

ಪಹಲ್ಗಾಮ್ ಪ್ರವಾಸಿಗರ ಮೇಲೆ ಭಯೋತ್ಪಾದಕರು ಹೇಯದಾಳಿ ನಡೆಸಿದ್ದಕ್ಕೆ ಪ್ರತೀಕಾರವಾಗಿ ಭಾರತೀಯ ಸೇನೆ ‘ಆಪರೇಷನ್ ಸಿಂಧೂರ’ ಹೆಸರಿನಲ್ಲಿ ಕಾರ್ಯಾಚರಣೆ ನಡೆಸಿದ್ದು ಗೊತ್ತೇ ಇದೆ. ಈ ದಾಳಿಯಿಂದಾಗಿ ಪಾಕಿಸ್ತಾನ ಅಪಾರ ಹಾನಿ ಅನುಭವಿಸಬೇಕಾಗಿ ಬಂತು. ಅಂತಾರಾಷ್ಟ್ರೀಯ ವಲಯದಲ್ಲಿ ಮುಖವುಳಿಸಿಕೊಳ್ಳುವ ಸಲುವಾಗಿ ತಾನೂ ದಾಳಿ ನಡೆಸಿತಾದರೂ, ಅದರಿಂದ ಮತ್ತಷ್ಟು ಪೆಟ್ಟು ತಿನ್ನಬೇಕಾಯಿತು. ಹೀಗೆ ಭಾರತೀಯ ಸೇನೆ ಸ್ಪಷ್ಟ ಮೇಲುಗೈ ಸಾಧಿಸಿರುವಾಗ, ಇದ್ದಕ್ಕಿದ್ದಂತೆ ಕದನ ವಿರಾಮದ ಘೋಷಣೆ ಆಯಿತು. ಆದರೆ ಈ ಘೋಷಣೆ ಮಾಡಿದ್ದು ಭಾರತ ಅಥವಾ ಪಾಕಿಸ್ತಾನದ ನಾಯಕರಲ್ಲ. ಬದಲಾಗಿ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್.
ಭಾರತ ಮತ್ತು ಪಾಕ್ ಸಂಘರ್ಷ ನಿಲ್ಲಿಸುವ ನಿಟ್ಟಿನಲ್ಲಿ ತಾವು ಮಧ್ಯಸ್ಥಿಕೆ ವಹಿಸಿದ್ದಾಗಿ ಅವರು ತಮ್ಮ ಟ್ರೂಥ್ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದಾಗ ಸಂಚಲನ ಉಂಟಾಗಿದ್ದರ ಜತೆಗೆ ವಿವಾದದ ಕಿಡಿಯೂ ಹೊತ್ತಿಕೊಂಡಿತು. ಟ್ರಂಪ್ ಮಧ್ಯಸ್ಥಿಕೆ ವಿಚಾರವನ್ನು ಭಾರತ ಸರ್ಕಾರ ಅಲ್ಲಗಳೆಯಿತಲ್ಲದೆ, ಪಾಕಿಸ್ತಾನವೇ ಕದನ ವಿರಾಮ ಪ್ರಸ್ತಾಪವನ್ನು ಮೊದಲು ಮುಂದಿಟ್ಟಿತೆಂದು ಸ್ಪಷ್ಟಪಡಿಸಿತು. ಆದರೆ ವಿಪಕ್ಷಗಳು ಸರ್ಕಾರದ ಈ ಸ್ಪಷ್ಟನೆಯನ್ನು ಸಂಪೂರ್ಣವಾಗಿ ಸ್ವೀಕರಿಸಲಿಲ್ಲ. ಇನ್ನೊಂದೆಡೆ, ಟ್ರಂಪ್ ಸಹ ವಿವಿಧ ವೇದಿಕೆಗಳಲ್ಲಿ ಮಧ್ಯಸ್ಥಿಕೆ ವಿಚಾರವನ್ನು ಪ್ರಸ್ತಾಪ ಮಾಡುತ್ತಲೇ ಇದ್ದರು. ಇದೀಗ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಈ ವಿಚಾರವಾಗಿ ಮರುಸ್ಪಷ್ಟನೆ ನೀಡುವ ಮೂಲಕ ಜಿಜ್ಞಾಸೆಗೆ ಪರದೆ ಎಳೆಯುವ ಯತ್ನ ಮಾಡಿದ್ದಾರೆನ್ನಬಹುದು.
ಕೆನಡಾದಲ್ಲಿ ನಡೆದ ಜಿ-7 ಶೃಂಗಸಭೆಗೆ ತೆರಳಿದ್ದಾಗ ಮೋದಿಯವರು ಟ್ರಂಪ್ ಜೊತೆಗೆ ಸುಮಾರು 35 ನಿಮಿಷಗಳ ಕಾಲ ದೂರವಾಣಿಯಲ್ಲಿ ಮಾತುಕತೆ ನಡೆಸಿದರು. ‘ಪಾಕ್ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿನ ಉಗ್ರನೆಲೆಗಳನ್ನು ಮಾತ್ರ ಗುರಿಯಾಗಿಸಿಕೊಂಡು ಭಾರತ ದಾಳಿ ನಡೆಸಿತ್ತೆಂಬುದನ್ನು ಪ್ರಧಾನಿ ಸ್ಪಷ್ಟಪಡಿಸಿದರು. ಇದಲ್ಲದೆ, ಭಾರತ ಎಂದಿಗೂ ಮಧ್ಯಸ್ಥಿಕೆಯನ್ನು ಸ್ವೀಕರಿಸಿಲ್ಲ, ಮುಂದೆಯೂ ಸ್ವೀಕರಿಸುವುದಿಲ್ಲ ಎಂದು ಪ್ರಧಾನಿ ಖಚಿತ ಮಾತುಗಳಲ್ಲಿ ಹೇಳಿದರು’ ಎಂದು ಭಾರತದ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ ಅವರು ಮಾತುಕತೆಯ ವಿವರಗಳನ್ನು ನೀಡಿದ್ದಾರೆ. ಕೆನಡಾ ಬಳಿಕ ಅಮೆರಿಕಕ್ಕೆ ಬರುವಂತೆ ಟ್ರಂಪ್ ಮೋದಿಗೆ ಆಹ್ವಾನ ನೀಡಿದರು. ಆದರೆ ಕ್ರೊಯೋಷ್ಯಾ ಭೇಟಿ ಪೂರ್ವನಿರ್ಧರಿತವಾಗಿದ್ದರಿಂದ ಮೋದಿಯವರು ಟ್ರಂಪ್ ಆಹ್ವಾನವನ್ನು ಒಪ್ಪಿಕೊಳ್ಳಲಿಲ್ಲ.
ತಾವೇ ಮಧ್ಯಸ್ಥಿಕೆ ಏರ್ಪಡಿಸಿದ್ದು ಎಂದು ಹೇಳುತ್ತಲೇ ಬಂದಿದ್ದ ಟ್ರಂಪ್, ಇದೀಗ ಸ್ವರ ಬದಲಿಸಿದಂತಿದೆ. ಭಾರತ ಮತ್ತು ಪಾಕ್ ನಾಯಕರು ಕದನ ವಿರಾಮ ಮಾಡಿಕೊಂಡರು ಎಂದು ಅವರು ಹೇಳಿದ್ದಾರೆ. ಟ್ರಂಪ್ ಮಾತು ಹಾಗೂ ಕೃತಿಯನ್ನು ಜೀರ್ಣಿಸಿಕೊಳ್ಳುವುದು ವಿಶ್ವ ನಾಯಕರಿಗೆ ಕಷ್ಟವಾಗುತ್ತಿದೆ. ಪಾಕ್ ಸೇನಾ ಮುಖ್ಯಸ್ಥ ಅಸೀಮ್ ಮುನೀರ್ ಅವರಿಗೆ ಔತಣಕೂಟ ಏರ್ಪಡಿಸಿದ್ದು ಟ್ರಂಪ್ ನಡೆಯ ಮತ್ತೊಂದು ತಾಜಾ ನಿದರ್ಶನ. ಇರಾನ್ ವಿಚಾರವಾಗಿ ಪಾಕ್ ಬೆಂಬಲ ಪಡೆಯುವುದು ಟ್ರಂಪ್ ಆಲೋಚನೆ ಇರಬಹುದು. ಇದೇನೇ ಇದ್ದರೂ, ಪಾಕಿಸ್ತಾನ ಜೊತೆಗಿನ ವಿವಾದ ಹಾಗೂ ಕಾಶ್ಮೀರ ವಿಷಯದಲ್ಲಿ ಮೂರನೆಯವರ ಮಧ್ಯಸ್ಥಿಕೆಯನ್ನು ಭಾರತ ಮೊದಲಿನಿಂದಲೂ ನಿರಾಕರಿಸುತ್ತಲೇ ಬಂದಿದೆ; ಈಗಲೂ ಆ ನಿಲುವು ಮುಂದುವರಿದಿರುವುದು ಸಮಂಜಸವಾಗಿದೆ.