರಿಕೆಗಳು ಜಮೀನು ಬಯಸಿದಲ್ಲಿ ನೀಡಲು ವಿವಿಧ ಜಿಲ್ಲೆಗಳಲ್ಲಿ 5890.27 ಎಕರೆ ಜಾಗವನ್ನು ಸಿದ್ಧಮಾಡಿಟ್ಟುಕೊಂಡಿದೆ. 25,872.34 ಎಕರೆಯಷ್ಟು ಭೂಮಿಯ ಭೂ ಸ್ವಾಧೀನ ಪ್ರಕ್ರಿಯೆ ಪ್ರಗತಿಯಲ್ಲಿದ್ದರೆ, 14,200 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಸಿದ್ಧತೆ ನಡೆಸುತ್ತಿದೆ.
ವಿವಿಧ ಯೋಜನಾ ಅನುಮೋದನೆ ಸಮಿತಿಗಳಲ್ಲಿ ಹೊಸ ಕೈಗಾರಿಕಾ ಯೋಜನೆಗಳಿಗೆ ಅನುಮೋದನಾ ಪ್ರಕ್ರಿಯೆ ಪ್ರಗತಿಯಲ್ಲಿದ್ದು, ಕೆಐಡಿಬಿ ಅಭಿವೃದ್ಧಿಪಡಿಸಿರುವ ಹೊಸ ಕೈಗಾರಿಕಾ ಪ್ರದೇಶಗಳಲ್ಲಿ ಲಭ್ಯವಿರುವ 5890.27 ಎಕರೆಯನ್ನು ನೀಡಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜಾಗತಿಕ ಹೂಡಿಕೆದಾರರ ಸಮಾವೇಶ ನಡೆಸಲು ಕೋವಿಡ್ ಅಡ್ಡಿಯಾಗಿದ್ದರೂ ಹೂಡಿಕೆದಾರರನ್ನು ಸೆಳೆಯಲು ನಿರಂತರ ಪ್ರಯತ್ನ ನಡೆಸುತ್ತಿದೆ. ದೇಶದಲ್ಲಿ ಅತಿ ಹೆಚ್ಚು ಹೂಡಿಕೆಯಾಗುತ್ತಿರುವ ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕ ಮುಂಚೂಣಿಯಲ್ಲಿದ್ದು, ಇನ್ನಷ್ಟು ಸೆಳೆಯಲು ವಿಶೇಷ ಗಮನ ನೀಡಲಾಗಿದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.
ಪ್ರಕ್ರಿಯೆ ಪ್ರಗತಿಯಲ್ಲಿ: ದಾವಣಗೆರೆಯಲ್ಲಿ 6043 ಎಕರೆ, ಬೆಂಗಳೂರು ಗ್ರಾಮಾಂತರದಲ್ಲಿ 4605 ಎಕರೆ, ವಿಜಯಪುರದಲ್ಲಿ 339 ಎಕರೆ, ಯಾದಗಿರಿಯಲ್ಲಿ 3269 ಎಕರೆ, ಬಳ್ಳಾರಿಯಲ್ಲಿ 395 ಎಕರೆ, ತುಮಕೂರಲ್ಲಿ 7906 ಎಕರೆ, ಕೋಲಾರದಲ್ಲಿ 761 ಎಕರೆ, ಚಿಕ್ಕಬಳ್ಳಾಪುರದಲ್ಲಿ 1649 ಎಕರೆ, ಗದಗದಲ್ಲಿ 213 ಎಕರೆ, ರಾಯಚೂರಲ್ಲಿ 690 ಎಕರೆ ಭೂ ಸ್ವಾಧೀನ ಪ್ರಕ್ರಿಯೆ ಪ್ರಗತಿಯಲ್ಲಿದೆ.