VIDEO: "ಆತ್ಮನಿರ್ಭರ್​ ಭಾರತ್​"ಗೆ ಸುಪ್ರಸಿದ್ಧ ಸಂಗೀತಗಾರರಿಂದ ಹೀಗೊಂದು ನಮನ... ಟ್ವಿಟರ್​ನಲ್ಲಿ ಶ್ಲಾಘನೆಗಳ ಮಹಾಪೂರ...​

atma-songweb
Published on

ನವದೆಹಲಿ: ಕೇಂದ್ರ ಸರ್ಕಾರದ ಆತ್ಮ ನಿರ್ಭರ್​ ಭಾರತ್​ ಪರಿಕಲ್ಪನೆ ಈಗ ದೇಶಾದ್ಯಂತ ಸಂಚಲನ ಮೂಡಿಸಿದೆ. ಕರೊನಾ ಮಹಾಮಾರಿಯಿಂದ ತತ್ತರಿಸುವ ಇಂದಿನ ದಿನಗಳಲ್ಲಿ ಈ ಪರಿಕಲ್ಪನೆ ಜನರಿಗೆ ಉತ್ತೇಜನ ನೀಡುತ್ತಿದೆ.

ಇದೇ ಪರಿಕಲ್ಪನೆಯಿಂದ ಸ್ಫೂರ್ತಿಗೊಂಡ 211 ಭಾರತೀಯ ಗಾಯಕರ ಹಕ್ಕುಗಳ ಸಂಘ (ಇಸ್ರಾ) ಸದಸ್ಯರು ಒಟ್ಟಿಗೆ ಸೇರಿ 'ಜಯತು ಜಯತು ಭಾರತಂ - ವಸುದೇವ್ ಕುಟುಂಬಕಂ' ಎಂಬ ಹೊಸ ಹಾಡಿನ ವೀಡಿಯೋ ಬಿಡುಗಡೆ ಮಾಡಿದ್ದಾರೆ. ಈ ವೀಡಿಯೋ ನೋಡಿದ ಪ್ರಧಾನಿ ನರೇಂದ್ರ ಮೋದಿ ಅವರು ತುಂಬಾ ಮೆಚ್ಚುಗೆ ವ್ಯಕ್ತಪಡಿಸಿದ್ದು, ಅದನ್ನು ತಮ್ಮ ಟ್ವಿಟರ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಗಾಯಕಿ ಗಾಯಕಿ ಲತಾ ಮಂಗೇಶ್ಕರ್ ಅವರು ಪೋಸ್ಟ್ ಮಾಡಿದ ವೀಡಿಯೋ ಅನ್ನು ಅವರು ತಮ್ಮ ಖಾತೆಯಲ್ಲಿ ಹಂಚಿಕೊಂಡು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

ಪ್ರಸಿದ್ಧ ಗಾಯಕರಾದ ಎಸ್​.ಪಿ, ಬಾಲಸುಬ್ರಹ್ಮಣ್ಯಂ, ಲತಾ ಮಂಗೇಶ್ಕರ್​, ಸೋನು ನಿಗಮ್, ಶಂಕರ್ ಮಹಾದೇವನ್​, ಆಶಾ ಭೋಸ್ಲೆ, ಉಷಾ ಉತ್ತುಪ, ಚಿತ್ರಾ, ಪ್ರಸೂನ್ ಜೋಶಿ, ವಸುಂಧರಾ ದಾಸ್​ ಸೇರಿದಂತೆ, ಕನ್ನಡದ ಖ್ಯಾತ ಹಿನ್ನೆಲೆ ಗಾಯಕರಾಗಿರುವ ಬಿ ಆರ್ ಛಾಯಾ, ವಿಜಯ್ ಪ್ರಕಾಶ್, ಸಂಗೀತಾ ಕಟ್ಟಿ, ಶಮಿತಾ ಮಲ್ನಾಡ್ ಸೇರಿದಂತೆ ಅನೇಕ ಮಂದಿ ಇದಕ್ಕೆ ದನಿಗೂಡಿಸಿದ್ದಾರೆ.

ಲಾಕ್​ಡೌನ್​ ಹಿನ್ನೆಲೆಯಲ್ಲಿ ಎಲ್ಲರೂ ತಮ್ಮ ಮನೆಯಲ್ಲಿಯೇ ಕುಳಿತು ರೆಕಾರ್ಡಿಂಗ್​ ಮಾಡಿ ಕಳುಹಿಸಿರುವುದು ವಿಶೇಷ. ಈ ಹಾಡನ್ನು ಪ್ರಸೂನ್ ಜೋಶಿ ಬರೆದಿದ್ದು, ಶಂಕರ್ ಮಹಾದೇವನ್ ಸಂಗೀತ ಸಂಯೋಜಿಸಿದ್ದಾರೆ.

ಈ ಹಾಡು ಎಲ್ಲರನ್ನೂ ರೋಮಾಂಚನಪಡಿಸುವುದು ಮಾತ್ರವಲ್ಲದೇ ಕರೊನಾ ವೈರಸ್​ನ ಈ ದಿನಗಳಲ್ಲಿ ಜನರಲ್ಲಿ ಆತ್ಮವಿಶ್ವಾಸವನ್ನೂ ಮೂಡಿಸುತ್ತದೆ. ಇದು 'ಆತ್ಮ ನಿರ್ಭರ್' ಭಾರತಕ್ಕೆ ಒಂದು ಸುಮಧುರ ಸಂದೇಶವನ್ನೂ ನೀಡುತ್ತದೆ ಎಂದು ಪ್ರಧಾನಿ ಟ್ವೀಟ್​ ಮಾಡಿದ್ದಾರೆ.

ಲತಾ ಮಂಗೇಶ್ಕರ್ ಅವರು ಟ್ವಿಟರ್‌ನಲ್ಲಿ ವಿಡಿಯೊ ಹಂಚಿಕೊಂಡಿದ್ದು, ಭಾರತದ 'ಆತ್ಮ ನಿರ್ಭರ್' ಭಾರತದ ಸ್ಫೂರ್ತಿಯಿಂದ ಪ್ರೇರೇಪಿತರಾಗಿ ನಮ್ಮ ಇಸ್ರಾದ ಪ್ರತಿಭಾನ್ವಿತ ಗಾಯಕರು ಒಗ್ಗೂಡಿ ಈ ಹಾಡನ್ನು ರಚಿಸಿದ್ದಾರೆ. ಈ ಹಾಡನ್ನು ಭಾರತದ ಜನರಿಗೆ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಮರ್ಪಿಸಲಾಗಿದೆ ಎಂದು ಹೇಳಿದ್ದಾರೆ.

'ಇಸ್ರಾ' ಸದಸ್ಯರು ಒಟ್ಟಿಗೆ ಸೇರಿ ಆತ್ಮ ನಿರ್ಭರ್ ಭಾರತದ ಸ್ಫೂರ್ತಿಗೆ ಸುಮಧುರ ಗೀತೆಯ ಮೂಲಕ ವಂದನೆಗಳನ್ನು ಸಲ್ಲಿಸಿರುವ ಅತಿದೊಡ್ಡ ಗೀತೆ ಎನ್ನಲಾಗಿದೆ. ಈ ವಿಡಿಯೊದಲ್ಲಿ ಆರೋಗ್ಯ ಕಾರ್ಯಕರ್ತರಾದ ಕೋವಿಡ್-19 ಯೋಧರ ಕೆಲ ದೃಶ್ಯ ತುಣುಕುಗಳೂ ಇವೆ. ಕೊನೆಯಲ್ಲಿ ನರೇಂದ್ರ ಮೋದಿ ದೀಪ ಬೆಳಗಿಸುತ್ತಿರುವ ಕ್ಲಿಪ್ ಸೇರಿಸಲಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net