ಯುಕೆಯಲ್ಲಿ ಭಾರತೀಯ ಮೂಲದ ಯುವತಿ ಮೇಲೆ ಜನಾಂಗೀಯ ಪ್ರೇರಿತ ಅತ್ಯಾಚಾರ! Indian woman

Indian woman
Published on

ಲಂಡನ್​: ಭಾರತೀಯ ಮೂಲದ ಯುವತಿಯ ( Indian woman ) ಮೇಲೆ ಅತ್ಯಾಚಾರ ಎಸಗಿರುವ ಅಮಾನವೀಯ ಘಟನೆ ಯುನೈಟೆಡ್ ಕಿಂಗ್‌ಡಮ್‌ನ ವೆಸ್ಟ್ ಮಿಡ್‌ಲ್ಯಾಂಡ್ಸ್‌ನಲ್ಲಿ ಶನಿವಾರ (ಅ.25) ರಾತ್ರಿ ನಡೆದಿದೆ.

ಸಂತ್ರಸ್ತೆಯ ಜನಾಂಗೀಯ ಗುರುತಿನ ಕಾರಣದಿಂದಾಗಿ ಈ ದೌರ್ಜನ್ಯ ನಡೆದಿದೆ. ಇದೊಂದು ಜನಾಂಗೀಯ ದಾಳಿ ಎಂದು ವೆಸ್ಟ್ ಮಿಡ್​ಲ್ಯಾಂಡ್ಸ್​ ಪೊಲೀಸರು ತಿಳಿಸಿದ್ದಾರೆ. ಅಲ್ಲದೆ, ಆರೋಪಿಯ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದು, ಶಂಕಿತನ ಸಿಸಿಟಿವಿ ದೃಶ್ಯಾವಳಿಗಳನ್ನು ಬಿಡುಗಡೆ ಮಾಡಿದ್ದಾರೆ. ಶನಿವಾರ ಸಂಜೆ ವಾಲ್ಸಾಲ್‌ನ ಪಾರ್ಕ್ ಹಾಲ್ ಪ್ರದೇಶದಲ್ಲಿ ಯುವತಿಯೊಬ್ಬಳು ರಸ್ತೆಯ ಮಧ್ಯದಲ್ಲೇ ತುಂಬಾ ದುಃಖಿತಳಾಗಿ ಕುಳಿತಿದ್ದಾಳೆ ಎಂಬ ಮಾಹಿತಿ ಪೊಲೀಸರಿಗೆ ತಿಳಿದ ನಂತರ ಆಕೆಯ ಮೇಲೆ ಅತ್ಯಾಚಾರ ನಡೆದಿರುವುದು ಬೆಳಕಿಗೆ ಬಂದಿದೆ.

ಈ ಘಟನೆಯ ಬೆನ್ನಲ್ಲೇ ಯುಕೆ ಪೊಲೀಸರು ಕಾರ್ಯಪ್ರವೃತ್ತರಾಗಿದ್ದು, ಆರೋಪಿ ಪತ್ತೆಗೆ ತನಿಖೆ ಆರಂಭಿಸಿದ್ದಾರೆ. ಇದು ಯುವತಿಯ ಮೇಲೆ ನಡೆದ ಅತ್ಯಂತ ಭಯಾನಕ ದಾಳಿಯಾಗಿದ್ದು, ಇದಕ್ಕೆ ಕಾರಣವಾದ ವ್ಯಕ್ತಿಯನ್ನು ಬಂಧಿಸಲು ನಾವು ಎಲ್ಲ ಪ್ರಯತ್ನಗಳನ್ನು ಮಾಡುತ್ತಿದ್ದೇವೆ ಎಂದು ತನಿಖೆಯ ಮೇಲ್ವಿಚಾರಣೆ ನಡೆಸುತ್ತಿರುವ ಹಿರಿಯ ಪೊಲೀಸ್ ಅಧಿಕಾರಿ ರೋನನ್ ಟೈರರ್ ಭಾನುವಾರ (ಅ.26) ಹೇಳಿದ್ದಾರೆ.

ಶಂಕಿತನನ್ನು ಬಂಧಿಸಲು ನಾವು ಎಲ್ಲ ಪ್ರಯತ್ನಗಳನ್ನು ಮಾಡುತ್ತಿದ್ದೇವೆ. ನಮ್ಮ ತಂಡಗಳು ಸಾಕ್ಷ್ಯಗಳನ್ನು ಸಂಗ್ರಹಿಸಲು ಮತ್ತು ಶಂಕಿತನನ್ನು ಗುರುತಿಸಲು ಕೆಲಸ ಮಾಡುತ್ತಿವೆ. ಅನುಮಾನಾಸ್ಪದ ವ್ಯಕ್ತಿಯ ಬಗ್ಗೆ ಮಾಹಿತಿ ಸಿಕ್ಕರೆ ತಕ್ಷಣ ವರದಿ ಮಾಡುವಂತೆ ಒತ್ತಾಯಿಸಿರುವ ಟೈರರ್​, ಡ್ಯಾಶ್‌ಕ್ಯಾಮ್ ದೃಶ್ಯಾವಳಿಗಳು ಅಥವಾ ಪ್ರದೇಶದಿಂದ ಹೊರಡುವ ವಾಹನಗಳ ಸಿಸಿಟಿವಿ ದೃಶ್ಯಾವಳಿಗಳು ತನಿಖೆಯಲ್ಲಿ ನಿರ್ಣಾಯಕವಾಗಬಹುದು ಎಂದು ಹೇಳಿದರು.

ದಾಳಿಕೋರ 30ರ ಹರೆಯದ ಬಿಳಿಯ ವ್ಯಕ್ತಿಯಾಗಿದ್ದು, ಸಣ್ಣ ಕೂದಲು ಮತ್ತು ಕಪ್ಪು ಬಟ್ಟೆ ಧರಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರು ಸಂತ್ರಸ್ತೆಯ ವಿವರಗಳನ್ನು ಅಧಿಕೃತವಾಗಿ ಬಿಡುಗಡೆ ಮಾಡಿಲ್ಲವಾದರೂ, ಸ್ಥಳೀಯ ಸಮುದಾಯ ಗುಂಪುಗಳು ಆಕೆ ಪಂಜಾಬ್‌ನ ಯುವತಿ ಎಂದು ಹೇಳಿವೆ. ಒಂದು ತಿಂಗಳ ಹಿಂದಷ್ಟೇ ಓಲ್ಡ್‌ಬರಿಯಲ್ಲಿ ಸಿಖ್ ಮಹಿಳೆಯ ಮೇಲೆ ಇದೇ ರೀತಿಯ ಜನಾಂಗೀಯ ಪ್ರೇರಿತ ಅತ್ಯಾಚಾರ ನಡೆದಿತ್ತು. ಇದು ಸ್ಥಳೀಯ ಪ್ರದೇಶದಲ್ಲಿ ವ್ಯಾಪಕ ಕಳವಳ ವ್ಯಕ್ತವಾಗಿದೆ. ದಾಳಿಕೋರ ಆಕೆ ವಾಸಿಸುತ್ತಿದ್ದ ಮನೆಯ ಬಾಗಿಲು ಒಡೆದು ದಾಳಿ ನಡೆಸಿದನು ಎಂದು ಸಿಖ್ ಫೆಡರೇಶನ್ ಯುಕೆ ತಿಳಿಸಿದೆ. ಎರಡು ತಿಂಗಳಲ್ಲಿ ಇದು ಎರಡನೇ ಘಟನೆಯಾಗಿದ್ದು, ಶಂಕಿತರನ್ನು ತ್ವರಿತವಾಗಿ ಬಂಧಿಸಬೇಕೆಂದು ಒತ್ತಾಯಿಸಲಾಗಿದೆ.

ಆಡಳಿತಾರೂಢ ಲೇಬರ್ ಪಕ್ಷದ ಸಂಸದೆ ಪ್ರೀತ್ ಕೌರ್ ಗಿಲ್ ಕೂಡ ಈ ಘಟನೆಯನ್ನು ತೀವ್ರವಾಗಿ ಖಂಡಿಸಿ, ಇದನ್ನು ತೀವ್ರ ಆಘಾತಕಾರಿ ಎಂದಿದ್ದಾರೆ. ಈ ಬಾರಿ ವಾಲ್ಸಾಲ್‌ನಲ್ಲಿ ಮತ್ತೊಂದು ಜನಾಂಗೀಯ ಪ್ರೇರಿತ ಅತ್ಯಾಚಾರದ ಬಗ್ಗೆ ನಾವು ಕೇಳುತ್ತಿರುವುದು ತೀವ್ರ ಆಘಾತ ಮತ್ತು ದುಃಖ ತಂದಿದೆ ಎಂದು ತಮ್ಮ ಎಕ್ಸ್‌ನಲ್ಲಿ ಬರೆದಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net