ಬ್ರಿಟನ್, ಜಪಾನನ್ನೂ ಹಿಂದಿಕ್ಕಿದ ಭಾರತದ 5ಜಿ; ಒಂದೇ ವರ್ಷದಲ್ಲಿ ಜಗತ್ತಿನ ಗಮನ ಸೆಳೆದ ಸಾಧನೆ

India 5G
Published on

ನವದೆಹಲಿ: ಭಾರತವು 5ಜಿ ನೆಟ್​ವರ್ಕ್​ನಲ್ಲಿ ಬ್ರಿಟನ್ ಹಾಗೂ ಜಪಾನನ್ನೂ ಹಿಂದಿಕ್ಕಿದ್ದು, ಜಾಗತಿಕವಾಗಿ ಅಗ್ರ ಹತ್ತನೇ ಸ್ಥಾನ ಗಳಿಸಿದೆ. ಸ್ಪೀಡ್​ಟೆಸ್ಟ್ ಗ್ಲೋಬಲ್ ಇಂಡೆಕ್ಸ್​ನ 2023ರ ಮೂರನೇ ತ್ರೖೆಮಾಸಿಕದಲ್ಲಿ ಭಾರತ ಈ ಸ್ಥಾನವನ್ನು ಗಳಿಸಿದೆ.

ದೇಶದಲ್ಲಿ 5ಜಿ ನೆಟ್​ವರ್ಕ್ ಆರಂಭವಾದ ಒಂದೇ ವರ್ಷದಲ್ಲಿ ಈ ಸಾಧನೆ ಮಾಡುವ ಮೂಲಕ ಭಾರತ ಜಗತ್ತಿನ ಗಮನವನ್ನು ತನ್ನತ್ತ ಸೆಳೆದಿದೆ. ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಮತ್ತು ದಕ್ಷಿಣ ಕೊರಿಯಾ 5ಜಿ ನೆಟ್​ವರ್ಕ್​ನಲ್ಲಿ ಟಾಪ್ ಸ್ಥಾನದಲ್ಲಿವೆ. ಸ್ಪೀಡ್​ಟೆಸ್ಟ್.ನೆಟ್​ನ ಊಕ್ಲಾ ಈ ಅಂಕಿ-ಅಂಶಗಳನ್ನು ಬಿಡುಗಡೆ ಮಾಡಿದೆ.

ವಿಶೇಷವೆಂದರೆ ಸ್ಟೀಡ್​ಟೆಸ್ಟ್ ಗ್ಲೋಬಲ್ ಇಂಡೆಕ್ಸ್​ನ 2022ರ ಸೆಪ್ಟೆಂಬರ್ ಮತ್ತು 2023ರ ಆಗಸ್ಟ್ ನಡುವಿನ ಅಂಕಿ-ಅಂಶದ ಪ್ರಕಾರ ಭಾರತ 5ಜಿ ನೆಟ್​ವರ್ಕ್​ನಲ್ಲಿ 72 ಸ್ಥಾನಗಳನ್ನು ಏರಿ ಈ ಸಾಧನೆಯನ್ನು ಮಾಡಿದೆ. ಈ ವರ್ಷದ ಮೂರನೇ ತ್ರೖೆಮಾಸಿಕದಲ್ಲಿ ಭಾರತ 5ಜಿಯಲ್ಲಿ ಸರಾಸರಿ 312.26 ಎಂಬಿಪಿಎಸ್ ಡೌನ್​ಲೋಡ್ ಸ್ಪೀಡ್ ಹೊಂದುವ ಮೂಲಕ ಹತ್ತನೇ ಸ್ಥಾನ ಗಳಿಸಿ ಇಂಥದ್ದೊಂದು ಹೆಗ್ಗಳಿಕೆಗೆ ಪಾತ್ರವಾಗಿದೆ. ಕಳೆದ ತ್ರೖೆಮಾಸಿಕದಲ್ಲಿ 5ಜಿಯಲ್ಲಿ ಸರಾಸರಿ 312.09 ಎಂಬಿಪಿಎಸ್ ಡೌನ್​ಲೋಡ್ ಸ್ಪೀಡ್​ನೊಂದಿಗೆ ಬ್ರೆಜಿಲ್ ಈ ಸ್ಥಾನದಲ್ಲಿತ್ತು. ಆದರೆ ಈ ಸಲ ಬ್ರೆಜಿಲ್ 5ಜಿಯಲ್ಲಿನ ಸರಾಸರಿ ಡೌನ್​ಲೋಡ್ ಸ್ಪೀಡ್​ನಲ್ಲಿ 1.4 ಪಟ್ಟು ಹೆಚ್ಚಳ ಮಾಡಿಕೊಂಡಿದ್ದು, ಐದನೇ ಸ್ಥಾನಕ್ಕೇರಿದೆ. ಬ್ರೆಜಿಲ್ ಈ ತ್ರೖೆಮಾಸಿಕದಲ್ಲಿ 443.93 ಎಂಬಿಪಿಎಸ್ ಸ್ಪೀಡ್ ಹೊಂದಿದೆ.

ಮತ್ತೊಂದೆಡೆ ಈ ತ್ರೖೆಮಾಸಿಕದಲ್ಲಿ ಯುನೈಟೆಡ್ ಅರಬ್ ಎಮಿರೇಟ್ಸ್ ಮತ್ತು ದಕ್ಷಿಣ ಕೊರಿಯಾ ಕ್ರಮವಾಗಿ ಟಾಪ್-1 ಮತ್ತು ಟಾಪ್-2 ಸ್ಥಾನಗಳಲ್ಲಿವೆ. ಯುಎಇ 5ಜಿಯಲ್ಲಿ ಸರಾಸರಿ ಡೌನ್​ಲೋಡ್ ಸ್ಪೀಡ್ 592.01 ಎಂಬಿಪಿಎಸ್ ಹೊಂದಿದ್ದರೆ, ದಕ್ಷಿಣ ಕೊರಿಯಾ 507.59 ಎಂಬಿಪಿಎಸ್ ಹೊಂದಿದೆ. ಕಳೆದ ತ್ರೖೆಮಾಸಿಕದಲ್ಲಿ ಸರಾಸರಿ ಡೌನ್​ಲೋಡ್ ಸಾಮರ್ಥ್ಯ 511.68 ಎಂಬಿಪಿಎಸ್ ಹೊಂದಿದ್ದ ಯುಎಇ ಈ ತ್ರೖೆಮಾಸಿಕದಲ್ಲಿ ಶೇ. 14 ಹೆಚ್ಚಳ ಮಾಡಿಕೊಂಡಿದೆ. ಈ ತ್ರೖೆಮಾಸಿಕದಲ್ಲಿ ಮೂರನೇ ಸ್ಥಾನದಲ್ಲಿರುವ ಮಲೇಷ್ಯಾ 5ಜಿಯಲ್ಲಿ ಸರಾಸರಿ ಡೌನ್​ಲೋಡ್ ಸಾಮರ್ಥ್ಯ 485.24 ಎಂಬಿಪಿಎಸ್ ಹೊಂದಿದೆ. ಉಳಿದಂತೆ ಈ ತ್ರೖೆಮಾಸಿಕದಲ್ಲಿ ನಾಲ್ಕನೇ ಸ್ಥಾನದಲ್ಲಿ ಕತಾರ್, ಆರು, ಏಳು, ಎಂಟು ಮತ್ತು ಒಂಬತ್ತನೇ ಸ್ಥಾನದಲ್ಲಿ ಕ್ರಮವಾಗಿ ಡೊಮಿನಿಕನ್ ರಿಪಬ್ಲಿಕ್, ಕುವೈತ್, ಮಕಾವು ಮತ್ತು ಸಿಂಗಾಪುರ ಇವೆ.

ವರ್ಷದ ಹಿಂದೆ ಚಾಲನೆ ನೀಡಿದ್ದ ಮೋದಿ: ಪ್ರಧಾನಮಂತ್ರಿ ಮೋದಿ ಕಳೆದ ವರ್ಷದ ಅ.1ರಂದು ಭಾರತದಲ್ಲಿ 5ಜಿ ನೆಟ್​ವರ್ಕ್ ಸೇವೆಗೆ ರಾಜಧಾನಿ ದೆಹಲಿಯಲ್ಲಿ ಚಾಲನೆ ನೀಡಿದ್ದರು. ಅಂದು ದೇಶದ 13 ನಗರಗಳಲ್ಲಿ 5ಜಿ ನೆಟ್​ವರ್ಕ್ ಕಾರ್ಯಾರಂಭ ಮಾಡಿದ್ದು, ಆಗ ಏರ್​ಟೆಲ್ ಬಳಕೆ ದಾರರಿಗಷ್ಟೇ ಈ ಸೇವೆ ಲಭ್ಯವಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net