ಅವಳು ಕೊಟ್ಟ ನಾಟಿ ಚಿಕಿತ್ಸೆಗೆ ಮೂರು ತಿಂಗಳ ಮಗುವೇ ಬಲಿಯಾಯ್ತು!

Infant
Published on

ಭೋಪಾಲ್​: ಇಲ್ಲೊಬ್ಬಳ ಚಿಕಿತ್ಸೆಯಿಂದಾಗಿ ಮೂರು ತಿಂಗಳ ಮಗು ಅನ್ಯಾಯವಾಗಿ ಪ್ರಾಣ ಕಳೆದುಕೊಂಡಂತಾಗಿದೆ. ಒತ್ತಾಯಪೂರ್ವಕವಾಗಿ ಇಂಥದ್ದೊಂದು ಚಿಕಿತ್ಸೆ ನೀಡಿದ್ದ ಮನೆಯವರು ಈಗ ಮಗುವನ್ನು ಕಳೆದುಕೊಂಡು ಪರಿತಪಿಸುವಂತಾಗಿದೆ. ಮಧ್ಯಪ್ರದೇಶದಲ್ಲಿ ಈ ಪ್ರಕರಣ ನಡೆದಿದೆ.

ಇಲ್ಲಿನ ಶಹದೊಲ್ ಜಿಲ್ಲೆಯ ರೋಶ್ನಿ ಕಾಲ್ ಎಂಬಾಕೆಯ ಮೂರು ತಿಂಗಳ ಪುತ್ರಿ ಸಾವಿಗೀಡಾದ ಮಗು. ನ್ಯುಮೋನಿಯಾದಿಂದ ಬಳಲುತ್ತಿದ್ದ ಮಗುವಿಗೆ ಚಿಕಿತ್ಸೆ ನೀಡುವುದಾಗಿ ಮಹಿಳೆಯೊಬ್ಬಳು ಅನುಸರಿಸಿದ ವಿಧಾನ ಕೊನೆಗೆ ಮಗುವನ್ನೇ ಬಲಿ ಪಡೆದಂತಾಗಿದೆ.

ನಾನು ಈ ಚಿಕಿತ್ಸೆಗೆ ಆಕ್ಷೇಪ ವ್ಯಕ್ತಪಡಿಸಿದ್ದೆ. ಆದರೆ ಮನೆಯವರ ಒತ್ತಾಯಕ್ಕಾಗಿ ಒಪ್ಪಿಕೊಂಡೆ. ಮಗುವಿನ ಅನಾರೋಗ್ಯ ಗುಣವಾಗಲು ಇದೊಂದೇ ಮಾರ್ಗ ಎಂದು ಮನೆಯವರು ಹೇಳಿದ್ದರಿಂದ ಈ ಚಿಕಿತ್ಸೆ ಕೊಡಿಸಿದೆ ಎಂದ ತಾಯಿ, ಏನು ನಡೆಯಿತು ಎಂಬುದನ್ನು ಹೇಳಿಕೊಂಡಿದ್ದಾರೆ.

ಮಗು ನ್ಯುಮೋನಿಯಾದಿಂದ ಬಳಲುತ್ತಿತ್ತು, ಮನೆಯವರ ಸೂಚನೆಯಂತೆ ಈ ಮಹಿಳೆಯ ಬಳಿ ಚಿಕಿತ್ಸೆಗೆ ಬಂದಿದ್ದೆ. ಈಕೆ ಬಿಸಿಯಾದ ತಂತಿಯಿಂದ ಮಗುವಿನ ಹೊಟ್ಟೆ 51 ಸಲ ಚುಚ್ಚಿದ್ದು, ಬಳಿಕ ಮಗುವಿನ ಆರೋಗ್ಯ ಪರಿಸ್ಥಿತಿ ಹದಗೆಟ್ಟಿತ್ತು. ಕೂಡಲೇ ಮಗುವನ್ನು ಶಹದೊಲ್​ ಮೆಡಿಕಲ್ ಕಾಲೇಜಿಗೆ ದಾಖಲಿಸಿದ್ದೆ.

ಮಧ್ಯಪ್ರದೇಶದ ಹಲವೆಡೆ ನ್ಯುಮೋನಿಯಾದಿಂದ ಬಳಲುವ ಮಕ್ಕಳಿಗೆ ಬಿಸಿಯಾದ ತಂತಿ ಚುಚ್ಚಿ ಚಿಕಿತ್ಸೆ ನೀಡುವ ಪದ್ಧತಿ ಇದೆ. ಅದಾಗ್ಯೂ ಮಗು ಸಾವಿಗೀಡಾಗುವ ರೀತಿಯಲ್ಲಿ ಈ ರೀತಿ ಚಿಕಿತ್ಸೆ ನೀಡಿದ ಮಹಿಳೆ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net