

ವಾಷಿಂಗ್ಟನ್: ಭಾರತೀಯ ಕುಟುಂಬವೊಂದು ಅಮೆರಿಕ ನ್ಯೂಜೆರ್ಸಿಯಲ್ಲಿ ಸಾವಿನ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಇಡೀ ಪ್ರಕರಣದಲ್ಲಿ ನಿಗೂಢತೆ ಆವರಿಸಿದೆ.
ಮೃತರನ್ನು ತೇಜ್ ಪ್ರತಾಪ್ ಸಿಂಗ್, ಪತ್ನಿ ಸೊನಾಲ್ ಪರಿಹಾರ್ ಮತ್ತು ಇಬ್ಬರು ಮಕ್ಕಳು ಎಂದು ಗುರುತಿಸಲಾಗಿದೆ. ಭಾರತೀಯ ಕಾಲಮಾನದ ಪ್ರಕಾರ ಬುಧವಾರ ಸಂಜೆ ಶವವಾಗಿ ಇಡೀ ಕುಟುಂಬ ಪತ್ತೆಯಾಗಿದೆ.
ಪ್ರಾಥಮಿಕ ತನಿಖೆಗಳ ಪ್ರಕಾರ ತೇಜ್ ಪ್ರತಾಪ್ ಅವರು ಪತ್ನಿ ಸೊನಾಲ್, ಮತ್ತು 10 ಹಾಗೂ 6 ವರ್ಷದ ಮಕ್ಕಳನ್ನು ಕೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿದೆ. ಪ್ರತಾಪ್ ಅವರ ಮನೆಗೆ ಸಂಬಂಧಿಕರೊಬ್ಬರು ಹೋಗಿ ನೋಡಿದಾಗ ಎಲ್ಲರು ಮೃತಪಟ್ಟಿದ್ದರು. ಬಳಿಕ ಪೊಲೀಸರಿಗೆ ಮಾಹಿತಿ ನೀಡಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ. ದಂಪತಿ ನಡುವೆ ಯಾವುದೇ ಸಮಸ್ಯೆ ಇರಲಿಲ್ಲ ಎಂದು ಅವರ ಸಂಬಂಧಿಕರು ಹೇಳಿದ್ದಾರೆ. ದಂಪತಿ ಸಾವಿನ ಸುತ್ತ ಇದೀಗ ನಿಗೂಢತೆ ಆವರಿಸಿದೆ. ಮರಣೋತ್ತರ ಪರೀಕ್ಷೆಯ ವರದಿ ಬಂದ ನಂತರವೇ ಹೆಚ್ಚಿನ ವಿವರಗಳು ತಿಳಿಯಲಿವೆ. ದಂಪತಿ ಐಟಿ ವಲಯದಲ್ಲಿ ಕೆಲಸ ಮಾಡುತ್ತಿದ್ದರು.
ಸಾವಿನ ಕುರಿತಾದ ತನಿಖೆಯು ಪ್ಲೇನ್ಸ್‌ಬೊರೊ ಪೊಲೀಸ್ ಇಲಾಖೆ ಮತ್ತು ಮಿಡ್ಲ್‌ಸೆಕ್ಸ್ ಕೌಂಟಿ ಪ್ರಾಸಿಕ್ಯೂಟರ್ ಕಚೇರಿಯ ನಡುವಿನ ಸಹಯೋಗದಲ್ಲಿ ನಡೆಯುತ್ತಿದೆ. ಬುಧವಾರ ಮಧ್ಯಾಹ್ನದಿಂದಲೇ ಅಧಿಕಾರಿಗಳು ಈ ಪ್ರಕರಣವನ್ನು ಬಹಳ ಶ್ರದ್ಧೆಯಿಂದ ಪರಿಶೀಲನೆ ಮಾಡುತ್ತಿದ್ದಾರೆ. (ಏಜೆನ್ಸೀಸ್)