

ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿ ಪುರಸ್ಕೃತರಾಗಿದ್ದ ಭಾರತದ ಪ್ರಥಮ ವಸ್ತ್ರ ವಿನ್ಯಾಸಕಿ ಭಾನು ಅಥಯ್ಯಾ (91) ಇಂದು ನಿಧನರಾದರು. ಬಹುಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಭಾನು ಇಂದು ಮನೆಯಲ್ಲಿ ಸಾವನ್ನಪ್ಪಿದ್ದಾರೆ ಎಂದು ಅವರ ಪುತ್ರಿ ರಾಧಿಕಾ ಗುಪ್ತಾ ತಿಳಿಸಿದ್ದಾರೆ.
1983ರಲ್ಲಿ ಗಾಂಧಿ ಸಿನಿಮಾದಲ್ಲಿ ಇವರು ಮಾಡಿದ್ದ ವಸ್ತ್ರವಿನ್ಯಾಸಕ್ಕೆ ಆಸ್ಕರ್ ಪ್ರಶಸ್ತಿ ಲಭಿಸಿತ್ತು. ಭಾನು ಅವರು ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ಜನಿಸಿದ್ದರು. 1956ರಿಂದ ಹಿಂದಿ ಸಿನಿಮಾಗಳಲ್ಲಿ ವಸ್ತ್ರವಿನ್ಯಾಸಕಿಯಾಗಿ ವೃತ್ತಿ ಆರಂಭಿಸಿದ್ದರು. ಇದನ್ನೂ ಓದಿ: ನಟಿ ಪ್ರಿಯಾಂಕಾ ಚೋಪ್ರಾರ ‘ಫೇವರಿಟ್ ಕೋ-ವರ್ಕರ್’ ಯಾರು ಗೊತ್ತಾ?
ಎಂಟು ವರ್ಷಗಳ ಹಿಂದೆ ಅವರ ಮಿದುಳಿನಲ್ಲಿ ಗಡ್ಡೆಯಾಗಿತ್ತು. ಮೂರು ವರ್ಷಗಳ ಹಿಂದೆ ಎಡಭಾಗ ಪೂರ್ತಿ ಪಾರ್ಶ್ವವಾಯುವಿಗೆ ತುತ್ತಾದ ಮೇಲೆ ಪೂರ್ತಿಯಾಗಿ ಹಾಸಿಗೆ ಹಿಡಿದಿದ್ದರು ಎಂದು ಪುತ್ರಿ ತಿಳಿಸಿದ್ದಾರೆ.
ಭಾನು ಅವರ ಅಂತ್ಯಕ್ರಿಯೆ ದಕ್ಷಿಣ ಮುಂಬೈನ ಚಂದನ್ವಾಡಿ ಶವಾಗಾರದಲ್ಲಿ ನಡೆಯಲಿದೆ.
ಸುಮಾರು 5 ದಶಕಗಳಿಗೂ ಹೆಚ್ಚುಕಾಲ, 100ಕ್ಕೂ ಅಧಿಕ ಸಿನಿಮಾಗಳಲ್ಲಿ ವಸ್ತ್ರವಿನ್ಯಾಸಕಿಯಾಗಿ ಕೆಲಸ ಮಾಡಿದ್ದರು. ಎರಡು ರಾಷ್ಟ್ರೀಯ ಪ್ರಶಸ್ತಿಗಳನ್ನೂ ಗೆದ್ದಿದ್ದರು. (ಏಜೆನ್ಸೀಸ್)