

ನವದೆಹಲಿ: ಗಾಲ್ವಾನ್ ಕಣಿವೆಯಲ್ಲಿ ಭಾರತೀಯ ಯೋಧರ ಮೇಲೆ ಮುಳ್ಳಿನ ತಂತಿ ಸುತ್ತಿದ್ದ ಕಬ್ಬಿಣದ ಬಡಿಗೆಗಳಿಂದ ಹಲ್ಲೆ ಮಾಡಿದ ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿಯ (ಪಿಎಲ್ಎ) ಯೋಧರು, ಈ ಘರ್ಷಣೆಯಲ್ಲಿ ಮೃತರಾದ ಭಾರತೀಯ ಯೋಧರ ತಲೆಯನ್ನು ಕತ್ತರಿಸಿ ವಿಕೃತಿ ಮೆರೆದಿದ್ದಾರೆ. ಇದರಿಂದಾಗಿ ಲಡಾಖ್ ಪ್ರದೇಶದಲ್ಲಿ ಮತ್ತೆ ಉದ್ವಿಗ್ನ ಪರಿಸ್ಥಿತಿ ತಲೆದೋರಿದೆ.
ಸೋಮವಾರ ರಾತ್ರಿ ಈ ಘರ್ಷಣೆ ನಡೆದಿದ್ದು, ಭಾರತದ 20 ಯೋಧರು ಹುತಾತ್ಮರಾಗಿದ್ದರು. 76ಕ್ಕೂ ಹೆಚ್ಚು ಯೋಧರು ಗಾಯಗೊಂಡಿದ್ದರು. ಪರಿಸ್ಥಿತಿಯನ್ನು ತಿಳಿಗೊಳಿಸಲು ಉಭಯ ರಾಷ್ಟ್ರಗಳ ಮಿಲಿಟರಿ ಪಡೆಗಳ ಮೇಜರ್ ಜನರಲ್ ಮಟ್ಟದ ಅಧಿಕಾರಿಗಳ ಸಭೆ ನಡೆಯುತ್ತಿದ್ದು, ಗುರುವಾರದ ಮೊದಲ ಸುತ್ತಿನ ಸಭೆ ಯಾವುದೇ ನಿರ್ಧಾರಕ್ಕೆ ಬರುವಲ್ಲಿ ವಿಫಲವಾಗಿದೆ. ಎರಡನೇ ಸುತ್ತಿನ ಮಾತುಕತೆ ಮುಂದುವರೆದಿದೆ.
ಇದೇ ಸಂದರ್ಭದಲ್ಲಿ ಹುತಾತ್ಮರಾದ ಭಾರತದ 20 ಯೋಧರ ಪೈಕಿ ಹಲವು ಯೋಧರ ತಲೆ ಕಡಿದು ಚೀನಿ ಯೋಧರು ವಿಕೃತಿ ಮೆರೆದಿರುವುದು ಭಾರತೀಯ ಪಾಳೆಯದಲ್ಲಿ ಭಾರಿ ಆಕ್ರೋಶಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಯಾವುದೇ ಕ್ಷಣದಲ್ಲಿ ಮತ್ತೊಂದು ಸುತ್ತಿನ ಘರ್ಷಣೆ ಏರ್ಪಡುವ ವಾತಾವರಣ ಅಲ್ಲಿ ನಿರ್ಮಾಣವಾಗಿದೆ. ಇದರಿಂದಾಗಿ ಉಭಯ ರಾಷ್ಟ್ರಗಳ ಯೋಧರು ಬಿರುಗಣ್ಣು ಬಿಟ್ಟುಕೊಂಡು ಪರಸ್ಪರ ನೋಡುತ್ತಾ ಕುಳಿತಿರುವುದಾಗಿ ಹೇಳಲಾಗುತ್ತಿದೆ.
ಈ ಕೋಪತಾಪ ಹೆಚ್ಚಾಗಿ ಪ್ಯಾಂಗಾಂಗ್ ತ್ಸೊ ವಲಯದಲ್ಲಿ ವಿಶೇಷವಾಗಿ ಮತ್ತೊಂದು ಸುತ್ತಿನ ಘರ್ಷಣೆಯಾಗದಂತೆ ತಡೆಯಲು ಉಭಯ ರಾಷ್ಟ್ರಗಳ ಸೇನಾಪಡೆಗಳು ಪ್ರಯತ್ನಮುಖಿಯಾಗಿರುವುದಾಗಿ ಹೇಳಲಾಗುತ್ತಿದೆ. ಕಳೆದ 40 ದಿನಗಳಲ್ಲಿ ಅಂದರೆ ಮೇ 5-6, ಮೇ 13 ಮತ್ತು ಮೇ 29ರಂದು ಈ ಭಾಗದಲ್ಲಿ ಉಭಯ ರಾಷ್ಟ್ರಗಳ ಯೋಧರು ಘರ್ಷಣೆ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ಪ್ಯಾಂಗಾಂಗ್ ತ್ಸೊ ವಲಯದಲ್ಲಿ ಪರಿಸ್ಥಿತಿ ತುಂಬಾ ಉದ್ವಿಗ್ನವಾಗಿರುವುದಾಗಿ ಹೇಳಲಾಗುತ್ತಿದೆ.