

ಬೆಂಗಳೂರು: ಇನ್ಫೋಸಿಸ್ ಸೈನ್ಸ್ ಫೌಂಡೇಷನ್ 2023ನೇ ಸಾಲಿನ ‘ಇನ್ಫೋಸಿಸ್ ಪ್ರಶಸ್ತಿ’ ಪ್ರಕಟಿಸಿದ್ದು, ಭಾರತದಲ್ಲಿ ವೈಜ್ಞಾನಿಕ ಸಂಶೋಧನೆಗೆ ಗಮನಾರ್ಹ ಕೊಡುಗೆ ನೀಡಿರುವ ಆರು ಸಾಧಕರನ್ನು ಆಯ್ಕೆ ಮಾಡಿದೆ. ಚಿನ್ನದ ಪದಕ, ಪ್ರಶಂಸನಾ ಪತ್ರ ಹಾಗೂ ಒಂದು ಲಕ್ಷ ರೂ. ಅಮೆರಿಕನ್ ಡಾಲರ್ (ಅಂದಾಜು 80 ಲಕ್ಷ ರೂ.) ಅನ್ನು ಪ್ರಶಸ್ತಿ ಒಳಗೊಂಡಿದೆ.
ಕಾನ್ಪುರ ಐಐಟಿಯ ಪ್ರೊ. ಸಚ್ಚಿದಾನಂದ ತ್ರಿಪಾಠಿ (ಇಂಜಿನಿಯರಿಂಗ್ ಮತ್ತು ಕಂಪ್ಯೂಟರ್ ವಿಜ್ಞಾನ ವಿಭಾಗ) ಹಾಗೂ ಪ್ರೊ. ಅರುಣ್‌ಕುಮಾರ್ ಶುಕ್ಲಾ (ಜೀವ ವಿಜ್ಞಾನ ವಿಭಾಗ), ಬೆಂಗಳೂರಿನ ಸೈನ್ಸ್ ಗ್ಯಾಲರಿ ಸಂಸ್ಥಾಪಕ ನಿರ್ದೇಶಕಿ ಜಾಹ್ನವಿ ಫಾಲ್ಕೆ (ಮಾನವಿಕ ವಿಭಾಗ), ಪ್ರಿನ್ಸ್ ಟನ್ ವಿಶ್ವವಿದ್ಯಾಲಯದ ಪ್ರೊ.ಭಾರ್ಗವ್ ಭಟ್ (ಗಣಿತ ವಿಜ್ಞಾನ ವಿಭಾಗ), ಬೆಂಗಳೂರು ಮೂಲದ ಮತ್ತು ನ್ಯಾಷನಲ್ ಸೆಂಟರ್ ಫಾರ್ ಬಯೊಲಾಜಿಕಲ್ ಸೈನ್ಸ್‌ನ ಪ್ರೊ. ಮುಕುಂದ್ ಥಟ್ಟೆ (ಭೌತವಿಜ್ಞಾನ ವಿಭಾಗ) ಹಾಗೂ ಕೊಲಂಬಿಯಾ ವಿಶ್ವವಿದ್ಯಾಲಯ ರಾಜ್ಯಶಾಸ ವಿಭಾಗದ ಪ್ರೊ. ಕರುಣಾ ಮಂತೆನಾ (ಸಮಾಜ ವಿಜ್ಞಾನ ವಿಭಗ) ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಪ್ರಶಸ್ತಿಗಾಗಿ ನಾಮನಿರ್ದೇಶನಗೊಂಡಿದ್ದ 224 ಹೆಸರುಗಳ ಪೈಕಿ ವಿಶ್ವಖ್ಯಾತಿಯ ವಿದ್ವಾಂಸರು ಹಾಗೂ ಪರಿಣಿತರನ್ನು ಒಳಗೊಂಡಿದ್ದ ತೀರ್ಪುಗಾರರ ಅಂತಾರಾಷ್ಟ್ರೀಯ ಸಮಿತಿಯು ಆರು ಮಂದಿಯ ಹೆಸರನ್ನು ಅಂತಿಮಗೊಳಿಸಿದೆ. ಇನ್ಫೋಸಿಸ್ ಸೈನ್ಸ್ ಫೌಂಡೇಷನ್‌ನ ಟ್ರಸ್ಟಿಗಳಾದ ಕ್ರಿಸ್ ಗೋಪಾಲಕೃಷ್ಣನ್, ಎನ್.ಆರ್. ನಾರಾಯಣ ಮೂರ್ತಿ, ಶ್ರೀನಾಥ್ ಬಾಟ್ನಿ, ಕೆ. ದಿನೇಶ್, ಎಸ್.ಡಿ. ಶಿಬುಲಾಲ್, ನಂದನ್ ನಿಲೇಕಣಿ, ಮೋಹನ್‌ದಾಸ್ ಪೈ, ಸಲೀಲ್ ಪಾರೇಖ್ ಇತರರು ಪ್ರಶಸ್ತಿ ಪುರಸ್ಕೃತರನ್ನು ಅಭಿನಂದಿಸಿದ್ದಾರೆ.
ಇನ್ಫೋಸಿಸ್ ಸೈನ್ಸ್ ಫೌಂಡೇಷನ್ 2008ರಲ್ಲಿ ಆರಂಭಿಸಿದ ಇನ್ಫೋಸಿಸ್ ಪ್ರಶಸ್ತಿಯ ಮೂಲಕ ಜನಜೀವನದ ಎಲ್ಲ ಆಯಾಮಗಳಿಗೂ ಕೊಡುಗೆ ನೀಡಿರುವ ಅತ್ಯುತ್ತಮ ಸಂಶೋಧನೆ ಹಾಗೂ ಸಂಶೋಧಕರ ಪಾಂಡಿತ್ಯ ಗುರುತಿಸುವ ಕೆಲಸ ಮಾಡುತ್ತ ಬಂದಿದೆ. ಈ ಪ್ರಶಸ್ತಿಯು ವಿಜ್ಞಾನ ಮತ್ತು ಸಂಶೋಧನೆಯ ಕ್ಷೇತ್ರದ ಅತ್ಯುತ್ತಮ ಸಾಧನೆಗಳನ್ನು ಗುರುತಿಸುವಲ್ಲಿ ದೇಶದ ಅತಿದೊಡ್ಡ ಪ್ರಶಸ್ತಿ ಎಂಬ ಹೆಗ್ಗಳಿಕೆ ಪಡೆದುಕೊಂಡಿದೆ.