

ಶಿಕಾರಿಪುರ: ಶುಂಠಿ ಪ್ರತಿ 60 ಕೆ.ಜಿ ಬ್ಯಾಗ್‌ಗೆ 2.5 ಕೆ.ಜಿ ಪೆಚ್ಚು ತೆಗೆಯುತ್ತಿರುವ ಖರೀದಿದಾರರ ಕ್ರಮ ಖಂಡಿಸಿ ಮತ್ತಿಕೋಟೆ ಗ್ರಾಮಸ್ಥರು ಹಾಗೂ ವಿವಿಧ ಸಂಘಟನೆಗಳ ಸದಸ್ಯರು ಪ್ರತಿಭಟನೆ ನಡೆಸಿ ತಹಸೀಲ್ದಾರ್ ಮಲ್ಲೇಶ್ ಪೂಜಾರ್ ಅವರಿಗೆ ಸೋಮವಾರ ಮನವಿ ಸಲ್ಲಿಸಿದರು.
ರೈತ ಪರಮೇಶ್ವರಪ್ಪ ಮಾತನಾಡಿ, ಈ ಬಾರಿ ಮುಂಗಾರು, ಹಿಂಗಾರು ಮಳೆ ಆರ್ಭಟದ ನಡುವೆ ಶುಂಠಿ ಉಳಿಸಿಕೊಳ್ಳುವುದು ಸಾಹಸದ ಕೆಲಸ. ರೈತರು ಖರ್ಚು ಮಾಡಿದ ಹಣ ಬರುತ್ತದೆಯೋ, ಇಲ್ಲವೋ ಎಂಬ ಆತಂಕದಲ್ಲಿದ್ದಾರೆ. ರೈತರು ಸಂಕಷ್ಟದಲ್ಲಿರುವಾಗ 60 ಕೆ.ಜಿ ಬ್ಯಾಗ್‌ಗೆ ಪೆಚ್ಚು ತೆಗೆಯುತ್ತಿದ್ದಾರೆ. ಇದರಿಂದ ರೈತರಿಗೆ ಬಹಳಷ್ಟು ಅನ್ಯಾಯವಾಗುತ್ತಿದೆ ಎಂದು ಅಳಲು ತೋಡಿಕೊಂಡರು.
ಕರವೇ (ಸ್ವಾಭಿಮಾನಿ ಬಣ) ತಾಲೂಕು ಗೌರವಾಧ್ಯಕ್ಷ ಶಿವಯ್ಯ ಶಾಸಿ ಮಾತನಾಡಿ, ಶುಂಠಿ ದರ ಏರಿಳಿತದಿಂದ ರೈತರು ಹೈರಾಣಾಗಿದ್ದಾರೆ. ದಶಕಗಳ ಕಾಲ ಕೇರಳದವರು ಶುಂಠಿ ಬೆಳೆದು ಭೂಮಿಯಲ್ಲಿ ಸಾರವಿಲ್ಲದಂತೆ ಮಾಡಿ ಹೋದರು. ಈಗ ವರ್ತಕರು ರೈತರಿಂದ ಖರೀದಿಸುವ ಶುಂಠಿಗೆ ಹೆಚ್ಚು ಪೆಚ್ಚು ತೆಗೆಯುತ್ತಿರುವುದರಿಂದ ರೈತರಿಗೆ ಅನ್ಯಾಯವಾಗುತ್ತಿದೆ ಎಂದರು.
ಶುಂಠಿ ಚೀಲದ ತೂಕ 900 ಗ್ರಾಂ ಇರುವುದರಿಂದ ಅಷ್ಟೇ ಪ್ರಮಾಣದ ಪೆಚ್ಚು ತೆಗೆಯಲಿ. ಆದರೆ 2.5 ಕೆ.ಜಿ ಪೆಚ್ಚು ತೆಗೆಯುವುದು ಸರಿಯಲ್ಲ. ರೈತರ ಹಿತದೃಷ್ಟಿಯಿಂದ ಪೆಚ್ಚು ತೆಗೆಯುವುದನ್ನು ವರ್ತಕರು ಕಡಿಮೆ ಮಾಡಬೇಕು. ತಹಸೀಲ್ದಾರ್ ಅವರು ರೈತರ ಸಂಕಷ್ಟಕ್ಕೆ ಸ್ಪಂದಿಸಿ ವರ್ತಕರನ್ನು, ಖರೀದಿದಾರರನ್ನು ಕರೆದು ಮಾತನಾಡಿ ರೈತರ ಸಮಸ್ಯೆ ಬಗೆಹರಿಸಬೇಕು ಎಂದು ಮನವಿ ಮಾಡಿದರು.
ಕರಿಯಪ್ಪ, ಬಸವರಾಜ್, ಮಲ್ಲೇಶಪ್ಪ, ವೀರಭದ್ರಪ್ಪ, ನಾಗರಾಜ್, ಕುಮಾರ, ಜಾಕೀರ್ ಸಾಬ್, ಸಿದ್ಲಿಂಗಪ್ಪ , ಆನಂದ್, ಮಣಿಕಂಠ, ಸುರೇಶ್, ಕೃಷ್ಣಪ್ಪ, ಅಶ್ವಿನ್, ವಿರೂಪಾಕ್ಷಪ್ಪ, ಜಯಪ್ಪ ಇತರರಿದ್ದರು.