

ಹುಣಸೂರು: ಶಿಕ್ಷಕರು ಬೋಧನೆಯಲ್ಲಿ ನಿರಂತರ ನಾವಿನ್ಯತೆ ಕಂಡುಕೊಳ್ಳುವ ಮೂಲಕ ಪ್ರಯೋಗಶೀಲ ಶಿಕ್ಷಕರಾಗಬೇಕಿದೆ ಎಂದು ಡಯೆಟ್ ಹಿರಿಯ ಉಪನ್ಯಾಸಕ ಚಂದ್ರಶೇಖರ್ ಅಭಿಪ್ರಾಯಪಟ್ಟರು.
ಬಿಳಿಕೆರೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ತಾಲೂಕಿಗೆ ನೂತನವಾಗಿ ಶಿಕ್ಷಕ ವೃತ್ತಿಗೆ ಬಂದಂತಹ 84 ಪ್ರಾಥಮಿಕ ಪದವೀಧರ ಶಾಲಾ ಶಿಕ್ಷಕರಿಗೆ ಆಯೋಜಿಸಿದ್ದ ಜು.29ರಿಂದ ಐದು ದಿನ ಹಮ್ಮಿಕೊಂಡಿರುವ ತಾಲೂಕು ಹಂತದ ಬುನಾದಿ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
ಉತ್ತಮ ಬೋಧನೆಗಾಗಿ ಪೂರ್ವ ಸಿದ್ಧತೆ ಮಾಡಿಕೊಂಡರೆ ಮಕ್ಕಳ ಕಲಿಕೆಗೆ ಉತ್ತಮ ವಾತಾವರಣ ರೂಪಿಸಿಕೊಡಲು ಸಾಧ್ಯವಾಗುತ್ತದೆ. ಇದಕ್ಕೆ ಶಿಕ್ಷಕರು ಪ್ರಯತ್ನಿಸಬೇಕು. ಇಲಾಖೆಯ ಬದಲಾದ ನಿಯಮಗಳನ್ನು ಅರಿತುಕೊಳ್ಳುವುದು ಅವಶ್ಯಕ ಎಂದರು.
ಕ್ಷೇತ್ರ ಸಮನ್ವಯಾಧಿಕಾರಿ ಕೆ.ಸಂತೋಷ್‌ಕುಮಾರ್ ಮಾತನಾಡಿ, ಪ್ರಸಕ್ತ ವರ್ಷದಲ್ಲಿ ನೂತನವಾಗಿ 84 ಪದವೀಧರ ಶಿಕ್ಷಕರು ನೇಮಕವಾಗಿದ್ದು, ಇಲಾಖೆಯ ರೂಪುರೇಷೆ, ಕಲಿಕಾ ಪ್ರಕ್ರಿಯೆ, ಬೋಧನಾ ವಿಧಾನ, ಸಮುದಾಯ ಮತ್ತು ಎಸ್‌ಡಿಎಂಸಿಯೊಂದಿಗಿನ ಸಂಬಂಧ, ವಿನೂತನ ಉಪಕ್ರಮಗಳು, ಬೋಧನೆಯಲ್ಲಿ ತಂತ್ರಜ್ಞಾನದ ಬಳಕೆ, ರಾಷ್ಟ್ರೀಯ ಶಿಕ್ಷಣ ನೀತಿ ಮುಂತಾದ ವಿಷಯಗಳ ಬಗ್ಗೆ ಮಾಹಿತಿ ನೀಡಲಾಗುವುದು ಎಂದರು.
ತರಬೇತಿ ಕಾರ್ಯಾಗಾರದಲ್ಲಿ ಉಪನ್ಯಾಸಕ ಧನಂಜಯ, ವಿವಿಧ ತಾಲೂಕಿನಿಂದ ಸಂಪನ್ಮೂಲ ವ್ಯಕ್ತಿಗಳು ಭಾಗವಹಿಸಿದ್ದರು.