ಗೆಳೆಯನ ಕೊಂದು ಶವ ಎಸೆಯುವಾಗ ತಾನೂ ಪ್ರಪಾತಕ್ಕೆ ಬಿದ್ದು ಹೆಣವಾದ!

Photo
Published on

ಮುಂಬೈ: ಇದೊಂಥ ಮಾಡಿದ್ದುಣ್ಣೋ ಮಹಾರಾಯ ಎಂಬಂಥ ಘಟನೆ. ಇಲ್ಲೊಬ್ಬ ತನ್ನ ಗೆಳೆಯನನ್ನು ಕೊಂದು ಆತನ ಶವವನ್ನು ಎಸೆಯಲು ಹೋಗಿದ್ದಾಗ ಆಯತಪ್ಪಿ ಬಿದ್ದು ತಾನೂ ಹೆಣವಾಗಿ ಹೋಗಿದ್ದಾನೆ. ಕೊಲ್ಹಾಪುರ-ಸಾವಂತಾಡಿ ಮಾರ್ಗದಲ್ಲಿನ ಅಂಬೋಲಿ ಘಾಟ್​ನಲ್ಲಿ ಈ ಘಟನೆ ನಡೆದಿದೆ.

ಮಹಾರಾಷ್ಟ್ರದ ಸತಾರಾ ಜಿಲ್ಲೆಯ ಕರದ್ ಎಂಬಲ್ಲಿನ ನಿವಾಸಿ ಭೌಸೊ ಮಾನೆ ಬಿದ್ದು ಸಾವಿಗೀಡಾದ ಕೊಲೆಗಾರ. ಸುಶಾಂತ್ ಖಿಲ್ಲಾರೆ ಎಂಬಾತ ಈತನಿಂದ ಕೊಲೆಗೀಡಾದ ಸ್ನೇಹಿತ. ಹಣದ ವಿಚಾರವಾಗಿ ಇಬ್ಬರ ಮಧ್ಯೆ ಗಲಾಟೆಯಾಗಿದ್ದು, ಕೊನೆಗೆ ಇಬ್ಬರೂ ಸಾವಿಗೀಡಾದರು. ಈ ಕೊಲೆಗೆ ತುಷಾರ್ ಪವಾರ್ ಎಂಬಾತ ಮಾನೆಗೆ ಸಹಕರಿಸಿದ್ದ.

ಸುಶಾಂತ್ ಕೂಡ ಕರದ್ ನಿವಾಸಿಯಾಗಿದ್ದು, ಭಾನುವಾರ ಹಣದ ವಿಚಾರವಾಗಿ ಇಬ್ಬರ ಮಧ್ಯೆ ಜಗಳವಾಗಿತ್ತು. ಇದು ಸುಶಾಂತ್​ನ ಕೊಲೆಯಲ್ಲಿ ಕೊನೆಯಾಗಿದ್ದು, ಬಳಿಕ ಆತನ ಶವವನ್ನು ಅಂಬೋಲಿ ಘಾಟ್​ನಲ್ಲಿ ಎಸೆದು ಕೊಲೆ ಪ್ರಕರಣ ಮುಚ್ಚಿಡುವ ಪ್ಲ್ಯಾನ್ ಮಾಡಲಾಗಿತ್ತು.

ಹೀಗಾಗಿ ಮಾನೆ ಮತ್ತು ಪವಾರ್ ಇಬ್ಬರೂ ಸುಮಾರು 400 ಕಿ.ಮೀ. ಪ್ರಯಾಣಿಸಿ ಅಂಬೋಲಿ ಘಾಟ್​ಗೆ ಬಂದಿದ್ದರು. ಇಲ್ಲಿ ಶವವನ್ನು ಎಸೆಯುವಾಗ ಮಾನೆ ಆಯತಪ್ಪಿ ತಾನೂ ಘಾಟ್​ನಿಂದ 150 ಅಡಿ ಪ್ರಪಾತಕ್ಕೆ ಬಿದ್ದು ಸಾವಿಗೀಡಾಗಿದ್ದ. ಇದರಲ್ಲಿ ಪವಾರ್ ಪವಾಡಸದೃಶವಾಗಿ ಪಾರಾಗಿದ್ದು, ಭಯಗೊಂಡು ಅಲ್ಲಿಂದ ಕಾಲ್ಕಿತ್ತಿದ್ದ. ಸತ್ತವರಿಬ್ಬರ ಶವವೂ ಹತ್ತು ಅಡಿ ಅಂತರದಲ್ಲಿ ಬಿದ್ದಿದ್ದವು.

ಪವಾರ್ ಸಮೀಪದ ದೇವಸ್ಥಾನದ ಬಳಿಗೆ ತೆರಳಿ, ಅಲ್ಲಿಂದ ತನ್ನ ಕುಟುಂಬಸ್ಥರಿಗೆ ಕರೆ ಮಾಡಿ ತಮ್ಮ ತಪ್ಪಿನ ಬಗ್ಗೆ ಹೇಳಿಕೊಂಡಿದ್ದ. ಮಂಗಳವಾರ ಸ್ಥಳೀಯರು ಶವ ಕಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾಗ ಈ ಕೊಲೆ ಪ್ರಕರಣ ಬೆಳಕಿಗೆ ಬಂದಿತ್ತು. ಅಂಬೋಲಿ ಘಾಟ್​​ನಲ್ಲಿ ಶವ ಎಸೆಯುವ ಪ್ರಕರಣಗಳು ಹೆಚ್ಚಾಗಿದ್ದರಿಂದ ಸಿಸಿಟಿವಿ ಅಳವಡಿಸಲಾಗಿದ್ದು, ಪೊಲೀಸರು ಸಿಸಿಟಿವಿ ಕ್ಲಿಪ್ಪಿಂಗ್ ಆಧರಿಸಿ ಪ್ರಕರಣದ ದಾಖಲಿಸಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net