ಅರ್ಧ ಮಿಲಿಯನ್​ ಫಾಲೋವರ್ಸ್​ ಹೊಂದಿರೋ ಈ ಇನ್​ಸ್ಟಾಗ್ರಾಂ ಸ್ಟಾರ್​ನ ಅಸಲಿ ಮುಖ ತಿಳಿದು ನೆಟ್ಟಿಗರು ಶಾಕ್​! Instagram Star

Roshan Varghese
Published on

ತ್ರಿಸ್ಸೂರ್​: ಕೇರಳದ ರಾಷ್ಟ್ರೀಯ ಹೆದ್ದಾರಿಯಲ್ಲಿ ಇತ್ತೀಚೆಗೆ ಕಾರಿನ ಮೇಲೆ ದಾಳಿ ನಡೆಸಿ ಎರಡೂವರೆ ಕೆಜಿ ಚಿನ್ನಾಭರಣ ದೋಚಿರುವ ಗ್ಯಾಂಗ್​ನ ಲೀಡರ್​ ಓರ್ವ ಇನ್‌ಸ್ಟಾಗ್ರಾಂ ಸ್ಟಾರ್ ( Instagram Star ) ಎಂಬ ಆಘಾತಕಾರಿ ಮಾಹಿತಿ ಬಯಲಾಗಿದೆ. ಕೇರಳದ ಪತ್ತನಂತಿಟ್ಟ ತಿರುವಳ್ಳ ಮೂಲದ ರೋಷನ್ ವರ್ಗೀಸ್ (29) ನೇತೃತ್ವದ ಒಂಬತ್ತು ಮಂದಿಯ ಗ್ಯಾಂಗ್​ ಇಬ್ಬರು ಯುವಕರ ಮೇಲೆ ಹಲ್ಲೆ ನಡೆಸಿ ಚಿನ್ನಾಭರಣ ದೋಚಿದ್ದರು. ಕಳ್ಳತನದ ವೇಳೆ ಸ್ಥಳದಿಂದ ಹಾದು ಹೋಗಿದ್ದ ಬಸ್ಸಿನ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿಗಳನ್ನು ಸಂಗ್ರಹಿಸಿ ನಡೆಸಿದ ತನಿಖೆಯಲ್ಲಿ ಆರೋಪಿಗಳ ಕುರಿತು ಹೆಚ್ಚಿನ ಮಾಹಿತಿ ಲಭ್ಯವಾಗಿದೆ.

ಆರೋಪಿ ರೋಷನ್‌ನನ್ನು ತಿರುವಳ್ಳದಲ್ಲಿ ಬಂಧಿಸಲಾಗಿದೆ. ರೋಷನ್ ಗುಂಪಿನ ಇತರೆ ಸದಸ್ಯರಾಗಿದ್ದ ಶಿಜೋ ವರ್ಗೀಸ್​ನನ್ನು ಮಂಕುಳಂನಲ್ಲಿ, ಸಿದ್ದಿಕ್​ನನ್ನು ಪಲ್ಲಿನಾಡ ಊಲಕಲ್​ನಲ್ಲಿ, ನಿಶಾಂತ್​ನನ್ನು ಕೊಳತ್ತೂರು ತೈವಲಪ್‌ನಲ್ಲಿ ಮತ್ತು ನಿಖಿಲ್ ನಾಥ್ ಎಂಬಾತನನ್ನು ಕಯ್ಪಮಂಗಲಂ ಅತ್ತಿಪರಂನಲ್ಲಿ ಪೊಲೀಸರು ಬಂಧಿಸಿದ್ದಾರೆ. ಈ ಗ್ಯಾಂಗ್​ನ ಎಲ್ಲ ಸದಸ್ಯರು ತಿರುವನಂತಪುರಂ, ಚೆರನೆಲ್ಲೂರು ಮತ್ತು ತ್ರಿಸ್ಸೂರ್‌ನವರು ಎಂದು ತಿಳಿದುಬಂದಿದೆ. ಈ ಪ್ರಕರಣದಲ್ಲಿ ಇನ್ನೂ ನಾಲ್ವರನ್ನು ಬಂಧಿಸಬೇಕಿದೆ ಎಂದು ನಗರ ಪೊಲೀಸರು ಮಾಹಿತಿ ನೀಡಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸಕ್ರಿಯರಾಗಿರುವ ರೋಷನ್, ಇನ್​ಸ್ಟಾಗ್ರಾಂನಲ್ಲಿ ಅರ್ಧ ಮಿಲಿಯನ್​ ಫಾಲೋವರ್ಸ್ ಹೊಂದಿದ್ದಾರೆ. ರೋಷನ್​ನನ್ನು ಫಾಲೋ ಮಾಡುವ ಎಷ್ಟೋ ಮಂದಿಗೆ ಆತ ಕಳ್ಳ ಎಂಬುದು ಗೊತ್ತೇ ಇಲ್ಲ. ಈತ 12ನೇ ತರಗತಿವರೆಗೆ ಮಾತ್ರ ಓದಿದ್ದು, ಆತನ ಮೇಲೆ ವಿವಿಧ ಪೊಲೀಸ್ ಠಾಣೆಗಳಲ್ಲಿ ಸುಮಾರು 22 ಪ್ರಕರಣಗಳು ದಾಖಲಾಗಿವೆ. ರೋಷನ್ ಮತ್ತು ಆತನ ಗ್ಯಾಂಗ್​ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಕಾರು ಪ್ರಯಾಣಿಕರ ಮೇಲೆ ಹಲ್ಲೆ ನಡೆಸಿ, ಚಿನ್ನ ಸುಲಿಗೆ ಮಾಡುತ್ತಿದ್ದರು. ಇದೇ ಪ್ರಕರಣದಲ್ಲಿ ಹಲವು ಬಾರಿ ಜೈಲು ಸೇರಿದ್ದರೂ ಜೈಲಿನಿಂದ ಹೊರಬಂದು ಮತ್ತೆ ಚಿನ್ನಾಭರಣ ಸುಲಿಗೆ ಮಾಡುವುದನ್ನು ಮುಂದುವರಿಸಿದ್ದರು. ಈ ಗ್ಯಾಂಗ್​ ಕರ್ನಾಟಕ ಮತ್ತು ತಮಿಳುನಾಡಿನಲ್ಲಿ ಇದೇ ರೀತಿ ಕಳ್ಳತನ ಮಾಡಿದೆ.

ಕೊಯಮತ್ತೂರಿನ ಚಿನ್ನಾಭರಣ ಅಂಗಡಿಯಿಂದ ಚಿನ್ನಾಭರಣಗಳೊಂದಿಗೆ ತ್ರಿಸ್ಸೂರ್‌ಗೆ ಬರುತ್ತಿದ್ದ ಇಬ್ಬರು ಯುವಕರ ಮೇಲೆ ರೋಷನ್ ಮತ್ತು ಆತನ ಗ್ಯಾಂಗ್​ ಹಲ್ಲೆ ನಡೆಸಿದೆ. ಆರೋಪಿಗಳು ಚಿನ್ನ ತರುತ್ತಿದ್ದ ವಾಹನವನ್ನು ಹಿಂಬಾಲಿಸಿ ತಡೆದು, ಬಳಿಕ ಕಾರಿನ ಗಾಜು ಒಡೆದು ಒಳ ನುಗ್ಗಿ, ಯುವಕರ ಕುತ್ತಿಗೆಗೆ ಚಾಕು ಹಾಕಿ, ಬೆದರಿಸಿ ವಾಹನ ಸಮೇತ ಚಿನ್ನಾಭರಣ ದೋಚಿದ್ದರು. ಈ ಘಟನೆಯ ನಂತರ ಪೊಲೀಸರು ಮೂವರು ಆರೋಪಿಗಳನ್ನು ಕುತಿರಾನ್‌ನಲ್ಲಿ ಬಂಧಿಸಿದ್ದರು. ಬಂಧಿತರಿಂದ ರೋಷನ್ ಬಗ್ಗೆ ಮಾಹಿತಿ ಪಡೆದ ಪೊಲೀಸರು ಆತನನ್ನು ಬಂಧಿಸಿದ್ದಾರೆ. ಸದ್ಯ ಲೂಟಿ ಮಾಡಿದ ಚಿನ್ನವನ್ನು ಪತ್ತೆ ಹಚ್ಚಲು ಪೊಲೀಸರಿಗೆ ಸಾಧ್ಯವಾಗಿಲ್ಲ. ನಾಲ್ವರು ಆರೋಪಿಗಳಿಂದ ಚಿನ್ನವನ್ನು ವಶಪಡಿಸಿಕೊಳ್ಳುವ ಭರವಸೆಯನ್ನು ಪೊಲೀಸರು ಹೊಂದಿದ್ದಾರೆ. ತನಿಖೆ ನಡೆಯುತ್ತಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net