

ವಿಶಾಖಪಟ್ಟಣ: ಸ್ವದೇಶಿ ನಿರ್ಮಿತ ಸುಸಜ್ಜಿತ ಜಲಾಂತರ್ಗಾಮಿ-ನಿರೋಧಕ ಸಮರಾಸ್ತ್ರ ಸಜ್ಜಿತ ಯುದ್ಧ ನೌಕೆ ‘ಐಎನ್ಎಸ್ ಕವರತ್ತಿ’ ಗುರುವಾರ ಭಾರತೀಯ ನೌಕಾಪಡೆಗೆ ವಿಶಾಖಪಟ್ಟಣದ ನೌಕಾ ನೆಲೆಯಲ್ಲಿ ವಿದ್ಯುಕ್ತವಾಗಿ ಸೇರ್ಪಡೆಗೊಂಡಿತು. ಭೂ ಸೇನೆ ಮುಖ್ಯಸ್ಥ ಜನರಲ್ ಮನೋಜ್ ಮುಕುಂದ ನರವಾಣೆ ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.
ಸಬ್ವೆುರಿನ್-ವಿರೋಧಿ ಸಮರದಲ್ಲಿ ಪ್ರಮುಖ ಪಾತ್ರ ವಹಿಸಲಿರುವ ಕವರತ್ತಿಯನ್ನು ಭಾರತೀಯ ನೌಕಾಪಡೆಯ ಆಂತರಿಕ ಸಂಸ್ಥೆಯಾದ ನೌಕಾಪಡೆ ವಿನ್ಯಾಸ ನಿರ್ದೇಶನಾಲಯ (ಡಿಎನ್ಡಿ) ವಿನ್ಯಾಸಗೊಳಿಸಿದೆ. ಕೋಲ್ಕತಾದ ಗಾರ್ಡನ್ ರೀಚ್ ಶಿಪ್ಬಿಲ್ಡರ್ಸ್ ಆಂಡ್ ಇಂಜಿನಿಯರ್ಸ್ ಇದನ್ನು ನಿರ್ವಿುಸಿದೆ.
ಕವರತ್ತಿಯಲ್ಲಿ ಅತ್ಯಾಧುನಿಕ ಶಸ್ತ್ರಾಸ್ತ್ರ ಹಾಗೂ ಸೆನ್ಸರ್ ವ್ಯವಸ್ಥೆ ಇದ್ದು ಜಲಾಂತರ್ಗಾಮಿಗಳನ್ನು ಪತ್ತೆ ಮಾಡಿ ಅವುಗಳ ಮೇಲೆ ದಾಳಿ ಮಾಡುವ ಸಾಮರ್ಥ್ಯ ಹೊಂದಿದೆ. ಸ್ವಯಂ ರಕ್ಷಣಾ ಸಾಮರ್ಥ್ಯ ಹಾಗೂ ದೀರ್ಘ ಕಾಲದ ವರೆಗೆ ಕಾರ್ಯಾಚರಣೆಗಳಲ್ಲಿ ಭಾಗವಹಿಸುವ ಶಕ್ತಿ ಅದಕ್ಕಿದೆ. (ಏಜೆನ್ಸೀಸ್)