ಉತ್ಪನ್ನಗಳ ರಕ್ಷಣೆಗೆ ಬೌದ್ಧಿಕ ಆಸ್ತಿ ಹಕ್ಕು ಮುಖ್ಯ

chamber of commerce
ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದಲ್ಲಿ ಏರ್ಪಡಿಸಿದ್ದ ಬೌದ್ಧಿಕ ಆಸ್ತಿ ಜಾಗೃತಿ ಕಾರ್ಯಕ್ರಮವನ್ನು ಜೆಎನ್‌ಎನ್‌ಸಿಇ ಪ್ರಾಚಾರ್ಯ ಪ್ರೊ. ವೈ.ವಿಜಯಕುಮಾರ್ ಉದ್ಘಾಟಿಸಿದರು. ಸಾಧ್ವಿ ಸಿ.ಕಾಂತ್, ಎನ್.ಗೋಪಿನಾಥ್, ಬಿ.ಗೋಪಿನಾಥ್, ವಸಂತ್ ಹೋಬಳಿದಾರ್, ಎಂ.ರಾಜು, ಜಿ.ವಿಜಯಕುಮಾರ್, ಇ.ಪರಮೇಶ್ವರ, ರಮೇಶ್ ಹೆಗಡೆ, ಸವಿತಾ ಮಾಧವ್ ಇದ್ದರು.
Published on

ಶಿವಮೊಗ್ಗ: ಸಂಶೋಧನಾ ಸಹಯೋಗಗಳು ಮತ್ತು ಸೃಜನಶೀಲ ಚತುರತೆಯನ್ನು ರಕ್ಷಿಸಿಕೊಳ್ಳಲು ಬೌದ್ಧಿಕ ಆಸ್ತಿ (ಐಪಿ) ಹಕ್ಕುಗಳು ಪ್ರಮುಖ ಸಾಧನ ಆಗಿವೆ ಎಂದು ಜೆಎನ್‌ಎನ್‌ಸಿಇ ಪ್ರಾಚಾರ್ಯ ಪ್ರೊ. ವೈ.ವಿಜಯಕುಮಾರ್ ಹೇಳಿದರು.

ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಸಭಾಂಗಣದಲ್ಲಿ ವಿಶ್ವ ಬೌದ್ಧಿಕ ಆಸ್ತಿ ದಿನದ ಅಂಗವಾಗಿ ಆಯೋಜಿಸಿದ್ದ ಉದ್ಯಮಿಗಳು ಹಾಗೂ ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ದಿಮೆಗಳ (ಎಂಎಸ್‌ಎಂಇ) ಸಬಲೀಕರಣಕ್ಕಾಗಿ ಬೌದ್ಧಿಕ ಆಸ್ತಿ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸಮಸ್ಯೆಗಳನ್ನು ಸುಲಭವಾಗಿ ಪರಿಹರಿಸುವಲ್ಲಿ ಮತ್ತು ಕೈಗಾರಿಕೆಗಳಿಗೆ ಕೌಶಲಗಳನ್ನು ಹೆಚ್ಚಿಸಲು ಸಹಾಯ ಮಾಡುವಲ್ಲಿ ನವೀನ ಆಲೋಚನೆಗಳು ಪ್ರಮುಖ ಪಾತ್ರ ವಹಿಸುತ್ತವೆ ಎಂದು ತಿಳಿಸಿದರು.
ತಜ್ಞರು, ಸಂಶೋಧಕರು ಎದುರಿಸುತ್ತಿರುವ ಸಮಸ್ಯೆಗಳನ್ನು ಅರ್ಥ ಮಾಡಿಕೊಳ್ಳಲು ಶಿವಮೊಗ್ಗದ ಶೈಕ್ಷಣಿಕ ಸಂಸ್ಥೆಗಳು ಮತ್ತು ಕೈಗಾರಿಕೆಗಳೊಂದಿಗೆ ಸಹಯೋಗ ಹೊಂದುವುದು ಅತ್ಯಂತ ಅವಶ್ಯಕ. ಇದರಿಂದ ಭವಿಷ್ಯದ ದಿನಗಳಲ್ಲಿ ಸಹಾಯಕವಾಗಲಿದೆ ಎಂದರು.
ವಿಶ್ವ ಬೌದ್ಧಿಕ ಆಸ್ತಿ ಹಕ್ಕುಗಳ ದಿನದ ಮಹತ್ವದ ಕುರಿತು ಮಾತನಾಡಿದ ಎಸ್‌ಸಿಕೆ ಅಸೋಸಿಯೇಟ್ಸ್ ವಕೀಲೆ ಸಾಧ್ವಿ ಸಿ. ಕಾಂತ್, ಪ್ರತಿ ವರ್ಷ ಏ.26ರಂದು ವಿಶ್ವ ಐಪಿ ದಿನವನ್ನು ಆಚರಿಸಲಾಗುತ್ತದೆ. ನವೀನ ಮತ್ತು ಸೃಜನಶೀಲ ಉತ್ಪನ್ನಗಳನ್ನು ಕಾನೂನುಬದ್ಧವಾಗಿ ರಕ್ಷಿಸಲು ಮತ್ತು ಆರ್ಥಿಕ ಲಾಭ ಪಡೆದುಕೊಳ್ಳಲು ಬೌದ್ಧಿಕ ಆಸ್ತಿ ಹಕ್ಕುಗಳು ಸಾಧನವಾಗಿರುತ್ತವೆ ಎಂದು ಹೇಳಿದರು.
ಉಲ್ಲಂಘನೆಯ ವಿರುದ್ಧ ಕಾನೂನು ಪರಿಹಾರಗಳು ಮತ್ತು ಸ್ವಂತ ಬೌದ್ಧಿಕ ಆಸ್ತಿ ಹಕ್ಕುಗಳನ್ನು ರಕ್ಷಿಸಿಕೊಳ್ಳಲು ಸಂಬಂಧಿಸಿ ಜಾಗೃತಿ ಹೊಂದಬೇಕು. ಜತೆಗೆ ಬೌದ್ಧಿಕ ಆಸ್ತಿ ಫೈಲಿಂಗ್ ಸೌಲಭ್ಯವು ಈಗ ಶಿವಮೊಗ್ಗದಲ್ಲಿ ದೊರೆಯುತ್ತಿದೆ ಎಂದು ತಿಳಿಸಿದರು.
ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಎನ್.ಗೋಪಿನಾಥ್ ಮಾತನಾಡಿ, ಉದ್ಯಮದಲ್ಲಿ ನವೀನ ಚಟುವಟಿಕೆಗಳನ್ನು ಹೆಚ್ಚಿಸುವ ಮೂಲಕ ಪ್ರಗತಿ ಹೊಂದಬೇಕು. ಭವಿಷ್ಯದ ಕಾಯ್ದೆಗಳಿಗೆ ಅನುಗುಣವಾಗಿ ಉದ್ಯಮ ನಡೆಸಲು ಪೂರಕ ತಿಳವಳಿಕೆ ಹೊಂದುವುದು ಅಗತ್ಯ ಎಂದರು.
ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷ ಬಿ.ಗೋಪಿನಾಥ್, ಕಾರ್ಯದರ್ಶಿ ವಸಂತ್ ಹೋಬಳಿದಾರ್, ಖಜಾಂಚಿ ಎಂ.ರಾಜು, ಸಹ ಕಾರ್ಯದರ್ಶಿ ಜಿ.ವಿಜಯಕುಮಾರ್, ನಿರ್ದೇಶಕರಾದ ಇ.ಪರಮೇಶ್ವರ, ರಮೇಶ್ ಹೆಗಡೆ, ಸ್ಕಿಲ್ ಅಕಾಡೆಮಿಯ ಸವಿತಾ ಮಾಧವ್, ಸಚಿನ್ ಹೆಗಡೆ ಕುಡ್ಗಿ, ಶಶಿಕಾಂತ್ ನಾಡಿಗ್, ಪ್ರೊ. ಯು.ಅರ್ಜುನ್, ದೀಪಕ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net