ಭಾರತ-ಚೀನಾ ಗಡಿ ರೇಖೆಯ ವಾಸ್ತವ...

china 2
Published on

ವಾಸ್ತವ ಗಡಿ ರೇಖೆಯಲ್ಲಿ (ಎಲ್​ಎಸಿ) ಭಾರತ ಮತ್ತು ಚೀನಾ ನಡುವೆ ಉಂಟಾಗಿರುವ ಉದ್ವಿಗ್ನತೆ ಇನ್ನೂ ಶಮನಗೊಂಡಿಲ್ಲ. ಉಭಯ ದೇಶಗಳ ನಡುವೆ ಹಲವು ವರ್ಷಗಳಿಂದ ಗಡಿ ಸಮಸ್ಯೆ ಇದೆ. ಈ ಕುರಿತ ಒಂದಿಷ್ಟು ಮಾಹಿತಿಗಳು ಇಲ್ಲಿವೆ...

ಎಲ್​ಎಸಿ ಕಸಿವಿಸಿ: ಭಾರತ ನಿಯಂತ್ರಿತ ಪ್ರದೇಶ ಮತ್ತು ಚೀನಿ ನಿಯಂತ್ರಿತ ಪ್ರದೇಶಗಳನ್ನು ಪ್ರತ್ಯೇಕಿಸುವ ಗಡಿ ರೇಖೆಯೇ ಎಲ್​ಎಸಿ. ಇದು 3,488 ಕಿಮೀ ಇದೆ ಎಂಬುದು ಭಾರತದ ವಾದ. ಆದರೆ ಅದು ಕೇವಲ 2,000 ಕಿ.ಮೀ. ಎನ್ನುವುದು ಚೀನಾದ ಅಭಿಮತ. ಎಲ್​ಎಸಿಯನ್ನು ಮೂರು ವಲಯಗಳಾಗಿ ವಿಭಜಿಸಲಾಗಿದೆ. ಅರುಣಾಚಲ ಪ್ರದೇಶ ಮತ್ತು ಸಿಕ್ಕಿಂ ಒಳಗೊಂಡ ಪೂರ್ವ ವಲಯ, ಉತ್ತರಾ ಖಂಡ ಮತ್ತು ಹಿಮಾಚಲ ಪ್ರದೇಶದ ಮಧ್ಯ ವಲಯ ಹಾಗೂ ಲಡಾಖ್​ನಲ್ಲಿರುವ ಪಶ್ಚಿಮ ವಲಯ.

ಎಲ್​ಎಸಿ-ಎಲ್​ಒಸಿ ವ್ಯತ್ಯಾಸ ಕಾಶ್ಮೀರ ಯುದ್ಧದ ನಂತರ ವಿಶ್ವಸಂಸ್ಥೆಯ ಮಧ್ಯಸ್ಥಿಕೆಯಲ್ಲಿ ರೇಖೆಯೊಂದು ರೂಪುಗೊಂಡಿತು. 1972ರಲ್ಲಿ ಭಾರತ - ಪಾಕಿಸ್ತಾನ ನಡುವಿನ ಶಿಮ್ಲಾ ಒಡಂಬಡಿಕೆ ನಂತರ ಅದನ್ನು ನಿಯಂತ್ರಣ ರೇಖೆ (ಎಲ್​ಒಸಿ) ಎಂದು ಕರೆಯಲಾಯಿತು. ಅದನ್ನು ಉಭಯ ದೇಶಗಳ ಸೈನ್ಯಗಳ ಡಿಜಿಎಂಒಗಳು ಸಹಿ ಮಾಡಿದ ನಕಾಶೆ ಮೇಲೆ ವಿವರಿಸಲಾಗಿದ್ದು ಕಾನೂನುಬದ್ಧ ಒಡಂಬಡಿಕೆಯ ಅಂತಾರಾಷ್ಟ್ರೀಯ ಮಾನ್ಯತೆಯಿದೆ. ಹೀಗಾಗಿ, ಎಲ್​ಎಸಿ ಕೇವಲ ಒಂದು ಪರಿಕಲ್ಪನೆಯಷ್ಟೆ. ಅದನ್ನು ಎರಡು ದೇಶಗಳು ಒಪ್ಪಿಕೊಂಡಿ ರುವಂಥದ್ದಲ್ಲ. ಅಥವಾ ಅದನ್ನು ಭೂಮಿಯ ಗುರುತು ಮಾಡಿಯೂ ಇಲ್ಲ, ನಕಾಶೆ ಮೇಲೆ ಗುರುತಿಸಿಯೂ ಇಲ್ಲ.

ಎಲ್​ಎಸಿಗೆ ಒಪ್ಪಿಗೆ: 1991ರಲ್ಲಿ ಚೀನಾ ಪ್ರಧಾನಿ ಲೀ ಪೆಂಗ್ ಭಾರತಕ್ಕೆ ಭೇಟಿ ನೀಡಿದ್ದಾಗ ಎಲ್​ಎಸಿ ಬಗ್ಗೆ ಮತ್ತೆ ಚರ್ಚೆ ನಡೆಯಿತು. ಎಲ್​ಎಸಿಯಲ್ಲಿ ಶಾಂತಿ ಕಾಯ್ದುಕೊಳ್ಳಲು ಅಂದಿನ ಪ್ರಧಾನಿ ಪಿ.ವಿ. ನರಸಿಂಹರಾವ್ ಮತ್ತು ಲೀ ಪೆಂಗ್ ಒಪ್ಪಂದಕ್ಕೆ ಬಂದರು. ನರಸಿಂಹ ರಾವ್ 1993ರಲ್ಲಿ ಬೀಜಿಂಗ್​ಗೆ ಭೇಟಿ ನೀಡಿದಾಗ ಎಲ್​ಎಸಿ ಪರಿಕಲ್ಪನೆಯನ್ನು ಭಾರತ ಔಪಚಾರಿಕವಾಗಿ ಒಪ್ಪಿಕೊಂಡಿತು. ಎಲ್​ಎಸಿಯಲ್ಲಿ ಶಾಂತಿ ಕಾಯ್ದುಕೊಳ್ಳುವ ಒಪ್ಪಂದಕ್ಕೆ ಉಭಯ ದೇಶಗಳು ಸಹಿ ಮಾಡಿದವು. 1959 ಅಥವಾ 1962ರ ಎಲ್​ಎಸಿಯನ್ನು ಅದು ಮಾನ್ಯ ಮಾಡುವುದಿಲ್ಲ. ಬದಲಿಗೆ ಸಹಿ ಹಾಕಿದಾಗ ಇದ್ದ ಎಲ್​ಎಸಿ ಎನ್ನುವುದನ್ನು ಅದು ಸ್ಪಷ್ಟಪಡಿಸಿದೆ. ಕೆಲವು ಪ್ರದೇಶಗಳ ವಿಚಾರದ ಇತ್ಯರ್ಥಕ್ಕೆಂದು ಜಂಟಿ ಕ್ರಿಯಾ ಗುಂಪು ರಚಿಸಲು ನಿರ್ಧರಿಸಲಾಯಿತು.

ಬಿಕ್ಕಟ್ಟಿಗೆ ಕಾರಣವಾದ ಪತ್ರ: 1956ರಲ್ಲಿ ಭಾರತದ ಪ್ರಧಾನಿ ಜವಾಹರಲಾಲ್ ನೆಹರು ಅವರಿಗೆ ಚೀನಾ ಪ್ರಧಾನಿ ಚೌ ಎನ್​ಲಾಯ್ ಬರೆದ ಎರಡು ಪತ್ರಗಳು ಪಶ್ಚಿಮ ವಲಯದಲ್ಲಿನ ಬಿಕ್ಕಟ್ಟಿಗೆ ಕಾರಣವಾಗಿದ್ದವು. ಎಲ್​ಎಸಿ ಪೂರ್ವ ವಲಯದಲ್ಲಿ ತಥಾಕಥಿತ ಮ್ಯಾಕ್​ವೋಹನ್ ರೇಖೆ ಹೊಂದಿದೆ. ಈ ರೇಖೆಯವರೆಗೆ ಎರಡೂ ಕಡೆಯವರು ಪಶ್ಚಿಮದಲ್ಲಿ ನಿಯಂತ್ರಣ ಹೊಂದಿರುತ್ತಾರೆ ಎಂದು ಚೌ ಎನ್​ಲಾಯ್ ಪತ್ರಗಳಲ್ಲಿ ಹೇಳಿದ್ದರು. 1962ರ ಯುದ್ಧದ ನಂತರ, ತಾನು ಎಲ್​ಎಸಿಯಿಂದ 20 ಕಿಮೀ ಹಿಂದೆ ಸರಿದಿರುವುದಾಗಿ 1959ರ ನವೆಂಬರ್​ನಲ್ಲಿ ಚೀನಾ ಹೇಳಿತ್ತು. 1959 ಹಾಗೂ 1962ರಲ್ಲೂ ಭಾರತ ಎಲ್​ಎಸಿ ಪರಿಕಲ್ಪನೆಯನ್ನು ತಿರಸ್ಕರಿಸಿತ್ತು. 2017ರ ಡೊಕ್ಲಾಂ ಬಿಕ್ಕಟ್ಟಿನ ಸಂದರ್ಭದಲ್ಲಿ ‘1959ರ ಎಲ್​ಎಸಿ’ಯನ್ನು ಪಾಲಿಸುವಂತೆ ಭಾರತಕ್ಕೆ ಚೀನಾದ ವಿದೇಶಾಂಗ ಖಾತೆ ವಕ್ತಾರರು ಆಗ್ರಹಿಸಿದ್ದರು.

ಪ್ರಸ್ತಾಪ ತಿರಸ್ಕರಿಸಿದ್ದ ಚೀನಾ: ಪ್ರಧಾನಿ ನರೇಂದ್ರ ಮೋದಿ 2015ರ ಮೇ ತಿಂಗಳಲ್ಲಿ ಚೀನಾಕ್ಕೆ ಭೇಟಿ ಕೊಟ್ಟಿದ್ದಾಗ ಎಲ್​ಎಸಿ ಬಗ್ಗೆ ಸ್ಪಷ್ಟಪಡಿಸುವ ಪ್ರಸ್ತಾಪ ಮುಂದಿಟ್ಟಿದ್ದರು. ಇದನ್ನು ಚೀನಾ ತಿರಸ್ಕರಿಸಿತ್ತು. ‘ಸ್ಪಷ್ಟಪಡಿಸಲು ನಾವು ಕೆಲವು ವರ್ಷಗಳ ಹಿಂದೆ ಪ್ರಯತ್ನಿಸಿದ್ದೆವು. ಆಗ ಕೆಲವು ಸಮಸ್ಯೆ ಉಂಟಾಯಿತು. ಪರಿಸ್ಥಿತಿ ತೀರಾ ಬಿಗಡಾಯಿಸಲೂ ಕಾರಣವಾಯಿತು’ ಎಂದು ಚೀನಾದ ವಿದೇಶಾಂಗ ಸಚಿವಾಲಯದ ಏಷ್ಯಾ ವ್ಯವಹಾರಗಳ ಉಪ ಮಹಾ ನಿರ್ದೇಶಕ ಹುವಾಂಗ್ ಕ್ಸಿಲಿಯಾನ್ ಈ ಹಿಂದೆ ತಿಳಿಸಿದ್ದರು. ನಾವು ಏನೇ ಮಾಡಿದರೂ ಅದು ಶಾಂತಿ ಕಾಪಾಡುವಂತಿರಬೇಕೇ ಹೊರತು ಸಂಕೀರ್ಣಗೊಳಿಸುವಂತಿರಬಾರದು ಎಂದಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net