ಭೀಕರ ದಾಳಿಗೆ ಭಾರತದ ದಿಟ್ಟ ಉತ್ತರ

pulwama
Published on

ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ 2019ರ ಫೆಬ್ರವರಿ 14ರಂದು ಭಯೋತ್ಪಾದಕರು ನಡೆಸಿದ ದಾಳಿ ಭಾರತದಲ್ಲೇ ನಡೆದ ದೊಡ್ಡ ಹಾಗೂ ಭೀಕರ ಭಯೋತ್ಪಾದನಾ ದಾಳಿಗಳಲ್ಲಿ ಒಂದು. ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಆರ್​ಪಿಎಫ್) ವಾಹನಗಳ ಸಾಲಿನ (ಕಾನ್ವಾಯ್) ಮೇಲೆ ನಡೆದ ಅಂದಿನ ದಾಳಿಯಲ್ಲಿ 40 ಸಿಆರ್​ಪಿಎಫ್ ಯೋಧರು ಹುತಾತ್ಮರಾದರು. ಹಲವರು ಗಾಯಗೊಂಡಿದ್ದರು.

ಜೈಷ್ ಹೊಣೆ: ದೇಶ ಕಾಯುವ ಯೋಧರನ್ನು ಬಲಿ ತೆಗೆದುಕೊಂಡ ಈ ಘೋರ ಹತ್ಯಾಕಾಂಡಕ್ಕೆ ತಾನೇ ಹೊಣೆಯೆಂದು ಪಾಕಿಸ್ತಾನ ಮೂಲದ ಜೈಷ್-ಎ-ಮೊಹಮದ್ ಭಯೋತ್ಪಾದಕ ಸಂಘಟನೆ ಹೇಳಿಕೊಂಡಿತು. ಈ ದಾಳಿ ಹಿಂದೆ ಪಾಕಿಸ್ತಾನದ ಕೈವಾಡ ಇದೆಯೆಂದು ಭಾರತ ಆಪಾದಿಸಿದ್ದು ಅದನ್ನು ಪಾಕಿಸ್ತಾನ ತಳ್ಳಿಹಾಕಿತು.

ಬಾಲಾಕೋಟ್ ದಾಳಿ ಮೂಲಕ ಎದುರೇಟು: ಉಗ್ರರ ಅಟ್ಟಹಾಸಕ್ಕೆ ಉತ್ತರ ನೀಡಲು ಭಾರತ ಸಂಕಲ್ಪ ಮಾಡಿತು. ಪಾಕಿಸ್ತಾನದ ಖೈಬರ್ ಪಖ್ತುನ್​ಖ್ವಾದ ಬಾಲಾಕೋಟ್​ನಲ್ಲಿರುವ ಜೈಷ್ ಉಗ್ರಗಾಮಿಗಳ ತಾಣಗಳ ಮೇಲೆ ಪುಲ್ವಾಮಾ ದಾಳಿಯ 12 ದಿನಗಳ ನಂತರ, ಅಂದರೆ ಫೆಬ್ರವರಿ 26ರಂದು ಭಾರತೀಯ ವಾಯುಪಡೆಯ ಫೈಟರ್ ವಿಮಾನಗಳು ನುಗ್ಗಿ ಬಾಂಬ್ ದಾಳಿ ನಡೆಸಿ ಶಿಬಿರಗಳನ್ನು ಉಧ್ವಸ್ತಗೊಳಿಸಿದವು. ಗಡಿ ನಿಯಂತ್ರಣ ರೇಖೆ ದಾಟಿ ಸುಮಾರು 85 ಕಿ.ಮೀ. ಒಳನುಗ್ಗಿದ 12 ಮಿರಾಜ್ -2000 ಯುದ್ಧ ವಿಮಾನಗಳು ಪಾಕ್ ಆಕ್ರಮಿತ ಕಾಶ್ಮೀರ ಮಾತ್ರವಲ್ಲದೆ, ಪಾಕಿಸ್ತಾನ ಗಡಿ ಒಳಗಿದ್ದ ಜೈಷ್ ಉಗ್ರರ ಪ್ರಮುಖ ತರಬೇತಿ ಕೇಂದ್ರವನ್ನೂ ನಾಶಗೊಳಿಸಿದವು.

ಫೆ. 26ರ ನಸುಕಿನ ಜಾವ 3.30ರ ಸುಮಾರಿಗೆ ನಡೆದ ವೈಮಾನಿಕ ದಾಳಿಯಲ್ಲಿ ಜೈಷ್-ಎ-ಮೊಹಮ್ಮದ್ ಸಂಘಟನೆಯ ಉಗ್ರಶಿಬಿರಗಳು ನಾಶವಾಗಿ, ಕಮಾಂಡರ್​ಗಳು ಸೇರಿದಂತೆ 300ಕ್ಕೂ ಹೆಚ್ಚು ಉಗ್ರರು ಹತರಾದರು. ಭಾರತದ ಹಲವೆಡೆ ದಾಳಿ ನಡೆಸಲು ಈ ಉಗ್ರ ಸಂಘಟನೆಗಳು ಸಂಚು ರೂಪಿಸುತ್ತಿದ್ದ ಖಚಿತ ಮಾಹಿತಿ ಮೇರೆಗೆ ಈ ದಾಳಿ ನಡೆಯಿತು. ಭಾರತ ಭಯೋತ್ಪಾದನೆಯನ್ನು ಸಹಿಸುವುದಿಲ್ಲ ಮತ್ತು ಮೊದಲಿನಂತೆ ಮೃದುಧೋರಣೆ ತಳೆಯುವುದಿಲ್ಲ ಎಂಬುದನ್ನು ಈ ಮೂಲಕ ಸ್ಪಷ್ಟಪಡಿಸಿತು.

ಭಾರತದ ಖಡಕ್ ಸಂದೇಶ: ಪುಲ್ವಾಮಾ ದಾಳಿ ನಡೆಯುತ್ತಲೇ ಪಾಕ್​ನ ಉನ್ನತ ರಾಯಭಾರಿಯನ್ನು ಕರೆಸಿಕೊಂಡ ಭಾರತ ಪ್ರಬಲ ಪ್ರತಿಭಟನೆಯನ್ನು ದಾಖಲಿಸಿತು. ದಾಳಿಗೆ ಪ್ರತಿಯಾಗಿ ಕಾರ್ಯಾಚರಣೆ ನಡೆಸುವ ಪೂರ್ಣ ಸ್ವಾತಂತ್ರ್ಯವನ್ನು ಭದ್ರತಾ ಪಡೆಗಳಿಗೆ ನೀಡಿರುವುದಾಗಿ ಪ್ರಧಾನಿ ನರೇಂದ್ರ ಮೋದಿ ಘೋಷಿಸಿದರು. ಉಗ್ರರ ಅಮಾನುಷ ಕೃತ್ಯಕ್ಕೆ ಇಡೀ ದೇಶದಲ್ಲಿ ಆಕ್ರೋಶದ ಅಲೆ ಎದ್ದಿತು. ಹುತಾತ್ಮ ಯೋಧ ರಿಗೆ ದೇಶಾದ್ಯಂತ ಕಂಬನಿ ತುಂಬಿದ ಕಣ್ಣುಗಳಿಂದ ಶ್ರದ್ಧಾಂಜಲಿ ಸಲ್ಲಿಸಲಾಯಿತು.

balasore

ಅಭಿನಂದನ್ ಶೌರ್ಯ: ಭಾರತೀಯ ವಾಯುಸೇನೆ ಬಾಲಾಕೋಟ್ ಭಯೋತ್ಪಾದಕ ಶಿಬಿರದ ಮೇಲೆ 2019ರ ಫೆಬ್ರವರಿ 26ರಂದು ನಡೆಸಿದ ವಾಯುದಾಳಿಗೆ ಪ್ರತಿಯಾಗಿ, ಭಾರತೀಯ ಸೇನಾನೆಲೆಗಳ ಮೇಲೆ ಪಾಕಿಸ್ತಾನದ ವಾಯುಸೇನೆ (ಫೆ. 27) ವಿಫಲ ದಾಳಿ ನಡೆಸಿತು. ಈ ಸಂದರ್ಭದಲ್ಲಿ, ಪಾಕ್ ಯುದ್ಧ ವಿಮಾನವನ್ನು ಅಟ್ಟಿಸಿಕೊಂಡು ಹೋಗಿ, ಎಫ್-16 ವಿಮಾನವನ್ನು, ಮಿಗ್-21 ಬೈಸನ್ ವಿಮಾನದ ಸಹಾಯದಿಂದ ಹೊಡೆದುರುಳಿಸಿದವರು ಸಾಹಸಿ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್. ಪಾಕ್ ವಿಮಾನವನ್ನು ಅಟ್ಟಿಸಿಕೊಂಡು ಹೋಗುವ ಭರದಲ್ಲಿ, ಪಾಕ್​ನ ಇನ್ನೊಂದು ಫೈಟರ್ ಜೆಟ್​ನಿಂದ ದಾಳಿಗೊಳಗಾದ ವರ್ಧಮಾನ್ ಅವರ ವಿಮಾನ, ಪಾಕ್ ಆಕ್ರಮಿತ ಕಾಶ್ಮೀರದ ಭೂಭಾಗದಲ್ಲಿ ಪತನವಾಯಿತು. ಅಭಿನಂದನ್​ರನ್ನು ಪಾಕ್ ಸೈನಿಕರು ಬಂಧಿಸಿದರು. ಭಾರತದ ಒತ್ತಡ, ಪ್ರತಿದಾಳಿಯ ಭಯ ಮತ್ತು ಅಂತಾರಾಷ್ಟ್ರೀಯ ಒತ್ತಡಕ್ಕೆ ಮಣಿದ ಪಾಕಿಸ್ತಾನ, ಅಭಿನಂದನ್​ರನ್ನು ಮಾರ್ಚ್ 1ರಂದು ಭಾರತಕ್ಕೆ ಹಸ್ತಾಂತರಿಸಿತು.

ಪಾಕ್​ಗೆ ಮುಖಭಂಗ: ಪುಲ್ವಾಮಾ ಘಟನೆ ಬಳಿಕ ರಾಜತಾಂತ್ರಿಕವಾಗಿ ಪಾಕಿಸ್ತಾನವನ್ನು ಕಟ್ಟಿಹಾಕಲು ಮಹತ್ವದ ಕ್ರಮಗಳನ್ನು ಅನುಸರಿಸಿದ ಭಾರತ ಅದಕ್ಕೆ ನೀಡಲಾದ ‘ಪರಮಾಪ್ತ ರಾಷ್ಟ್ರ’ದ ಸ್ಥಾನವನ್ನು ಹಿಂತೆಗೆದುಕೊಂಡಿತು. ಪರಿಣಾಮ, ಪಾಕ್​ನೊಂದಿಗಿನ ವಾಣಿಜ್ಯ-ವಹಿವಾಟುಗಳು ಸ್ಥಗಿತಗೊಂಡವಲ್ಲದೆ ಅಲ್ಲಿಂದ ಆಮದಾಗುವ ಉತ್ಪನ್ನಗಳ ಮೇಲೆ ಶೇಕಡ 200ರಷ್ಟು ಸುಂಕ ಹೇರಿ ಬಿಸಿ ಮುಟ್ಟಿಸಿತು. ಮುಖ್ಯವಾಗಿ, ಪಾಕ್​ನ ಕರಾಳಕೃತ್ಯವನ್ನು ಅಂತಾರಾಷ್ಟ್ರೀಯ ವಲಯಕ್ಕೆ ಮನದಟ್ಟು ಮಾಡಿಕೊಡುವಲ್ಲಿ ಭಾರತ ಯಶಸ್ವಿಯಾಯಿತು. ಅಮೆರಿಕ, ರಷ್ಯಾ, ಜಪಾನ್ ಸೇರಿದಂತೆ ವಿಶ್ವದ ಹಲವು ಶಕ್ತಿಗಳು ಪುಲ್ವಾಮಾ ದಾಳಿಯನ್ನು ಬಲವಾಗಿ ಖಂಡಿಸಿದವು. ಅಷ್ಟು ಮಾತ್ರವಲ್ಲ, ಚೀನಾದ ತಗಾದೆ ನಡುವೆಯೂ ವಿಶ್ವಸಂಸ್ಥೆ ಭದ್ರತಾ ಮಂಡಳಿ ಖಂಡನಾ ನಿರ್ಣಯ ಅಂಗೀಕರಿಸಿದ್ದು ಭಾರತದ ರಾಜತಾಂತ್ರಿಕ ಪ್ರಯತ್ನಗಳಿಗೆ ಸಿಕ್ಕ ಮಹತ್ವದ ಗೆಲುವು. ಈ ಕ್ರಮಗಳ ಬೆನ್ನಲ್ಲೇ, ಭಾರತೀಯ ಸೇನೆ ವೈಮಾನಿಕ ದಾಳಿ ಮೂಲಕ ಉಗ್ರಶಿಬಿರಗಳನ್ನು ಧ್ವಂಸಗೊಳಿಸಿಸುವ ಮೂಲಕ ಭಯೋತ್ಪಾದನಾ ವಿರೋಧಿ ಹೋರಾಟದಲ್ಲಿ ದಿಟ್ಟಹೆಜ್ಜೆ ಇರಿಸಿತು.

ದೇಶಕ್ಕಾಗಿ ಬಲಿದಾನ: 2019ರ ಫೆಬ್ರವರಿ 14ರ ಆ ದುರ್ದಿನ, ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಲೆಥಾಪೋರಾ ಎಂಬಲ್ಲಿ ಈ ಘೋರ ದುಷ್ಕೃತ್ಯ ನಡೆಯಿತು. ಜಮ್ಮು-ಶ್ರೀನಗರ ಹೆದ್ದಾರಿಯಲ್ಲಿ ಸಾಗುತ್ತಿದ್ದ ಸಿಆರ್​ಪಿಎಫ್ ಯೋಧರ ಕಾನ್ವಾಯ್ ಮೇಲೆ ಒಬ್ಬ ಆತ್ಮಹತ್ಯಾ ಬಾಂಬರ್ ಎರಗಿ ಭೀಕರ ಸ್ಪೋಟಕ್ಕೆ ಕಾರಣವಾಗಿದ್ದ.

  • 78 ವಾಹನಗಳಲ್ಲಿ 2,547 ಯೋಧರು ಸಾಗುತ್ತಿದ್ದರು.
  • ಭಾರತೀಯ ಕಾಲಮಾನ ಮುಂಜಾನೆ 3.30ಕ್ಕೆ ಜಮ್ಮುನಿಂದ ಹೊರಟ ಕಾನ್ವಾಯ್.
  • ಆವಂತಿಪೋರಾ ಸಮೀಪ ಲೆಥಾಪೋರಾದಲ್ಲಿ ಮಧ್ಯಾಹ್ನ 3.15ಕ್ಕೆ ಭದ್ರತಾ ಸಿಬ್ಬಂದಿಯಿದ್ದ ಒಂದು ಬಸ್​ಗೆ ಸ್ಪೋಟಕ ತುಂಬಿದ್ದ ಕಾರು ಡಿಕ್ಕಿ ಹೊಡೆಸಿದ ಆತ್ಮಹತ್ಯಾ ದಾಳಿಕೋರ.
  • 76ನೇ ಬೆಟಾಲಿಯನ್​ನ 40 ಯೋಧರು ಹುತಾತ್ಮ.
  • ಸುಮಾರು 80 ಕೆಜಿ ಸ್ಪೋಟಕವನ್ನು ಬಳಸಲಾಗಿತ್ತು.

ಮಂಡ್ಯ ಯೋಧ ಹುತಾತ್ಮ: ಉಗ್ರರು ನಡೆಸಿದ ದಾಳಿಯಲ್ಲಿ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಕೆ.ಎಂ. ದೊಡ್ಡಿ ಗ್ರಾಮದ ಗುಡಿಗೆರೆ ಗರೀಬಿ ಕಾಲನಿ (ವಿವೇಕಾನಂದ ನಗರ) ನಿವಾಸಿ ಎಚ್. ಗುರು (28) ಹುತಾತ್ಮರಾದರು. ಹೊನ್ನಯ್ಯ, ಚಿಕ್ಕತಾಯಮ್ಮ ದಂಪತಿಯ ಮೂವರು ಪುತ್ರರಲ್ಲಿ ಗುರು ಮೊದಲನೆಯವರು.

19 ಆರೋಪಿಗಳು: ಭಾರತೀಯ ತನಿಖಾ ಸಂಸ್ಥೆಗಳು 19 ಆರೋಪಿಗಳನ್ನು ಗುರುತಿಸಿದವು. 2021ರ ಆಗಸ್ಟ್ ಹೊತ್ತಿಗೆ ಇತರ ಆರು ಜನರೊಂದಿಗೆ ಪ್ರಮುಖ ಆರೋಪಿ ಹತರಾದರು. 7 ಜನರನ್ನು ಬಂಧಿಸಲಾಯಿತು. ಕಾಶ್ಮೀರ ಕಬಳಿಸುವ ಸಂಚಿನ ಅಂಗವಾಗಿ ಭಯೋತ್ಪಾದಕ ಕೃತ್ಯಗಳನ್ನು ಪಾಕಿಸ್ತಾನ ಬೆಂಬಲಿಸುತ್ತಿದ್ದು, ಪುಲ್ವಾಮಾದ ಘೋರ ದಾಳಿ ಅದರ ಭಾಗವಾಗಿದೆ.

ಸುಳಿವು ನೀಡಿದ್ದ ಪ್ರಧಾನಿ ಮೋದಿ: ಪುಲ್ವಾಮಾ ದಾಳಿ ನಡೆದ ಮರುದಿನವೇ ಪ್ರತೀಕಾರ ತೀರಿಸಿಕೊಳ್ಳುವ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಸುಳಿವು ನೀಡಿದ್ದರು. ಉಗ್ರರು ದೊಡ್ಡ ತಪು್ಪ ಮಾಡಿದ್ದಾರೆ. ಇದಕ್ಕೆ ಅವರು ದೊಡ್ಡ ಬೆಲೆ ತೆರಲಿದ್ದಾರೆ. ಯೋಧರ ತ್ಯಾಗ ವ್ಯರ್ಥವಾಗಲು ಬಿಡುವುದಿಲ್ಲ ಎಂದಿದ್ದರು.

ಇನ್ನಷ್ಟು ಕ್ರಮ ಅಗತ್ಯ: ಅಂತಾರಾಷ್ಟ್ರೀಯ ವಲಯದಲ್ಲಿ ಪಾಕ್​ನ್ನು ಒಬ್ಬಂಟಿ ಆಗಿಸುವ, ಭಯೋತ್ಪಾದನೆಯ ಆರ್ಥಿಕ ಮೂಲಗಳನ್ನು ಕಿತ್ತು ಹಾಕುವ ಪ್ರಯತ್ನಗಳು ಮತ್ತಷ್ಟು ಚುರುಕು ಪಡೆಯಬೇಕಿದೆ. ಅಂತಾರಾಷ್ಟ್ರೀಯ ವಲಯದಲ್ಲಿ ಈಗಾಗಲೇ ಭಾರಿ ಮುಖಭಂಗ ಅನುಭವಿಸಿರುವ ಪಾಕಿಸ್ತಾನ ತನ್ನ ನೆಲದಲ್ಲೇ ಆಶ್ರಯ ಪಡೆದಿರುವ ಭಯೋತ್ಪಾದಕ ಶಿಬಿರಗಳನ್ನು ನಾಶಮಾಡುವ ಕ್ರಮಕ್ಕೆ ಮುಂದಾಗಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net