ಸರ್ಕಾರಿ ಶಾಲೆ ಮುಚ್ಚುವ ಬದಲು ಕೆಪಿಎಸ್ ಆರಂಭಿಸಿ

Mdg kps
ಹಳಿಕೆ ಸರ್ಕಾರಿ ಶಾಲೆ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಸಾಹಿತಿ ಸಂಪತ್ ಬೆಟ್ಟಗೆರೆ ಅವರ ಅಮೃತ ಸಾರಸ್ವತ ಪುಸ್ತಕ ಬಿಡುಗಡೆಗೊಳಿಸಲಾಯಿತು. ಮಾಜಿ ಸಚಿವರಾದ ಬಿ.ಬಿ.ನಿಂಗಯ್ಯ, ಮೋಟಮ್ಮ, ಕೆ.ಬಿ.ಗೋಪಾಲ ಗೌಡ ಇತರರಿದ್ದರು.
Published on

ಮೂಡಿಗೆರೆ: ಆಧುನಿಕ ಶಿಕ್ಷಣ ವ್ಯವಸ್ಥೆಗೆ ಮಾರುಹೋಗಿರುವುದರಿಂದ ಸರ್ಕಾರಿ ಶಾಲೆಗಳು ಮುಚ್ಚುವ ಸ್ಥಿತಿಗೆ ತಲುಪಿದ್ದರೂ ಸ್ವತಂತ್ರ ಪೂರ್ವದ ಶಾಲೆ 75 ವರ್ಷಗಳನ್ನು ಪೂರೈಸಿ ಮುನ್ನಡೆಯುತ್ತಿರುವುದು ವಿಶೇಷ ಸಾಧನೆ. ಸರ್ಕಾರಿ ಶಾಲೆಗಳಿಗೆ ರಾಜ್ಯ ಸರ್ಕಾರ ಹೆಚ್ಚಿನ ಆದ್ಯತೆ ನೀಡಿ ಬೆಳೆಸಬೇಕು ಎಂದು ಮಾಜಿ ಸಚಿವ ಬಿ.ಬಿ.ನಿಂಗಯ್ಯ ಹೇಳಿದರು.

ಹಳಿಕೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿ, 75 ವರ್ಷಗಳ ಇತಿಹಾಸವಿರುವ ಸರ್ಕಾರಿ ಶಾಲೆಯಲ್ಲಿ ಕಲಿತ ನೂರಾರು ಜನ ಉನ್ನತ ಹುದ್ದೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಶಾಲೆ ಬೆಳವಣಿಗೆಯಲ್ಲಿ ಗ್ರಾಮಸ್ಥರ ಪಾತ್ರ ಪ್ರಮುಖವಾಗಿದೆ. ಶಾಲೆ ಮುಚ್ಚಿಹೋಗದಂತೆ ಕಾಪಾಡಿಕೊಳ್ಳುವ ಹೊಣೆಗಾರಿಕೆಯಿಂದ ಹಳೆಯ ವಿದ್ಯಾರ್ಥಿಗಳು ನುಣುಚಿಕೊಳ್ಳಬಾರದು ಎಂದರು.
ಸರ್ಕಾರ ಶಾಲೆಗಳನ್ನು ಮುಚ್ಚುವ ಬದಲು ಮೂರು ಗ್ರಾಪಂ ವ್ಯಾಪ್ತಿಯಲ್ಲಿ ಒಂದು ಕರ್ನಾಟಕ ಪಬ್ಲಿಕ್ ಸ್ಕೂಲ್ ಪ್ರಾರಂಭಿಸಬೇಕು. ಮಕ್ಕಳ ಶಿಕ್ಷಣದಲ್ಲಿ ಶಿಕ್ಷಕರಷ್ಟೇ ಪಾಲಕರ ಪಾತ್ರವೂ ಪ್ರಮುಖವಾಗಿದೆ. ಶಿಕ್ಷಣದ ಮೂಲಕ ಮಕ್ಕಳ ಭವಿಷ್ಯ ರೂಪಿಸಬೇಕಾಗಿದೆ ಎಂದು ತಿಳಿಸಿದರು.
ಮಾಜಿ ಸಚಿವೆ ಮೋಟಮ್ಮ ಮಾತನಾಡಿ, ಹಿಂದಿನ ಕಾಲದಲ್ಲಿ ಶಾಲೆಗೆ ಕಟ್ಟಡ ಇಲ್ಲದ ವೇಳೆ ಊರಿನ ಹಿರಿಯರ ಮನೆಗಳಲ್ಲಿಯೇ ಶಾಲೆ ನಡೆಸಲು ಅವಕಾಶ ನೀಡಿ ಗ್ರಾಮೀಣ ಪ್ರದೇಶದ ಮಕ್ಕಳು ಶಿಕ್ಷಣ ಪಡೆಯಲು ಅವಕಾಶ ಮಾಡಿಕೊಟ್ಟಿದ್ದರು. ಆಧುನಿಕ ಶಿಕ್ಷಣದ ಮೊರೆಹೋಗಿರುವ ಪಾಲಕರು ಸರ್ಕಾರಿ ಶಾಲೆಯನ್ನು ಕಡೆಗಣಿಸುತ್ತಿರುವುದು ಸರಿಯಲ್ಲ. ಸರ್ಕಾರಿ ಶಾಲೆಗಳಲ್ಲಿ ಗುಣಾತ್ಮಕ ಶಿಕ್ಷಣದ ಜತೆಗೆ ಬಿಸಿಯೂಟ, ಕಲಿಕಾ ಪರಿಕರ ಮತ್ತಿತರ ವಸ್ತು ಉಚಿತವಾಗಿ ಸರ್ಕಾರ ಒದಗಿಸುತ್ತಿದೆ. ಇದನ್ನು ವಿದ್ಯಾರ್ಥಿಗಳು ಸದುಪಯೋಗಪಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಸಾಹಿತಿ ಡಾ. ಸಂಪತ್ ಬೆಟ್ಟಗೆರೆ ಸಂಪಾದಕತ್ವದ ಅಮೃತ ಸಾರಸ್ವತ ಸ್ಮರಣ ಸಂಚಿಕೆ ಬಿಡುಗಡೆ ಮಾಡಲಾಯಿತು. ಡಿಡಿಪಿಐ ರಂಗಸ್ವಾಮಿ, ಬಿಇಒ ಹೇಮಂತ್‌ರಾಜ್, ಎಸ್‌ಡಿಎಂಸಿ ಅಧ್ಯಕ್ಷ ಸುರೇಂದ್ರ, ಗ್ರಾಪಂ ಅಧ್ಯಕ್ಷ ಕೆ.ಬಿ.ಗೋಪಾಲಗೌಡ, ಉಪಾಧ್ಯಕ್ಷೆ ಸುಶೀಲಾ, ಸದಸ್ಯರಾದ ಬಿ.ಕೆ.ದಿನೇಶ್‌ಕುಮಾರ್, ಸುಂದರಿ, ಪಲ್ಗುಣಿ ಸಹಕಾರ ಸಂಘದ ಅಧ್ಯಕ್ಷ ರಕ್ಷಿತ್, ಡಾ. ರವಿ, ಪ್ರದೀಪ್ ಕೆಂಜಿಗೆ, ನಟೇಶ್ ಗೌಡ, ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಪುಟ್ಟರಾಜು, ಮುಖ್ಯಶಿಕ್ಷಕ ದಿಬ್ಬೇಗೌಡ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net