

ಬಾಂಗ್ಲಾದೇಶದಿಂದ ಅಕ್ರಮವಾಗಿ ಭಾರತದೊಳಕ್ಕೆ ನುಸುಳಿ ಬಂದ ವಲಸಿಗರು ಹಲವಾರು ರಾಜ್ಯಗಳಲ್ಲಿ ನೆಲೆ ಕಂಡುಕೊಂಡಿರುವುದು ಗುಟ್ಟಿನ ವಿಷಯವೇನಲ್ಲ. ಪಶ್ಚಿಮ ಬಂಗಾಳ, ಕೇರಳ, ತಮಿಳುನಾಡು, ಮಹಾರಾಷ್ಟ್ರ ಮತ್ತು ಕರ್ನಾಟಕದಲ್ಲಿ ಬಾಂಗ್ಲಾ ಅಕ್ರಮ ನುಸುಳುಕೋರರು ವಾಸಿಸುತ್ತಿರುವುದನ್ನು ಕೇಂದ್ರ ಸರ್ಕಾರವೇ ಕೆಲವು ವರ್ಷಗಳ ಹಿಂದೆ ಆಯಾ ರಾಜ್ಯ ಸರ್ಕಾರಗಳಿಗೆ ತಿಳಿಸಿತ್ತು. ಅಂಥವರನ್ನು ಪತ್ತೆ ಹಚ್ಚಿ ಗಡಿಪಾರು ಮಾಡುವಂತೆಯೂ ಸೂಚಿಸಿತ್ತು.
ಕೇಂದ್ರದ ಆದೇಶದ ಪ್ರಕಾರ, ಕರ್ನಾಟಕ ಸರ್ಕಾರ ಕ್ರಮ ಕೈಗೊಳ್ಳುತ್ತಿರುವ ವಿಷಯವನ್ನು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರೇ ಸ್ವತಃ ವಿಧಾನಪರಿಷತ್ತಿನಲ್ಲಿ ಗುರುವಾರ ತಿಳಿಸಿದ್ದಾರೆ. ಕರ್ನಾಟಕದ ಪೊಲೀಸರು 2021ರಲ್ಲಿ 11 ಮಂದಿ, 2022ರಲ್ಲಿ 24 ಮಂದಿ ಹಾಗೂ 2023ರಲ್ಲಿ ಈವರೆಗೆ 37 ಮಂದಿ ಬಾಂಗ್ಲಾ ವಲಸಿಗರನ್ನು ಪತ್ತೆ ಮಾಡಿ ಗಡಿಪಾರು ಕ್ರಮಕ್ಕಾಗಿ ಬಿಎಸ್ಎಫ್ಗೆ
ಒಪ್ಪಿಸಿದ್ದಾರೆ. ಕಳೆದ 45 ದಿನಗಳಲ್ಲಿ 5,729 ಮನೆಗಳಿಗೆ ಭೇಟಿ ನೀಡಿ 28 ಹಾಟ್ಸ್ಪಾಟ್ಗಳನ್ನು ಗುರುತಿಸಿ, ನಿಗಾ ವಹಿಸುತ್ತಿದ್ದಾರೆ.
ಕಳೆದ ಸುಮಾರು ಮೂರು ವರ್ಷಗಳಲ್ಲಿ ಪೊಲೀಸರು ರಾಜ್ಯದಲ್ಲಿ ಪತ್ತೆ ಮಾಡಿರುವ ಅಕ್ರಮ ಬಾಂಗ್ಲಾ ವಲಸಿಗರ ಈ ಸಂಖ್ಯೆಯನ್ನು ನೋಡಿದರೆ ಅದು ಅತ್ಯಲ್ಪ ಎಂಬುದು ಮೇಲ್ನೋಟಕ್ಕೇ ಗೊತ್ತಾಗುತ್ತದೆ. ಹಲವಾರು ವರ್ಷಗಳಿಂದ ಈ ವಲಸಿಗರು ಅರ್ಥಾತ್ ನುಸುಳುಕೋರರು ದೊಡ್ಡ ಸಂಖ್ಯೆಯಲ್ಲಿ ವಿವಿಧ ರಾಜ್ಯಗಳಲ್ಲಿ ವಾಸಿಸುತ್ತಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಆಧಾರ್, ಪಾನ್ ಕಾರ್ಡ್, ಮತದಾರರ ಗುರುತಿನ ಚೀಟಿ ಮುಂತಾದ ಅಧಿಕೃತ ದಾಖಲೆಗಳನ್ನು ಮಾಡಿಸಿಕೊಂಡು ಅವರೆಲ್ಲ ಈಗ ಸ್ಥಳೀಯರಂತೆಯೇ ಆಗಿಬಿಟ್ಟಿದ್ದಾರೆ. ಆ ಪೈಕಿ ಕೆಲವರು ಇಲ್ಲಿನ ದಾಖಲೆಗಳನ್ನು ಬಳಸಿಕೊಂಡು ವಿದೇಶಗಳಿಗೆ ಹೋಗಿ ಉದ್ಯೋಗ ಮಾಡುತ್ತಿರುವ ಅಂಶವೂ ಈ ಹಿಂದೆ ಬೆಳಕಿಗೆ ಬಂದಿತ್ತು.
ಈ ವಿಷಯದಲ್ಲಿ ಇಷ್ಟೆಲ್ಲ ಒಳಸುಳಿಗಳು ಇರುವಾಗ, ಈಗ ಇಲ್ಲಿ ವಾಸಿಸುತ್ತಿರುವವರ ಪೈಕಿ ಅಕ್ರಮ ನುಸುಳುಕೋರರು ಯಾರು ಎಂಬುದನ್ನು ಪತ್ತೆ ಮಾಡುವುದೇ ದೊಡ್ಡ ಸಾಹಸವಾಗಿದೆ. ಒಂದು ಅಂದಾಜಿನ ಪ್ರಕಾರ, ಸುಮಾರು 2 ಕೋಟಿ ಬಾಂಗ್ಲಾದೇಶಿ ಅಕ್ರಮ ನುಸುಳುಕೋರರು ಭಾರತದಲ್ಲಿ ವಾಸಿಸುತ್ತಿದ್ದಾರೆ ಎಂದು ಕೇಂದ್ರ ಸರ್ಕಾರವೇ ಹಿಂದೊಮ್ಮೆ ಅಧಿಕೃತವಾಗಿ ಹೇಳಿತ್ತು. ಅವರೆಲ್ಲರಿಗೂ ಭಾರತದ ಬಗ್ಗೆ ನಿಷ್ಠೆ ಇರುತ್ತದೆ ಎಂದು ಅಪೇಕ್ಷಿಸುವುದು ಕಷ್ಟವೇ. ಆ ಪೈಕಿ ಯಾರಾದರೂ ಭಯೋತ್ಪಾದಕ ಕೃತ್ಯಗಳಲ್ಲಿ ಅಥವಾ ಬೇರೆ ಗಂಭೀರ ಅಪರಾಧ ಪ್ರಕರಣಗಳಲ್ಲಿ ಸಿಕ್ಕಿಬಿದ್ದಾಗ ಮಾತ್ರ ಈ ವಿಷಯ ಚರ್ಚೆಗೆ ಬರುತ್ತದೆ. ಆಗ ಸರ್ಕಾರ ಅಂಥ ಎಲ್ಲ ಜನರನ್ನು ಪತ್ತೆ ಹಚ್ಚಿ ಕ್ರಮ ಕೈಗೊಳ್ಳುವುದಾಗಿ ಹೇಳಿ, ನಂತರ ಮರೆತುಬಿಡುತ್ತದೆ. ಇದರ ಬದಲು ಅಸ್ಸಾಂ, ಪಶ್ಚಿಮಬಂಗಾಳದಂತಹ ಗಡಿ ರಾಜ್ಯಗಳ ಮೂಲಕ ಬಾಂಗ್ಲಾದೇಶೀಯರು ನುಸುಳದಂತೆ ಎಚ್ಚರ ವಹಿಸಿದರೆ, ಇತರ ರಾಜ್ಯಗಳ ಸಮಸ್ಯೆಯನ್ನು ತಪ್ಪಿಸಲು ಸಾಧ್ಯವಾಗುತ್ತದೆ.
ಈ ದಿಸೆಯಲ್ಲಿ ಆಯಾ ರಾಜ್ಯ ಸರ್ಕಾರಗಳು ಮತ್ತು ಕೇಂದ್ರ ಸರ್ಕಾರ ಗಮನ ಹರಿಸುವುದು ಸೂಕ್ತ. ಈಗಾಗಲೇ ಬಂದು ನೆಲೆಸಿರುವವರ ಪತ್ತೆ ಕಾರ್ಯವನ್ನು ರಾಜ್ಯ ಪೊಲೀಸರು ಕಾಟಾಚಾರಕ್ಕೆಂಬಂತೆ ಮಾಡದೇ, ಸಮರೋಪಾದಿಯಲ್ಲಿ ಪತ್ತೆ ಹಚ್ಚಿ ಗಡಿಪಾರಿಗೆ ಕ್ರಮ ಕೈಗೊಳ್ಳುವುದು ಒಳಿತು.