

ಬೆಂಗಳೂರು: ಶಿಕ್ಷಣ ಸಚಿವ ಸುರೇಶ್ ಕುಮಾರ್ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ವ್ಯಕ್ತಿಯೊಬ್ಬರು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಮತ್ತು ಕೇಂದ್ರ ವಿಭಾಗದ ಡಿಸಿಪಿ ಚೇತನ್ ಸಿಂಗ್ ರಾಥೋಡ್ ಅವರಿಗೆ ಇಮೇಲ್ ಮುಖಾಂತರ ದೂರು ನೀಡಿದ್ದಾರೆ.
ಅರೆ! ಸಚಿವರು ಅಂಥ ತಪ್ಪು ಏನು ಮಾಡಿದ್ರು? ಏನಾಯ್ತು? ದೂರು ಕೊಟ್ಟಿದ್ದಾದರೂ ಯಾರು? ಎಂಬೆಲ್ಲ ಪ್ರಶ್ನೆಗೆ ಇಲ್ಲಿದೆ ಉತ್ತರ. ಇದನ್ನೂ ಓದಿರಿ ಬಿಜೆಪಿ ಕಚೇರಿಯಲ್ಲಿ ಆರ್.ಶಂಕರ್ ಗಳಗಳನೇ ಅತ್ತಿದ್ದೇಕೆ?
ಎಸ್ಎಸ್ಎಲ್ಸಿ ಪರೀಕ್ಷೆ ನಡೆಸುವ ನಿರ್ಧಾರವೇ ಸಚಿವರ ವಿರುದ್ಧ ದೂರು ದಾಖಲಾಗುವಂತೆ ಮಾಡಿದೆ. ಈ ಬಗ್ಗೆ ಆದರ್ಶ ಆರ್. ಐಯ್ಯರ್ ಎಂಬುವವರು ದೂರು ನೀಡಿದ್ದಾರೆ.
ರಾಜ್ಯದಲ್ಲಿ ಡೆಡ್ಲಿ ಕರೊನಾ ವೈರಸ್ ವ್ಯಾಪಕವಾಗಿ ಹರಡುತ್ತಿದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲೂ ಸಚಿವ ಸುರೇಶ್ ಕುಮಾರ್ ಎಸ್ಎಸ್ಎಲ್ಸಿ ಪರೀಕ್ಷೆ ನಡೆಸಲು ನಿರ್ಧರಿಸಿದ್ದಾರೆ. ಇದರಿಂದ ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರ ಕುಟುಂಬಗಳಿಗೆ ತೊಂದರೆಯಾಗಲಿದೆ. ಪರಿಣಾಮ ಸಾವು-ನೋವು ಸಂಭವಿಸಬಹುದು. ಇದರ ಅರಿವಿದ್ದರೂ ಪರೀಕ್ಷೆ ನಡೆಸಲು ಮುಂದಾಗಿದ್ದಾರೆ. ಹೀಗಾಗಿ ಅವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು ಎಂದು ಆದರ್ಶ ಆರ್. ಐಯ್ಯರ್ ಮನವಿ ಮಾಡಿದ್ದಾರೆ. ಈ ಬಗ್ಗೆ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ನಿನ್ನೆಯೇ(ಬುಧವಾರ) ಇಮೇಲ್ ಮುಖಾಂತರ ದೂರು ನೀಡಿರುವ ಆದರ್ಶ ಐಯ್ಯರ್, ಎಸ್ಎಸ್ಎಲ್ಸಿ ಮಾತ್ರವಲ್ಲದೆ ಪಿಯುಸಿ ಇಂಗ್ಲಿಷ್ ಪರೀಕ್ಷೆ ನಡೆಸುವ ಕ್ರಮವನ್ನು ಪ್ರಶ್ನಿಸಿ ಮಕ್ಕಳ ಆರೋಗ್ಯದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು.