

Zodiac Signs : ಇಂದು ಸತ್ಯಕ್ಕೆ ಯಾವುದೇ ಬೆಲೆ ಇಲ್ಲ ಎಂದು ಬಹುತೇಕ ಮಂದಿ ಹೇಳುವುದನ್ನು ನೀವು ಕೇಳಿರಬಹುದು. ಏಕೆಂದರೆ, ಇಂದು ಸತ್ಯ ಮಾತನಾಡಿದರೆ ಅದರಿಂದ ಅನುಕೂಲಕ್ಕಿಂತ ಅನಾನುಕೂಲವೇ ಹೆಚ್ಚು. ಹೀಗಾಗಿ, ಪ್ರತಿಯೊಬ್ಬರು ಸಣ್ಣ ಸಣ್ಣ ವಿಚಾರಗಳಿಗೂ ಸುಳ್ಳುಗಳನ್ನು ಹೇಳುತ್ತಾರೆ. ಈ ಆಧುನಿಕ ಜಗತ್ತಿನಲ್ಲಿ ಬದುಕು ನಡೆಸಬೇಕಾದರೆ ಸುಳ್ಳನ್ನು ಮೈಗೂಡಿಸಿಕೊಳ್ಳಬೇಕೆಂದು ಎಲ್ಲರು ಭಾವಿಸಿದ್ದಾರೆ. ಹಾಗಾಗಿ ಪ್ರತಿನಿತ್ಯ ಒಂದಲ್ಲ ಒಂದು ವಿಚಾರಕ್ಕೆ ಸುಳ್ಳುಗಳನ್ನು ಹೇಳುತ್ತಲೇ ಇರುತ್ತಾರೆ.
ಆದರೆ, ಸುಳ್ಳಿಗೆ ಆಯಸ್ಸು ಕಡಿಮೆ ಎಂಬ ಮಾತನನ್ನು ಮರೆಯಬಾರದು. ಸುಳ್ಳು ಹೇಳಿ ಸಿಕ್ಕಿಬಿದ್ದಾಗ ಅದರಿಂದಾಗುವ ಫಜೀತಿ ಅಷ್ಟಿಷ್ಟಲ್ಲ. ಇದನ್ನರಿತ ಕೆಲವರು ಯಾವುದೇ ಸನ್ನಿವೇಶದಲ್ಲೂ ಸತ್ಯವನ್ನೇ ಮಾತನಾಡುತ್ತಾರೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. ಅಂದಹಾಗೆ, ವ್ಯಕ್ತಿಯ ಜನ್ಮ ರಾಶಿಯು ಆತನ ಭವಿಷ್ಯದ ಜೀವನ, ಹಣಕಾಸು, ಪ್ರೇಮ ಜೀವನ, ವಿಶೇಷ ವ್ಯಕ್ತಿತ್ವಗಳು ಮತ್ತು ಆತನ ಸಕಾರಾತ್ಮಕ ಹಾಗೂ ನಕಾರಾತ್ಮಕ ಗುಣಗಳ ಮೇಲೆ ಹೆಚ್ಚು ಪ್ರಭಾವ ಬೀರುತ್ತದೆ ಎಂದು ನಂಬಲಾಗಿದೆ.
ಅದೇ ರೀತಿ, ಕೆಲವು ರಾಶಿಚಕ್ರ ಚಿಹ್ನೆಗಳಲ್ಲಿ ಜನಿಸಿದ ಜನರು ಸ್ವಾಭಾವಿಕವಾಗಿಯೇ ಸತ್ಯ ಮತ್ತು ಪ್ರಾಮಾಣಿಕತೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಾರಂತೆ. ಈ ರಾಶಿಯವರು ಯಾವುದೇ ಸನ್ನಿವೇಶದಲ್ಲೂ ಸುಳ್ಳಿಗೆ ಮಣೆ ಹಾಕುವುದಿಲ್ಲವಂತೆ. ಹಾಗಾದರೆ, ಯಾವ ರಾಶಿಯವರು ಬಂದೂಕಿನ ಮುಂದೆಯೂ ಸತ್ಯವನ್ನೇ ಹೇಳುವ ಉದಾತ್ತ ಗುಣಗಳನ್ನು ಹೊಂದಿರುತ್ತಾರೆ ಎಂಬುದನ್ನು ನಾವೀಗ ತಿಳಿಯೋಣ.
ಮೇಷ ರಾಶಿಯಲ್ಲಿ ಜನಿಸಿದ ಜನರು ಮಾತನಾಡುವ ವಿಷಯದಲ್ಲಿ ತುಂಬಾ ಧೈರ್ಯಶಾಲಿಗಳಾಗಿರುತ್ತಾರೆ. ಅವರು ತಮ್ಮ ಮನಸ್ಸಿನಲ್ಲಿರುವುದನ್ನು ಹೇಳಲು ಯಾರಿಗೂ ಅಂಜುವುದಿಲ್ಲ. ಯುದ್ಧ ಗ್ರಹವಾದ ಮಂಗಳ ಗ್ರಹದಿಂದ ಆಳಲ್ಪಡುವ ಈ ರಾಶಿಚಕ್ರ ಚಿಹ್ನೆಗಳು ಯಾರಿಗೂ ಹೆದರುವುದಿಲ್ಲ. ಸತ್ಯಕ್ಕಾಗಿ ತಮಗೆ ಯಾವುದೇ ಸಂಕಷ್ಟದ ಸ್ಥಿತಿ ಎದುರಾದರು ಸಹ ಅದನ್ನು ಸಂತೋಷದಿಂದ ಸ್ವೀಕರಿಸುವ ಗುಣವನ್ನು ಹೊಂದಿರುತ್ತಾರೆ. ಈ ರಾಶಿಯವರು ಸತ್ಯವಂತರಾಗಿರಲು ಇಷ್ಟಪಡುತ್ತಾರೆ ಮತ್ತು ಇತರರು ಸತ್ಯವನ್ನು ಮರೆಮಾಡಿದಾಗ ದ್ವೇಷಿಸುತ್ತಾರೆ.
ತಮ್ಮ ದ್ವಂದ್ವ ಸ್ವಭಾವಕ್ಕೆ ಹೆಸರುವಾಸಿಯಾದ ಮಿಥುನ ರಾಶಿಯವರು ಸತ್ಯವನ್ನು ಹೇಳಲು ಎಂದಿಗೂ ಹಿಂಜರಿಯುವುದಿಲ್ಲ. ತಮ್ಮ ವೈಯಕ್ತಿಕ ಮಾಹಿತಿಯನ್ನು ಇತರರೊಂದಿಗೆ ಹಂಚಿಕೊಳ್ಳಲು ಇಷ್ಟಪಡದಿದ್ದರೂ ಸಹ, ಅವರು ಇತರರಿಗೆ ಪ್ರಾಮಾಣಿಕ ಮತ್ತು ನಿಷ್ಠರಾಗಿರಲು ಬದ್ಧರಾಗಿರುತ್ತಾರೆ. ಈ ರಾಶಿಯವರು ಯಾವ ವಿಚಾರದಲ್ಲೂ ಹಿಂಜರಿಯುವುದಿಲ್ಲ ಮತ್ತು ಉತ್ತಮ ವಾದವನ್ನು ಸದಾ ಇಷ್ಟಪಡುತ್ತಾರೆ. ಯಾರಾದರೂ ಸುಳ್ಳು ಹೇಳುತ್ತಿದ್ದಾರೆಂದು ಅನಿಸಿದರೆ ಅವರಿಂದ ಅಂತರ ಕಾಯ್ದುಕೊಳ್ಳುತ್ತಾರೆ. ಈ ರಾಶಿಯವರ ನಡವಳಿಕೆಯು ಇತರರಿಗೆ ನಿಗೂಢವಾಗಿದ್ದರೂ ಸಹ, ಅವರು ಸತ್ಯವನ್ನು ಹುಡುಕುವವರಾಗಿದ್ದಾರೆ.
ಸೂರ್ಯನ ಆಳ್ವಿಕೆಯಲ್ಲಿ, ಸಿಂಹ ರಾಶಿಯವರು ಸ್ವಾಭಾವಿಕವಾಗಿ ರಾಜನ ಎಲ್ಲಾ ಗುಣಗಳನ್ನು ಹೊಂದಿರುತ್ತಾರೆ. ಅವರ ಮಾತಿನ ಶೈಲಿ ದಿಟ್ಟ ಮತ್ತು ಆತ್ಮವಿಶ್ವಾಸದಿಂದ ಕೂಡಿರುತ್ತದೆ. ಅವರು ಯಾವಾಗಲೂ ಹೃದಯದಿಂದ ಮಾತನಾಡುತ್ತಾರೆ. ಸಿಂಹ ರಾಶಿಯವರು ತಮ್ಮನ್ನು ತಾವು ಸತ್ಯವಂತರಾಗಿರಲು ಬಯಸುವುದರಿಂದ ಅವರು ಪ್ರಾಮಾಣಿಕರು ಎಂದು ಹೆಸರುವಾಸಿಯಾಗಿದ್ದಾರೆ. ಅವರು ತಮ್ಮ ಸ್ವಂತ ಜೀವನಕ್ಕಿಂತ ಸತ್ಯಕ್ಕೆ ಹೆಚ್ಚಿನ ಪ್ರಾಮುಖ್ಯತೆ ಮತ್ತು ಗೌರವವನ್ನು ನೀಡುತ್ತಾರೆ.
ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು / ಜ್ಯೋತಿಷಿಗಳು / ಪಂಚಾಂಗಗಳು / ನಂಬಿಕೆಗಳು / ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದಕ್ಕೆ “ವಿಜಯವಾಣಿ ಡಾಟ್ ನೆಟ್” ಜವಾಬ್ದಾರರಾಗಿರುವುದಿಲ್ಲ.