

ಪಾಕಿಸ್ತಾನ ಪ್ರಾಯೋಜಿತ ಭಯೋತ್ಪಾದನೆ ಭಾರತಕ್ಕೆ ಮಾಡಿರುವ ಹಾನಿ ಅಷ್ಟಿಷ್ಟಲ್ಲ. ಆದರೆ, ಒಂದು ದಶಕದ ಮುಂಚೆ ಭಯೋತ್ಪಾದನೆ ವಿರುದ್ಧ ಹೋರಾಡುವ ಭಾರತದ ನೀತಿಗಳು ಅಷ್ಟೊಂದು ಬಿಗಿಯಾಗಿರಲಿಲ್ಲ. 2014ರಿಂದ 2025ರ ಆರಂಭದವರೆಗೆ ಜಮ್ಮು-ಕಾಶ್ಮೀರ ಭಾಗದಲ್ಲಿ ಉಗ್ರರ ನುಸುಳುವಿಕೆಯ ಪ್ರಮಾಣವನ್ನು ಗಮನಾರ್ಹವಾಗಿ ತಗ್ಗಿಸಲು ಭದ್ರತಾ ಪಡೆಗಳು ಸಫಲವಾಗಿವೆ. ಕುಖ್ಯಾತ ಉಗ್ರ ಸಂಘಟನೆಗಳ ನಾಯಕರು, ಕಮಾಂಡರ್ಗಳು ಎನ್ಕೌಂಟರ್ನಲ್ಲಿ ಹತರಾಗಿದ್ದಾರೆ. ಆದರೆ, ಭಯೋತ್ಪಾದನೆಯ ವಿರುದ್ಧದ ಸಮರ ತೀವ್ರಗೊಂಡಿದ್ದು 2019ರ ಪುಲ್ವಾಮಾ ದಾಳಿಯ ನಂತರವೇ. ಪೈಶಾಚಿಕ ಪುಲ್ವಾಮಾ ದಾಳಿಯನ್ನು ಜಾಗತಿಕ ಸಮುದಾಯ ಕೂಡ ಏಕಕಂಠದಲ್ಲಿ ಖಂಡಿಸಿತು. ಕೇಂದ್ರ ಸರ್ಕಾರ ‘ಇನ್ನು ಸಹಿಸುವುದಿಲ್ಲ’ ಎಂದು ಮೈಕೊಡವಿ ಎದ್ದು ನಿಂತು, ಸರ್ಜಿಕಲ್ ದಾಳಿ ನಡೆಸಿತು. ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ 40 ಯೋಧರ ತ್ಯಾಗ ಮತ್ತು ಬಲಿದಾನ ವ್ಯರ್ಥವಾಗಬಾರದೆಂದರೆ, ಭಯೋತ್ಪಾದನೆಯ ವಿರುದ್ಧ ನಿರ್ಣಾಯಕ ಹಾಗೂ ಅಂತಿಮ ಗೆಲುವು ಸಿಗುವವರೆಗೂ ಹೋರಾಟ ಮುಂದುವರಿಸಬೇಕಿದೆ. ಇದಕ್ಕೆ ರಾಜಕೀಯ ಇಚ್ಛಾಶಕ್ತಿ ಪ್ರದರ್ಶಿಸಬೇಕಿದೆ. ಆ ಎಲ್ಲ ಯೋಧರ ಬಲಿದಾನವನ್ನು ಗೌರವಿಸಿ ದೇಶ ಇಂದು (ಫೆ.14) ನಮನ ಸಲ್ಲಿಸುತ್ತಿದೆ.
ರವೀಂದ್ರ ಎಸ್. ದೇಶಮುಖ್ ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ 2019ರ ಫೆಬ್ರವರಿ 14ರಂದು ಭಯೋತ್ಪಾದಕರು ನಡೆಸಿದ ದಾಳಿ ಭಾರತದಲ್ಲೇ ನಡೆದ ದೊಡ್ಡ ಹಾಗೂ ಭೀಕರ ಭಯೋತ್ಪಾದನಾ ದಾಳಿಗಳಲ್ಲಿ ಒಂದು. ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಆರ್ಪಿಎಫ್) ವಾಹನಗಳ ಸಾಲಿನ (ಕಾನ್ವಾಯ್) ಮೇಲೆ ನಡೆದ ಅಂದಿನ ದಾಳಿಯಲ್ಲಿ 40 ಸಿಆರ್ಪಿಎಫ್ ಯೋಧರು ಹುತಾತ್ಮರಾದರು. ಹಲವರು ಗಾಯಗೊಂಡಿದ್ದರು. ದೇಶ ಕಾಯುವ ಯೋಧರನ್ನು ಬಲಿ ತೆಗೆದುಕೊಂಡ ಈ ಘೋರ ಹತ್ಯಾಕಾಂಡಕ್ಕೆ ತಾನೇ ಹೊಣೆಯೆಂದು ಪಾಕಿಸ್ತಾನ ಮೂಲದ ಜೈಷ್-ಎ-ಮೊಹಮದ್ ಭಯೋತ್ಪಾದಕ ಸಂಘಟನೆ ಹೇಳಿಕೊಂಡಿತು. ಈ ದಾಳಿ ಹಿಂದೆ ಪಾಕಿಸ್ತಾನದ ಕೈವಾಡ ಇದೆಯೆಂದು ಭಾರತ ಸಾಕ್ಷ್ಯಗಳ ಸಮೇತ ಹೇಳಿತು.
ಪಾಕಿಸ್ತಾನಕ್ಕೆ ತಕ್ಕ ಶಾಸ್ತಿ: ಪುಲ್ವಾಮಾ ಘಟನೆ ಬಳಿಕ ರಾಜತಾಂತ್ರಿಕವಾಗಿ ಪಾಕಿಸ್ತಾನವನ್ನು ಕಟ್ಟಿಹಾಕಲು ಮಹತ್ವದ ಕ್ರಮಗಳನ್ನು ಅನುಸರಿಸಿದ ಭಾರತ ಅದಕ್ಕೆ ನೀಡಲಾದ ‘ಪರಮಾಪ್ತ ರಾಷ್ಟ್ರ’ದ ಸ್ಥಾನವನ್ನು ಹಿಂತೆಗೆದುಕೊಂಡಿತು. ಪರಿಣಾಮ, ಪಾಕ್ನೊಂದಿಗಿನ ವಾಣಿಜ್ಯ-ವಹಿವಾಟುಗಳು ಸ್ಥಗಿತಗೊಂಡ ವಲ್ಲದೆ ಅಲ್ಲಿಂದ ಆಮದಾಗುವ ಉತ್ಪನ್ನಗಳ ಮೇಲೆ ಶೇಕಡ 200ರಷ್ಟು ಸುಂಕ ಹೇರಿ ಬಿಸಿ ಮುಟ್ಟಿಸಿತು. ಮುಖ್ಯವಾಗಿ, ಪಾಕ್ನ ಕರಾಳಕೃತ್ಯವನ್ನು ಅಂತಾರಾಷ್ಟ್ರೀಯ ವಲಯಕ್ಕೆ ಮನದಟ್ಟು ಮಾಡಿಕೊಡುವಲ್ಲಿ ಭಾರತ ಯಶಸ್ವಿಯಾಯಿತು. ಅಮೆರಿಕ, ರಷ್ಯಾ, ಜಪಾನ್ ಸೇರಿದಂತೆ ವಿಶ್ವದ ಹಲವು ಶಕ್ತಿಗಳು ಪುಲ್ವಾಮಾ ದಾಳಿಯನ್ನು ಬಲವಾಗಿ ಖಂಡಿಸಿದವು. ಅಷ್ಟು ಮಾತ್ರವಲ್ಲ, ಚೀನಾದ ತಗಾದೆ ನಡುವೆಯೂ ವಿಶ್ವಸಂಸ್ಥೆ ಭದ್ರತಾ ಮಂಡಳಿ ಖಂಡನಾ ನಿರ್ಣಯ ಅಂಗೀಕರಿಸಿದ್ದು ಭಾರತದ ರಾಜತಾಂತ್ರಿಕ ಪ್ರಯತ್ನಗಳಿಗೆ ಸಿಕ್ಕ ಮಹತ್ವದ ಗೆಲುವು. ಈ ಕ್ರಮಗಳ ಬೆನ್ನಲ್ಲೇ, ಭಾರತೀಯ ಸೇನೆ ವೈಮಾನಿಕ ದಾಳಿ ಮೂಲಕ ಉಗ್ರಶಿಬಿರಗಳನ್ನು ಧ್ವಂಸಗೊಳಿಸಿಸುವ ಮೂಲಕ ಭಯೋತ್ಪಾದನಾ ವಿರೋಧಿ ಹೋರಾಟದಲ್ಲಿ ದಿಟ್ಟಹೆಜ್ಜೆ ಇರಿಸಿತು.
ಬಾಲಾಕೋಟ್ ದಾಳಿ ಮೂಲಕ ಎದುರೇಟು: ಉಗ್ರರ ಅಟ್ಟಹಾಸಕ್ಕೆ ಉತ್ತರ ನೀಡಲು ಭಾರತ ಸಂಕಲ್ಪ ಮಾಡಿತು. ಪಾಕಿಸ್ತಾನದ ಖೈಬರ್ ಪಖ್ತುನ್ಖ್ವಾದ ಬಾಲಾಕೋಟ್ನಲ್ಲಿರುವ ಜೈಷ್ ಉಗ್ರಗಾಮಿಗಳ ತಾಣಗಳ ಮೇಲೆ ಪುಲ್ವಾಮಾ ದಾಳಿಯ 12 ದಿನಗಳ ನಂತರ, ಅಂದರೆ ಫೆಬ್ರವರಿ 26ರಂದು ಭಾರತೀಯ ವಾಯುಪಡೆಯ ಫೈಟರ್ ವಿಮಾನಗಳು ನುಗ್ಗಿ ಬಾಂಬ್ ದಾಳಿ ನಡೆಸಿ ನೂರಾರು ಶಿಬಿರಗಳನ್ನು ಉಧ್ವಸ್ತಗೊಳಿಸಿದವು. ಗಡಿ ನಿಯಂತ್ರಣ ರೇಖೆ ದಾಟಿ ಸುಮಾರು 85 ಕಿ.ಮೀ. ಒಳನುಗ್ಗಿದ 12 ಮಿರಾಜ್ -2000 ಯುದ್ಧ ವಿಮಾನಗಳು ಪಾಕ್ ಆಕ್ರಮಿತ ಕಾಶ್ಮೀರ ಮಾತ್ರವಲ್ಲದೆ, ಪಾಕಿಸ್ತಾನ ಗಡಿ ಒಳಗಿದ್ದ ಜೈಷ್ ಉಗ್ರರ ಪ್ರಮುಖ ತರಬೇತಿ ಕೇಂದ್ರವನ್ನೂ ನಾಶಗೊಳಿಸಿದವು. ಫೆ. 26ರ ನಸುಕಿನ ಜಾವ 3.30ರ ಸುಮಾರಿಗೆ ನಡೆದ ವೈಮಾನಿಕ ದಾಳಿಯಲ್ಲಿ ಜೈಷ್-ಎ-ಮೊಹಮ್ಮದ್ ಸಂಘಟನೆಯ ಉಗ್ರಶಿಬಿರಗಳು ನಾಶವಾಗಿ, ಕಮಾಂಡರ್ಗಳು ಸೇರಿದಂತೆ 300ಕ್ಕೂ ಹೆಚ್ಚು ಉಗ್ರರು ಹತರಾದರು. ಭಾರತದ ಹಲವೆಡೆ ದಾಳಿ ನಡೆಸಲು ಈ ಉಗ್ರ ಸಂಘಟನೆಗಳು ಸಂಚು ರೂಪಿಸುತ್ತಿದ್ದ ಖಚಿತ ಮಾಹಿತಿ ಮೇರೆಗೆ ಈ ದಾಳಿ ನಡೆಯಿತು. ಭಾರತ ಭಯೋತ್ಪಾದನೆಯನ್ನು ಸಹಿಸುವುದಿಲ್ಲ ಮತ್ತು ಮೊದಲಿನಂತೆ ಮೃದುಧೋರಣೆ ತಳೆಯುವುದಿಲ್ಲ ಎಂಬುದನ್ನು ಈ ಮೂಲಕ ಸ್ಪಷ್ಟಪಡಿಸಿತು.
ಬುದ್ಧಿ ಕಲಿಯದ ಪಾಕ್: ಅಂತಾರಾಷ್ಟ್ರೀಯ ವಲಯದಲ್ಲಿ ಪಾಕ್ನ್ನು ಒಬ್ಬಂಟಿಯಾಗಿಸುವ, ಭಯೋತ್ಪಾದನೆಯ ಆರ್ಥಿಕ ಮೂಲಗಳನ್ನು ಕಿತ್ತು ಹಾಕುವ ಪ್ರಯತ್ನಗಳು ಮತ್ತಷ್ಟು ಚುರುಕು ಪಡೆಯಬೇಕಿದೆ. ಅಂತಾರಾಷ್ಟ್ರೀಯ ವಲಯದಲ್ಲಿ ಈಗಾಗಲೇ ಭಾರಿ ಮುಖಭಂಗ ಅನುಭವಿಸಿರುವ ಪಾಕಿಸ್ತಾನ ತನ್ನ ನೆಲದಲ್ಲೇ ಆಶ್ರಯ ಪಡೆದಿರುವ ಭಯೋತ್ಪಾದಕ ಶಿಬಿರಗಳನ್ನು ನಾಶಮಾಡುವ ಕ್ರಮಕ್ಕೆ ಮುಂದಾಗಬೇಕು.
ವಿಶೇಷ ಸ್ಥಾನಮಾನ ರದ್ದು: ಪುಲ್ವಾಮಾ ದಾಳಿ ನಂತರ ಕೇಂದ್ರ ಸರ್ಕಾರ ಸರ್ಜಿಕಲ್ ದಾಳಿಯೇನೋ ನಡಿಸಿತು. ಆದರೆ, ಜಮ್ಮು-ಕಾಶ್ಮೀರದಲ್ಲಿ ನಿಜವಾದ ಬದಲಾವಣೆ ತರಬೇಕು ಎಂಬ ಉದ್ದೇಶದಿಂದ 370ರ ವಿಧಿಯನ್ವಯ ಆ ರಾಜ್ಯಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು 2019ರ ಆಗಸ್ಟ್ 5ರಂದು ಹಿಂಪಡೆಯಲಾಯಿತು. ಆ ಮೂಲಕ, ‘ಒಂದು ರಾಷ್ಟ್ರ, ಒಂದು ಸಂವಿಧಾನ’ದ ಕನಸು ಸಾಕಾರಗೊಂಡಿತು. ಜಮ್ಮು-ಕಾಶ್ಮೀರಕ್ಕಿದ್ದ ಪ್ರತ್ಯೇಕ ಸಂವಿಧಾನ ಹಾಗೂ ಧ್ವಜ ರದ್ದುಗೊಂಡಿತು. 370ನೇ ವಿಧಿಯನ್ನು ಹಿಂಪಡೆದ ಬಳಿಕ ಕಾಶ್ಮೀರದಲ್ಲಿ ಪ್ರತ್ಯೇಕತಾವಾದಿಗಳ ಹಾವಳಿಗೆ ಕಡಿವಾಣ ಬಿದ್ದಿದ್ದು, ಅಭಿವೃದ್ಧಿ ಕಾರ್ಯಗಳು ವೇಗ ಪಡೆದಿವೆ ಎಂಬುದು ಗಮನಾರ್ಹ.
ಮಂಡ್ಯ ಯೋಧ ಹುತಾತ್ಮ: ಉಗ್ರರು ನಡೆಸಿದ ದಾಳಿಯಲ್ಲಿ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಕೆ.ಎಂ. ದೊಡ್ಡಿ ಗ್ರಾಮದ ಗುಡಿಗೆರೆ ನಿವಾಸಿ ಎಚ್. ಗುರು (28) ಹುತಾತ್ಮರಾದರು. ಹೊನ್ನಯ್ಯ, ಚಿಕ್ಕತಾಯಮ್ಮ ದಂಪತಿಯ ಮೂವರು ಪುತ್ರರಲ್ಲಿ ಗುರು ಮೊದಲನೆಯವರು.
ಭಾರತ ಕೈಗೊಂಡ ದಿಟ್ಟ ಕ್ರಮ: ಪುಲ್ವಾಮಾ ದಾಳಿ ನಡೆಯುತ್ತಲೇ ಪಾಕ್ನ ಉನ್ನತ ರಾಯ ಭಾರಿಯನ್ನು ಕರೆಸಿಕೊಂಡ ಭಾರತ ಪ್ರಬಲ ಪ್ರತಿಭಟನೆಯನ್ನು ದಾಖಲಿಸಿತು. ದಾಳಿಗೆ ಪ್ರತಿಯಾಗಿ ಕಾರ್ಯಾಚರಣೆ ನಡೆಸುವ ಪೂರ್ಣ ಸ್ವಾತಂತ್ರ್ಯವನ್ನು ಭದ್ರತಾ ಪಡೆಗಳಿಗೆ ನೀಡಿರುವುದಾಗಿ ಪ್ರಧಾನಿ ನರೇಂದ್ರ ಮೋದಿ ಘೋಷಿಸಿದರು. ಉಗ್ರರ ಅಮಾನುಷ ಕೃತ್ಯಕ್ಕೆ ಇಡೀ ದೇಶದಲ್ಲಿ ಆಕ್ರೋಶದ ಅಲೆ ಎದ್ದಿತು. ಹುತಾತ್ಮ ಯೋಧರಿಗೆ ದೇಶಾದ್ಯಂತ ಕಂಬನಿ ತುಂಬಿದ ಕಣ್ಣುಗಳಿಂದ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ನನ್ನ ಎದೆಯಲ್ಲಿ ಅದೇ ಬೆಂಕಿ!: ‘ನಿಮ್ಮೆಲ್ಲರಂತೆ ನನ್ನ ಹೃದಯದಲ್ಲೂ ಆಕ್ರೋಶದ ಬೆಂಕಿ ಧಗಧಗಿಸುತ್ತಿದೆ. ದೇಶದ ಕಣ್ಣೀರು ವ್ಯರ್ಥವಾಗಲು ಬಿಡುವುದಿಲ್ಲ. ಪ್ರತೀಕಾರ ತೆಗೆದುಕೊಳ್ಳಲಾಗುವುದು’ ಎಂದು ಪ್ರಧಾನಿ ನರೇಂದ್ರ ಮೋದಿ ಫೇ.17ರಂದು ಘೋಷಿಸಿದ್ದರು.
19 ಆರೋಪಿಗಳು: ಭಾರತೀಯ ತನಿಖಾ ಸಂಸ್ಥೆಗಳು 19 ಆರೋಪಿಗಳನ್ನು ಗುರುತಿಸಿದವು. ನ್ಯಾಯಾಲಯಕ್ಕೆ 13 ಸಾವಿರಕ್ಕೂ ಅಧಿಕ ಪುಟಗಳ ಆರೋಪಪತ್ರ (ಚಾರ್ಜ್ಶೀಟ್)ವನ್ನು ಎನ್ಐಎ ದಾಖಲಿಸಿತು. 2021ರ ಆಗಸ್ಟ್ ಹೊತ್ತಿಗೆ ಇತರ ಆರು ಜನರೊಂದಿಗೆ ಪ್ರಮುಖ ಆರೋಪಿಗಳು ಹತರಾದರು. ಏಳು ಜನರನ್ನು ಬಂಧಿಸಲಾಯಿತು. ಕಾಶ್ಮೀರ ಕಬಳಿಸುವ ಸಂಚಿನ ಅಂಗವಾಗಿ ಭಯೋತ್ಪಾದಕ ಕೃತ್ಯಗಳನ್ನು ಪಾಕಿಸ್ತಾನ ಬೆಂಬಲಿಸುತ್ತಿದ್ದು, ಪುಲ್ವಾಮಾದ ಘೋರ ದಾಳಿ ಅದರ ಭಾಗವಾಗಿದೆ.
ಅಭಿನಂದನ್ ಶೌರ್ಯ: ಭಾರತೀಯ ವಾಯುಸೇನೆ ಬಾಲಾಕೋಟ್ ಭಯೋತ್ಪಾದಕ ಶಿಬಿರದ ಮೇಲೆ 2019ರ ಫೆಬ್ರವರಿ 26ರಂದು ನಡೆಸಿದ ವಾಯುದಾಳಿಗೆ ಪ್ರತಿಯಾಗಿ, ಭಾರತೀಯ ಸೇನಾನೆಲೆಗಳ ಮೇಲೆ ಪಾಕಿಸ್ತಾನದ ವಾಯುಸೇನೆ (ಫೆ. 27) ವಿಫಲ ದಾಳಿ ನಡೆಸಿತು. ಈ ಸಂದರ್ಭದಲ್ಲಿ, ಪಾಕ್ ಯುದ್ಧ ವಿಮಾನವನ್ನು ಅಟ್ಟಿಸಿಕೊಂಡು ಹೋಗಿ, ಎಫ್-16 ವಿಮಾನವನ್ನು, ಮಿಗ್-21 ಬೈಸನ್ ವಿಮಾನದ ಸಹಾಯದಿಂದ ಹೊಡೆದುರುಳಿಸಿದವರು ಸಾಹಸಿ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್. ಪಾಕ್ ವಿಮಾನವನ್ನು ಅಟ್ಟಿಸಿಕೊಂಡು ಹೋಗುವ ಭರದಲ್ಲಿ, ಪಾಕ್ನ ಇನ್ನೊಂದು ಫೈಟರ್ ಜೆಟ್ನಿಂದ ದಾಳಿಗೊಳಗಾದ ವರ್ಧಮಾನ್ ಅವರ ವಿಮಾನ, ಪಾಕ್ ಆಕ್ರಮಿತ ಕಾಶ್ಮೀರದ ಭೂಭಾಗದಲ್ಲಿ ಪತನವಾಯಿತು. ಅಭಿನಂದನ್ರನ್ನು ಪಾಕ್ ಸೈನಿಕರು ಬಂಧಿಸಿದರು. ಭಾರತದ ಒತ್ತಡ, ಪ್ರತಿದಾಳಿಯ ಭಯ ಮತ್ತು ಅಂತಾರಾಷ್ಟ್ರೀಯ ಒತ್ತಡಕ್ಕೆ ಮಣಿದ ಪಾಕಿಸ್ತಾನ, ಅಭಿನಂದನ್ರನ್ನು ಮಾರ್ಚ್ 1ರಂದು ಭಾರತಕ್ಕೆ ಹಸ್ತಾಂತರಿಸಿತು. ಅಭಿನಂದನ್ ಅವರ ಶೌರ್ಯವನ್ನು ಗೌರವಿಸಿ, ಕೇಂದ್ರ ಸರ್ಕಾರ ಅವರಿಗೆ ವೀರಚಕ್ರ ಪ್ರದಾನಿಸಿತು.
ಪ್ರಧಾನಿ ಸಂಕಲ್ಪ: ಪುಲ್ವಾಮಾ ದಾಳಿ ನಡೆದ ಮರುದಿನವೇ ಪ್ರತೀಕಾರ ತೀರಿಸಿಕೊಳ್ಳುವ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಸುಳಿವು ನೀಡಿದ್ದರು. ಉಗ್ರರು ದೊಡ್ಡ ತಪು್ಪ ಮಾಡಿದ್ದಾರೆ. ಇದಕ್ಕೆ ಅವರು ದೊಡ್ಡ ಬೆಲೆ ತೆರಲಿದ್ದಾರೆ. ಯೋಧರ ತ್ಯಾಗ ವ್ಯರ್ಥವಾಗಲು ಬಿಡುವುದಿಲ್ಲ ಎಂದಿದ್ದರು.