ಸರಹದ್ದನ್ನು ಕಟ್ಟುನಿಟ್ಟಾಗಿ ಗೌರವಿಸಿ: ಚೀನಾವನ್ನು ಎಚ್ಚರಿಸಿದ ಭಾರತ

caricature china
Published on

ನವದೆಹಲಿ: ಪೂರ್ವ ಲಡಾಖ್​ನ ಗಲ್ವಾನ್ ಕಣಿವೆಯಲ್ಲಿ ನಡೆದ ಸಂಘರ್ಷದ ಹಿನ್ನೆಲೆ ಉಂಟಾಗಿರುವ ಉದ್ವಿಗ್ನ ಸ್ಥಿತಿ ತಿಳಿಗೊಳಿಸಲು ಉಭಯ ದೇಶಗಳ ರಾಜತಾಂತ್ರಿಕ ಅಧಿಕಾರಿಗಳ ಮಟ್ಟ ಮಾತುಕತೆ ಬುಧವಾರ ನಡೆಯಿತು. ಈ ವೇಳೆ ಗಲ್ವಾನ್ ಕಣಿವೆಯಲ್ಲಿ ನಡೆದ ಸಂಘರ್ಷದ ಬಗ್ಗೆ ಭಾರತ ಹೆಚ್ಚು ಕಳವಳ ವ್ಯಕ್ತಪಡಿಸಿದ ಭಾರತ, ವಾಸ್ತವ ಗಡಿ ನಿಯಂತ್ರಣ ರೇಖೆ (ಎಲ್​ಎಸಿ)ಯನ್ನು ಕಟ್ಟುನಿಟ್ಟಾಗಿ ಗೌರವಿಸಬೇಕು ಎಂದು ಚೀನಾಗೆ ಒತ್ತಿ ಹೇಳಿದೆ. ಜತೆಗೆ ಉಂಟಾಗಿರುವ ಪರಿಸ್ಥಿತಿಯನ್ನು ಶಾಂತಿಯುತವಾಗಿ ಪರಿಹರಿಸಲು ರಾಜತಾಂತ್ರಿಕ ಮತ್ತು ಮಿಲಿಟರಿ ಮಟ್ಟ ಮಾತುಕತೆ ಮುಂದುವರಿಸಲು ಎರಡೂ ಕಡೆಯವರು ಒಪ್ಪಿದ್ದಾರೆ ಎಂದು ವಿದೇಶಾಂಗ ಸಚಿವಾಲಯ ಮಾಹಿತಿ ನೀಡಿದೆ.

ಭಾರತ ವಿದೇಶಾಂಗ ಸಚಿವಾಲಯದ ಜಂಟಿ ಕಾರ್ಯದರ್ಶಿ (ಪೂರ್ವ ಏಷ್ಯಾ) ನವೀನ್ ಶ್ರೀವಾತ್ಸವ್ ಮತ್ತು ಚೀನಾದ ವಿದೇಶಾಂಗ ಸಚಿವಾಲಯದ ವೂ ಜಿಯಾಂಗ್ ಹಾವೊ ಮಧ್ಯೆ ವಿಡಿಯೋ ಕಾನ್ಪರೆನ್ಸ್ ಮೂಲಕ ಈ ಮಾತುಕತೆ ನಡೆದಿದೆ. ಇದಕ್ಕೂ ಮೊದಲು ಜೂನ್ 5ರಂದು ಇವರಿಬ್ಬರ ನಡುವೆ ಮೊದಲ ಸುತ್ತಿನ ಮಾತುಕತೆ ನಡೆದಿತ್ತು. ದ್ವಿಪಕ್ಷೀಯ ಒಪ್ಪಂದಗಳು ಮತ್ತು ನಿಯಮಾವಳಿಗಳಿಗೆ ಅನುಗುಣವಾಗಿರುವುದು ಗಡಿ ಪ್ರದೇಶಗಳಲ್ಲಿ ಶಾಂತಿ ಮತ್ತು ನೆಮ್ಮದಿ ಮತ್ತು ವಿಶಾಲ ಸಂಬಂಧಗಳ ಅಭಿವೃದ್ಧಿಗೆ ಸಹಾಯ ಮಾಡುತ್ತದೆ ಎಂಬ ಒಮ್ಮತಕ್ಕೆ ಎರಡೂ ದೇಶಗಳು ಸಮ್ಮತಿ ಸೂಚಿಸಿವೆ ಎಂದು ತಿಳಿದುಬಂದಿದೆ. ಈ ನಡುವೆ ರಷ್ಯಾ ಪ್ರವಾಸದಲ್ಲಿರುವ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಕೂಡ ಚೀನಾ ರಕ್ಷಣಾ ಸಚಿವರ ಜತೆ ಮಾತುಕತೆ ನಡೆಸಲಿದ್ದಾರೆ ಎನ್ನಲಾಗಿತ್ತು. ಆದರೆ ಭಾರತ ಈ ವರದಿಯನ್ನು ಭಾರತ ತಿರಸ್ಕರಿಸಿದೆ.

ಲಡಾಖ್ ಮುಂಚೂಣಿ ನೆಲೆಗಳಿಗೆ ನರಾವಣೆ ಭೇಟಿ

ಸೇನಾ ಮುಖ್ಯಸ್ಥ ಮನೋಜ್ ಮುಕುಂದ್ ನರಾವಣೆ ಪೂರ್ವ ಲಡಾಖ್​ನ ಮುಂಚೂಣಿ ನೆಲೆಗಳಿಗೆ ಬುಧವಾರ ಭೇಟಿ ನೀಡಿ ಗಡಿಯಲ್ಲಿನ ಪರಿಸ್ಥಿತಿ ಹಾಗೂ ಘರ್ಷಣೆ ಸಂಬಂಧ ಉಂಟಾಗಿರುವ ಉದ್ವಿಗ್ನ ಪರಿಸ್ಥತಿ ಶಮನಕ್ಕೆ ನಡೆಯುತ್ತಿರುವ ಪ್ರಕ್ರಿಯೆಗಳನ್ನು ಪರಿಶೀಲಿಸಿದರು. ಜತೆಗೆ ಸೈನಿಕರ ಮಾತುಕತೆ ನಡೆಸಿ, ಅವರನ್ನು ಹುರಿದುಂಬಿಸಿದರು. ಗಲ್ವಾನ್ ಕಣಿವೆಯಲ್ಲಿ ಘರ್ಷಣೆಯಲ್ಲಿ ಹೋರಾಡಿದ ಯೋಧರಿಗೆ ಸೇನಾ ಮುಖ್ಯಸ್ಥ ನರಾವಣೆ ಪ್ರಶಂಸಾ ಪತ್ರವನ್ನೂ ವಿತರಿಸಿದರು. ಗಲ್ವಾನ್ ಸಂಘರ್ಷದ ಬಳಿಕವೂ ಚೀನಾ ಸೇನೆ ಗಡಿಯಲ್ಲೇ ವಾಸ್ತವ್ಯ ಹೂಡಿರುವುದರಿಂದಾಗಿ ಭಾರತೀಯ ವಾಯು ಪಡೆಯ ಯುದ್ಧ ವಿಮಾನಗಳು ವಿವಾದಿತ ಪ್ರದೇಶದ ಬಳಿ ಬುಧವಾರ ಹಾರಾಟ ನಡೆಸಿ ಶಕ್ತಿ ಪ್ರದರ್ಶಿಸಿವೆ.

ಎಲ್​ಎಸಿ ಬಳಿಯಲ್ಲೇ ಇದೆ ಚೀನಿ ಸೇನೆ!

ಲಡಾಖ್​ನಲ್ಲಿ ಎಲ್​ಎಸಿ ಉದ್ದಕ್ಕೂ ಸಂಘರ್ಷ ನಡೆಯುವ ಸ್ಥಳಗಳಿಂದ ಸೇನೆ ಹಿಂಪಡೆಯಲು ಉಭಯ ದೇಶಗಳ ಲೆಫ್ಟಿನಂಟ್ ಜನರಲ್ ಮಟ್ಟ ಸಭೆಯಲ್ಲಿ ಒಮ್ಮತದ ನಿರ್ಧಾರ ಕೈಗೊಂಡ ಬೆನ್ನಲ್ಲೇ ಗಡಿಯ ಬಳಿ ವಾಸ್ತವ್ಯ ಹೂಡಿರುವ ಚೀನಾ ಸೈನಿಕರ ಉಪಗ್ರಹ ಆಧಾರಿತ ಚಿತ್ರದಲ್ಲಿ ಸ್ಪಷ್ಟವಾಗಿ ದಾಖಲಾಗಿದೆ. ಗಲ್ವಾನ್ ನದಿ ತೀರದ ಗಸ್ತು ಪಾಯಿಂಟ್ 14ರಲ್ಲಿದ್ದ ಟೆಂಟ್​ಗಳ ರೀತಿಯ ರಚನೆಗಳು ಗಡಿಗುಂಟ ಅಲ್ಲಲ್ಲಿ ಕಂಡುಬಂದಿವೆ. ಇದೇ ಸ್ಥಳದ ಮೇ 22ರ ಚಿತ್ರದಲ್ಲಿ ಕೇವಲ ಒಂದು ಟೆಂಟ್ ಮಾತ್ರ ಗೋಚರಿಸಿತ್ತು. ಆದರೆ ಇತ್ತೀಚಿನ ಚಿತ್ರದಲ್ಲಿ ಚೀನಾ ಗಡಿಯಲ್ಲಿ ಟೆಂಟ್​ಗಳು ಹಾಗೂ ಸೈನಿಕರ ವಸತಿ ಸೌಕರ್ಯಗಳನ್ನು ಹೆಚ್ಚಿಸಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ.

ಭಾರತದ ಏಕಪಕ್ಷೀಯ ನಿರ್ಧಾರದಿಂದ ಸಂಘರ್ಷ: ಪೂರ್ವ ಲಡಾಖ್​ನ ಗಲ್ವಾನ್ ಕಣಿವೆಯಲ್ಲಿ ನಡೆದ ಘರ್ಷಣೆಗೆ ಭಾರತದ ಏಕಪಕ್ಷೀಯ ನಿರ್ಧಾರಗಳೇ ಕಾರಣ ಎಂದು ಚೀನಾದ ರಕ್ಷಣಾ ಸಚಿವಾಲಯ ಹೊಸದಾಗಿ ಕ್ಯಾತೆ ತೆಗೆದಿದೆ. ಉಭಯ ದೇಶಗಳ ಒಪ್ಪಂದವನ್ನು ಭಾರತೀಯ ಪಡೆ ಉಲ್ಲಂಘಿಸಿದೆ ಎಂದು ಆರೋಪಿಸಿದೆ. ಜೂ.15ರಂದು ನಡೆದ ಸಂಘರ್ಷದಲ್ಲಿ ಚೀನಾದ 40ಕ್ಕೂ ಹೆಚ್ಚು ಯೋಧರು ಸಾವನ್ನಪ್ಪಿದ್ದಾರೆ ಎಂಬ ವರದಿಗಳು ಸುಳ್ಳು ಎಂದೂ ಹೇಳಿದೆ. ಘರ್ಷಣೆಯಲ್ಲಿ ಭಾರತೀಯ ಪಡೆಯ ಓರ್ವ ಕರ್ನಲ್ ಸೇರಿ 20 ಯೋಧರು ಮೃತಪಟ್ಟಿದ್ದು, ಚೀನಾದ ಕಡೆಯಲ್ಲೂ ಓರ್ವ ಅಧಿಕಾರಿ ಸೇರಿ ಸುಮಾರು 40ಕ್ಕೂ ಹೆಚ್ಚು ಯೋಧರು ಸತ್ತಿರಬಹುದು ಎಂದು ಮೂಲಗಳು ಮಾಹಿತಿ ನೀಡಿದ್ದವು. ಆದರೆ, ಚೀನಾ ಅಧಿಕೃತವಾಗಿ ಸಾವು-ನೋವಿನ ಮಾಹಿತಿ ನೀಡಿಲ್ಲ. ಅಮೆರಿಕ ಗುಪ್ತಚರ ಸಂಸ್ಥೆ ಚೀನಾದ 35 ಯೋಧರು ಮರಣಿಸಿದ್ದಾರೆಂದು ಹೇಳಿತ್ತು.

ಚೀನಾ ಸರಕಿನಲ್ಲಿ ಬರುತ್ತಿದೆ ಮಾಲ್ವೇರ್!: ಚೀನಾ ಹಾಗೂ ಇತರ ದೇಶಗಳಿಂದ ಆಮದು ಮಾಡಿಕೊಳ್ಳಲಾಗುತ್ತಿರುವ ಎಲೆಕ್ಟ್ರಿಕಲ್ ಉತ್ಪನ್ನಗಳಲ್ಲಿ ರಹಸ್ಯವಾಗಿ ಮಾಲ್ವೇರ್ (ಕುತಂತ್ರಾಂಶ) ಅಳವಡಿಸಿರಬಹುದು ಎಂದು ಭಾರತ ಕಳವಳಗೊಂಡಿದೆ. ಈ ಹಿನ್ನೆಲೆ ಚೀನಾ ಮತ್ತು ಇತರ ದೇಶಗಳಿಂದ ಎಲೆಕ್ಟ್ರಿಕಲ್ ಉತ್ಪನ್ನಗಳ ಆಮದಿನ ಮೇಲೆ ನಿರ್ಬಂಧ ವಿಧಿಸಲು ಚಿಂತನೆ ನಡೆಸಿದೆ. ಜತೆಗೆ ಈಗಾಗಲೇ ಆಮದು ಮಾಡಿಕೊಳ್ಳಲಾದ ವಸ್ತುಗಳನ್ನೂ ಭದ್ರತಾ ಪರೀಕ್ಷೆಗೆ ಒಳಪಡಿಸಲು ಮುಂದಾಗಿದೆ ಎಂದು ತಿಳಿದುಬಂದಿದೆ.

ಹ್ಯಾಕರ್​ಗಳು ಮೊಬೈಲ್, ಕಂಪ್ಯೂಟರ್ ಲ್ಯಾಪ್​ಟಾಪ್​ಗಳಲ್ಲಿ ಲಿಂಕ್​ಗಳ ಮೂಲಕ ಮಾಲ್ವೇರ್ ಕಳುಹಿಸಿ ಅವುಗಳಲ್ಲಿನ ಮಾಹಿತಿಗಳನ್ನು ಕದಿಯುತ್ತಾರೆ. ಈ ರೀತಿಯ ಮಾಲ್ವೇರ್​ಗಳನ್ನು ಎಲೆಕ್ಟ್ರಿಕಲ್ ಉತ್ಪನ್ನಗಳ ಮೂಲಕವೂ ರವಾನಿಸಲಾಗುತ್ತಿದೆ ಎಂಬ ಅನುಮಾನ ವ್ಯಕ್ತವಾಗಿದೆ. ಹೀಗಾಗಿ ಇನ್ನು ಎರಡು ಮೂರು ವರ್ಷಗಳವರೆಗೆ ಅವಶ್ಯಕ ವಸ್ತುಗಳ ಆಮದಿಗೆ ಮಾತ್ರ ಅನುಮತಿ ನೀಡಲು ಸರ್ಕಾರ ಚಿಂತನೆ ನಡೆಸಿದೆ. ಜತೆಗೆ ಇದೇ ಅವಧಿಯಲ್ಲಿ ಇತರ ದೇಶಗಳ ಮೇಲಿನ ಅವಲಂಬನೆ ಕಡಿಮೆಗೊಳಿಸಲು ದೇಶೀಯವಾಗಿ ಆ ಉತ್ಪನ್ನಗಳನ್ನು ತಯಾರಿಸುವುದಕ್ಕೆ ಉತ್ತೇಜನ ನೀಡಲಾಗುತ್ತದೆ ಎಂದು ತಿಳಿದುಬಂದಿದೆ. ನಿರ್ಬಂಧ ವಿಧಿಸಲಾಗುವ ವಸ್ತುಗಳಲ್ಲಿ ಸೋಲಾರ್ ಮಾಡ್ಯೂಲ್, ಸೋಲಾರ್ ಪ್ಯಾನಲ್​ಗಳು, ಹಾಗೂ ಇರ್ನÌರ್​ಗಳು ಪ್ರಮುಖವಾಗಿವೆ ಎಂದು ವಿದ್ಯುತ್ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯದ ಮೂಲಗಳು ಹೇಳಿವೆ.

ಅಬಕಾರಿ ಸುಂಕ ಹೆಚ್ಚಳ: ಸೋಲಾರ್ ಉತ್ಪನ್ನಗಳ ಮೇಲೆ ಮೂಲ ಅಬಕಾರಿ ಸುಂಕವನ್ನು ವಿಧಿಸಲು ನಿರ್ಧರಿಸಿದೆ. ಈ ಮೊದಲು ಚೀನಾ, ವಿಯೆಟ್ನಾಂ ಮತ್ತು ಮಲೇಷ್ಯಾದಿಂದ ಬರುವ ಸೋಲಾರ್ ಉತ್ಪನ್ನಗಳಿಗೆ ಸರ್ಕಾರ ಕೇವಲ ಶೇ.20 ಸುರಕ್ಷತಾ ಸುಂಕವನ್ನು ವಿಧಿಸುತ್ತಿತ್ತು. ಬರುವ ಆಗಸ್ಟ್​ನಿಂದ ಅವುಗಳ ಮೇಲೆ ಮೂಲ ಅಬಕಾರಿ ಸುಂಕವನ್ನೂ ವಿಧಿಸಲಾಗುವುದರಿಂದ ಸೋಲಾರ್ ಉತ್ನನಗಳು ದುಬಾರಿಯಾಗಲಿವೆ. ಜತೆಗೆ ದೇಶಿಯವಾಗಿ ಈ ವಸ್ತುಗಳನ್ನು ಉತ್ಪಾದಿಸುವವರಿಗೆ ಉತ್ತೇಜನ ನೀಡಲುವಾಗಿ ವಿದ್ಯುತ್ ಹಣಕಾಸು ನಿಗಮ (ಪಿಎಫ್​ಸಿ), ಗ್ರಾಮೀಣ ವಿದ್ಯುದ್ದೀಕರಣ ನಿಗಮ (ಆರ್​ಇಸಿ) ಮತ್ತು ಭಾರತೀಯ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ಸಂಸ್ಥೆ (ಐಆರ್​ಇಡಿಎ) ವತಿಯಿಂದ ಕಡಿಮೆ ಬಡ್ಡಿದರದ ಸಾಲ ಸೌಲಭ್ಯಗಳನ್ನೂ ನೀಡಲು ಸಚಿವಾಲಯ ನಿರ್ಧರಿಸಿದೆ ಎಂದು ತಿಳಿದುಬಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net