ಹಾವೇರಿ ಜಿಲ್ಲೆಯಾದ್ಯಂತ 8,609 ಸಿಸಿಟಿವಿ ಕ್ಯಾಮರಾ ಅಳವಡಿಕೆ; ಕ್ಯಾಮರಾ ಸುಳಿವು, ಹಲವು ಪ್ರಕರಣ ಬೆಳಕಿಗೆ

9 CCTV Camera
Published on

ವಿಜಯವಾಣಿ ವಿಶೇಷ ಹಾವೇರಿ

ಸಾರ್ವಜನಿಕ ಸ್ಥಳಗಳಲ್ಲಿ ಪಬ್ಲಿಕ್ ಸೇಫ್ಟಿ ಆ್ಯಕ್ಟ್ ಅಡಿಯಲ್ಲಿ ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸುವಂತೆ ಜಿಲ್ಲಾ ಪೊಲೀಸರು ಜಾಗೃತಿ ಅಭಿಯಾನದಡಿ ಅರಿವು ಮೂಡಿಸಿದ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ 8,609 ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಇದರಿಂದ ಹಲವು ಅಪರಾಧ ಪ್ರಕರಣಗಳು ಬೆಳಕಿಗೆ ಬಂದಿವೆ.

ಕರ್ನಾಟಕ ಸಾರ್ವಜನಿಕರ ಸುರಕ್ಷತಾ ಕಾಯ್ದೆಯ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಜಿಲ್ಲಾ ಪೊಲೀಸ್ ಇಲಾಖೆ ಮುಂದಾಗಿದೆ. ಮಾರ್ಚ್ 31ರ ಅಂಕಿ-ಅಂಶಗಳ ಪ್ರಕಾರ ಜಿಲ್ಲೆಯಲ್ಲಿ 3,200 ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಲಾಗಿತ್ತು. ನಿಗಧಿತ ಸಂಖ್ಯೆಗಿಂತ ಕಡಿಮೆ ಸಿಸಿಟಿವಿ ಕ್ಯಾಮರಾ ಇರುವುದು ಇಲಾಖೆಯ ಗಮನಕ್ಕೆ ಬಂದಿತ್ತು.

ಈ ಹಿನ್ನೆಲೆಯಲ್ಲಿ ಜಿಲ್ಲೆಯ ಹೋಟೆಲ್, ರೆಸ್ಟೋರೆಂಟ್, ಬಾರ್, ಡಾಬಾ, ಬೇಕರಿ, ಬಟ್ಟೆ ಅಂಗಡಿ, ಶಾಲೆ, ಕಾಲೇಜ್, ಕಲ್ಯಾಣ ಮಂಟಪ, ಸಮುದಾಐ ಭವನ, ಟಿವಿ ಶೋರೂಮ್, ಸೇರಿದಂತೆ ಇತರ ಸ್ಥಳಗಳಿಗೆ ಪೊಲೀಸರು ತೆರಳಿ ಸಿಸಿಟಿವಿ ಕ್ಯಾಮರಾಗಳ ಅಗತ್ಯತೆ ಬಗ್ಗೆ ಜಾಗೃತಿ ಮೂಡಿಸಿದ್ದರು. ಇದರಿಂದ ಆಗುವ ಪ್ರಯೋಜನಗಳ ಕುರಿತು ಮನವರಿಕೆ ಮಾಡಿಸಿದ್ದರು. ಜತೆಗೆ ಹೆಚ್ಚು ಜನ ಸಂಚಾರ ಇರುವ ಕಡೆಗಳಲ್ಲಿ ಸಿಸಿಟಿವಿ ಕ್ಯಾಮರಾ ಅಳವಡಿಸುವುದು ಕಡ್ಡಾಯ ಎಂದು ಸೂಚಿಸಿದ್ದರು.

ಇದರಿಂದ ಎಚ್ಚೆತ್ತ ಮಾಲೀಕರು ತಮ್ಮ ಅಂಗಡಿ, ಇತರ ಸ್ಥಳಗಳಲ್ಲಿ ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಿಕೊಂಡಿದ್ದಾರೆ. ಇದರಿಂದಾಗಿ ಜಿಲ್ಲೆಯ ಸಾರ್ವಜನಿಕ ಸ್ಥಳಗಳಲ್ಲಿ ಏಪ್ರಿಲ್‌ನಲ್ಲಿ 5,409 ಕಡೆಗಳಲ್ಲಿ ಸಿಸಿಟಿವಿ ಕ್ಯಾಮರಾ ಅಳವಡಿಸಲಾಗಿದೆ. ಇವುಗಳನ್ನು ಸೇರಿ ಜಿಲ್ಲೆಯಲ್ಲಿ ಸದ್ಯ ಒಟ್ಟು 8,609 ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಿದಂತಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಂಶುಕುಮಾರ ‘ವಿಜಯವಾಣಿ’ಗೆ ತಿಳಿಸಿದ್ದಾರೆ.

ಐದು ಪ್ರಕರಣ ಕೇಸ್ ಸಹಕಾರಿ

ಸಿಸಿಟಿವಿ ಕ್ಯಾಮರಾಗಳ ಸಹಾಯದಿಂದ ಇತ್ತೀಚೆಗೆ ಹಲವು ಪ್ರಕರಣಗಳನ್ನು ಪತ್ತೆ ಹಚ್ಚಲು ಸಹಕಾರಿಯಾಗಿವೆ. ಅದರಲ್ಲಿ ಮುಖ್ಯವಾಗಿ ರಾಣೆಬೆನ್ನೂರ ಶಹರ, ಹಾವೇರಿ ಶಹರ, ಬಂಕಾಪುರ ಠಾಣೆಯಲ್ಲಿ ದಾಖಲಾಗಿದ್ದ ನಾಲ್ಕು ಹಾಗೂ ರಟ್ಟಿಹಳ್ಳಿ ಠಾಣೆಯಲ್ಲಿ ದಾಖಲಾಗಿದ್ದ ಒಂದು ಅಪಘಾತ ಪ್ರಕರಣಗಳು ಸಿಸಿಟಿವಿ ಕ್ಯಾಮರಾದ ದೃಶ್ಯಗಳ ಸಹಾಯದಿಂದ ಪತ್ತೆಯಾಗಿವೆ. ಕಳ್ಳತನ ಪ್ರಕರಣಗಳಲ್ಲಿ ಲಕ್ಷಾಂತರ ರೂ. ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸರು ತಿಳಿಸಿದ್ದಾರೆ.

ನಿರಂತರ ಪರಿಶೀಲನೆ ಅಗತ್ಯ

ಪೊಲೀಸರ ಜಾಗೃತಿ ಅಭಿಯಾನದಿಂದಾಗಿ ಹಲವು ಕಡೆಗಳಲ್ಲಿ ಸಾರ್ವಜನಿಕರು ಸಿಸಿಟಿವಿ ಕ್ಯಾಮರಾ ಅಳವಡಿಸಿದ್ದಾರೆ. ಆದರೆ, ಕೆಲವರು ತೋರಿಕೆಗೆ ಮಾತ್ರ ಸಿಸಿಟಿವಿ ಕ್ಯಾಮರಾ ಅಳವಡಿಸಿದ್ದಾರೆ. ಅವುಗಳನ್ನು ಚಾಲನೆ ಸ್ಥಿತಿಯಲ್ಲಿ ಇಟ್ಟಿಲ್ಲ. ಅಗತ್ಯವಾದ ಡಿವಿಆರ್ ಬಳಸುತ್ತಿಲ್ಲ. ಹಾಗಾಗಿ, ದೃಶ್ಯಗಳು ಸೆರೆಯಾಗುತ್ತಿಲ್ಲ ಎಂಬ ಆರೋಪಗಳಿವೆ. ಈ ಹಿನ್ನೆಲೆಯಲ್ಲಿ ಪೊಲೀಸರು ಆಗಾಗ ಪರಿಶೀಲನೆ ನಡೆಸುವ ಅಗತ್ಯವಿದೆ. ಜತೆಗೆ ಪೊಲೀಸರೇ ನೇರವಾಗಿ ಸಿಸಿಟಿವಿ ಮಾನಿಟರ್ ಮಾಡುವ ವ್ಯವಸ್ಥೆ ಅಳವಡಿಸಿಕೊಂಡರೆ ಮತ್ತಷ್ಟು ಅನುಕೂಲವಾಗಲಿದೆ ಎಂಬ ಮಾತುಗಳು ಕೇಳಿಬಂದಿವೆ.

ಕೋಟ್

ಸಾರ್ವಜನಿಕರ ಸುರಕ್ಷತೆಯ ಹಿತದೃಷ್ಟಿಯಿಂದ ಹಾಗೂ ಅಪರಾಧಗಳನ್ನು ತಡೆಗಟ್ಟಲು ಸಿಸಿಟಿವಿ ಕ್ಯಾಮರಾ ಅಳವಡಿಕೆ ಅಗತ್ಯವಾಗಿದೆ. ಸಾರ್ವಜನಿಕರು ಪೊಲೀಸರೊಂದಿಗೆ ಸಹಕರಿಸಬೇಕು. ಬಾಕಿ ಇರುವ ಕಡೆಗಳಲ್ಲಿ ಕೂಡಲೇ ಕ್ಯಾಮರಾ ಅಳವಡಿಸಬೇಕು. ಮನೆ, ಅಂಗಡಿಯ ಸುತ್ತಮುತ್ತ, ಕಾಂಪೌಂಡ್, ಮುಖ್ಯರಸ್ತೆ ಕಾಣಿಸುವಂತೆ ಗುಣಮಟ್ಟದ ಸಿಸಿಟಿವಿ ಕ್ಯಾಮರಾ ಅಳವಡಿಸಬೇಕು.

- ಅಂಶುಕುಮಾರ, ಎಸ್‌ಪಿ 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net