

MEA Press Conference: ಪಾಕಿಸ್ತಾನದಲ್ಲಿ ನಡೆದ ದಾಳಿಗಳ ಕುರಿತು ಇಂದು (ಮೇ.10) ಬೆಳಗ್ಗೆ 10:30ಕ್ಕೆ ಸುದ್ದಿಗೋಷ್ಠಿ ನಡೆಸಿದ ಭಾರತೀಯ ಸೇನೆ, ಪ್ರಸ್ತುತ ದೇಶದಲ್ಲಿ ಏನೆಲ್ಲ ಆಗಿವೆ. ಪಾಕ್ ಯಾವುದನ್ನು ಗುರಿಯಾಗಿಸಿ, ಎಲ್ಲೆಲ್ಲಿ ದಾಳಿ ಮಾಡಿತು ಎಂಬ ಮಾಹಿತಿಯನ್ನು ವಿವರವಾಗಿ ತಿಳಿಸಿದೆ. ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್, ಕರ್ನಲ್ ಸೋಫಿಯಾ ಖುರೇಷಿ ಮತ್ತು ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
ಭಾರತ-ಪಾಕ್ ಮಿಲಿಟರಿ ಸಂಘರ್ಷದ ಕುರಿತು ವಿಶೇಷ ವಿದೇಶಾಂಗ ಸಚಿವಾಲಯದ ಪತ್ರಿಕಾ ಪ್ರಕಟಣೆಯಲ್ಲಿ ಮಾತನಾಡಿದ ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್, "ಪಾಕಿಸ್ತಾನ ಸೇನೆಯು ಪಶ್ಚಿಮ ಗಡಿಯಾದ್ಯಂತ ಆಕ್ರಮಣಕಾರಿ ಕಾರ್ಯಾಚರಣೆ ನಡೆಸುತ್ತಲೇ ಇತ್ತು. ನಾಗರಿಕ ಪ್ರದೇಶಗಳು ಮತ್ತು ಮಿಲಿಟರಿ ಮೂಲಸೌಕರ್ಯಗಳನ್ನು ಗುರಿಯಾಗಿಸಲು ಪಾಕಿಸ್ತಾನ ಡ್ರೋನ್‌ಗಳು, ದೀರ್ಘ ವ್ಯಾಪ್ತಿಯ ಶಸ್ತ್ರಾಸ್ತ್ರಗಳು, ಯುದ್ಧ ವಿಮಾನಗಳನ್ನು ಬಳಸಿಕೊಂಡಿದೆ ಎಂದರು.
ಪಾಕಿಸ್ತಾನ ಸೇನೆಯು ಡ್ರೋನ್‌ಗಳನ್ನು ಬಳಸಿ ವಾಯು ಒಳನುಸುಳುವಿಕೆ ಮತ್ತು ನಿಯಂತ್ರಣ ರೇಖೆಯ ಉದ್ದಕ್ಕೂ ಭಾರೀ ಕ್ಯಾಲಿಬರ್ ಶಸ್ತ್ರಾಸ್ತ್ರಗಳ ಗುಂಡಿನ ದಾಳಿಯನ್ನು ಸಹ ನಡೆಸಿದೆ. ಈ ಬೆದರಿಕೆಗಳನ್ನು ನಮ್ಮ ಸಶಸ್ತ್ರ ಪಡೆಗಳು ಯಶಸ್ವಿಯಾಗಿ ತಟಸ್ಥಗೊಳಿಸಿದವು. ಆದಾಗ್ಯೂ, ಉಧಂಪುರ, ಪಠಾಣ್‌ಕೋಟ್, ಆದಂಪುರ ಮತ್ತು ಭುಜ್‌ನಲ್ಲಿರುವ ಭಾರತೀಯ ವಾಯುಪಡೆಯ ನೆಲೆಗಳಲ್ಲಿ ಹಾನಿ ಸಂಭವಿಸಿದೆ" ಎಂದು ಹೇಳಿದರು.
ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ ಮಾತನಾಡಿ, "ನೀವು ನೋಡುತ್ತಿರುವಂತೆ, ಪಾಕ್ ಕೈಗೊಂಡ ಚಟುವಟಿಕೆಗಳ ಬಗ್ಗೆ ಅಲ್ಲಿನ ಮಾಧ್ಯಮಗಳಿಂದ ಬಂದಿರುವ ಹೇಳಿಕೆಗಳು ಶುದ್ಧ ಸುಳ್ಳು. ಇದು ತಪ್ಪು ಮಾಹಿತಿ ಮತ್ತು ಸುಳ್ಳು ಪ್ರಚಾರದಿಂದ ಕೂಡಿದೆ. ಪಾಕಿಸ್ತಾನದ ರಾಜ್ಯ ಸಂಸ್ಥೆಗಳು ಇದನ್ನು ಉತ್ತೇಜಿಸುತ್ತಿವೆ. ದೇಶದಲ್ಲಿನ ವಿವಿಧ ಮಿಲಿಟರಿ ಸ್ಥಾಪನೆಗಳ ಮೇಲೆ ದಾಳಿ ಮಾಡಿ ಮತ್ತು ಸೂರತ್‌ಗಢದ ಸಿರ್ಸಾದಲ್ಲಿರುವ ವಾಯುಪಡೆಯ ನೆಲೆಗಳು ನಾಶ ಮಾಡಿದ್ದೇವೆ ಎಂಬ ಹೇಳಿಕೆಗಳು ಶುದ್ಧ ಸುಳ್ಳು" ಎಂದು ವಿವರಿಸಿದರು.
ಪರಿಸ್ಥಿತಿ ವಿವರಿಸಿದ ಕರ್ನಲ್ ಸೋಫಿಯಾ, “ಪಾಕಿಸ್ತಾನಿ ಸೇನೆಯು ಪಶ್ಚಿಮ ಗಡಿಗಳ ಮೇಲೆ ನಿರಂತರವಾಗಿ ದಾಳಿ ಮಾಡುತ್ತಿದೆ. ಅದು ಭಾರತದ ಮಿಲಿಟರಿ ತಾಣಗಳನ್ನು ಗುರಿಯಾಗಿಸಿ ಡ್ರೋನ್‌ಗಳು, ದೀರ್ಘ-ಶ್ರೇಣಿಯ ಶಸ್ತ್ರಾಸ್ತ್ರಗಳು ಮತ್ತು ಫೈಟರ್ ಜೆಟ್‌ಗಳನ್ನು ಬಳಸಿ ದಾಳಿ ನಡೆಸಿದೆ. ಎದುರಾಗುತ್ತಿದ್ದ ಭಾರೀ ಅಪಾಯಗಳನ್ನು ಭಾರತೀಯ ಸೇನೆ ತಟಸ್ಥಗೊಳಿಸಿದೆ. ಆದರೆ, ಪಾಕಿಸ್ತಾನ 26ಕ್ಕೂ ಹೆಚ್ಚು ಸ್ಥಳಗಳಲ್ಲಿ ವಾಯುದಳದ ಮೂಲಕ ನುಸುಳಲು ಪ್ರಯತ್ನಿಸಿದೆ" ಎಂದರು.
"ಪಾಕ್ ಉಧಮ್‌ಪುರ, ಭುಜ್, ಪಠಾಣ್‌ಕೋಟ್, ಬಟಿಂಡಾದಲ್ಲಿನ ವಾಯುಪಡೆಯ ನೆಲೆಗಳಲ್ಲಿ ನಮ್ಮ ಉಪಕರಣಗಳು ಮತ್ತು ಸಿಬ್ಬಂದಿಯನ್ನು ಟಾರ್ಗೆಟ್ ಮಾಡಿ ದಾಳಿ ನಡೆಸಿದ್ದಾರೆ. ಅವರು ಪಂಜಾಬ್‌ನ ವಾಯುನೆಲೆಯನ್ನು ಗುರಿಯಾಗಿಸಲು ಬೆಳಗಿನ ಜಾವ 1:40ರ ಸುಮಾರಿಗೆ ಅತಿ ವೇಗದ ಕ್ಷಿಪಣಿಗಳನ್ನು ಬಳಸಿದ್ದಾರೆ. ಅವರು ಆರೋಗ್ಯ ಕೇಂದ್ರಗಳು ಮತ್ತು ಶಾಲೆಗಳ ಮೇಲೆಯೂ ದಾಳಿ ಮಾಡಿದ್ದಾರೆ” ಎಂದು ಕರ್ನಲ್ ಸೋಫಿಯಾ ಖುರೇಷಿ ಹೇಳಿದರು,(ಏಜೆನ್ಸೀಸ್).