

ಎನ್.ಆರ್.ಪುರ: ಇನ್ನರ್‌ವ್ಹೀಲ್ ಕ್ಲಬ್ ಪ್ರಾರಂಭಿಸಿದ ಮೂಡಬಾಗಿಲು ಬಸ್ ನಿಲ್ದಾಣ ನಿರ್ಮಾಣ ಕಾಮಗಾರಿಗೆ ಕರ್ಣಾಟಕ ಬ್ಯಾಂಕ್ ಸಹಾಯಹಸ್ತ ನೀಡಿದೆ ಎಂದು ಕರ್ಣಾಟಕ ಬ್ಯಾಂಕ್‌ನ ಶಿವಮೊಗ್ಗ ಪ್ರಾದೇಶಿಕ ಕಚೇರಿಯ ಅಸಿಸ್ಟಂಟ್ ಜನರಲ್ ಮ್ಯಾನೇಜರ್ ಎಚ್.ಕೆ.ನಾಗರಾಜ್ ತಿಳಿಸಿದರು.
ಗುರುವಾರ ತಾಲೂಕಿನ ಮೂಡಬಾಗಿಲಿನಲ್ಲಿ ಇನ್ನರ್‌ವ್ಹೀಲ್ ಕ್ಲಬ್ ನೇತೃತ್ವದಲ್ಲಿ ಕರ್ಣಾಟಕ ಬ್ಯಾಂಕ್‌ನ ಸಹಕಾರದೊಂದಿಗೆ ನೂತನವಾಗಿ ನಿರ್ಮಿಸಿದ ಬಸ್ ನಿಲ್ದಾಣ ಉದ್ಘಾಟಿಸಿ ಮಾತನಾಡಿ, ಕರ್ಣಾಟಕ ಬ್ಯಾಂಕ್ 100 ವಷರ್ ಪೂರೈಸಿದ್ದು ಮಲೆನಾಡು ಭಾಗದ ಶಾಲೆ, ದೇವಸ್ಥಾನ, ಕೆರೆ ದುರಸ್ತಿ, ಸೋಲಾರ್ ಸೇರಿದಂತೆ ಹಲವು ಯೋಜನೆಗಳಿಗೆ ಸಹಾಯಹಸ್ತ ಚಾಚಿದೆ. ಬ್ಯಾಂಕಿನ ವಹಿವಾಟು ಜತೆಗೆ ಸಮಾಜಮುಖಿ ಕಾರ್ಯ ಸಹ ಮಾಡುತ್ತಿದೆ. ಮುಂದಿನ ದಿನಗಳಲ್ಲೂ ಇನ್ನರ್‌ವ್ಹೀಲ್ ಕ್ಲಬ್‌ನ ಸಾಮಾಜಿಕ ಕಾರ್ಯಗಳಿಗೆ ಕರ್ಣಾಟಕ ಬ್ಯಾಂಕ್ ಕೈ ಜೋಡಿಸಲಿದೆ ಎಂದು ಭರವಸೆ ನೀಡಿದರು.
ಇನ್ನರ್ ವ್ಹೀಲ್ ಕಾರ್ಯದರ್ಶಿ ಶ್ಯಾಮಲಾ ಸತೀಶ್ ಮಾತನಾಡಿ, 2005ರಲ್ಲಿ ಪ್ರಾರಂಭವಾದ ಇನ್ನರ್‌ವ್ಹೀಲ್ ಸಂಸ್ಥೆ 19 ವರ್ಷ ಪೂರೈಸಿದೆ. ಇದೇ ಪ್ರಥಮ ಬಾರಿಗೆ ತಾಲೂಕಿನಲ್ಲಿ ಮಹಿಳಾ ಸಂಸ್ಥೆಯವರೇ ಬಸ್ ನಿಲ್ದಾಣ ನಿರ್ಮಿಸಿದ್ದಾರೆ. ಮೂಡಬಾಗಿಲಿನಲ್ಲಿ ಬಸ್‌ಗಳು ನಿಲ್ಲುತ್ತಿದ್ದರೂ ನಿಲ್ದಾಣ ಇರಲಿಲ್ಲ ಎಂದರು.
ಇನ್ನರ್‌ವ್ಹೀಲ್ ಸಂಸ್ಥೆ ಅಧ್ಯಕ್ಷೆ ರಶ್ಮಿ ದಯಾನಂದ್ ಮಾತನಾಡಿ, ಈ ಹಿಂದಿನಿಂದಲೂ ಸೇವಾ ಕಾರ್ಯ ಮಾಡುತ್ತಾ ಬಂದಿದೆ. ವಿಭಿನ್ನವಾದ ಯೋಜನೆ ಮಾಡುವ ಉದ್ದೇಶದಿಂದ ಮಹಿಳೆಯರೆಲ್ಲ ಸೇರಿ ನಿರ್ಮಿಸಿದ ಮೊದಲ ಬಸ್ ನಿಲ್ದಾಣ ಲೋಕಾರ್ಪಣೆಯಾಗಿದೆ ಎಂದು ಹೇಳಿದರು.
ಎನ್.ಆರ್.ಪುರ ಕರ್ಣಾಟಕ ಬ್ಯಾಂಕ್‌ನ ವ್ಯವಸ್ಥಾಪಕ ಸುದರ್ಶನ್ ಮಾತನಾಡಿ, ಕರ್ಣಾಟಕ ಬ್ಯಾಂಕ್ ಎನ್.ಆರ್.ಪುರ ತಾಲೂಕಿನ 2 ಬಸ್ ನಿಲ್ದಾಣಕ್ಕೆ ಸಹಕಾರ ನೀಡಿದೆ. ಸೌತಿಕೆರೆಯಲ್ಲಿ ಲಯನ್ಸ್ ಕ್ಲಬ್ ಕಟ್ಟಿಸಿದ ಬಸ್ ನಿಲ್ದಾಣಕ್ಕೂ ಕರ್ಣಾಟಕ ಬ್ಯಾಂಕ್ ಸಹಕಾರ ನೀಡಿತ್ತು ಎಂದು ತಿಳಿಸಿದರು. ಬಾಳೆ ಗ್ರಾಪಂ ಅಧ್ಯಕ್ಷೆ ರತ್ನಮ್ಮ, ರೋಟರಿ ಕ್ಲಬ್ ಅಧ್ಯಕ್ಷ ಕಿರಣ್, ಲಯನ್ಸ್ ಕ್ಲಬ್ ಅಧ್ಯಕ್ಷ ರವಿಚಂದ್ರ, ಜ್ವಾಲಾಮಾಲಿನಿ ಜೇಸಿ ಸಂಸ್ಥೆ ಅಧ್ಯಕ್ಷ ಎಂ.ಪಿ.ಮನು, ಚೈತ್ರಾ ರಮೇಶ್, ಶೀಲಾ ಸುಂದರೇಶ್, ನೀತಾ ಇದ್ದರು. ತಾಲೂಕಿನಲ್ಲಿ ಎಸ್.ಎಸ್.ಎಲ್.ಸಿ.ಯಲ್ಲಿ ಪ್ರಥಮ ಸ್ಥಾನ ಗಳಿಸಿದ ಅವನಿ ಎಂ.ಗೌಡ ಅವರನ್ನು ಸನ್ಮಾನಿಸಲಾಯಿತು.