ಭಾರತದ ಮೊದಲ ಟ್ರಾನ್ಸ್‌ಜೆಂಡರ್ ಕ್ಲಿನಿಕ್ ಕ್ಲೋಸ್​​; ಟ್ರಂಪ್​ ನಿರ್ಧಾರವೇ ಇದರ ಹಿಂದಿನ ಕಾರಣ | Transgender Clinic

Untitled design (49)
Published on

ಹೈದರಾಬಾದ್​​: ತೆಲಂಗಾಣದ ನಾರಾಯಣಗುಡದಲ್ಲಿ ತೆರೆಯಲಾಗಿದ್ದ ಭಾರತದ ಮೊದಲ ಟ್ರಾನ್ಸ್‌ಜೆಂಡರ್ ಆರೋಗ್ಯ ಕೇಂದ್ರವನ್ನು(Transgender Clinic) ಮುಚ್ಚಲಾಗಿದೆ. ಈಗ ಮುಚ್ಚಲ್ಪಟ್ಟ ಈ ಚಿಕಿತ್ಸಾಲಯವು ಪ್ರಾಜೆಕ್ಟ್ ಆಕ್ಸಿಲರೇಟ್‌ನ ಭಾಗವಾಗಿತ್ತು. ಇದನ್ನು USAID (ಯುಎಸ್​​ ಏಜೆನ್ಸಿ ಫಾರ್ ಇಂಟರ್ನ್ಯಾಷನಲ್ ಡೆವಲಪ್‌ಮೆಂಟ್) ಮತ್ತು PEPFAR ಬೆಂಬಲಿಸುತಿತ್ತು.

ಜನವರಿ 2025ರಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿದೇಶಿ ನೆರವನ್ನು ಸ್ಥಗಿತಗೊಳಿಸಿದ್ದರಿಂದ ಕ್ಲಿನಿಕ್‌ನ ಹಣವನ್ನು ಕಡಿತಗೊಳಿಸಲಾಯಿತು. ನಂತರ ಈ ಚಿಕಿತ್ಸಾಲಯಗಳನ್ನು ಕ್ಲೋಸ್​ ಮಾಡಲಾಯಿತು ಎಂದು ರಾಯಿಟರ್ಸ್ ವರದಿ ಮಾಡಿದೆ.

ಯುಎಸ್​​​​ಎಐಡಿಯ ಕೆಲಸ ನಿಲ್ಲಿಸುವ ಆದೇಶವು ಸುಮಾರು 5,000 ಜನರಿಗೆ ಸೇವೆಗಳನ್ನು ಅಡ್ಡಿಪಡಿಸಿದೆ. ಅಮೆರಿಕದ ತೆರಿಗೆದಾರರ ಹಣದಿಂದ ಹಣಕಾಸು ನೆರವು ನೀಡುವ ಎಲ್ಲಾ ಯೋಜನೆಗಳು ತಮ್ಮ ಅಮೆರಿಕ ಮೊದಲು ನೀತಿಗೆ ಅನುಗುಣವಾಗಿರುವುದನ್ನು ಖಚಿತಪಡಿಸಿಕೊಳ್ಳಲು, ಪರಿಶೀಲನೆಯವರೆಗೆ ಎಲ್ಲಾ ವಿದೇಶಿ ನೆರವನ್ನು 90 ದಿನಗಳ ಕಾಲ ಸ್ಥಗಿತಗೊಳಿಸಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆದೇಶಿಸಿದ್ದಾರೆ. ರಾಯಿಟರ್ಸ್ ವರದಿಯ ಪ್ರಕಾರ, ಕ್ಲಿನಿಕ್ ಮುಚ್ಚುವಿಕೆಯಿಂದ ಏಳು ಟ್ರಾನ್ಸ್ಜೆಂಡರ್ ಉದ್ಯೋಗಿಗಳು ನಿರುದ್ಯೋಗಿಗಳಾಗಿದ್ದಾರೆ. ಪ್ರತಿ ತಿಂಗಳು ಸುಮಾರು 150-200 LGBTQIA (ಸಲಿಂಗಕಾಮಿ, ಟ್ರಾನ್ಸ್‌ಜೆಂಡರ್, ಕ್ವೀರ್, ಇಂಟರ್‌ಸೆಕ್ಸ್ ಮತ್ತು ಅಲೈಂಗಿಕ) ಜನರು ಆರೋಗ್ಯ ಸೇವೆಗಳನ್ನು ಪಡೆಯುತ್ತಿದ್ದರು. ಅದು ಈಗ ನಿಂತುಹೋಗಿದೆ.

ಯಾವ ಸೇವೆಗಳು ಲಭ್ಯವಿದ್ದವು?

ಮಿತ್ರ ಕ್ಲಿನಿಕ್ ಟ್ರಾನ್ಸ್ಜೆಂಡರ್ ಸಮುದಾಯಕ್ಕೆ ಹಲವಾರು ಉಚಿತ ಆರೋಗ್ಯ ಸೇವೆಗಳನ್ನು ನೀಡಿತು. ಅವುಗಳೆಂದರೆ

  • ಸಾಮಾನ್ಯ ಆರೋಗ್ಯ ಸಮಾಲೋಚನೆ
  • ಎಚ್ಐವಿ ಪರೀಕ್ಷೆ ಮತ್ತು ಚಿಕಿತ್ಸೆ
  • ಮಾನಸಿಕ ಆರೋಗ್ಯ ಬೆಂಬಲ
  • ಲಿಂಗ ದೃಢೀಕರಣ ಸೇವೆಗಳು
  • ಕಾನೂನು ಮತ್ತು ಸಾಮಾಜಿಕ ಯೋಜನೆಗಳ ಕುರಿತು ಮಾಹಿತಿ
  • ಹೈದರಾಬಾದ್ ನಂತರ ಪುಣೆ ಮತ್ತು ಥಾಣೆಯಲ್ಲಿ ಇದೇ ರೀತಿಯ ಎರಡು ಚಿಕಿತ್ಸಾಲಯಗಳನ್ನು ತೆರೆಯಲಾಯಿತು. ಆದರೆ ಈಗ ಅವರ ಹಣಕಾಸು ಕೂಡ ನಿಂತುಹೋಗಿರುವುದರಿಂದ ಅವರ ಭವಿಷ್ಯ ಅನಿಶ್ಚಿತವಾಗಿದೆ.

ಹೆಚ್​​ಐವಿ ತಡೆಗಟ್ಟುವಿಕೆಯಲ್ಲಿ ಪ್ರಮುಖ ಪಾತ್ರ

ಈ ಚಿಕಿತ್ಸಾಲಯವು 4,900ಕ್ಕೂ ಹೆಚ್ಚು ಟ್ರಾನ್ಸ್ಜೆಂಡರ್ ಕ್ಲೈಂಟ್‌ಗಳಿಗೆ ಸೇವೆ ಸಲ್ಲಿಸಿದೆ. HIV ಪಾಸಿಟಿವ್ ದರವು 6% ರಷ್ಟಿತ್ತು ಮತ್ತು 83% ರೋಗಿಗಳು HIV ಚಿಕಿತ್ಸೆಗಾಗಿ ಆಂಟಿರೆಟ್ರೋವೈರಲ್ ಥೆರಪಿ (ART) ಪಡೆಯುತ್ತಿದ್ದರು. ಕ್ಲಿನಿಕ್ ಮುಚ್ಚುವಿಕೆಯೊಂದಿಗೆ ಟ್ರಾನ್ಸ್ಜೆಂಡರ್ ಸಮುದಾಯವು ಎಚ್ಐವಿ ನಂತಹ ಗಂಭೀರ ಕಾಯಿಲೆಗಳ ತಡೆಗಟ್ಟುವಿಕೆ ಮತ್ತು ಚಿಕಿತ್ಸೆಯಲ್ಲಿ ತೊಂದರೆಗಳನ್ನು ಎದುರಿಸಬೇಕಾಗುತ್ತದೆ.

ಈ ಚಿಕಿತ್ಸಾಲಯವನ್ನು ಕ್ಲೋಸ್​ ಮಾಡಿದ್ದರು ಪರಿಣಾಮವಾಗಿ ತೃತೀಯ ಲಿಂಗಿಗಳ ಸಮುದಾಯಕ್ಕೆ ಭಾರಿ ನಷ್ಟವಾಗಿದೆ. ಈ ಸಮುದಾಯವು ಈಗಾಗಲೇ ತಾರತಮ್ಯ ಮತ್ತು ಸಾಮಾಜಿಕ ಬಹಿಷ್ಕಾರವನ್ನು ಎದುರಿಸುತ್ತಿದೆ. ಈ ಚಿಕಿತ್ಸಾಲಯದ ಸಹಾಯದಿಂದ ಅವರು ಅಗತ್ಯ ಆರೋಗ್ಯ ಸೇವೆಗಳನ್ನು ಪಡೆಯುತ್ತಿದ್ದರು, ಆದರೆ ಈಗ ಅವರು ಅದರಿಂದ ವಂಚಿತರಾಗಿದ್ದಾರೆ.(ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net