

ನವದೆಹಲಿ: ಹಣದುಬ್ಬರವು ಬಹುತೇಕ ಎಲ್ಲ ದೇಶಗಳು ಎದುರಿಸುತ್ತಿರುವ ಸಮಸ್ಯೆಯಾಗಿದ್ದು, ಯಾವುದೇ ಒಂದು ದೇಶ ಪ್ರತ್ಯೇಕವಾಗಿ ಇದನ್ನು ನಿಯಂತ್ರಿಸಲು ಸಾಧ್ಯವಿಲ್ಲ. ಈ ಸಮಸ್ಯೆ ನಿವಾರಣೆಗೆ ಜಾಗತಿಕ ಮಟ್ಟದ ಒಗ್ಗಟ್ಟಿನ ಪ್ರಯತ್ನ ಅಗತ್ಯ ಎಂದು ಕೇಂದ್ರ ವಿತ್ತ ಸಚಿವ ನಿರ್ಮಲಾ ಸೀತಾರಾಮನ್ ಪ್ರತಿಪಾದಿಸಿದ್ದಾರೆ.
ಕಾನ್ಪೆಡರೇಷನ್ ಆಫ್ ಇಂಡಿಯನ್ ಇಂಡಸ್ಟ್ರಿಯ (ಸಿಐಐ) ಜಾಗತಿಕ ಆರ್ಥಿಕ ನೀತಿ ವೇದಿಕೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಜಗತ್ತಿನ ವಿವಿಧೆಡೆ ನಡೆಯುತ್ತಿರುವ ಯುದ್ಧಗಳಿಂದಾಗಿ ವಸ್ತುಗಳ ಸರಬರಾಜು ಸರಪಳಿಯಲ್ಲಿ ವ್ಯತ್ಯಯವಾಗಿ ಹಣದುಬ್ಬರ ಜಾಸ್ತಿಯಾಗುತ್ತಿದೆ. ಯುದ್ಧಗಳನ್ನು ನಿಲ್ಲಿಸಿ ಶಾಂತಿ ಸ್ಥಾಪನೆ ಮಾಡಲು ಸರ್ಕಾರಗಳು, ಉದ್ಯಮಗಳು, ನೀತಿ ನಿರೂಪಕರು, ಸಾರ್ವಜನಿಕ ವೇದಿಕೆಗಳು ಸೇರಿದಂತೆ ಎಲ್ಲರೂ ಪ್ರಯತ್ನಿಸಬೇಕಾಗಿದೆ’ ಎಂದು ಹೇಳಿದರು.
‘ಕಳೆದ ಒಂದು ದಶಕದಲ್ಲಿ ಕಲಿತ ಜಾಗತಿಕ ಆರ್ಥಿಕ ಪಾಠಗಳನ್ನು ಆಧರಿಸಿ ಉದ್ಯಮ ತನ್ನನ್ನು ತಾನೇ ಮರುಹೊಂದಾಣಿಕೆ ಮಾಡಿಕೊಳ್ಳಬೇಕಾಗಿದೆ. ಭೌಗೋಳಿಕ ರಾಜಕೀಯ ಅಪಾಯಗಳು ಎದುರಾದರೂ ಸರಬರಾಜು ಸರಪಳಿಗೆ ತೊಂದರೆ ಆಗಬಾರದು. ಹಾಗೆ ಅದು ಬೇರೆ ಬೇರೆ ಪ್ರದೇಶಗಳನ್ನು ವ್ಯಾಪಿಸಿಕೊಳ್ಳುವಂತೆ ಮಾಡಬೇಕಾಗಿದೆ. ನಿರ್ಧಾರಗಳನ್ನು ಕೈಗೊಳ್ಳುವಾಗ ಉದ್ಯಮಿಗಳು ಆರ್ಥಿಕವಾಗಿ ಮಾತ್ರ ಯೋಚಿಸದೆ ಜಾಗತಿಕ ರಾಜಕೀಯ ಸ್ಥಿತಿ ಮತ್ತು ಅದರಿಂದ ಸರಬರಾಜು ಸರಪಳಿ ಮೇಲಾಗುವ ಪರಿಣಾಮವನ್ನೂ ಗಮನದಲ್ಲಿ ಇಟ್ಟುಕೊಂಡು ಯೋಚಿಸಬೇಕು’ ಎಂದು ಸಲಹೆ ನೀಡಿದರು.
‘ಮುಂದಿನ ಒಂದು ದಶಕದಲ್ಲಿ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಂದ ಬೆಂಬಲ ಪಡೆಯಲು ದೊಡ್ಡ ಉದ್ಯಮ ಸಂಸ್ಥೆಗಳು ಮುಂದಾಗಬೇಕು. ಇದರಿಂದ ಉದ್ಯೋಗ ಸೃಷ್ಟಿಯೂ ಹೆಚ್ಚಾಗುತ್ತದೆ. ರೈತರು ತಂತ್ರಜ್ಞಾನದ ಪ್ರಯೋಜನಗಳನ್ನು ಈಗಾಗಲೇ ಪಡೆಯುತ್ತಿದ್ದು, ಮುಂದಿನ ದಿನಗಳಲ್ಲಿ ‘ಅಗ್ರಿ ಸ್ಟ್ಯಾಕ್’ ಯೋಜನೆಯಿಂದಲೂ ಕೃಷಿಕರಿಗೆ ಹೆಚ್ಚು ಲಾಭವಾಗಲಿದೆ’ ಎಂದರು. ‘ಮುಂದಿನ ಪೀಳಿಗೆಗಳ ಮೇಲೆ ನಿರ್ವಹಿಸಲಾಗದಷ್ಟು ಸಾಲದ ಹೊರೆ ಹೊರಿಸಬಾರದೆಂಬ ಅರಿವು ಸರ್ಕಾರಕ್ಕಿದೆ. ಮುಂದಿನ ದಶಕದಲ್ಲಿ ಹಣಕಾಸಿನ ಉತ್ತಮ ನಿರ್ವಹಣೆ, ಆಸ್ತಿಗಳ ನಿರ್ಮಾಣ ಪ್ರಮುಖ ಆದ್ಯತೆಯಾಗಲಿದೆ’ ಎಂದು ವಿವರಿಸಿದರು.