ಪತ್ನಿ ಲಾಕ್​ಡೌನ್​ನಲ್ಲಿ ತವರಿನಲ್ಲಿದ್ದಾಗ ಮೂರು ಮಕ್ಕಳ ತಂದೆ ಮಾಡಿಯೇ ಬಿಟ್ಟ ಕಿತಾಪತಿ!

muslimweb
Published on

ಬರೇಲಿ (ಉತ್ತರ ಪ್ರದೇಶ): ಲಾಕ್​ಡೌನ್​ನಿಂದ ಒಬ್ಬೊಬ್ಬರಿಗೆ ಒಂದೊಂದು ರೀತಿ ಸಮಸ್ಯೆ. ಹೋಟೆಲ್​ಗಳೆಲ್ಲಾ ಕ್ಲೋಸ್​ ಆಗಿದ್ದರಿಂದ ಎಷ್ಟೋ ಒಂಟಿ ಪುರುಷರು ಸ್ವಂತದ್ದಾಗಿ ಅಡುಗೆ ಮಾಡಿ ಕಲಿತುಕೊಂಡದ್ದಾಗಿದೆ. ಎಲ್ಲದಕ್ಕೂ ಕೆಲಸದವಳನ್ನೇ ನೆಚ್ಚಿಕೊಂಡು ಇದ್ದವರು ಖುದ್ದು ಕೆಲಸ ಮಾಡುವುದನ್ನೂ ಕಲಿತಿದ್ದಾರೆ.

ಇದೆಲ್ಲಾ ಬೇರೆ ವಿಷಯ. ಆದರೆ ಇಲ್ಲೊಬ್ಬ ಪತಿ ಮಹಾಶಯ, ಹೆಂಡತಿಗೆ ತವರಿನಲ್ಲಿ ಲಾಕ್​ಡೌನ್​ನಲ್ಲಿ ಸಿಲುಕಿಕೊಂಡಿದ್ದಾಳೆ ಎಂದು ಬೇರೆಯವಳನ್ನು ಮದುವೆಯಾಗುವುದಾ?

ಹೌದು. ಇಂಥದ್ದೊಂದು ಘಟನೆ ನಡೆದಿರುವುದು ಉತ್ತರ ಪ್ರದೇಶದ ಬರೇಲಿಯಲ್ಲಿ. ಇಂಥದ್ದೊಂದು ಕಿತಾಪತಿ ಮಾಡಿರುವಾತ ನಯೀಮ್ ಮನ್ಸೂರಿ. ಈತನ ಪತ್ನಿ ನಸೀಮ್​ ಲಾಕ್​ಡೌನ್​ಗಿಂತ ಮುಂಚೆ ತವರು ಮನೆಗೆ ಹೋಗಿದ್ದಳು. ಲಾಕ್​ಡೌನ್​ ಘೋಷಣೆಯಾಗಿದ್ದರಿಂದ ಮನೆಗೆ ಬರಲು ಆಕೆಗೆ ಸಾಧ್ಯವಾಗಲಿಲ್ಲ.

ಇತ್ತ ಒಂಟಿಯಾಗಿದ್ದ ಪತಿಮಹಾಶಯ, ಇನ್ನು ಲಾಕ್​ಡೌನ್​ ಮುಗಿಯುವುದು ಯಾವಾಗಲೋ ಎಂದು ಹೆಂಡತಿಯನ್ನು ಕಾಯುವ ಬದಲು ಇನ್ನೊಂದು ಮದುವೆಯಾದರೆ ಹೇಗೆ ಎಂಬ ಪ್ಲ್ಯಾನ್​ ಮಾಡಿದ. ಯೋಚನೆ ಅಷ್ಟೇ ಮಾಡಿದ್ದರೆ ಆಗುತ್ತಿತ್ತೇನೋ, ಆದರೆ ಆತ ತನ್ನ ಸಂಬಂಧಿಯೊಬ್ಬಳನ್ನು ಕರೆದುಕೊಂಡು ಬಂದು ಮದುವೆಯಾಗಿಯೇ ಬಿಟ್ಟ!

ಈ ಸುದ್ದಿ ಅಕ್ಕಪಕ್ಕದ ಮನೆಯವರ ಮೂಲಕ, ಪತ್ನಿಗೆ ತಿಳಿಯಿತು. ಲಬಲಬ ಎಂದು ಬಾಯಿಬಡಿದುಕೊಂಡಾಕೆ. ಆದರೆ ಗಂಡನಿಗೆ ಮದುವೆ ಆಗಿಹೋಗಿದೆ. ಏನೂ ಮಾಡುವಂತೆ ಇರಲಿಲ್ಲ. ಇದೀಗ ತನಗೆ ನ್ಯಾಯ ದೊರಕಿಸಿಕೊಡುವಂತೆ ಕೋರಿ ಈಕೆ ಸ್ವಯಂ ಸೇವಾ ಸಂಸ್ಥೆಯ ಮೊರೆ ಹೋಗಿದ್ದಾರೆ.

ಕೇಂದ್ರ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ಅವರ ಸಹೋದರಿ ಫರ್ಹತ್ ನಖ್ವಿ ಅವರ `ಮೇರಾ ಹಕ್' ಎನ್‌ಜಿಓಗೆ ಪತ್ನಿ ದೂರು ದಾಖಲಿಸಿದ್ದಾರೆ. ನಸೀಮ್ ಅವರಿಗೆ ನ್ಯಾಯ ಒದಗಿಸಲು ಎಲ್ಲಾ ರೀತಿಯ ಹೋರಾಟ ಮಾಡುವುದಾಗಿ ನಖ್ವಿ ಭರವಸೆ ನೀಡಿದ್ದಾರೆ.

ಅಂದಹಾಗೆ ನಸೀಮ್​ ಮತ್ತು ನಯೀಮ್​ ದಂಪತಿಗೆ ಮೂರು ಮಕ್ಕಳಿದ್ದಾರೆ. ಮಾರ್ಚ್​ 19ರಂದು ನಸೀಮ್​ ತವರಿಗೆ ಹೋಗಿದ್ದರು. ಆದರೆ ಲಾಕ್​ಡೌನ್​ ಘೋಷಣೆ ಆಗಿದ್ದರಿಂದ ಮನೆಗೆ ಬರಲು ಆಗಿರಲಿಲ್ಲ. ಸುದ್ದಿ ತಿಳಿಯುತ್ತಿದ್ದಂತೆಯಾ ಮನೆಗೆ ದೌಡಾಯಿಸಿ ತಮ್ಮ ಜಾಗದಲ್ಲಿ ಹೊಸ ಪತ್ನಿ ಇರುವುದನ್ನು ನೋಡಿ ಕಂಗಾಲಾಗಿ ಹೋಗಿದ್ದಾರೆ. ಸದ್ಯ ಈ ವಿಷಯ ಸಾಮಾಜಿಕ ಜಾಲತಾಣದಲ್ಲಿ ಭಾರಿ ಚರ್ಚೆಗೆ ಒಳಗಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net