ಸಂಪಾದಕೀಯ: ಆರ್ಥಿಕತೆಗೆ ಸ್ವದೇಶಿ ಕವಚ

Health (2)
Published on

ಸಂಪಾದಕೀಯ: ದೀಪಾವಳಿ, ನವರಾತ್ರಿ ಮುಂತಾದವುಗಳನ್ನು ಒಳಗೊಂಡ ಪ್ರಸ್ತುತ ಹಬ್ಬದ ಋತುವು ಭಾರತದ ಆರ್ಥಿಕತೆಯನ್ನು ಆಶೀರ್ವಾದದ ರೂಪದಲ್ಲಿ ಆವರಿಸಿದೆ. ಪ್ರಧಾನಿ ನರೇಂದ್ರ ಮೋದಿ ಮತ್ತೊಮ್ಮೆ ‘ಗರ್ವ ಸೇ ಕಹೋ ಯೆಹ್ ಸ್ವದೇಶಿ ಹೈ’ ಎಂಬ ಘೊಷಣೆ ಮೊಳಗಿಸಿ, ಜನರನ್ನು ಸ್ವದೇಶಿ ಉತ್ಪನ್ನಗಳ ಖರೀದಿಗೆ ಪ್ರೋತ್ಸಾಹಿಸುತ್ತಿದ್ದಾರೆ. ‘140 ಕೋಟಿ ಭಾರತೀಯರ ಕಠಿಣ ಪರಿಶ್ರಮ, ಸೃಜನಶೀಲತೆ ಮತ್ತು ನಾವೀನ್ಯತೆಯ ಜತೆ ಹಬ್ಬವನ್ನು ಆಚರಿಸೋಣ. ಭಾರತೀಯ ಉತ್ಪನ್ನಗಳನ್ನು ನೀವೂ ಖರೀದಿಸಿ, ಬೇರೆಯವರೂ ಖರೀದಿಸುವಂತೆ ಪ್ರೋತ್ಸಾಹಿಸಿ’ ಎಂದು ಪ್ರಧಾನಿ ಕರೆ ನೀಡಿದ್ದಾರೆ. ಇದು ಆತ್ಮನಿರ್ಭರ ಭಾರತದ ದೃಷ್ಟಿಕೋನಕ್ಕೆ ಪೂರಕವಾದ ರಾಷ್ಟ್ರೀಯ ಚಳವಳಿ. ದೇಶದ ಆರ್ಥಿಕತೆಯನ್ನು ಬಲಪಡಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸುವ ಮಹತ್ವದ ಹೆಜ್ಜೆ.

ಇತ್ತೀಚಿನ ಬೆಳವಣಿಗೆಗಳು ಪ್ರಧಾನಿ ಮೋದಿ ಅವರ ಈ ಕರೆಯ ಮಹತ್ವವನ್ನು ಎತ್ತಿ ತೋರಿಸುತ್ತವೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತದ ಸರಕುಗಳ ಮೇಲೆ ಶೇ. 50ರಷ್ಟು ಸುಂಕ ಹೇರಿದ್ದಾರೆ. ರಷ್ಯದಿಂದ ಕಚ್ಚಾ ತೈಲ ಖರೀದಿ ಮುಂದುವರಿಸಿದರೆ ಮತ್ತಷ್ಟು ಸುಂಕ ಹೇರುವುದಾಗಿ ಬೆದರಿಕೆ ಹಾಕುತ್ತಿದ್ದಾರೆ. ಈ ಸಂಗತಿಗಳು ಭಾರತವನ್ನು ಸವಾಲುಗಳ ಮುಂದೆ ತಂದು ನಿಲ್ಲಿಸಿವೆ. ಆದರೂ, ಜನರ ನರನಾಡಿಗಳಲ್ಲೇ ಸಮ್ಮಿಳಿತವಾಗಿರುವ ಆತ್ಮನಿರ್ಭರತೆಯು ದೇಶದ ಆರ್ಥಿಕ ಸ್ಥಿರತೆಯನ್ನು ಕಾಪಾಡಿದೆ. ಪ್ರಸಕ್ತ ವರ್ಷದಲ್ಲಿ ಅಮೆರಿಕಕ್ಕೆ ಸ್ಮಾರ್ಟ್​ಫೋನ್ ರಫ್ತು ಮಾಡುವ ವಿಷಯದಲ್ಲಿ ಭಾರತವು ಶೇ. 240ರಷ್ಟು ವಾರ್ಷಿಕ ಬೆಳವಣಿಗೆ ಸಾಧಿಸಿ ಚೀನಾವನ್ನು ಹಿಂದಿಕ್ಕಿದೆ. ಕೈಗಾರಿಕಾ ಉತ್ಪಾದನೆ ಸೂಚ್ಯಂಕ ಆಗಸ್ಟ್​ನಲ್ಲಿ ಶೇ. 4.0ಯಷ್ಟು ಬೆಳೆದಿದೆ. ಮೇಕ್ ಇನ್ ಇಂಡಿಯಾ, ಆತ್ಮನಿರ್ಭರ ಭಾರತ ಪರಿಕಲ್ಪನೆಯಿಂದಾಗಿ ಉತ್ಪಾದನಾ ವಲಯದಲ್ಲಿ ಶೇ. 25ರ ಕೊಡುಗೆಯ ಗುರಿ ಸಾಧ್ಯವಾಗುತ್ತಿದೆ.

ಪ್ರಸಕ್ತ ಹಬ್ಬದ ಋತುವಿನಲ್ಲಿ ಸ್ವದೇಶಿ ಉತ್ಪನ್ನಗಳು ಮಾರುಕಟ್ಟೆಗೆ ಬಂದಿರುವ ಪ್ರಮಾಣ ಮತ್ತು ಜನರು ಅವುಗಳನ್ನು ಖರೀದಿಸುತ್ತಿರುವ ಪ್ರಮಾಣ ಗಮನಾರ್ಹವಾಗಿದೆ. ಈ ಸಲದ ಹಬ್ಬದ ಮಾರಾಟ 5 ಲಕ್ಷ ಕೋಟಿ ರೂ. ಮೀರಬಹುದು. ಇದರಲ್ಲಿ ಮಣ್ಣಿನ ದೀಪ, ಕೈಗಾರಿಕಾ ಉತ್ಪನ್ನ, ಮೂರ್ತಿಗಳು, ಬಟ್ಟೆಬರೆ, ಎಲೆಕ್ಟ್ರಾನಿಕ್ಸ್, ಆಟಿಗೆ ಸೇರಿದಂತೆ ಸ್ವದೇಶಿ ಉತ್ಪನ್ನಗಳೇ ಪ್ರಮುಖ ಪಾತ್ರ ವಹಿಸಿವೆ. ಉದಾಹರಣೆಗೆ, ಉತ್ತರಾಖಂಡ್​ನಲ್ಲಿ ಮಣ್ಣಿನ ಸಾಮಗ್ರಿಗಳ ಮಾರಾಟ ಹಿಂದಿನ ವರ್ಷಕ್ಕಿಂತ ಶೇ. 25ರಷ್ಟು ಹೆಚ್ಚಾಗಿದೆ. ಚೀನಾದಿಂದ ವಸ್ತುಗಳ ಆಮದು ಬಹುತೇಕ ಶೂನ್ಯ ಮಟ್ಟಕ್ಕೆ ಇಳಿದಿದೆ. ಹಬ್ಬದ ಖರೀದಿ ಉತ್ಸಾಹದ ಜತೆ ಸರಕು ಮತ್ತು ಸೇವಾ ತೆರಿಗೆ (ಜಿಎಸ್​ಟಿ) ದರಗಳ ಇಳಿಕೆಯ ಪ್ರಯೋಜನವೂ ಸೇರಿಕೊಂಡಿದೆ ಎಂದು ಕಾನ್ಪೆಡರೇಷನ್ ಆಫ್ ಆಲ್ ಇಂಡಿಯಾ ಟ್ರೇಡರ್ಸ್ (ಸಿಎಐಟಿ) ಹೇಳಿರುವುದು ಗಮನಾರ್ಹವಾಗಿದೆ. ಆಭರಣಗಳು, ಉಪಕರಣಗಳು ಮತ್ತು ಎಲೆಕ್ಟ್ರಾನಿಕ್ಸ್​ನಲ್ಲಿ ಒಟ್ಟು 7.58 ಲಕ್ಷ ಕೋಟಿ ರೂ. ವ್ಯಾಪಾರ ನಡೆದಿದೆ ಎಂಬುದಾಗಿ ಭಾರತೀಯ ಉದ್ಯೋಗ ವ್ಯಾಪಾರ ಮಂಡಲದ ಅಂದಾಜಿಸಿದ್ದು, ಇದು ಸ್ವದೇಶಿ ಜಾಗೃತಿಯ ಫಲಿತಾಂಶವಲ್ಲದೆ ಬೇರೇನೂ ಅಲ್ಲ. ಸ್ವದೇಶಿ ವಸ್ತುಗಳ ಬಳಕೆಯಿಂದ ಆರ್ಥಿಕತೆಗೆ ಬಲ ಬರುವುದಷ್ಟೇ ಅಲ್ಲ, ನಮ್ಮ ಸಾಂಸ್ಕೃತಿಕ ಹೆಮ್ಮೆಯನ್ನೂ ಅದು ಜಾಗೃತಗೊಳಿಸುತ್ತದೆ. ಜಾಗತಿಕ ಅನಿಶ್ಚಿತತೆ, ಸುಂಕ ಸಮರ, ಪ್ರತಿಕೂಲ ವಾತಾವರಣದ ನಡುವೆಯೂ ಭಾರತವನ್ನು ಸ್ವಾವಲಂಬಿಯಾಗಿ ನಿಲ್ಲಿಸುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net