

ಹನಗೋಡು: ಚಾಲನಾ ಪರವಾನಗಿ, ಹೆಲ್ಮೆಟ್ ಇಲ್ಲದೆ ದ್ವಿಚಕ್ರ ವಾಹನ ಚಲಾಯಿಸುವಂತಿಲ್ಲ. ಸಂಚಾರ ನಿಯಮಗಳನ್ನು ಎಲ್ಲರೂ ಕಡ್ಡಾಯವಾಗಿ ಪಾಲಿಸುವಂತೆ ವಿದ್ಯಾರ್ಥಿಗಳಿಗೆ ಗ್ರಾಮಾಂತರ ಠಾಣೆ ಇನ್ಸ್‌ಪೆಕ್ಟರ್ ಎನ್.ಮುನಿಯಪ್ಪ ಸಲಹೆ ನೀಡಿದರು.
ಹನಗೋಡು ಹೋಬಳಿ ಗುರುಪುರ ಸರ್ಕಾರಿ ಪ್ರೌಢಶಾಲೆಯಲ್ಲಿ ಗ್ರಾಮಾಂತರ ಠಾಣೆ ವತಿಯಿಂದ ಆಯೋಜಿಸಿದ್ದ ಅಪರಾಧ ತಡೆ ಮಾಸಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 18 ವರ್ಷಕ್ಕಿಂತ ಮೊದಲು ವಿವಾಹವಾಗುವಂತಿಲ್ಲ. ಬಲವಂತದ ಮದುವೆ ನಿಶ್ಚಯಿಸಿದ್ದಲ್ಲಿ, ನಿಮ್ಮ ಗ್ರಾಮಗಳಲ್ಲಿ ಬಾಲ್ಯ ವಿವಾಹ ನಡೆದಲ್ಲಿ ಪೊಲೀಸರಿಗೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖಾಧಿಕಾರಿಗಳಿಗೆ ಮಾಹಿತಿ ನೀಡಬೇಕು ಎಂದು ಹೇಳಿದರು.
ವಿದ್ಯಾರ್ಥಿನಿಯರು, ಯುವತಿಯರು, ಮಹಿಳೆಯರನ್ನು ಚುಡಾಯಿಸಿದ್ದಲ್ಲಿ ಪೋಕ್ಸೋ ಕಾಯ್ದೆಯಡಿ ದೂರು ದಾಖಲಿಸಲಾಗುವುದು. ಒಬ್ಬಂಟಿ ಮಹಿಳೆಯರು ಅಪರಿಚಿತ ವ್ಯಕ್ತಿಗಳ ಬಗ್ಗೆ ಎಚ್ಚರಿಕೆ ವಹಿಸಿ. ವೃದ್ಧರ ಬಳಿ ಚಿನ್ನ ಪಾಲಿಶ್ ಮಾಡುವ ನೆಪದಲ್ಲಿ ಮೋಸ ಮಾಡುವವರ ಬಗ್ಗೆ ಎಚ್ಚರಿಕೆ ಇರಲಿ. ತುರ್ತು ಸಂದರ್ಭದಲ್ಲಿ ಸಹಾಯವಾಣಿ ಸಂಖ್ಯೆ 112 ಸಂಪರ್ಕಿಸುವಂತೆ ತಿಳಿಸಿದರು.
ಮುಖ್ಯ ಶಿಕ್ಷಕ ಎಚ್.ಎನ್.ಎಸ್.ಬೇಗ್, ಶಿಕ್ಷಕರಾದ ಲೀಲಾವತಿ, ಮಂಜುನಾಥ್, ಕುಮಾರ್, ಗ್ರಾಮಸ್ಥರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.