ಸ್ಯಾನ್​ಫ್ರಾನ್ಸಿಸ್ಕೋದ ಭಾರತೀಯ ರಾಯಭಾರ ಕಚೇರಿಗೆ ಬೆಂಕಿಯಿಟ್ಟ ಖಲಿಸ್ತಾನಿ ಬೆಂಬಲಿಗರು: ಅಮೆರಿಕ ಖಂಡನೆ

Khalistan America
Published on

ನವದೆಹಲಿ: ಸ್ಯಾನ್​ಫ್ರಾನ್ಸಿಸ್ಕೋದಲ್ಲಿರುವ ಭಾರತೀಯ ರಾಯಭಾರ ಕಚೇರಿಯ ಮೇಲೆ ಖಲಿಸ್ತಾನಿ ಬೆಂಬಲಿಗರು ದಾಳಿ ಮಾಡಿ, ಬೆಂಕಿಯಿಟ್ಟಿರುವುದಾಗಿ ವರದಿಯಾಗಿದೆ. ಈ ಘಟನೆಯನ್ನು ಅಮೆರಿಕ ತೀವ್ರವಾಗಿ ಖಂಡಿಸಿದ್ದು, ಕಠಿಣ ಕ್ರಮದ ಎಚ್ಚರಿಕೆಯನ್ನು ನೀಡಿದೆ.

ಘಟನೆಯ ಬಗ್ಗೆ ಯುನೈಟೆಡ್​ ಸ್ಟೇಟ್​ ಡಿಪಾರ್ಟ್​ಮೆಂಟ್​ನ ವಕ್ತಾರ ಮ್ಯಾಥೀವ್​ ಮಿಲ್ಲರ್ ಟ್ವೀಟ್​ ಮಾಡಿದ್ದು, ಶನಿವಾರ ಸ್ಯಾನ್​ ಫ್ರಾನ್ಸಿಸ್ಕೋದಲ್ಲಿರುವ ಭಾರತೀಯ ರಾಯಭಾರ ಕಚೇರಿಯನ್ನು ಹಾನಿಗೊಳಿಸಿ, ಬೆಂಕಿ ಹಚ್ಚುವ ಪ್ರಯತ್ನ ಮಾಡಿರುವುದನ್ನು ಅಮೆರಿಕ ಬಲವಾಗಿ ಖಂಡಿಸುತ್ತದೆ. ಅಮೆರಿಕದಲ್ಲಿರುವ ರಾಜತಾಂತ್ರಿಕ ವ್ಯವಸ್ಥೆಗಳು ಅಥವಾ ರಾಜತಾಂತ್ರಿಕರ ವಿರುದ್ಧದ ವಿಧ್ವಂಸಕತೆ ಅಥವಾ ಹಿಂಸಾಚಾರವು ಕ್ರಿಮಿನಲ್ ಅಪರಾಧವಾಗಿದೆ ಎಂದು ಮಿಲ್ಲರ್​ ತಿಳಿಸಿದ್ದಾರೆ.

ಸ್ಯಾನ್ ಫ್ರಾನ್ಸಿಸ್ಕೋ ಅಗ್ನಿಶಾಮಕ ಇಲಾಖೆಯು ಭಾರತೀಯ ರಾಯಭಾರ ಕಚೇರಿಗೆ ತಗುಲಿದ್ದ ಬೆಂಕಿಯನ್ನು ತ್ವರಿತವಾಗಿ ನಂದಿಸಿದ್ದು, ಈ ಘಟನೆಯಲ್ಲಿ ಯಾರೊಬ್ಬರಿಗೂ ಯಾವುದೇ ದೊಡ್ಡ ಹಾನಿ ಅಥವಾ ಗಾಯಗಳಾಗಿಲ್ಲ ಎಂದು ವರದಿಯಾಗಿದೆ.

ವಿಡಿಯೋ ಬಿಡುಗಡೆ

ಸ್ಯಾನ್ ಫ್ರಾನ್ಸಿಸ್ಕೋ ಮೂಲದ ದಿಯಾ ಟಿವಿ ಹಂಚಿಕೊಂಡಿರುವ ವಿಡಿಯೋದಲ್ಲಿ ರಾಯಭಾರ ಕಚೇರಿಗೆ ಬೆಂಕಿ ಇಡುತ್ತಿರುವ ದೃಶ್ಯವಿದೆ. ಈ ವಿಡಿಯೋವನ್ನು ಖಲಿಸ್ತಾನಿ ಬೆಂಬಲಿಗರೇ ಬಿಡುಗಡೆ ಮಾಡಿದ್ದಾರೆ ಎಂದು ಹೇಳಲಾಗಿದೆ. ಹಿಂಸೆ ಹಿಂಸೆಯನ್ನು ಹುಟ್ಟು ಹಾಕುತ್ತದೆ ಎಂದು ವಿಡಿಯೋದಲ್ಲಿ ಬರೆಯಲಾಗಿದೆ. ಖಲಿಸ್ತಾನ ಪರ ಸಂಘಟನೆಗಳಾದ ಖಲಿಸ್ತಾನ್ ಟೈಗರ್ ಫೋರ್ಸ್ ಮತ್ತು ಕೆನಡಾದ ಸಿಖ್ಸ್ ಫಾರ್ ಜಸ್ಟಿಸ್ (ಎಸ್‌ಎಫ್‌ಜೆ) ಸಂಘಟನೆಯ ನೇತೃತ್ವ ವಹಿಸಿದ್ದ ಗೊತ್ತುಪಡಿಸಿದ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜಾರ್ ಅವರ ಸಾವಿನ ವರದಿಯ ಸುದ್ದಿ ಪತ್ರಿಕೆಯ ತುಣುಕುಗಳನ್ನು ವಿಡಿಯೋದಲ್ಲಿ ತೋರಿಸಲಾಗಿದೆ. ನಿಜ್ಜಾರ್​ ಅವರನ್ನು ಕಳೆದ ತಿಂಗಳು ಕೆನಡಾದಲ್ಲಿ ಗುಂಡಿಕ್ಕಿ ಕೊಲ್ಲಲಾಯಿತು.

46 ವರ್ಷದ ನಿಜ್ಜಾರ್ ಎಂಬಾತ ಜಲಂಧರ್ ಮೂಲದವನಾಗಿದ್ದು, ಕೆನಡಾ ಮೂಲದ ಅತ್ಯಂತ ಹಳೆಯ ಖಲಿಸ್ತಾನಿ ಭಯೋತ್ಪಾದಕ ಗುಂಪುಗಳಲ್ಲಿ ಒಂದಾದ ಬಬ್ಬರ್ ಖಾಲ್ಸಾ ಇಂಟರ್‌ನ್ಯಾಶನಲ್‌ಗೆ (ಬಿಕೆಐ) ಹಣಕಾಸಿನ ನೆರವು ನೀಡಿದ ಆರೋಪ ಹೊತ್ತಿದ್ದರು.

ಇದು ಎರಡನೇ ಬಾರಿ

ಕಳೆದ ಮಾರ್ಚ್‌ನಲ್ಲಿ ಪಂಜಾಬ್ ಪೊಲೀಸರು ಭಾರತದಲ್ಲಿ ಅಮೃತ್​ಪಾಲ್ ಸಿಂಗ್‌ಗಾಗಿ ರಾಷ್ಟ್ರವ್ಯಾಪಿ ಹುಡುಕಾಟವನ್ನು ಪ್ರಾರಂಭಿಸಿದಾಗ, ಖಲಿಸ್ತಾನಿ ಬೆಂಬಲಿಗರು ಸ್ಯಾನ್ ಫ್ರಾನ್ಸಿಸ್ಕೋದಲ್ಲಿರುವ ಭಾರತೀಯ ರಾಯಭಾರ ಕಚೇರಿಗೆ ಹಾನಿ ಮಾಡಿದ್ದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net