ಬಾಹ್ಯಾಕಾಶಕ್ಕೆ ಹೋಗಲಿರುವ ಹಾಲಿವುಡ್ ಗಾಯಕಿ ಕೇಟಿ ಪೆರ್ರಿ; ಈ ಕಾರ್ಯಾಚರಣೆಯ ವಿಶೇಷ ಏನು ಗೊತ್ತಾ? | Singer Katy Perry

Untitled design (41)
Published on

ವಾಷಿಂಗ್ಟನ್​ ಡಿಸಿ: ಪ್ರತಿದಿನ ಒಂದಲ್ಲ ಒಂದು ಬಾಹ್ಯಾಕಾಶ ಯಾತ್ರೆ ಹೊಸ ದಾಖಲೆಯನ್ನು ಸೃಷ್ಟಿಸುತ್ತಲೇ ಇರುತ್ತದೆ. ಆದರೆ ಈ ಬಾರಿ ಬಾಹ್ಯಾಕಾಶ ಯಾನದ ಹೊಸ ದಾಖಲೆ ನಿರ್ಮಾಣವಾಗಲಿದೆ. ಈ ಕಾರ್ಯಾಚರಣೆಯಲ್ಲಿ ಹಾಲಿವುಡ್ ಗಾಯಕಿ ಕೇಟಿ ಪೆರ್ರಿ(Singer Katy Perry) ಸೇರಿದಂತೆ ಅಮೆರಿಕದ ಶ್ರೇಷ್ಠ ಮಹಿಳೆಯರು ಸೇರಿದ್ದಾರೆ. ಈ ಕಾರ್ಯಾಚರಣೆಯನ್ನು ಅಮೆರಿಕದ ಪ್ರಸಿದ್ಧ ಬಿಲಿಯನೇರ್ ಜೆಫ್ ಬೆಜೋಸ್ ಅವರು ಮುನ್ನಡೆಸುತ್ತಿದ್ದಾರೆ.

ಗಾಯಕಿ ಕೇಟಿ ಪೆರ್ರಿ ಹೋಗಲಿರುವ ಬಾಹ್ಯಾಕಾಶ ಯಾತ್ರೆಯು ಜೆಫ್ ಬೆಜೋಸ್ ಅವರ ಕಂಪನಿ ಬ್ಲೂ ಆರಿಜಿನ್‌ನ NS-31 ಮಿಷನ್ ಆಗಿದೆ. ಈ ಕಾರ್ಯಾಚರಣೆಯಲ್ಲಿ ಅತ್ಯಂತ ವಿಶೇಷವಾದ ವಿಷಯವೆಂದರೆ ಈ ಕಾರ್ಯಾಚರಣೆಗೆ ತೆರಳಲಿರುವ ನ್ಯೂ ಶೆಪರ್ಡ್ ಬಾಹ್ಯಾಕಾಶ ನೌಕೆಯು ಸಂಪೂರ್ಣವಾಗಿ ಮಹಿಳಾ ಸಿಬ್ಬಂದಿಯನ್ನು ಒಳಗೊಂಡಿರುತ್ತದೆ. 1963ರಲ್ಲಿ ವ್ಯಾಲೆಂಟಿನಾ ತೆರೆಶ್ಕೋವಾ ಅವರ ಏಕವ್ಯಕ್ತಿ ಕಾರ್ಯಾಚರಣೆಯ ನಂತರ ಮೊದಲ ಬಾರಿಗೆ ಮಹಿಳಾ ಗಗನಯಾತ್ರಿಗಳ ತಂಡವು ಈ ಕಾರ್ಯಾಚರಣೆಯನ್ನು ಮುನ್ನಡೆಸುತ್ತಿರುವುದರಿಂದ ಈ ಬಾಹ್ಯಾಕಾಶ ಪ್ರಯಾಣವು ಒಂದು ಮೈಲಿಗಲ್ಲು ಎಂದು ಸಾಬೀತುಪಡಿಸಲಿದೆ.

ಕೇಟಿ ಪೆರ್ರಿ ಒಬ್ಬ ಪ್ರಸಿದ್ಧ ಅಮೆರಿಕನ್ ಗಾಯಕಿ ಮತ್ತು ಗೀತರಚನೆಕಾರ್ತಿ. ಅವರು ತನ್ನ ಸಂಗೀತ ಮತ್ತು ರಂಗ ಪ್ರದರ್ಶನಗಳಿಗೆ ಹೆಸರುವಾಸಿಯಾಗಿದ್ದಾರೆ. ಕೇಟಿ ಪೆರ್ರಿ ಕ್ಯಾಪಿಟಲ್ ರೆಕಾರ್ಡ್ಸ್‌ನ ಅತ್ಯುತ್ತಮ ಮಾರಾಟವಾದ ಮಹಿಳಾ ಕಲಾವಿದೆ. ತನ್ನ ಬಾಹ್ಯಕಾಶಯಾತ್ರೆಯ ಕುರಿತು ಮಾತನಾಡಿರುವ ಕೇಟಿ ಪೆರ್ರಿ, ನನ್ನ ಬಾಹ್ಯಾಕಾಶ ಪ್ರಯಾಣವು ನನ್ನ ಮಗಳು ಮತ್ತು ಇತರರಿಗೆ ಒಂದು ನಿರ್ದಿಷ್ಟ ಗುರಿಯನ್ನು ಸಾಧಿಸಲು ಸ್ಫೂರ್ತಿ ನೀಡುತ್ತದೆ ಎಂದು ಭಾವಿಸುತ್ತೇನೆ ಎಂದಿದ್ದಾರೆ. ಈ ಬಾಹ್ಯಾಕಾಶ ಯಾತ್ರೆಯನ್ನು ಎದುರು ನೋಡುತ್ತಿದ್ದೇನೆ ಮತ್ತು ಸಾಧನೆಯ ಪ್ರಯಾಣದಲ್ಲಿ ಭಾಗವಹಿಸಲು ಹೆಮ್ಮೆಪಡುತ್ತೇನೆ. ಬಾಹ್ಯಾಕಾಶಕ್ಕೆ ಹೋಗುವುದು ಅವರ ಬಹುದಿನಗಳ ಕನಸಾಗಿದ್ದು, ಅದು ನನಸಾಗಿದ್ದಕ್ಕೆ ಸಂತೋಷವಾಗಿದೆ ಎಂದು ಹೇಳಿದರು.

ನ್ಯೂ ಶೆಪರ್ಡ್ ಬಾಹ್ಯಾಕಾಶ ನೌಕೆಯು ಕಕ್ಷೆಯಿಂದ ಹೊರಗೆ ಹೋಗದೆ ಅಲ್ಪಾವಧಿಯ ಬಾಹ್ಯಾಕಾಶ ಅನುಭವಗಳನ್ನು ನೀಡುತ್ತದೆ. ಕೇಟಿ ಪೆರ್ರಿ ನ್ಯೂ ಶೆಪರ್ಡ್ ಬಾಹ್ಯಾಕಾಶ ನೌಕೆಯಲ್ಲಿ ಇಬ್ಬರು ಪತ್ರಕರ್ತರೊಂದಿಗೆ ಬಾಹ್ಯಾಕಾಶಕ್ಕೆ ಹೋಗಲಿದ್ದಾರೆ ಎಂದು ವರದಿಯಾಗಿದೆ. ಈ ಪ್ರಯಾಣದಲ್ಲಿ ಮಾಜಿ ಪತ್ರಕರ್ತೆ ಲಾರೆನ್ ಸ್ಯಾಂಚೆಜ್ ಪ್ರಮುಖ ಪಾತ್ರ ವಹಿಸುತ್ತಾರೆ. ಈ ಪ್ರಯಾಣವನ್ನು ಈ ವರ್ಷದ ವಸಂತಕಾಲದಲ್ಲಿ ಕೈಗೊಳ್ಳಬಹುದು ಎಂದು ಹೇಳಲಾಗುತ್ತಿದೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net