

ನವದೆಹಲಿ : ಮಹತ್ವಾಕಾಂಕ್ಷೆಯ ಟ್ಯಾಂಕ್-ನಿರೋಧಕ ಕ್ಷಿಪಣಿ ‘ನಾಗ್’ (ಎಟಿಜಿಎಂ ನಾಗ್)ನ ಅಂತಿಮ ಪರೀಕ್ಷೆ ರಾಜಸ್ಥಾನದ ಪೋಖರಣ್ ಸೇನಾ ರೇಂಜ್ನಲ್ಲಿ ಗುರುವಾರ ಯಶಸ್ವಿಯಾಗಿ ನೆರವೇರಿತು. ನಿರುಪಯುಕ್ತವಾಗಿದ್ದ ಟ್ಯಾಂಕ್ ಒಂದರ ಮೇಲೆ ಸಜೀವ ಸಿಡಿತಲೆ ಬಳಸಿ ಈ ಪರೀಕ್ಷೆ ನಡೆಸಲಾಗಿದೆ ಎಂದು ರಕ್ಷಣಾ ಸಂಶೋಧನಾ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್ಡಿಒ) ಮೂಲಗಳು ತಿಳಿಸಿವೆ.
ಹತ್ತು ಯಶಸ್ವಿ ಪ್ರಯೋಗ ಪೂರ್ಣಗೊಳಿಸಿರುವುದರಿಂದ ನಾಗ್ ಕ್ಷಿಪಣಿ ಸೇನೆಗೆ ಶೀಘ್ರವೇ ಸೇರ್ಪಡೆಯಾಗಲಿದ್ದು, ಲಡಾಖ್ನಲ್ಲಿ ನಿಯೋಜಿಸಲು ಚಿಂತನೆ ನಡೆದಿದೆ. ನಾಲ್ಕು ಕಿಲೋ ಮೀಟರ್ ವ್ಯಾಪ್ತಿಯ ಗುರಿ ತಲುಪಬಲ್ಲ ಈ ಕ್ಷಿಪಣಿಗಳನ್ನು ಇನ್ನು ಮುಂದೆ ಇಸ್ರೇಲ್ ಅಥವಾ ಅಮೆರಿಕದಿಂದ ಆಮದು ಮಾಡಿಕೊಳ್ಳುವ ಅಗತ್ಯವಿಲ್ಲ. ಶತ್ರು ಪಾಳೆಯದ ಗುರಿಯನ್ನು ಗುರುತಿಸಿ ಅದರ ಮೇಲೆ ದಾಳಿ ಮಾಡುವ ಸಾಮರ್ಥ್ಯವನ್ನು ನಾಗ್ ಗಳಿಸಿದೆ. ರಾತ್ರಿ ವೇಳೆಯೂ ಕಾರ್ಯಾಚರಣೆ ನಡೆಸುವಂತೆ ಇದನ್ನು ಅಭಿವೃದ್ಧಿಪಡಿಸಲಾಗಿದೆ. ಭೂಮಿ ಮತ್ತು ಸಮುದ್ರ ಎರಡೂ ಕಡೆಯಿಂದ ಉಡಾವಣೆ ಸಾಧ್ಯವಾಗಲಿದೆ ಎಂದು ಸೇನಾ ಮೂಲಗಳು ತಿಳಿಸಿವೆ.
ಟ್ಯಾಂಕ್-ನಿರೋಧಕ ಅಸ್ತ್ರ ಇಲ್ಲದ ಕಾರಣ ಭಾರತ ತುರ್ತಾಗಿ ಇಸ್ರೇಲ್ನಿಂದ 200 ಸ್ಟ್ರೈಕ್ ಟ್ಯಾಂಕ್-ನಿರೋಧಕ ಕ್ಷಿಪಣಿಗಳನ್ನು ಖರೀದಿಸಿತ್ತು. ಗಲ್ವಾನ್ ಸಂಘರ್ಷದ ನಂತರ ಅವುಗಳನ್ನು ಖರೀದಿಸಲಾಗಿತ್ತು. ಭಾರತವನ್ನು ಹಣಿಯಲೆಂದು ಚೀನಾ ಆಕ್ರಮಿತ ಅಕ್ಸಾಯ್ ಚಿನ್ನಲ್ಲಿ ಭಾರಿ ಪ್ರಮಾಣದಲ್ಲಿ ಸೈನಿಕರು, ರಾಕೆಟ್ಗಳು ಮತ್ತು ಟ್ಯಾಂಕ್ಗಳನ್ನು ಜಮಾಯಿಸಿದ ನಂತರ ಈಗ ಟ್ಯಾಂಕ್-ನಿರೋಧಕ ಕ್ಷಿಪಣಿಗಳ ನಿಯೋಜನೆಗೆ ಆದ್ಯತೆ ನೀಡಲಾಗುತ್ತಿದೆ. (ಏಜೆನ್ಸೀಸ್)