ಮೂವರು ಶಾಸಕರ ರಾಜೀನಾಮೆ​: ಮಣಿಪುರದಲ್ಲಿ ಬಿಜೆಪಿಗೆ ಸಂಕಷ್ಟ

BJP
Published on

ಇಂಫಾಲ್: ಮಣಿಪುರದಲ್ಲಿ ಉಪಮುಖ್ಯಮಂತ್ರಿ, ಮೂವರು ಬಿಜೆಪಿ ಶಾಸಕರು, ಮೈತ್ರಿಪಕ್ಷಗಳು ಸೇರಿದಂತೆ ಒಂಬತ್ತು ಶಾಸಕರು ಸರ್ಕಾರಕ್ಕೆ ನೀಡಿರುವ ಬೆಂಬಲವನ್ನು ವಾಪಸ್‍ ಪಡೆದಿದ್ದಾರೆ. ಈ ಮೂಲಕ ಮಣಿಪುರದಲ್ಲಿ ಬಿಜೆಪಿ ನೇತೃತ್ವದ ಸಮ್ಮಿಶ್ರ ಸರ್ಕಾರಕ್ಕೆ ಭಾರಿ ಸಂಕಷ್ಟ ಎದುರಾಗಿದೆ. ಬೆಂಬಲ ವಾಪಸ್​ ಹಿನ್ನೆಲೆಯಲ್ಲಿ ಇದೇ 19ರಂದು ನಡೆಯಲಿರುವ ರಾಜ್ಯಸಭೆ ಚುನಾವಣೆಯ ಲೆಕ್ಕಾಚಾರಗಳೂ ಬುಡಮೇಲಾಗಿದೆ.

ಅದೇ ಇನ್ನೊಂದೆಡೆ, 2017ರಲ್ಲಿ ಕಾಂಗ್ರೆಸ್‌ ತೊರೆದು ಬಿಜೆಪಿಗೆ ಸೇರಿದ್ದ 7 ಕಾಂಗ್ರೆಸ್‌ ಶಾಸಕರಿಗೆ ಶಾಸಕಾಂಗ ಭವನವನ್ನು ಪ್ರವೇಶಿಸಿದಂತೆ ಮಣಿಪುರ ಹೈಕೋರ್ಟ್‌ ನಿರ್ಬಂಧ ವಿಧಿಸಿದೆ. ಇದರಿಂದ ಈ ಶಾಸಕರಿಗೆ ರಾಜ್ಯಸಭಾ ಚುನಾವಣೆಯಲ್ಲಿ ಮತದಾನ ಮಾಡಲು ಸಾಧ್ಯವಿಲ್ಲ. ಇದರ ಬೆನ್ನಲ್ಲೇ ಇದೀಗ ಈ ಬೆಳವಣಿಗೆ ನಡೆದಿದೆ.

ಬಿಜೆಪಿ ಶಾಸಕರಾಗಿದ್ದ ಸ್ಯಾಮ್ಯುಯೆಲ್ ಜೆಂಡೈ, ಟಿಟಿ ಹಾಕಿಪ್, ಸುಭಾಷ್‍ ಚಂದ್ರ ಅವರು ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ಕಾಂಗ್ರೆಸ್ ಸೇರಿದ್ದಾರೆ. ಅವರನ್ನು ಮಾಜಿ ಮುಖ್ಯಮಂತ್ರಿ ಓ ಸಿ ಇಬೊಬಿ ಮತ್ತು ಇತರ ಕಾಂಗ್ರೆಸ್ ನಾಯಕರು ಔಪಚಾರಿಕವಾಗಿ ಪಕ್ಷಕ್ಕೆ ಬರಮಾಡಿಕೊಂಡಿದ್ದಾರೆ.

ಇದರ ಜತೆಗೆ, ಸಚಿವರಾದ ನ್ಯಾಷನಲ್ ಪೀಪಲ್ಸ್ ಪಾರ್ಟಿ (ಎನ್‌ಪಿಪಿ) ನಾಲ್ವರು ಶಾಸಕರು ಸಹ ಸರ್ಕಾರಕ್ಕೆ ಬೆಂಬಲವನ್ನು ಹಿಂತೆಗೆದುಕೊಳ್ಳುವ ನಿರ್ಧಾರವನ್ನು ಇದಾಗಲೇ ಪ್ರಕಟಿಸಿದ್ದಾರೆ. ಶಾಸಕರಾದ ಲೆಟ್‌ಪಾವೊ ಹಾಕಿಪ್, ಉಪ ಮುಖ್ಯಮಂತ್ರಿ ಎನ್ ಕಯಿಸಿ, ವೈ ಜಾಯ್‌ಕುಮಾರ್ ಮತ್ತು ಎಲ್ ಜಯಂತಕುಮಾರ್ ರಾಜೀನಾಮೆ ಪತ್ರಗಳನ್ನು ಮುಖ್ಯಮಂತ್ರಿಗಳಿಗೆ ನಿನ್ನೆಯೇ ಸಲ್ಲಿಸಿದ್ದಾರೆ. ಇವರಲ್ಲದೆ ತೃಣಮೂಲ ಕಾಂಗ್ರೆಸ್‌ನ ಏಕೈಕ ಶಾಸಕ ಟಿ ರಬಿಂದ್ರೋ ಸಿಂಗ್‌ ಮತ್ತು ಪಕ್ಷೇತರ ಶಾಸಕ ಶಹಾಬುದ್ದೀನ್‌ ಕೂಡ ಸರ್ಕಾರಕ್ಕೆ ನೀಡಿದ್ದ ಬೆಂಬಲ ಹಿಂಪಡೆದಿದ್ದಾರೆ.

ಈ ಬೆಳವಣಿಗೆಯ ನಂತರ, ಮುಖ್ಯಮಂತ್ರಿ ಬಿರೆನ್‍ ಸಿಂಗ್ ಸರ್ಕಾರ ಬಹುಮತ ಸಾಬೀತು ಪಡಿಸುವಂತೆ ಸೂಚಿಸಬೇಕೆಂದು ರಾಜ್ಯಪಾಲರಾದ ಡಾ.ನಜ್ಮಾ ಹೆಪ್ತುಲ್ಲಾ ಅವರನ್ನು ಒತ್ತಾಯಿಸುವುದಾಗಿ ಇಬೊಬಿ ಸಿಂಗ್ ಹೇಳಿದ್ದಾರೆ.

ಸದ್ಯ ಕಾಂಗ್ರೆಸ್​ ಜತೆ, 27 ಶಾಸಕರಿದ್ದಾರೆ.‘ ಬಿಜೆಪಿ ಕಡೆ 26 ಶಾಸಕರಿದ್ದಾರೆ. ಇದೀಗ ಪಕ್ಷದ ಮೂವರು ಶಾಸಕರ ರಾಜೀನಾಮೆ ನಂತರ ಕೇವಲ 23 ಶಾಸಕರನ್ನು ಹೊಂದಿದೆ ಎಂದು ಇಬೋಬಿ ತಿಳಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net