ಭಾರತದ ಉಗ್ರ ಲಂಡನ್​ನಲ್ಲಿ ಸೇಫ್​: ಹಸ್ತಾಂತರ ಕೋರಿದ್ದ ಭಾರತದ ಮನವಿ ತಿರಸ್ಕೃತ!

ugraweb
Published on

ಲಂಡನ್: 1993ರಲ್ಲಿ ಗುಜರಾತ್​ನಲ್ಲಿ ನಡೆದಿರುವ ಬಾಂಬ್​ ಸ್ಫೋಟದ ಪ್ರಮುಖ ಆರೋಪಿ ಹಾಗೂ ಭೂಗತ ಪಾತಕಿ ದಾವೂದ್‌ ಇಬ್ರಾಹಿಂನ ಬಂಟ ಟೈಗರ್‌ ಹನೀಫ್‌ನನ್ನು ಹಸ್ತಾಂತರಿಸಲು ಲಂಡನ್​ ಸರ್ಕಾರ ನಿರಾಕರಿಸಿದೆ.

ಸ್ಫೋಟಕಗಳು, ಪಿಸ್ತೂಲುಗಳು ಮತ್ತು ಇತರ ಆಯುಧಗಳನ್ನು ಹೊಂದಿರುವ ಮುಸ್ಲಿಂ ಗುಂಪೊಂದರ ಸದಸ್ಯನಾಗಿರುವ ಟೈಗರ್‌ ಹನೀಫ್‌ ಅಲಿಯಾಸ್‌ ಹನೀಫ್‌ ಮೊಹಮ್ಮದ್‌ ಉಮರ್ಜಿ ಪಟೇಲ್‌, 1992ರ ಮಸೀದಿ ಧ್ವಂಸ ಸಂಬಂಧ ಪ್ರತಿಕಾರವಾಗಿ ಹಿಂದೂ ಸಮುದಾಯವನ್ನು ಗುರಿಯಾಗಿಸಿಕೊಂಡು ಭಯೋತ್ಪಾದಕ ದಾಳಿ ನಡೆಸಿದ್ದ.

2010ರ ಮಾರ್ಚ್‌ ತಿಂಗಳು ಗ್ರೇಟರ್‌ ಮಾಂಚೆಸ್ಟರ್‌ನ ಬೋಲ್ಟನ್‌ ನಗರದಲ್ಲಿ ಬಂಧಿಸಲಾಗಿತ್ತು. ಆತನನ್ನು ಭಾರತಕ್ಕೆ ಹಸ್ತಾಂತರಿಸುವಂತೆ ವೆಸ್ಟ್‌ಮಿನಿಸ್ಟರ್‌ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯ 2012ರಲ್ಲಿ ಆದೇಶಿಸಿತ್ತು. ಈ ಹಿನ್ನೆಲೆಯಲ್ಲಿ ಆತನ ಹಸ್ತಾಂತರಕ್ಕೆ ಭಾರತ ಕೋರಿತ್ತು. ಇದನ್ನು ಬ್ರಿಟನ್‌ ತಿರಸ್ಕರಿಸಿದೆ.

2010ರಲ್ಲಿ ಗ್ರೇಟರ್‌ ಮ್ಯಾಂಚೆಸ್ಟರ್‌ ಬಳಿಯ ಬೋಲ್ಟನ್‌ನ ದಿನಸಿ ಅಂಗಡಿಯಲ್ಲಿ ಸ್ಕಾಟ್‌ಲೆಂಡ್‌ ಯಾರ್ಡ್‌ ಪೊಲೀಸರು ಈತನನ್ನು ಬಂಧಿಸಿದ್ದರು. ಈತನ ಬಂಧನಕ್ಕೆ ಭಾರತದಿಂದ ವಾರೆಂಟ್​ ಇದ್ದುದರಿಂದ ಬಂಧಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಬ್ರಿಟನ್‌ ಆತನನ್ನು ಭಾರತಕ್ಕೆ ಹಸ್ತಾಂತರಿಸುವ ಪ್ರಕ್ರಿಯೆಗೆ ಮುಂದಾಗಿತ್ತು. ಹಸ್ತಾಂತರ ಬೆದರಿಕೆಯಲ್ಲಿದ್ದ ಹನೀಫ್‌ ಅದರಿಂದ ಪಾರಾಗಲು ಬಹಳ ಪ್ರಯತ್ನ ಪಟ್ಟಿದ್ದ. ವಕೀಲರ ಮೂಲಕ ಗೃಹ ಕಾರ್ಯದರ್ಶಿಯವರಿಗೆ ಮನವಿಯನ್ನೂ ಸಲ್ಲಿಸಿದ್ದ.

ಒಂದೊಮ್ಮೆ ತನ್ನನ್ನು ಹಸ್ತಾಂತರ ಮಾಡಿದರೆ ಪೊಲೀಸರು ಮಾನಸಿಕ ಹಾಗೂ ದೈಹಿಕವಾಗಿ ಹಿಂಸೆ ನೀಡುತ್ತಾರೆ ಎನ್ನುವ ವಾದ ಮಂಡಿಸಿದ್ದ. ಆದರೆ ಬ್ರಿಟನ್‌ ಹೈಕೋರ್ಟ್‌ ಆತನ ಅರ್ಜಿಯನ್ನು ವಜಾ ಮಾಡಿ, ಪ್ರಕರಣವನ್ನು ಪರಿಶೀಲಿಸಲು ಗೃಹ ಕಾರ್ಯದರ್ಶಿಗೆ ವರ್ಗಾಯಿಸಿತ್ತು. ಇದೀಗ ಹಲವು ವರ್ಷಗಳ ನಂತರ, ಭಾರತದ ಮನವಿಯನ್ನು ಲಂಡನ್​ ತಿರಸ್ಕರಿಸಿದೆ.

ಮದ್ಯದ ದೊರೆ ವಿಜಯ ಮಲ್ಯ ಕೂಡ ಇದೇ ರೀತಿ ಲಂಡನ್​ನಲ್ಲಿ ತಲೆಮರೆಸಿಕೊಂಡಿರುವುದು ಉಲ್ಲೇಖಾರ್ಹ (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net