

ನವದೆಹಲಿ: ಖಲಿಸ್ತಾನಿ ಬೆಂಬಲಿಗರು ಇಂದಿರಾ ಗಾಂಧಿ ಅವರ ಹತ್ಯೆಗೆ ಸಂಬಂಧಿಸಿದ ಸ್ತಬ್ಧಚಿತ್ರವನ್ನು ಮೆರವಣಿಗೆ ಮಾಡಿರುವ ಘಟನೆ ಕೆನಡಾದಲ್ಲಿ ನಡೆದಿದೆ. ಈ ಸ್ತಬ್ಧಚಿತ್ರ ಮೂಲಕವಾಗಿ ಖಲಿಸ್ತಾನಿ ಬೆಂಬಲಿಗರು ವಿಕೃತಿ ಮೆರೆದಿದ್ದಾರೆ.
ವಿಡಿಯೋದಲ್ಲಿ ಏನಿದೆ?: ಈ ಸ್ತಬ್ಧಚಿತ್ರದಲ್ಲಿ ಅಂಗರಕ್ಷಕರು ಇಂದಿರಾ ಗಾಂಧಿಗೆ ಗುಂಡು ಹಾರಿಸಿರುವಂತೆ, ಹಾಗೆಯೇ ಅವರು ರಕ್ತಸಿಕ್ತವಾಗಿ ಹತಾಷೆಯಲ್ಲಿ ಕೈಯನ್ನು ಮೇಲಕ್ಕೆತ್ತಿ ನಿಂತಿರುವಂತೆ ಚಿತ್ರಿಸಲಾಗಿದೆ. ಈ ಸ್ತಬ್ಧಚಿತ್ರಕ್ಕೆ ಸಂಬಂಧಿಸಿದ ದೃಶ್ಯ ವಿಡಿಯೋದಲ್ಲಿದೆ.
ಕೆನಡಾದ ಬ್ರಾಂಪ್ಟನ್ ನಗರದಲ್ಲಿ ಸ್ತಬ್ಧಚಿತ್ರ ಮೆರವಣಿಗೆ ಮಾಡಲಾಯಿತು. 1984 ಅಕ್ಟೋಬರ್ 31 ರಂದು ಇಂದಿರಾ ಗಾಂಧಿ ಅವರನ್ನು ಹತ್ಯೆ ಮಾಡಲಾಗಿತ್ತು. ಪ್ರಧಾನಿಯ ಭದ್ರತಾ ಸಿಬ್ಬಂದಿಗಳೇ ಹತ್ಯೆ ಮಾಡಿದ್ದರು. ಜೂ. 6 ರಂದು ‘ಆಪರೇಷನ್ ಬ್ಲೂ ಸ್ಟಾರ್’ ಆಚರಣೆಗೂ ಮೊದಲು ಜೂ.4 ರಂದು ಖಲಿಸ್ತಾನಿ ಬೆಂಬಲಿಗರು ಪರೇಡ್ ಆಯೋಜಿಸಿದ್ದರು. ಆ ಸಂದರ್ಭವನ್ನು ಸ್ತಬ್ಧಚಿತ್ರದಲ್ಲಿ ಬಿಂಬಿಸಲಾಗಿದೆ.
ಆಪರೇಷನ್ ಬ್ಲೂ ಸ್ಟಾರ್‌ನ 39 ನೇ ವರ್ಷಾಚರಣೆಗೆ 4 ದಿನ ಬಾಕಿ ಇರುವಾಗ ಖಲಿಸ್ತಾನಿ ಬೆಂಬಲಿಗರು ಇಂದಿರಾ ಗಾಂಧಿಯವರ ಸ್ತಬ್ದಚಿತ್ರ ಪ್ರದರ್ಶನ ನಡೆಸಿದರು. ಈ ವಿಡಿಯೋವನ್ನು ಕಾಂಗ್ರೆಸ್ ನಾಯಕ ಮಿಲಿಂದ್ ದಿಯೋರಾ ಕೂಡ ಶೇರ್ ಮಾಡಿದ್ದಾರೆ, ಇಂದಿರಾ ಗಾಂಧಿಯವರ ಹತ್ಯೆಯನ್ನು ಬಿಂಬಿಸುವ ಕೆನಡಾದ ಬ್ರಾಂಪ್ಟನ್ ನಗರದಲ್ಲಿ ನಡೆದ 5 ಕಿ.ಮೀ ಉದ್ದದ ಪರೇಡ್ ಅನ್ನು ನೋಡಿ ಭಾರತೀಯನಾಗಿ ನಾನು ಆಘಾತಕ್ಕೊಳಗಾಗಿದ್ದೇನೆ. ಇದು ಯಾರ ಪರವಾಗಿಯೂ ನಿಲ್ಲುವ ವಿಚಾರವಲ್ಲ. ಇದು ಒಂದು ದೇಶಕ್ಕೆ ಗೌರವ ಮತ್ತು ಅದರ ಪ್ರಧಾನ ಮಂತ್ರಿಯ ಹತ್ಯೆಯಿಂದ ಉಂಟಾದ ನೋವಿನ ಕುರಿತು ಆಲೋಚಿಸಬೇಕು, ನಾವು ಒಗ್ಗಟ್ಟಾಗಿ ಪ್ರತಿಕ್ರಿಯೆ ನೀಡಬೇಕು, ಇದು ಸಂಪೂರ್ಣ ಖಂಡನೀಯ ಎಂದು ಹೇಳಿದ್ದಾರೆ.
ಕಾಂಗ್ರೆಸ್ ಹಿರಿಯ ನಾಯಕ ಶಶಿ ತರೂರ್, "ಪಕ್ಷಾತೀತವಾಗಿ ಈ ಹೇಯ ಕೃತ್ಯವನ್ನು ಖಂಡಿಸುವುದರಲ್ಲಿ ಯಾವುದೇ ರಾಜಕೀಯ ಬೇಡ" ಎಂದು ಹೇಳಿದ್ದಾರೆ. ಕೆನಡಾದ ಹೈಕಮಿಷನರ್ ಕ್ಯಾಮರೂನ್ ಮ್ಯಾಕೆ ಖಂಡಿಸಿದ್ದಾರೆ. “ಕೆನಡಾದಲ್ಲಿ ದ್ವೇಷ ಅಥವಾ ಹಿಂಸಾಚಾರವನ್ನು ವೈಭವೀಕರಿಸುವುದಕ್ಕೆ ಅವಕಾಶ ಇಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.
ಸಾಮಾಜಿಕ ಜಾಲತಾಣದ ಬಳಕೆದಾರರೊಬ್ಬರು, ''ಇಂದಿರಾ ಗಾಂಧಿಯವರು ಕಾಂಗ್ರೆಸ್ಸಿಗರಾಗಿದ್ದರೂ, ಇದನ್ನು ನೋಡಿ ನಮ್ಮ ರಕ್ತ ಕುದಿಯುತ್ತಿದೆ. ಆದರೆ, ಕೆಲವು ದಿನಗಳ ಹಿಂದೆ ಪಪ್ಪು (ರಾಹುಲ್ ಗಾಂಧಿ ಅವರ ಭಾಷಣದಲ್ಲಿ ಕೆಲವರು ಖಲಿಸ್ತಾನ್ ಪರ ಘೋಷಣೆಗಳನ್ನು ಕೂಗಿ ನಕ್ಕಿದ್ದರು" ಎಂದು ಬರೆದುಕೊಂಡಿದ್ದಾರೆ.
ವಿದೇಶಾಂಗ ಸಚಿವ ಎಸ್ ಜೈಶಂಕರ್, ಕೆನಡಾ ಭಾರತ ವಿರೋಧಿ ಅಂಶಗಳನ್ನು ತನ್ನ ನೆಲದಿಂದ ಕಾರ್ಯನಿರ್ವಹಿಸಲು ಅನುಮತಿಸುವುದು ದ್ವಿಪಕ್ಷೀಯ ಸಂಬಂಧಕ್ಕೆ ಮತ್ತು ತನಗೆ ಒಳ್ಳೆಯದಲ್ಲ. ಇದು ಕೇವಲ ಒಂದು ಘಟನೆಯಲ್ಲ, ಆದಾಗ್ಯೂ, ಇದು ತುಂಬಾ ಭಯಾನಕವಾಗಿದೆ" ಎಂದು ಹೇಳಿದರು.
ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ರಾಜಾ ವಾರಿಂಗ್ ಮಂಗಳವಾರ ಟ್ವಿಟ್ ಮಾಡಿ, "ಖಲಿಸ್ತಾನ ಆಗಲು ಬಿಡುವುದಿಲ್ಲ. ಖಲಿಸ್ತಾನ ಹೆಸರಿನಲ್ಲಿ ತಮ್ಮ ಅಂಗಡಿಗಳನ್ನು ನಡೆಸುವ ಮತ್ತು ಪಂಜಾಬಿಗಳ ಮಾನಹಾನಿ ಮಾಡುವ ಖಲಿಸ್ತಾನಿಗಳನ್ನು ನಿಯಂತ್ರಿಸಬೇಕು' ಎಂದಿದ್ದಾರೆ.